ಉಪ್ಪಿನಂಗಡಿ: ಇಲ್ಲಿನ ಪೇಟೆಯಲ್ಲಿ ಸಾರ್ವಜನಿಕರ ಮೇಲೆ ದಾಳಿ ನಡೆಸುವ ಬೀದಿನಾಯಿಗಳ ಕಾಟ ಮಿತಿ ಮೀರಿದ್ದು, ಬಾಲಕನೋರ್ವನ ಮೇಲೆ ನಾಯಿಗಳ ಗುಂಪೊಂದು ದಾಳಿ ನಡೆಸಿದ ಘಟನೆ ಗುರುವಾರ ರಾತ್ರಿ ಉಪ್ಪಿನಂಗಡಿ ಬಳಿಯ ಕೆಂಪಿಮಜಲ್ ಎಂಬಲ್ಲಿ ನಡೆದಿದೆ.
ಇಲ್ಲಿನ ಕೆಂಪಿಮಜಲ್ ಬಳಿಯ ಬ್ಯಾಂಕ್ ರಸ್ತೆಯ ಬಳಿ ರಾತ್ರಿ ಸುಮಾರು 7ಗಂಟೆಯ ಹೊತ್ತಿಗೆ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಬಾಲಕರ ಮೇಲೆ ಐದಾರು ನಾಯಿಗಳ ಗುಂಪೊಂದು ದಾಳಿ ನಡೆಸಿದೆ. ಈ ಸಂದರ್ಭ ಓರ್ವ ಬಾಲಕ ಓಡಿ ತಪ್ಪಿಸಿಕೊಂಡಿದ್ದು, ಇನ್ನೋರ್ವ ಬಾಲಕನಿಗೆ ಪರಚಿದ ಗಾಯಗಳಾಗಿವೆ. ತಕ್ಷಣವೇ ಅಲ್ಲಿದ್ದ ಸ್ಥಳೀಯರು ನಾಯಿಗಳ ಗುಂಪಿನಿಂದ ಬಾಲಕನನ್ನು ರಕ್ಷಿಸಿದ್ದಾರೆ. ಸಂಭವನೀಯ ಅಪಾಯವನ್ನು ತಪ್ಪಿಸಿದ್ದಾರೆ.
ಬೀದಿನಾಯಿಗಳ ಕಾಟ ಉಪ್ಪಿನಂಗಡಿಯಲ್ಲಿ ಮಿತಿ ಮೀರಿದ್ದು, ಗುಂಪಾಗಿ ಇರುವ ಇವುಗಳು ದ್ವಿಚಕ್ರ ಸವಾರರನ್ನು, ಪಾದಚಾರಿಗಳನ್ನು ಓಡಿಸಿಕೊಂಡು ಬಂದು ಆಕ್ರಮಣ ಪ್ರವೃತಿ ತೋರಿಸುತ್ತಿವೆ. ಕೆಲವು ದಿನಗಳ ಹಿಂದೆ ಇವುಗಳು ಅಟ್ಟಿಸಿಕೊಂಡು ಬಂದಿದ್ದರಿಂದ ದ್ವಿಚಕ್ರ ಸವಾರರೋರ್ವರು ಬಿದ್ದು, ಗಾಯಗೊಂಡ ಘಟನೆಯೂ ನಡೆದಿದೆ. ಆದ್ದರಿಂದ ಉಪ್ಪಿನಂಗಡಿ ಗ್ರಾ.ಪಂ. ಬೀದಿ ನಾಯಿಗಳ ಕಾಟ ನಿಯಂತ್ರಿಸುವಲ್ಲಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆನ್ನುವ ಆಗ್ರಹ ನಾಗರಿಕರಿಂದ ಕೇಳಿ ಬಂದಿದೆ.