ವಿಟ್ಲ: ಶೋಷಣೆಮುಕ್ತ ಸಮಾಜ ನಿರ್ಮಾಣದಲ್ಲಿ ಮಹಿಳೆಯರು ಪ್ರಮುಖ ಪಾತ್ರ ನಿರ್ವಹಿಸಬೇಕು. ಶೋಷಣೆಗೆ ಕೇವಲ ಪುರುಷರು ಮಾತ್ರ ಕಾರಣರಲ್ಲ ಎಂದು ಮಂಗಳೂರು ಲೇಡಿಗೋಷನ್ ಆಸ್ಪತ್ರೆಯ ಘಟಕ ಆಡಳಿತಾಧಿಕಾರಿ ಪ್ರಿಯಾ.ಕೆ.ಸಿ ಯವರು ಹೇಳಿದರು.
ಮಾಣಿ ಗ್ರಾಮ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಮಾಣಿಕ್ಯ ಸಂಜೀವಿನಿ ಒಕ್ಕೂಟ, ಸ್ತ್ರೀಶಕ್ತಿ ಗೊಂಚಲು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಮಾಣಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರಗಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಮಹಿಳೆ ಕೇವಲ ಮನೆಗೆ ಮಾತ್ರ ಸೀಮಿತವಾಗಿರದೆ, ಸಾಮಾಜಿಕ ಚಟುವಟಿಕೆಗಳಲ್ಲಿ ಬಹಳವಾಗಿ ತೊಡಗಿಕೊಂಡಿದ್ದು, ಯಾವುದೇ ಸಂದರ್ಭದಲ್ಲಿ ಎದೆಗುಂದಬಾರದು. ಮಹಿಳೆಯರಿಗಾಗಿಯೇ ಅನೇಕ ಕಾನೂನು ಕಾಯಿದೆಗಳು ಇವೆ. ಇವುಗಳ ಬಗ್ಗೆ ಸಮರ್ಪಕವಾಗಿ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆಯವರು, ಮಹಿಳೆ ಕರುಣಾಮಯಿ, ಅವಳು ದಯಾಮಯಿ. ತಾಯಿಯಾಗಿ, ಸಹೋದರಿಯಾಗಿ, ಮಗಳಾಗಿ ಇನ್ನಿತರ ಹಲವು ಹಂತಗಳಲ್ಲಿ ಜೀವನದಲ್ಲಿ ತ್ಯಾಗವನ್ನು ಮಾಡಿ, ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಿದವಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ ಜೋಷಿ, ವರ್ಗಾವಣೆಗೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ದೀಪಿಕಾ. ಪಿ, ನಿವೃತ್ತ ಅಂಗನವಾಡಿ ಸಹಾಯಕಿ ವಾರಿಜ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಲಾರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಜೆ.ಪ್ರಹ್ಲಾದ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಷಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಪ್ರೇಮಾ ಆಗಮಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ.ಕೆ.ಮಾಣಿ, ಸುದೀಪ್ ಕುಮಾರ್ ಶೆಟ್ಟಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ನಾರಾಯಣ ಶೆಟ್ಟಿ, ರಮಣಿ.ಡಿ.ಪೂಜಾರಿ, ಸುಜಾತ, ಸಂಜೀವಿನಿ ಒಕ್ಕೂಟದ ತಾಲೂಕು ಸಂಯೋಜಕಿ ನಳಿನಾಕ್ಷಿ, ಪ್ರಮುಖರಾದ ಕೆ.ಕೆ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜಾ ಸ್ವಾಗತಿಸಿದರು. ಸಂಜೀವಿನಿ ಒಕ್ಕೂಟದ ಸಂಯೋಜಕಿ ಲೈಲಾಬಿ ವಂದಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ರೋಹಿಣಿ ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್ ಸಿಬ್ಬಂದಿ ಸಹಕರಿಸಿದರು. ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.