ಪುತ್ತೂರು: ಸುದ್ದಿ ಜನಾಂದೋಲನ ವೇದಿಕೆ ಮತ್ತು ಸುದ್ದಿ ಮಾಹಿತಿ ಟ್ರಸ್ಟ್‌ನ ನೇತೃತ್ವದಲ್ಲಿ ಲಂಚ,ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಆಂದೋಲನದಲ್ಲಿ ಲಂಚ, ಭ್ರಷ್ಟಾಚಾರದ ಪ್ರತಿಕೃತಿ ದಹನವು ಜ.10ರಂದು ಸುದ್ದಿ ಬಿಡುಗಡೆ ಪತ್ರಿಕಾ ಕಚೇರಿ ಬಳಿ ನಡೆಯಿತು.
ಸುದ್ದಿ ಜನಾಂದೋಲನ ವೇದಿಕೆ ಮತ್ತು ಸುದ್ದಿ ಮಾಹಿತಿ ಟ್ರಸ್ಟ್‌ನ ನೇತೃತ್ವದಲ್ಲಿ ಜ.೬ರಂದು ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಕರ್ನಾಟಕ ಲೋಕಾಯುಕ್ತದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದ ಎನ್.ಸಂತೋಷ್ ಹೆಗ್ಡೆಯವರು ಲಂಚ, ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಚಾಲನೆ ನೀಡಿ, ಫಲಕಗಳನ್ನು ಬಿಡುಗಡೆಗೊಳಿಸಿ ಸಂವಾದ ನಡೆಸಿದ್ದರು.ಇದರ ಮುಂದುವರಿದ ಕಾರ್ಯಕ್ರಮವಾಗಿ ಲಂಚ, ಭ್ರಷ್ಟಾಚಾರದ ಪ್ರತಿಕೃತಿಯನ್ನು ಸಾಂಕೇತಿಕವಾಗಿ ದಹಿಸಲಾಯಿತು.
ಈ ಸಂದರ್ಭ ಸುದ್ದಿ ಸಮೂಹ ಸಂಸ್ಥೆಗಳ ಅಡಳಿತ ನಿರ್ದೇಶಕ, ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಸಂಪಾದಕರೂ ಆಗಿರುವ ಆಂದೋಲನದ ರೂವಾರಿ ಡಾ.ಯು.ಪಿ ಶಿವಾನಂದರವರು ಮಾತನಾಡಿ ಲಂಚ, ಭ್ರಷ್ಟಾಚಾರದ ವಿರುದ್ಧದ ಹೋರಾಟ ಪ್ರತಿಯೊಬ್ಬರ ಹೋರಾಟ.ನಮ್ಮಿಂದ, ನಮಗಾಗಿ ಆಡಳಿತ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.ಪ್ರಜಾಪ್ರಭುತ್ವ ದಿನ ಅಂದರೆ ನಮ್ಮದೇ ಆಡಳಿತ.ಇಲ್ಲಿ ನಾವು ಮತ ನೀಡಿ ಆಯ್ಕೆ ಮಾಡಿದ ಪ್ರತಿನಿಧಿಗಳು ಆಡಳಿತ ನಡೆಸುತ್ತಿದ್ದಾರೆ.ಹೀಗಾಗಿ ಪುತ್ತೂರಿನಲ್ಲಿ ಯಾರೇ ಲಂಚ ಪಡೆದುಕೊಂಡರೂ ಅದು ನಮ್ಮದೇ ತಪ್ಪು.ಪ್ರಜಾಪ್ರಭುತ್ವ ಆಡಳಿತದಲ್ಲಿ ನಾವೆಲ್ಲ ರಾಜರುಗಳು. ಇಲ್ಲಿ ಯಾರೇ ತಪ್ಪು ಮಾಡಿದರೂ, ಯಾರೇ ಲಂಚ ಪಡೆದರೂ ನಾವೇ ಹೊಣೆಗಾರರು.ನಮ್ಮ ಆಡಳಿತ ಸರಿಯಿಲ್ಲ ಎಂದೇ ಅರ್ಥ.ಲಂಚ ಪಡೆಯುವವರನ್ನು, ಭ್ರಷ್ಟಾಚಾರ ಮಾಡುವವರನ್ನು ಬಹಿಷ್ಕರಿಸಬೇಕು.ಎಲ್ಲ ಜನರಿಗಾಗಿ ಕೆಲಸ ಮಾಡಬೇಕಾದವರು ಲಂಚ, ಭ್ರಷ್ಟಾಚಾರ ಮಾಡಿದರೆ ಊರಿನ ಜನ ಅವರಿಗೆ ಬಹಿಷ್ಕಾರ ಹಾಕಿ ದೂರ ಇಟ್ಟಾಗ ಲಂಚ, ಭ್ರಷ್ಟಾಚಾರ ತನ್ನಿಂದ ತಾನೇ ನಿಲ್ಲುತ್ತದೆ.ಉತ್ತಮ ಕೆಲಸ ಮಾಡುವವರನ್ನು ಗೌರವಿಸಿದಾಗ ಇನ್ನಷ್ಟು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಾರೆ ಎಂದರು.
ಸುದ್ದಿ ಆಂದೋಲನಕ್ಕೆ ಶಾಸಕ ಮಠಂದೂರು, ಸಚಿವ ಅಂಗಾರರಿಂದ ಬೆಂಬಲ: ಲಂಚ,ಭ್ರಷ್ಟಾಚಾರ ವಿರೋಧಿ ಆಂದೋಲಕ್ಕೆ ಶಾಸಕ ಸಂಜೀವ ಮಠಂದೂರು ಹಾಗೂ ಸಚಿವರೂ ಆಗಿರುವ ಸುಳ್ಯದ ಶಾಸಕ ಎಸ್.ಅಂಗಾರರವರು ಬೆಂಬಲ ಸೂಚಿಸಿದ್ದಾರೆ. ಸುದ್ದಿ ಬಳಗದ ನೇತೃತ್ವದಲ್ಲಿ ಜನಪ್ರತಿನಿಧಿಗಳ, ಜನತೆಯ ಸಹಕಾರದೊಂದಿಗೆ ಆಂದೋಲನವಾಗಿ ಪ್ರಾರಂಭವಾಗಿದೆ. ಮುಂದಿನ ಮೂರು ತಿಂಗಳೊಳಗೆ ಬದಲಾವಣೆ ಬರಲಿದೆ.ಇದು ರಾಜ್ಯ, ದೇಶದಲ್ಲಿಯೇ ಇಲ್ಲ. ದೇಶದಲ್ಲಿ ಸುಳ್ಯ, ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕು ಲಂಚ, ಭ್ರಷ್ಟಾಚಾರ ಮುಕ್ತ ತಾಲೂಕು ಆಗಲಿದೆ. ಮಾಧ್ಯಮವಾಗಿ ನಾವು, ಬಲಾತ್ಕಾರದ ಬಂದ್, ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿರುದ್ಧ ನಡೆಸಿದ ಆಂದೋಲನ ಜನತೆಯ ಸಹಕಾರದೊಂದಿಗೆ ಯಶಸ್ವಿಯಾಗಿದೆ ಪತ್ರಿಕೆ ಇರುವ ಮೂರೂ ತಾಲೂಕುಗಳನ್ನೂ ಲಂಚ, ಭ್ರಷ್ಟಾಚಾರ ಮುಕ್ತ ತಾಲೂಕನ್ನಾಗಿ ಮಾಡುವ ನಿಟ್ಟಿನಲ್ಲಿ ಪತ್ರಿಕೆ ಎಲ್ಲರ ಧ್ವನಿಯಾಗಿ ಕೆಲಸ ಮಾಡಲಿದೆ ಎಂದರು.
ಸುದ್ದಿ ಬಿಡುಗಡೆ ಮತ್ತು ಸುದ್ದಿ ಚಾನೆಲ್ ಪ್ರಧಾನ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ ಮಾತನಾಡಿ, ಕಳೆದ ೩೭ ವರ್ಷಗಳ ಹಿಂದೆ ಭ್ರಷ್ಟಾಚಾರ ತಾಂಡವವಾಡುತ್ತಿದ್ದ ಸಮಯದಲ್ಲಿ ಯುವ ವೈದ್ಯರಾಗಿ ಡಾ.ಯು.ಪಿ.ಶಿವಾನಂದರವರು ಬಳಕೆದಾರರ ವೇದಿಕೆ ಮೂಲಕ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ, ಅಧಿಕಾರಿಗಳ ಕಾರ್ಯಕ್ರಮವನ್ನು ಕಚೇರಿ ಫಲಕಗಳಲ್ಲಿ ಅಳವಡಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.೧೯೮೫ರಲ್ಲಿ ಸುಳ್ಯ ತಾಲೂಕಿನಲ್ಲಿ ಭ್ರಷ್ಟ ಅಧಿಕಾರಿಯನ್ನು ಗುರುತಿಸುವ ಕೆಲಸ ಮಾಡಲಾಗಿದ್ದು ರಕ್ಷಣೆಗೆ ಬಂದ ಇನ್ಸ್‌ಪೆಕ್ಟರ್ ಕಾಂಬ್ಳಿ ಎಂಬವರನ್ನು ಸೇರಿದ್ದ ಜನರು ಭ್ರಷ್ಟ ಅಧಿಕಾರಿಯೆಂದು ಗುರುತಿಸಿದ್ದಾರೆ.ನಂತರ ಆ ಅಧಿಕಾರಿ ಡಾ.ಶಿವಾನಂದರ ವಿರುದ್ಧ ವಿಭಿನ್ನ ರೀತಿಯಲ್ಲಿ ಧ್ವೇಷ ಸಾಧಿಸಲಾರಂಭಿಸಿದಾಗ ವಿಧಾನ ಸಭಾ ಚುನಾವಣೆಯಲ್ಲಿ ಡಾ.ಶಿವಾನಂದರು ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಅಭ್ಯರ್ಥಿಗಳ ಎದುರು ಸ್ಪರ್ಧಿಸಿದ್ದರು.ನಂತರ ಸುಳ್ಯ, ಬೆಳ್ತಂಗಡಿ, ಪುತ್ತೂರಿನಲ್ಲಿ ಪತ್ರಿಕೆ ಪ್ರಾರಂಭಿಸಿ ನಿರಂತರ ಭ್ರಷ್ಟಾಚಾರದ ವಿರುದ್ದ ಜನಜಾಗೃತಿ ಮೂಡಿಸಿ ಲೇಖನ ಬರೆದು ಕ್ರಾಂತಿಯನ್ನು ಮೂಡಿಸಿದ್ದರು.ನಂತರ ೨೦೦೯ ಹಾಗೂ ೨೦೧೯ರ ಚುನಾವಣೆಯಲ್ಲಿ ಸ್ಪರ್ಧಿಸಿ, ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತಿದ್ದರು.ಇತ್ತೀಚೆಗೆ ಬಲಾತ್ಕಾರದ ಬಂದ್, ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದ ವಿರುದ್ದ ಹೋರಾಟ ನಡೆಸಿ ಯಶಸ್ವಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮತ್ತೆ ಭ್ರಷ್ಟಾಚಾರ ನಡೆಯುತ್ತಿದ್ದು ಜನ ಸಾಮಾನ್ಯರು ಕಚೇರಿಗಳಲ್ಲಿ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ.ಹಣ ಕೊಡದೇ ಸರಕಾರಿ ಕಚೇರಿಗಳಲ್ಲಿ ಕೆಲಸ ಆಗುವುದಿಲ್ಲ.ಅಧಿಕಾರಿ, ಸಿಬಂದಿಗಳ ವರ್ಗಾವಣೆಗೂ ಜನಪ್ರತಿನಿಧಿಗಳಿಗೆ ಹಣಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.ಭ್ರಷ್ಟಾಚಾರ ಹಳ್ಳಿಯಿಂದ ದಿಲ್ಲಿಗೆ ವ್ಯಾಪಿಸಿದೆ.ಪ್ರತಿ ಇಲಾಖೆ, ಕಚೇರಿಗಳಲ್ಲಿ ಲಂಚ ತಾಂಡವವಾಡುತ್ತಿದೆ.ಅದಕ್ಕೆ ಮುಕ್ತಿ ಹಾಕಬೇಕು ಎಂಬ ಬೇಡಿಕೆ ಜನರಿಂದ ವ್ಯಕ್ತವಾಗಿದ್ದು, ಮತ್ತೊಮ್ಮೆ ಹೋರಾಟ ಮಾಡುವ ಉzಶದಿಂದ, ೧೯೮೫ರ ಜನವರಿ ೧೦ರಂದು ಸುಳ್ಯದಲ್ಲಿ ಭ್ರಷ್ಟ ಅಧಿಕಾರಿಯ ಪ್ರತಿಕೃತಿ ದಹಿಸಲಾಗಿತ್ತು.ಈಗ ಸುಳ್ಯ, ಪುತ್ತೂರು ಬೆಳ್ತಂಗಡಿಯಲ್ಲಿ ಜನವರಿ ೧೦ರಂದು ಒಂದೇ ದಿನ ಲಂಚ, ಭ್ರಷ್ಟಾಚಾರದ ಪ್ರತಿಕೃತಿ ದಹಿಸಲಾಗುತ್ತಿದೆ.ಇದಕ್ಕಾಗಿ ಮಂಗಳೂರು, ಬೆಂಗಳೂರಿನಲ್ಲಿ ಪತ್ರಿಕಾಗೋಷ್ಟಿ ಮೂಲಕ ಮಾಧ್ಯಮದವರು ಬೆಂಬಲ ಸೂಚಿಸಿದರು.ನಂತರ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ಮೂಲಕ ಭ್ರಷ್ಟಾಚರದ ವಿರುದ್ದ ಧ್ವನಿ ಎತ್ತುವ ಕೆಲಸ ಮಾಡಲಾಗಿದೆ.ಯಾವುದೇ ರಾಜಕೀಯ ಪಕ್ಷ, ಜನಪ್ರತಿನಿಧಿ, ಅಧಿಕಾರಿ ಪರ ಅಥವಾ ವಿರೋಧವಾಗಿ ಈ ಕಾರ್ಯಕ್ರಮ ಆಯೋಜಿಸಿಲ್ಲ. ಸಮಾಜದ ತಳಮಟ್ಟದ ಪ್ರಜೆಗಳ ಪರವಾಗಿ ನಮ್ಮ ಹೋರಾಟ ನಡೆಯುತ್ತಿದೆ. ಭ್ರಷ್ಟಾಚಾರಿಗಳ ವಿರುದ್ದದ ನಮ್ಮ ಹೋರಾಟವಾಗಿದೆ.ಕಾರ್ಯಕ್ರಮ ಮಾಡದಂತೆ, ಪ್ರತಿಕೃತಿ ದಹಿಸಿದರೆ ಕೇಸು ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದರು.ಆದರೆ ಇಷ್ಟಕ್ಕೆ ನಾವು ಕಾರ್ಯಕ್ರಮ ಸ್ಥಗಿತಗೊಳಿಸುವುದಿಲ್ಲ.ಇದು ನಮ್ಮದು ಸಾಂಕೇತಿಕ ಹೋರಾಟ.ಜ.೨೬ರಂದು ದೊಡ್ಡ ಮಟ್ಟದ ಹೋರಾಟ ನಡೆಯಲಿದೆ.ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಕಾರ್ಯಕ್ರಮ ನಡೆಯಲಿದೆ ಎಂದು ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದೇವೆ ಎಂದರು.
ಘೋಷಣೆ: `ಲಂಚ, ಭ್ರಷ್ಟಾಚಾರಿ ಅಧಿಕಾರಿಗಳಿಗೆ ಬಹಿಷ್ಕಾರ-ಪ್ರಾಮಾಣಿಕ ಅಧಿಕಾರಿಗಳಿಗೆ ಪುರಸ್ಕಾರ’, `ನಮ್ಮ ಊರು ಲಂಚ, ಭ್ರಷ್ಟಾಚಾರ ಮುಕ್ತವಾಗಲಿ’, `ಲಂಚ-ಭ್ರಷ್ಟಾಚಾರಮುಕ್ತ ಪುತ್ತೂರು ತಾಲೂಕು’ ಘೋಷಣೆಗಳನ್ನು ಕಾರ್ಯಕ್ರಮದಲ್ಲಿ ಕೂಗಲಾಯಿತು.
ಕಾರ್ಯಕ್ರಮದಲ್ಲಿ ಲಂಚ, ಭ್ರಷ್ಟಾಚಾರದ ಪ್ರತಿಕೃತಿಯನ್ನು ದಹಿಸಲಾಯಿತು.ಸುದ್ದಿ ಬಿಡುಗಡೆಯ ಸಿಇಓ ಸೃಜನ್ ಊರುಬೈಲು, ಬೆಳ್ತಂಗಡಿ ಕಚೇರಿ ಸಿಇಓ ಸಿಂಚನ ಊರುಬೈಲು, ಶ್ರೀಮತಿ ಶೋಭಾ ಶಿವಾನಂದ ಹಾಗೂ ಸುದ್ದಿ ಬಿಡುಗಡೆ ಪತ್ರಿಕೆ ಹಾಗೂ ಸುದ್ದಿ ಚಾನೆಲ್‌ನ ಸಿಬಂದಿಗಳು ಉಪಸ್ಥಿತರಿದ್ದರು.
- ದರೋಡೆಕೋರರು, ದೇಶ ದ್ರೋಹಿಗಳನ್ನು ಬಹಿಷ್ಕರಿಸುವಂತೆ ಭ್ರಷ್ಟಾಚಾರಿಗಳನ್ನು ಬಹಿಷ್ಕರಿಸಬೇಕು ಪ್ರಾಮಾಣಿಕರನ್ನು ಪುರಸ್ಕರಿಸಬೇಕು
- ಭ್ರಷ್ಟಾಚಾರಿಗಳಿಗೆ ಬಹಿಷ್ಕಾರ, ಪ್ರಾಮಾಣಿಕರಿಗೆ ಪುರಸ್ಕಾರ ಘೋಷಣೆ
ಯಾವುದೇ ಕೆಲಸಕ್ಕಾಗಿ ನಮ್ಮನ್ನು ನಿಲ್ಲಿಸಿ ಅಧಿಕಾರಿ ಹಣ ಕೇಳುವುದು ದರೋಡೆ ಮಾಡಿದಂತೆ.ಅಧಿಕಾರಿಗಳು ಕೆಲಸ ಮಾಡದೇ ತೊಂದರೆ ಕೊಟ್ಟರೆ ಅದು ದೇಶ ದ್ರೋಹ ಮಾಡಿದಂತೆ.ಆದ್ದರಿಂದ ದರೋಡೆಕೋರರು, ದೇಶ ದ್ರೋಹಿಗಳನ್ನು ಬಹಿಷ್ಕರಿಸುವಂತೆ ಲಂಚ, ಭ್ರಷ್ಟಾಚಾರಿಗಳನ್ನೂ ಬಹಿಷ್ಕರಿಸಬೇಕು.ಇದಕ್ಕಾಗಿ ಪ್ರತಿಯೊಬ್ಬರು ತಮ್ಮ ತಮ್ಮ ಊರಿನಲ್ಲಿ ಆಂದೋಲನ ಮಾಡಬೇಕು.ಜ.೨೬ರಂದು ಗ್ರಾಮ ಗ್ರಾಮದಲ್ಲಿ, ತಾಲೂಕಿನಲ್ಲಿ ಪ್ರತಿಕೃತಿ ದಹಿಸಿ, ಲಂಚ ಭ್ರಷ್ಟಾಚಾರ ಮುಕ್ತ ತಾಲೂಕನ್ನಾಗಿ ಘೋಷಣೆ ಮಾಡಲಾಗುವುದು.ಈ ಮೂಲಕ ಭ್ರಷ್ಟಾಚಾರಿಗಳನ್ನು ದೂರವಿಡಬೇಕು. ಉತ್ತಮ ಸೇವೆ ಮಾಡುವವರನ್ನು ಗೌರವಿಸಬೇಕು.ಮನೆ ಮನೆ, ವಾಹನಗಳಲ್ಲಿ ಫಲಕಗಳನ್ನು ಹಾಕಿ ಬಹಿಷ್ಕರಿಸಿದಾಗ ಅವರು ಸಮಾಜದಲ್ಲಿ ಗೌರವ ಕಳೆದುಕೊಳ್ಳಲಿದ್ದಾರೆ.ಎಲ್ಲರೂ ಲಂಚ ಭ್ರಷ್ಟಾಚಾರ, ವಿರೋಧಿಸಬೇಕು ಇದು ನಮ್ಮ ಕರೆಯಾಗಿದೆ ಎಂದು ಡಾ.ಶಿವಾನಂದ ಅವರು ಹೇಳಿದರು.