ಕೆದಂಬಾಡಿ ಗ್ರಾಪಂ ಬಯಲು ಕಸ ಮುಕ್ತ ಗ್ರಾಮ ಅಭಿಯಾನ

0
  • ಕಸ ಹಾಕುವವರ ಪತ್ತೆಗೆ ಗ್ರಾಪಂ ವಿಶೇಷ ಬಲೆ ಹೆಣೆದಿದೆ : ರತನ್ ರೈ

ಪುತ್ತೂರು: ಕೆದಂಬಾಡಿ ಗ್ರಾಮವನ್ನು ಕಸ ಮುಕ್ತ ಗ್ರಾಮವಾಗಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ರಸ್ತೆ ಬದಿಗಳಲ್ಲಿ ಕಸ ಹಾಕುವವರ ಪತ್ತೆಗೆ ವಿಶೇಷ ರೀತಿಯಲ್ಲಿ ಬಲೆ ಹೆಣೆಯಲಾಗಿದ್ದು ಕಸ ಹಾಕುವವರು ಸಿಕ್ಕಿಬಿದ್ದರೆ ಅವರಿಗೆ ಐನೂರರಿಂದ ೫ ಸಾವಿರ ರೂಪಾಯಿ ತನಕ ದಂಡ ವಿಧಿಸುವುದು ಅಲ್ಲದೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ. ಅಂಗಡಿ ವ್ಯಾಪಾರಸ್ಥರಿಗೆ ಕಸ ಸಂಗ್ರಹಣೆಗೆ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ನೀಡಲಾಗಿದೆ. ಗ್ರಾಪಂಗೆ ಕಸ ವಿಲೇವಾರಿ ವಾಹನ ಕೂಡ ಬಂದಿದ್ದು ಮುಂದಿನ ದಿನಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಕೂಡ ಆರಂಭವಾಗಲಿದೆ.ಗ್ರಾಮವನ್ನು ಕಸ ಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಗ್ರಾಮಸ್ಥರು, ವರ್ತಕರು ಹಾಗೂ ಎಲ್ಲಾ ಸಂಘ ಸಂಸ್ಥೆಯವರು ಪಂಚಾಯತ್‌ನೊಂದಿಗೆ ಕೈಜೋಡಿಸಬೇಕು ಎಂದು ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ ವಿನಂತಿಸಿಕೊಂಡಿದ್ದಾರೆ.

ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್ ವತಿಯಿಂದ ಪುತ್ತೂರು ತಾಲೂಕು, ಕೆದಂಬಾಡಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಬಯಲು ಕಸ ಮುಕ್ತ ಗ್ರಾಮ ಅಭಿಯಾನ-೨೦೨೨, ನಮ್ಮ ಗ್ರಾಮ ಸ್ವಚ್ಛ ಗ್ರಾಮ, ಕಸ ಮುಕ್ತ ಗ್ರಾಮ ನಮ್ಮ ಸಂಕಲ್ಪ ಅಭಿಯಾನಕ್ಕೆ ಕೆದಂಬಾಡಿ ಗ್ರಾಪಂನಲ್ಲಿ ಎ.೦೬ ಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಮಾತುಕತೆ
ಬಯಲು ಕಸ ಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವರ್ತಕರೊಂದಿಗೆ ಚರ್ಚೆ ನಡೆಸಲಾಯಿತು. ರಾಜ್ಯ ಹೆದ್ದಾರಿ ಸೇರಿದಂತೆ ರಸ್ತೆ ಬದಿಗಳಲ್ಲಿ ಕಸ ಹಾಕುವವರನ್ನು ಪತ್ತೆ ಮಾಡುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಯಿತು. ಶ್ರೀ ಶಿರಾಡಿ ಭಕ್ತವೃಂದದ ಚಂದ್ರ ಇದ್ಪಾಡಿಯವರು ಮಾತನಾಡಿ, ರಸ್ತೆಗೆ ಕಸ ಹಾಕುವವರು ಕೇವಲ ಅಂಗಡಿಯವರು ಮಾತ್ರ ಅಲ್ಲ, ಕೆಲವೊಂದು ಮನೆಯವರು ಕೂಡ ತಮ್ಮ ಮನೆಯ ಕಸವನ್ನು ರಸ್ತೆಗೆ ತಂದು ಹಾಕುತ್ತಿದ್ದಾರೆ. ಯಾರು ರಸ್ತೆ ಬದಿಗೆ ಕಸ ಹಾಕುತ್ತಿದ್ದಾರೋ ಅವರನ್ನು ಪತ್ತೆ ಹಚ್ಚಿ ದಂಡನೆ ಹಾಕುವ ಕ್ರಮ ಆಗಬೇಕು ಎಂದರು. ಕುಂಬ್ರ ನಿಶ್ಮಿತಾ ಕಾಂಪ್ಲೆಕ್ಸ್ ಮಾಲಕ ಪುರಂದರ ರೈ ಕೋರಿಕ್ಕಾರು ಮಾತನಾಡಿ, ರಸ್ತೆ ಬದಿಗೆ ಕಸ ತಂದು ಹಾಕುವವರು ಕೇವಲ ನಮ್ಮ ಗ್ರಾಮದವರು ಮಾತ್ರ ಅಲ್ಲ ಹೆಚ್ಚಾಗಿ ಹೊರಗಿನ ಗ್ರಾಮದವರು ಕಸ ತಂದು ಹಾಕುತ್ತಿದ್ದಾರೆ. ಬೇರೆ ಕಡೆಗಳಿಂದ ಬರುವವರು ಕೂಡ ಕಸವನ್ನು ತಂದು ಬಿಸಾಡಿ ಹೋಗುತ್ತಿದ್ದಾರೆ. ಇವರನ್ನು ಪತ್ತೆ ಹಚ್ಚಲು ಸಿಸಿ ಕ್ಯಾಮರವನ್ನು ಅಳವಡಿಸುವುದು ಸೂಕ್ತ ಎಂದರು. ಸಿರಿ ಆನಂದ ರೈಯವರು ಮಾತನಾಡಿ, ರಸ್ತೆ ಬದಿಗೆ ಕಸ ಹಾಕುವವರು ಹಿಡಿಯಬೇಕಾದರೆ ಸಿಸಿ ಕ್ಯಾಮರಾ ಅಳವಡಿಸುವುದೊಂದೇ ಪರಿಹಾರ ಎಂದರು. ವರ್ತಕ ನಾರಾಯಣ ಪೂಜಾರಿ ಕುರಿಕ್ಕಾರ ಮಾತನಾಡಿ, ವಾಣಿಜ್ಯ ಸಂಕೀರ್ಣ, ಮನೆ, ಅಂಗಡಿ ಇತ್ಯಾದಿಗಳನ್ನು ನಿರ್ಮಾಣ ಮಾಡಲು ಪರವಾನಗೆ ಪಡೆದುಕೊಳ್ಳುವಾಗಲೇ ಕಸ ವಿಲೇವಾರಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು, ಕಸ ರಸ್ತೆ ಬದಿಗೆ ಹಾಕದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು, ಸಿಸಿ ಕ್ಯಾಮರ ಅಳವಡಿಸಿ ಕಸ ಹಾಕುವವರು ಸಿಕ್ಕಿದರೆ ಅವರಿಗೆ ದಂಡನೆಯೊಂದಿಗೆ ಸೂಕ್ತ ಕಾನೂನು ಕ್ರಮವನ್ನು ಜರಗಿಸಬೇಕು ಎಂದರು.

ರೂ.೫೦೦ ರಿಂದ ೫ ಸಾವಿರ ದಂಡ
ಗ್ರಾಮ ವ್ಯಾಪ್ತಿಯ ರಾಜ್ಯ ರಸ್ತೆ ಸೇರಿದಂತೆ ಪ್ರಮುಖ ರಸ್ತೆಯ ಬದಿಗಳಲ್ಲಿ ಕಸ ಹಾಕುವವರಿಗೆ ಸೂಚನೆ ನೀಡುವಂತಹ ಬ್ಯಾನರ್‌ಗಳನ್ನು ಅಳವಡಿಸುವುದು, ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರ ಅಳವಡಿಸುವುದು, ಕಸ ಹಾಕದಂತೆ ಜನರಲ್ಲಿ ಜಾಗೃತಿ ಮೂಡಿಸುವುದು, ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆದುಕೊಂಡು ಪ್ರತಿ ತಿಂಗಳ ಒಂದು ದಿನ ಸ್ವಚ್ಛ ಮಾಡುವ ಮೂಲಕ ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ ಎಂದು ರತನ್ ರೈ ಕುಂಬ್ರ ತಿಳಿಸಿದರು. ರಸ್ತೆ ಬದಿಗೆ ಕಸ ಹಾಕುವವರು ಕಂಡರೆ ಕೂಡಲೇ ಪಂಚಾಯತ್‌ಗೆ ತಿಳಿಸಿ ಅವರ ಮೇಲೆ ಐನೂರರಿಂದ ೫ ಸಾವಿರದ ತನಕ ದಂಡ ವಿಧಿಸುವುದು ಮತ್ತು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಕಸ ಹಾಕುವವರ ಹೆಸರು ತಿಳಿಸಿದವರ ಹೆಸರನ್ನು ಗೌಪ್ತವಾಗಿಡಲಾಗುವುದು ಎಂದು ಅವರು ತಿಳಿಸಿದರು.

ವರ್ತಕರ ಸಹಕಾರ ಮುಖ್ಯ
ಈಗಾಗಲೇ ಎಲ್ಲಾ ವರ್ತಕರಿಗೆ ಕಸ ವಿಲೇವಾರಿಗೆ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ನೀಡಲಾಗಿದೆ ಅಲ್ಲದೆ ಪ್ರತಿ ತಿಂಗಳು ನೂರು ರೂಪಾಯಿಯಂತೆ ಹಣ ಸಂಗ್ರಹ ಕೂಡ ಮಾಡಲಾಗುತ್ತಿದೆ. ಕೆಲವು ಬೀದಿ ಬದಿ ವ್ಯಾಪಾರಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು ನಮಗೆ ಪಂಚಾಯತ್‌ನಿಂದ ಪರವಾನಗೆ ಕೊಡುತ್ತಿಲ್ಲ ನಾವ್ಯಾಕೆ ಹಣ ಕೊಡಬೇಕು ಎಂದು ಹೇಳುತ್ತಿದ್ದಾರೆ. ಅವರಿಗೆ ವ್ಯಾಪಾರ ಮಾಡಲು ಪಂಚಾಯತ್ ಸಹಕಾರ ನೀಡುತ್ತಿದೆ ಹೀಗಿರುವಾಗ ಅವರು ಪಂಚಾಯತ್‌ನೊಂದಿಗೆ ಸಹಕರಿಸಬೇಕಾಗಿದೆ, ಸಹಕರಿಸದ ಅನಧಿಕೃತ ಬೀದಿ ಬದಿ ವ್ಯಾಪಾರಸ್ಥರಿಗೆ ನೋಟೀಸ್ ನೀಡಿದ್ದು ಅನಧಿಕೃತ ಕಟ್ಟಡದಲ್ಲಿ ವ್ಯಾಪಾರ ಮಾಡುತ್ತಿರುವುದು ಎಷ್ಟು ಸರಿ ಎಂದು ಕೇಳಿದ್ದೇವೆ. ಇನ್ನೂ ಪರವಾನಗೆ ಪಡೆದುಕೊಂಡು ವ್ಯಾಪಾರ ನಡೆಸುವ ಕೆಲವರು ಸಹಕಾರ ನೀಡುತ್ತಿಲ್ಲ ಇಂಥವರಿಗೂ ನೋಟೀಸ್ ನೀಡಿದ್ದು ನಿಮ್ಮ ಪರವಾನಗೆಯನ್ನು ನಾವ್ಯಾಕೆ ರದ್ದು ಮಾಡಬಾರದು ಎಂದು ಕೇಳಿದ್ದೇವೆ. ಆದ್ದರಿಂದ ಕಸ ಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ವರ್ತಕರು ಪಂಚಾಯತ್‌ನೊಂದಿಗೆ ಸಹಕಾರ ನೀಡಬೇಕು ಎಂದು ಅಧ್ಯಕ್ಷ ರತನ್ ರೈ ಕುಂಬ್ರ ಮನವಿ ಮಾಡಿಕೊಂಡರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆಯರು ಸ್ವಾಗತಿಸಿ, ಬಯಲು ಕಸ ಮುಕ್ತ ಗ್ರಾಮ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಸದಸ್ಯರುಗಳಾದ ವಿಠಲ ರೈ ಮಿತ್ತೋಡಿ, ಕೃಷ್ಣ ಕುಮಾರ್ ಇದ್ಯಪೆ, ರೇವತಿ, ಅಸ್ಮಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುನಂದ ರೈ ವಂದಿಸಿದರು. ಸಿಬ್ಬಂದಿಗಳಾದ ಜಯಂತ ಮೇರ್ಲ, ವಿದ್ಯಾಪ್ರಸಾದ್ ಕೆ ಸಹಕರಿಸಿದ್ದರು. ಸಭೆಯಲ್ಲಿ ಆಸರೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷ ಚಂದ್ರಾವತಿ, ಕಾರ್ಯದರ್ಶಿ ವಿಶಾಲಕ್ಷಿ, ಎಂಬಿಕೆ ಲೀಲಾ, ಎಲ್‌ಸಿಆರ್‌ಪಿ ಪೂರ್ಣಿಮಾ, ಜಯಲತಾ, ಆಶಾ ಕಾರ್ಯಕರ್ತೆ ರೇಖಾ ಕಟ್ಟತ್ತಾರು, ಟೈಲರ್ ಆನಂದ ರೈ, ರಾಧಾಕೃಷ್ಣ ಪೂಜಾರಿ, ಅಶ್ರಫ್ ಸಾರೆಪುಣಿ, ರಶೀದ್ ಕಟ್ಟತ್ತಾರು, ಶಶಿ ಡಿ, ಬಾಲಚಂದ್ರ ರೈ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿ ತಿಂಗಳು ಸ್ವಚ್ಛ ಗ್ರಾಮ ಜಾಗೃತಿ ಮೂಡಿಸುವ ಸಂಘ ಸಂಸ್ಥೆಗಳು
ಎಪ್ರಿಲ್ ತಿಂಗಳಿನಲ್ಲಿ ಆಸರೆ ಸಂಜೀವಿನಿ ಒಕ್ಕೂಟ ಕೆದಂಬಾಡಿ, ಮೇನಲ್ಲಿ ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಸಾರೆಪುಣಿ, ಜೂನ್‌ನಲ್ಲಿ ಯುವರಂಗ ಕೆದಂಬಾಡಿ, ಜುಲೈನಲ್ಲಿ ಒಡಿಯೂರು ಸಂಘ ಕೆದಂಬಾಡಿ, ಆಗಸ್ತ್‌ನಲ್ಲಿ ಶ್ರೀ ಕ್ಷೇ.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಪ್ಟೆಂಬರ್‌ನಲ್ಲಿ ಕಾಂಗ್ರೆಸ್ ವಲಯ ಸಮಿತಿ ಕೆದಂಬಾಡಿ, ಅಕ್ಟೋಬರ್‌ನಲ್ಲಿ ಎಸ್‌ಕೆಎಸ್‌ಎಸ್‌ಎಫ್ ಕಟ್ಟತ್ತಾರು, ನವೆಂಬರ್‌ನಲ್ಲಿ ಶಿರಾಡಿ ಭಕ್ತ ವೃಂದ ಕೆದಂಬಾಡಿ, ದಶಂಬರ್‌ನಲ್ಲಿ ಸ್ನೇಹ ಯುವಕ ಮಂಡಲ ಕೆದಂಬಾಡಿ, ಜನವರಿಯಲ್ಲಿ ಎಸ್.ಡಿ.ಪಿ.ಐ ತಿಂಗಳಾಡಿ, ಫೆಬ್ರವರಿಯಲ್ಲಿ ಬಿಜೆಪಿ ಕೆದಂಬಾಡಿ ಗ್ರಾಮ ಸಮಿತಿ, ಮಾರ್ಚ್‌ನಲ್ಲಿ ರಿಕ್ಷಾ ಚಾಲಕ ಮಾಲಕರ ಸಂಘ ತಿಂಗಳಾಡಿ ಈ ಸಂಘ ಸಂಸ್ಥೆಗಳು ಗ್ರಾಮ ಸ್ವಚ್ಛತೆ ಮತ್ತು ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ.

LEAVE A REPLY

Please enter your comment!
Please enter your name here