ಪುತ್ತೂರು: ಶಿಕ್ಷಣ ಸಂಸ್ಥೆಗೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬರುತ್ತಿರುವುದು ಮತ್ತು ಅದಕ್ಕೆ ಪ್ರತಿಯಾಗಿ ಹಿಂದೂ ಸಮುದಾಯದ ವಿದ್ಯಾರ್ಥಿಗಳು ಕೆಲವೆಡೆ ಕೇಸರಿ ಶಾಲು ಧರಿಸಿಕೊಂಡು ಬರುತ್ತಿರುವುದು, ಇನ್ನೂ ಕೆಲವೆಡೆ ನೀಲಿ ಶಾಲು ಧರಿಸಿಕೊಂಡು ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿರುವುದರಿಂದ ವಿದ್ಯಾರ್ಥಿಗಳ ನಡುವೆ ಸಂಘರ್ಷ ನಡೆಯುತ್ತಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರಕಾರ ಫೆ.9ರಿಂದ ಮೂರು ದಿನ ರಾಜ್ಯಾದ್ಯಂತ ಪ್ರೌಢಶಾಲೆಯಿಂದ ಪದವಿಯವರೆಗಿನ ಎಲ್ಲಾ ತರಗತಿಗಳಿಗೆ ರಜೆ ಘೋಷಿಸಿದೆ.
ಉಡುಪಿಯ ಸರಕಾರಿ ಕಾಲೇಜ್ನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯವರಿಗೆ ಹಿಜಾಬ್ ಧರಿಸುವುದಕ್ಕೆ ಅವಕಾಶ ನಿರಾಕರಿಸುವ ಮೂಲಕ ವಿವಾದ ಆರಂಭಗೊಂಡಿತ್ತು. ಬಳಿಕ ಮುಸ್ಲಿಂ ಸಮುದಾಯದ ಆರು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದರು. ಹಿಜಾಬ್ ಧರಿಸುವುದನ್ನು ವಿರೋಧಿಸಿ ಹಲವು ಕಾಲೇಜ್ಗಳಲ್ಲಿ ಹಿಂದೂ ಸಮಾಜದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಬರುತ್ತಿದ್ದರು. ಚಿಕ್ಕಮಗಳೂರಿನಲ್ಲಿ ಕೆಲವು ವಿದ್ಯಾರ್ಥಿಗಳು ನೀಲಿ ಶಾಲು ಧರಿಸಿಕೊಂಡು ಬಂದಿದ್ದರು. ವಿದ್ಯಾರ್ಥಿಗಳೊಳಗಿನ ಈ ನಡೆಯಿಂದಾಗಿ ಶಿವಮೊಗ್ಗ ಸಹಿತ ಹಲವೆಡೆ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು. ಈ ಮಧ್ಯೆ, ಹಿಜಾಬ್ಗೆ ಅವಕಾಶ ನೀಡಬೇಕೇ, ಬೇಡವೇ ಎಂಬುದರ ಕುರಿತು ಹೈಕೋರ್ಟ್ನಲ್ಲಿ ವಾದ ಪ್ರತಿವಾದ ನಡೆದಿದ್ದು ತೀರ್ಪು ಇನ್ನಷ್ಟೇ ಹೊರಬರಬೇಕಿದೆ. ಇದೀಗ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರಕಾರ ರಜೆ ಘೋಷಿಸಿದೆ.