ಬೇಡಿಕೆಗಳ ಈಡೇರಿಕೆಗೆ ಸರಕಾರದ ಗಮನ ಸೆಳೆಯಲು ದೇವರ ಮೊರೆ ಹೋದ ಅತಿಥಿ ಉಪನ್ಯಾಸಕರು -ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅತಿಥಿ ಉಪನ್ಯಾಸಕರಿಂದ ಪ್ರಾರ್ಥನೆ

0

ಪುತ್ತೂರು: ಕಳೆದ ೩೦ ದಿನಗಳಿಂದ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿಷ್ಠಾವಧಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಸರಕಾರದಿಂದ ಯಾವುದೇ ಸ್ಪಂಧನೆ ಸಿಗದ ಹಿನ್ನಲೆಯಲ್ಲಿ ಇದೀಗ ಅತಿಥಿ ಉಪನ್ಯಾಸಕರು ದೇವರ ಮೊರೆ ಹೋಗಿದ್ದಾರೆ. ಅತಿಥಿ ಉಪನ್ಯಾಸಕರು ಜ.10ರಂದು ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಮಾಡಿದರು. ಬಳಿಕ ಉಳ್ಳಾಲ ದರ್ಗಾ, ಚರ್ಚ್, ಕೊರಗಜ್ಜನ ಕ್ಷೇತ್ರದಲ್ಲೂ ಪ್ರಾರ್ಥನೆ ನಡೆಸಲಾಗುವುದು ಎಂದು ಅತಿಥಿ ಉಪನ್ಯಾಸಕರು ತಿಳಿಸಿದರು.

ಜಿಲ್ಲೆಯ ಬಹುತೇಕ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಸೇವಾ ಭದ್ರತೆ, ಕನಿಷ್ಟ ವೇತನ ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತರಗತಿಗಳನ್ನು ಅನಿರ್ದಿಷ್ಠಾವಧಿವರೆಗೆ ಬಹಿಷ್ಕರಿಸಿದ್ದರು. ಇದೀಗ ಕೋವಿಡ್ -೧೯ ಸೋಂಕಿನ ೩ ಅಲೆ ರೂಪಾಂತರಿ (ಓಮಿಕ್ರಾನ್) ಸಂಬಂಧಿಸಿ ಪ್ರತಿಭಟನೆ ಮಾಡಲು ಅವಕಾಶ ಇಲ್ಲದ ಹಿನ್ನಲೆಯಲ್ಲಿ ದೇವರ ಮೊರೆ ಹೋಗಿದ್ದಾರೆ. ರಾಜ್ಯದಲ್ಲಿ ೧೪೭೫೦ ಅತಿಥಿ ಉಪನ್ಯಾಸಕರಿದ್ದಾರೆ. ಕೋವಿಡ್ ಎರಡನೇ ಅಲೆ ಕುಂಠಿತಗೊಂಡ ನಂತರದ ದಿನಗಳಲ್ಲಿ ಸರ್ಕಾರ ಪದವಿ ಕಾಲೇಜುಗಳನ್ನು ಪುನರಾರಂಭಿಸಿದೆ. ಕೆಲ ಕಾಲೇಜುಗಳಲ್ಲಿ ಪ್ರಾಂಶುಪಾಲರನ್ನು ಹೊರತುಪಡಿಸಿದರೆ ಖಾಯಂ ಉಪನ್ಯಾಸಕರೇ ಇಲ್ಲ. ಕೆಲವೆಡೆ ಕಾಲೇಜುಗಳಲ್ಲಿ ಒಂದಿಷ್ಟು ಉಪನ್ಯಾಸಕರಿದ್ದರೂ ಪ್ರಮುಖ ವಿಷಯದ ಉಪನ್ಯಾಸಕರ ಕೊರತೆ ಸಾಕಷ್ಟಿದೆ. ಆದರೆ ಅತಿಥಿ ಉಪನ್ಯಾಸಕರು ಸೇವಾ ಭದ್ರತೆ ಇಲ್ಲದೇ ಸಮಸ್ಯೆ ಅನುಭವಿಸುವಂತಾಗಿದೆ. ಆದರೂ ಅತಿಥಿ ಉಪನ್ಯಾಸಕರು ಕಳೆದ ೧೫-೨೦ ವರ್ಷಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ಹಲವರು ಪಿಎಚ್‌ಡಿ, ಸೆಟ್ ಹಾಗೂ ನೆಟ್ ಪರೀಕ್ಷೆಗಳನ್ನು ಪಾಸಾಗಿದ್ದು, ಯುಜಿಸಿ ನಿಯಮಾವಳಿ ಪ್ರಕಾರ ವಿದ್ಯಾರ್ಹತೆ ಹೊಂದಿದ್ದಾರೆ. ಇವರನ್ನು ಖಾಯಂಗೊಳಿಸಲು ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು. ಅಲ್ಲದೇ, ಪಶ್ಚಿಮ ಬಂಗಾಳ ಮಾದರಿಯನ್ನು ರಾಜ್ಯದಲ್ಲಿ ಜಾರಿಗೊಳಬೇಕು ಎಂಬುದು ಅತಿಥಿ ಉಪನ್ಯಾಸಕರ ಆಗ್ರಹವಾಗಿದೆ.

ಧಾರ್ಮಿಕ ಶ್ರದ್ದಾಕೇಂದ್ರಗಳಲ್ಲಿ ದೇವರ ಮೊರೆ:
ರಾಜ್ಯ ಅತಿಥಿ ಉಪಾನ್ಯಾಸಕರ ಉಪಾಧ್ಯಕ್ಷ ಮತ್ತು ದ.ಕ, ಕೊಡಗು, ಉಡುಪಿ ಜಿಲ್ಲಾ ಪ್ರಧಾನ ಅಧ್ಯಕ್ಷ ಗೋಪಾಲಕೃಷ್ಣ ಎಂ ಅವರು ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದೇವೆ. ಸೇವಾ ಭದ್ರತೆ ಕೊಡಿ, ವೀಲಿನತೆ ಮಾಡಿ ಮತ್ತು ನಮ್ಮ ಸೇವೆಯನ್ನು ಖಾಯಂ ಗೊಳಿಸಿ ಎಂದು ಕಳೆದ ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದರೂ ಸರಕಾರ ನಮ್ಮನ್ನು ಖಾಯಂಗೊಳಿಸಿಲ್ಲ. ಇದೀಗ ಹಲವರಿಗೆ ವಯೋಮಿತಿ ಕಳೆಯುತ್ತಾ ಬಂದಿದೆ. ಈಗಾಗಲೆ ಶಾಸಕರಿಗೆ, ಸಂಸದರಿಗೆ ಮನವಿ ಸಲ್ಲಿಸಿದ್ದೇವೆ. ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದೆಂದು ಭರವಸೆ ನೀಡಿದ್ದಾರೆ. ಇದೀಗ ನಾವು ಧಾರ್ಮಿಕ ಶ್ರದ್ದಾ ಕೇಂದ್ರದಲ್ಲಿ ದೇವರ ಮೊರೆ ಹೋಗಲಿದ್ದೇವೆ. ಮಹಾಲಿಂಗೇಶ್ವರ ದೇವಸ್ಥಾನ, ಉಳ್ಳಾಲ ದರ್ಗಾ, ಚರ್ಚ್, ಸ್ವಾಮಿ ಕೊರಗಜ್ಜ ಕ್ಷೇತ್ರಕ್ಕೂ ಹೋಗಿ ಪ್ರಾರ್ಥನೆ ಮಾಡಲಿದ್ದೇವೆ ಎಂದರು.

ಸುಪ್ರಿಂ ಕೋರ್ಟ್ ಆದೇಶದಂತೆ ಖಾಯಂ ಗೊಳಿಸಿ:
ದಕ್ಷಿಣ ಕನ್ನಡ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಉಪಾಧ್ಯಕ್ಷ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಸಂತ ಕುಮಾರ್ ಅವರು ಮಾತನಾಡಿ ಸುಮಾರು ೨೦ ರಿಂದ ೩೦ ವರ್ಷದಿಂದ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕನಿಷ್ಠ ವೇತನದಲ್ಲಿ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸರಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅತಿಥಿ ಉಪನ್ಯಾಸಕರನ್ನು ಯುಜಿಸಿ ನಿಯಮಾವಳಿಯಂತೆ ಪ್ರಕಾರ ಕನಿಷ್ಠ ವೇತನ ಕೊಡಬೇಕೆಂದು ಸುಪ್ರಿಂ ಕೋರ್ಟ್ ಆದೇಶ ನೀಡಿದೆ. ಪಶ್ಚಿಮಬಂಗಾಳ, ದೆಹಲಿ, ಹರಿಯಾಣ ಇದನ್ನು ಪಾಲಿಸಿದೆ. ಕರ್ನಾಟಕ ಸರಕಾರ ಇದನ್ನು ಪಾಲಿಸಿಲ್ಲ. ಸುಪ್ರಿಂ ಕೋರ್ಟ್ ಆದೇಶದಂತೆ ನಮ್ಮ ಸೇವೆಯನ್ನು ಖಾಯಂ ಗೊಳಿಸಬೇಕು ಎಂದರು.

ಉಪನ್ಯಾಸಕರನ್ನು ಕಳೆದು ಕೊಳ್ಳಬಾರದೆಂದು ಹೋರಾಟ:
ಅತಿಥಿ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಶಾಂತಿ ಅವರು ಮಾತನಾಡಿ ಅತಿಥಿ ಉಪನ್ಯಾಸಕರಿಗೆ ಸರಿಯಾದ ಸವಲತ್ತು ಸಿಗದ ಹಿನ್ನಲೆಯಲ್ಲಿ ಈ ಹಿಂದೆ ಹಲವಾರು ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ೧೫ ದಿನಗಳ ಹಿಂದೆಯೂ ಉಪನ್ಯಾಸಕರೊಬ್ಬರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಇನ್ನು ಉಪನ್ಯಾಸಕರನ್ನು ಕಳೆದು ಕೊಳ್ಳಬಾರದು ಎಂಬ ಚಿಂತನೆಯಲ್ಲಿ ನಾವು ಹೋರಾಟದ ಹಾದಿ ಹಿಡಿದು ಇವತ್ತು ದೇವರ ಮೊರೆ ಹೋಗಿದ್ದೇವೆ ಎಂದರು. ವಸಂತ ಹಾಡಿಕಲ್ಲು, ಬೆಳಂದೂರು ಕಾಲೇಜಿನ ಲೋಕೇಶ್ ಸೇಡಿಯಾಪು, ಪದ್ಮಜ, ಪೂರ್ಣಿಮ ರವಿ, ಮನಮೋಹನ್, ಉಪ್ಪಿನಂಗಡಿ ಕಾಲೇಜಿನ ವೆಂಕಟಕೃಷ್ಣ ಭಾಗವತ, ಗೀತಾ ವಸಂತ, ಸುಳ್ಯದ ರಂಜಿತ್, ಮಹಿಳಾ ಕಾಲೇಜಿನ ರೂಪಲತಾ, ವಿಟ್ಲದ ವಿದ್ಯಾ, ಉಪ್ನಂಗಡಿ ತನುಜಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here