- ಧರ್ಮಶ್ರದ್ದೆಯಿಂದ ಸಂಸ್ಕಾರದ ಅನಾವರಣಗೊಳ್ಳುತ್ತದೆ; ಒಡಿಯೂರು ಶ್ರೀ
ಪುತ್ತೂರು: ನಾವು ಪ್ರತೀಯೊಂದು ವಿಚಾರದಲ್ಲೂ ಧರ್ಮ ಶ್ರದ್ದೆಯುಳ್ಳವರಾಗಬೇಕು, ಧರ್ಮವು ನಮ್ಮನ್ನು ಒಳಿತಿನೆಡೆಗೆ ಕೊಂಡೊಯ್ಯುತ್ತದೆ, ನಾವು ಧರ್ಮ ಮರ್ಗದಲ್ಲಿ ಬದುಕಿದರೆ ಧರ್ಮ , ದೇವರು ನಮ್ಮನ್ನು ಎಂದಿಗೂ ಕೈ ಬಿಡುವುದಿಲ್ಲ , ಧರ್ಮಶ್ರದ್ದೆಯಿಂದಲೇ ಸಂಸ್ಕಾರದ ಅನಾವರಣಗೊಳ್ಳುವುದು ಎಂದು ಒಡಿಯೂ ಶ್ರೂ ಗುರುದೇವ ಸಂಸ್ಥಾನಮ್‌ನ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಹೇಳಿದರು.
ಅವರು ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪ್ರಯುಕ್ತ ದೇವಳದ ವಠಾರದಲ್ಲಿ ಜ.೨೦ ರಂದು ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ನಾವು ಧರ್ಮ ಸಿದ್ದಾಂತದಲ್ಲಿ ಬದುಕುವ ಕಲೆಯನ್ನು ಮೈಗೂಡಿಸಿಕೊಳ್ಳಬೇಕು ಆಗ ಸಂಸ್ಕೃತಿ ಕೂಡಾ ನಮ್ಮಲ್ಲಿ ಲೀನವಾಗಿಬಿಡುತ್ತದೆ. ಶಿವ ನಮ್ಮೊಳಗಿದ್ದರೆ ನಮ್ಮನ್ನು ಬೇರೆ ಬೇರೆ ಹೆಸರುಗಳಿಂದ ಜನ ಕರೆಯುತ್ತಾರೆ ಆದರೆ ಶಿವ ನಮ್ಮೊಳಗಿಂದ ಹೊರಗಡೆ ಹೋದಲ್ಲಿ ಅಂತವರನ್ನು ಎಲ್ಲರೂ ಒಂದೇ ಹೆಸರಿನಿಂದ ಕರೆಯುತ್ತಾರೆ. ಶಿವನು ನಮ್ಮ ಹೃದಯದಲ್ಲಿ ನೆಲೆಯೂರುವಂತಾಗಲು ನಾವು ಸದಾ ಧರ್ಮ ನಿಷ್ಠರಾಗಿ ಬಾಳುವ ವ್ಯಕ್ತಿಗಳಾಗಬೇಕು. ಧರ್ಮ ಯಾವತ್ತೂ ನಾಶವಾಗುವುದಿಲ್ಲ, ಭಾರತದ ಅಂತಸತ್ವ ಧರ್ಮವಾಗಿದೆ ಎಂದು ಹೇಳಿದ ಸ್ವಾಮೀಜಿಗಳು ಯಾವ ಮರಕ್ಕೆ ಕಾಂಡದ ಮೇಲ್ಬಾಗದಿಂದ ಬೇರು ಬರುತ್ತದೆಯೋ ಆಮರ ಭೂಮಿಯಲ್ಲಿ ನಾಶವಾಗುವುದಿಲ್ಲ. ಆಲಡ್ಕದಲ್ಲಿರುವ ಆಲದ ಮರ ಧರ್ಮ ಇರುವ ತನಕ ಇರುತ್ತದೆ ಅದು ನಾಶವಾಗುವುದೇ ಇಲ ಎಂದು ಹೇಳಿದರು.
ದೇವರು ಸಂಪತ್ತನ್ನು ಎಲ್ಲರಿಗೂ ನೀಡಿಲ್ಲ, ಕೆಲವರಿಗೆ ಮಾತ್ರ ನೀಡಿದ್ದಾನೆ. ದೇವರು ಕೊಟ್ಟ ಸಂಪತ್ತನ್ನು ಆತ ಅನುಭವಿಬೇಕು ಅಥವಾ ದಾನ ಮಾಡಬೇಕು, ಎರಡೂ ಮಾಡದಿದ್ದರೆ ಆ ಸಂಪತ್ತು ನಾಶವಾಗುವುದು ನಿಶ್ಚಿತವಾಗಿದೆ. ನಮ್ಮ ವ್ಯಕ್ತಿತ್ವವನ್ನು ನಾವೇ ರೂಪಿಸಿಕೊಳ್ಳಬೇಕು, ವ್ಯಕ್ತಿತ್ವ ಇಲ್ಲದೇ ಇದ್ದರೆ ಆತನ ಬದುಕಿಗೆ ಬೆಲೆ ಇಲ್ಲದಂತಾಗುತ್ತದೆ ಎಂದು ಹೇಳಿದರು. ಸಮಾಜದಲ್ಲಿ ಮಹಿಳೆ ಜಾಗೃತೆಯಾದರೆ ಸಮಾಜ ಬದಲಾಗುತ್ತದೆ, ಮಕ್ಕಳ ಕೈಗೆ ಮೊಬೈಲ್ ಕೊಡದೆ ಸಂಸ್ಕಾರವನ್ನು ಕಲಿಸುವಂತೆ ತಾಯಂದಿರಿಗೆ ಕಿವಿ ಮಾತು ಹೇಳಿದರು.
ಜಗತ್ತಿಗೆ ಶಾಂತಿ ಸೌಹಾರ್ಧತೆಯನ್ನು ಪರಿಚಯಿಸಿದ್ದೇ ಹಿಂದೂ ಧರ್ಮ; ಶಾಸಕ ಮಠಂದೂರು
ಜಗತ್ತಿಗೆ ಶಾಂತಿ ಸೌಹಾರ್ಧತೆಯನ್ನು ಪರಿಚಯಿಸಿದ್ದೇ ಹಿಂದೂ ಧರ್ಮವಾಗಿದೆ. ಜಗತ್ತಿನ ಯಾವುದೇ ದೇಶದಲ್ಲಿ ಇಲ್ಲದಷ್ಟು ಧರ್ಮ, ಜಾತಿಗಳು ನಮ್ಮಲ್ಲಿದ್ದರೂ ನಾವು ಸೌಹಾರ್ಧತೆಯಿಂದ ಇರುವುದೇ ಇದಕ್ಕೆ ಸಾಕ್ಷಿಯಾಗಿದೆ. ಧರ್ಮ ಶ್ರದ್ದೆಯ ಉದ್ದೀಪನವಾಗಬೇಕು, ಧರ್ಮ ಮತ್ತು ಸಂಸ್ಕಾರಯುತ ಬದುಕು ನಮ್ಮದಾದರೆ ನಾವು ಮಾಡುವ ಪ್ರತೀಯೊಂದು ಕಾರ್ಯವೂ ದೇವರಿಗೆ ಇಷ್ಟವಾಗುತ್ತದೆ. ಊರಿನಲ್ಲಿ ನಡೆಯುವ ದೇವಳದ ಉತ್ಸವಗಳು ಜಾತಿ ಮತಗಳನ್ನು ಮೀರಿ ಜನರನ್ನು ಒಗ್ಗೂಡಿಸುತ್ತದೆ ಎಂದು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ತುಳುನಾಡು ದೈವಾರಾಧನೆಯ ಬೀಡು, ಊರಿನ ಜನರ ಧರ್ಮ ಶ್ರದ್ದೆ ಎಷ್ಟಿದೆ ಎಂಧು ತಿಳಿಯಬೇಕಾದರೆ ಆ ಊರಿನಲ್ಲಿ ದೇವಳದ ಬ್ರಹ್ಮಕಲಶ ನಡೆಯಬೇಕು ಆಗ ಪ್ರತೀಯೊಬ್ಬರ ಧರ್ಮ ಶ್ರದ್ದೆಯ ಅನಾವರಣವಾಗುತ್ತದೆ. ಕೃಷಿ ಮತ್ತು ಋಷಿ ಈ ದೇಶದ ಪರಂಪರೆ, ಸಹೋದರತೆಯ ಮನೋಭಾವ ನಮ್ಮದಾಗಲಿ ಎಂದು ಹೇಳಿದರು.
ಹಿಂದೂಗಳ ಭಾವನೆಯನ್ನು ಸರಕಾರ ರಕ್ಷಣೆ ಮಾಡಲು ಕಠಿಬದ್ದವಾಗಿದೆ. ಗೋಹತ್ಯೆ ನಿಷೇಧ ಕಾನೂನು ಸೇರಿದಂತೆ ಹಿಂದೂಗಳ ಭಾಔನೆಗಳಿಗೆ ಮತ್ತು ಧಾರ್ಮಿಕ ಶ್ರದ್ದಾಕೇಂದ್ರಗಳಿಗೆ ಚ್ಯುತಿಬಾರದ ರೀತಿಯಲ್ಲಿ ಎಲ್ಲಾ ರೀತಿಯ ಕಾನೂನುಗಳನ್ನು ರೂಪಿಸಿ ಅವುಗಳ ರಕ್ಷಣೆಗೆ ಸರಕಾರ ಬದ್ದವಾಗಿದೆ ಎಂದು ಹೇಳಿದರು.
ಸನಾತನ ಹಿಂದೂಧರ್ಮಕ್ಕೆ ಎಂದಿಗೂ ಅಪಾಯವಿಲ್ಲ; ರಮನಾಥ ರೈ
ಹಿಂದೂ ಧರ್ಮ ಅನಾತನ ಧರ್ಮ ಇದಕ್ಕೆ ಎಂದಿಗೂ ಅಪಾಯ ಸಂಭವಿಸಲು ಸಾಧ್ಯವೇ ಇಲ್ಲ. ಭಾರತದಲ್ಲಿ ೧೧೦ ಕೋಟಿ ಸನಾತನ ಧರ್ಮದ ಅನುಯಾಯಿಗಳಿದ್ದಾರೆ. ಹಿಂದೂ ಧರ್ಮ ಅಪಾಯದಲ್ಲಿದೆ ಎಂಬುದು ರಾಜಕೀಯ ಪ್ರೇರಿತ ಸುಳ್ಳು ಆರೋಪವಾಗಿದೆ ಎಂದು ಮಾಜಿ ಸಚಿವ ಬಿ. ರಮನಾಥ ರೈ ಹೇಳಿದರು. ಯುವ ಪೀಳಿಗೆ ಧಾರ್ಮಿಕ ವಿಚಾರದಿಂದ ದೂರವಾಗುತ್ತಿದ್ದಾರೆ ಎಂದು ಕೆಲವರು ಹೇಳುತ್ತಾರೆ ಅದು ಸುಳ್ಳು, ಅಂದು ರಾಜಾಶ್ರಯದಲ್ಲಿ ನಡೆಯುತ್ತಿದ್ದ ದೇವತಾ ಕಾರ್ಯಗಳು ಇಂದು ಜನ ಸಾಮಾನ್ಯನ ಕೈಗೆ ಬಂದು ಯುವಕೇ ಮುಂದೆ ನಿಂತು ದೇವಳಗಳ ಬ್ರಹ್ಮಕಲಸ ಸೇರಿದಂತೆ ದೇವರ ಕಾರ್ಯವನ್ನು ಮಾಡುತ್ತಿದ್ದಾರೆ. ಧರ್ಮವನ್ನು ಉಳಿಸಲು ವ್ಯಕ್ತಿಗಳಿಂದ, ಸಂಘಟನೆಗಳಿಂದ ಸಾಧ್ಯವಿಲ್ಲ, ಧರ್ಮವನ್ನು ಧರ್ಮವೇ ಉಳಿಸುತ್ತದೆ.ಮನುಷ್ಯರನ್ನು ದ್ವೇಷಿಸುವುದು ಧರ್ಮವಲ್ಲ,ಹಿಂದೂ ಧರ್ಮದಲ್ಲಿ ವಸುದೈಕುಟುಂಬಕಂ , ಎಲ್ಲರೊಂದೊಗೂ, ಎಲ್ಲಾ ಧರ್ಮಿಯರೊಂದಿಗೂ ಪ್ರೀತಿಯಿಂದ, ಶಾಂತಿಯಿಂದ ಬಾಳುವವನೇ ನಿಜವಾದ ಹಿಂದುವಾಗಿದ್ದಾನೆ. ಹಿಂದೂ ಧರ್ಮದಲ್ಲಿ ಹುಟ್ಟಿದವ ಎಂದಿಗೂ ಯಾರಿಗೂ ಕೇಡು ಬಯಸುವುದಿಲ್ಲ. ಹಿಂದೂ ಧರ್ಮವನ್ನು ನಾಶ ಮಾಡಲು ಸಾಧ್ಯವಾಗುವುದೇ ಆದರೆ ಭಾರತದಲ್ಲಿ ಆಳಿದ ವಿವಿಧ ಅರಸರು ಅದನ್ನು ಮಾಡುತ್ತಿದ್ದರು, ಅವರಿಂದ ಸಾಧ್ಯವಾಗಿಲ್ಲ, ಮುಂದೆಯೂ ಯಾರಿಂದಲೂ ಸಾಧ್ಯವೇ ಆಗುವುದಿಲ್ಲ. ದೇವಸ್ಥಾನಗಳು ಸಮಾಜಕ್ಕೆ ಸದ್ಬೋಧನೆ ನೀಡುವ ಕೇಂದ್ರಗಳಾಗಬೇಕು, ಎಂದಿಗೂ ದ್ವೇಷ ಹುಟ್ಟಿಸುವ ಕೇಂದ್ರಗಳಾಗಿ ನಾವು ಮಾರ್ಪಾಡು ಮಾಡಬಾರದು ಎಂದು ಹೇಳಿದ ಅವರು ಧಾರ್ಮಿಕ ಪರಿಷತ್‌ನಿಂದ ದೈವಸ್ಥಾನಗಳನ್ನು ಕೈಬಿಡಬೇಕು ಮುಂದೆ ಅವಕಾಶ ಸಿಕ್ಕಿದರೆ ನಾನೇ ಮುಂದೆ ಆ ಕೆಲಸವನ್ನು ಮಾಡುತ್ತೇನೆ. ದೇವಸ್ಥಾನದ ಸಮಿತಿ ರಚನೆ ಮಾಡುವ ವೇಳೆ ರಾಜಕೀಯ ಲೇಪ ಇರುವುದರಿಂದ ಇದು ಕುಟುಂಬದೊಳಗೆ ದ್ವೇಷಕ್ಕೆ ಕಾರಣವಾಗುತ್ತಿದೆ ಆ ರೀತಿ ಎಲ್ಲೂ ಆಗಬಾರದು ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕಿ ಊರು, ದೇಶ ಬೆಳಗೋಣ ಎಂದು ಹೇಳಿದರು.
ದೇವಸ್ಥಾನ ಆಡಳಿತ ಸುಲಭದ ಕೆಲಸವಲ್ಲ: ಸಂತೋಷ್‌ಕುಮಾರ್ ರೈ
ಯಾವುದೇ ದೇವಸ್ಥಾನದ ಆಡಳಿತ ನಡೆಸುವುದು ಸುಲಭದ ಕೆಲಸವಲ್ಲ. ದೇವಸ್ಥಾನಕ್ಕಾಗಿ ಕೆಲಸ ಮಾಡಿದವರನ್ನು ಸಮಾಜ ಗೌರವದಿಂದ ಕಾಣಬೇಕು. ಎಷ್ಟೋ ತಿಂಗಳಿಂದ ಕಷ್ಟಪಟ್ಟು ದೇವಳದ ಬ್ರಹ್ಮಕಲಶಾಧಿ ಕಾರ್ಯಕ್ರಮವನ್ನು ನಡೆಸುತ್ತಾರೆ, ದೇವಳದ ವಠಾರದಲ್ಲಿ ನಡೆಯುವ ಧಾರ್ಮಿಕ ಸಭೆಗೆ ಜನರು ಬರುತ್ತಿಲ್ಲ, ಹೀಗಾದರೆ ನಮ್ಮಲ್ಲಿ ಧರ್ಮ ಜಾಗೃತಿ ಮೂಡುವುದಾದರೂ ಹೇಗೆ ಎಂದು ನಳೀಲು ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅಧ್ಯಕ್ಷ ಸಂತೋಷ್‌ಕುಮಾರ್ ರೈ ಹೇಳಿದರು.ನಾವು ಯಾವುದೇ ಕೆಲಸ ಮಾಡುವುದಿದ್ದರೂ ಅದು ದೇವರು ಮೆಚ್ಚುವ ರೀತಿಯಲ್ಲಿರಬೇಕು ಆಗಿದ್ದಲ್ಲಿ ಮಾತ್ರ ನಾವು ಮಾಡಿದ ಕೆಲಸಕ್ಕೆ ಪುಣ್ಯಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ಆಲಡ್ಕ ದೇವಳಕ್ಕೆ ೯೦೦ ವರ್ಷಗಳ ಇತಿಹಾಸ
ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರೂ ಸಭಾ ಕಾರ್ಯಕ್ರಮದ ಅಧ್ಯಕ್ಷರೂ ಆದ ಕಾವು ಹೇಮನಾಥ ಶೆಟ್ಟಿ ಆಲಡ್ಕ ದೇವಳಕ್ಕೆ ೯೦೦ ವರ್ಷಗಳ ಇತಿಹಾಸವಿದೆ. ಜಿಲ್ಲೆಯಲ್ಲೇ ಅತೀ ಎತ್ತರದ ಶಿವನ ಮೂರ್ತಿ ಇಲ್ಲಿರುವುದೇ ವಿಶೇಷವಾಗಿದೆ. ೨೧ ಗ್ರಾಮಗಳ ಭಕ್ತರ ನಂಬಿಕೆ ಕೇಂದ್ರವಾಗಿರುವ ಈ ದೇವಳವನ್ನು ಅಭಿವೃದ್ದಿ ಪಡಿಸಲು ಮತ್ತು ದೇವರಿಗೆ ಬ್ರಹ್ಮಕಲಶ ಮಾಡಬೇಕು ಎಂಬ ದೃಡ ಸಂಕಲ್ಪದೊಂದಿಗೆ ಎಲ್ಲರೂ ಜೊತೆಯಾಗಿ ಸೇರಿ ಕೆಲಸ ಮಾಡಿದ್ದರಿಂದ ಇಂದು ಭವ್ಯ ದೇಗುಲದ ನಿರ್ಮಾಣವಾಗಿದೆ. ಪುತ್ತೂರು ಕ್ಷೇತ್ರದ ಶಾಸಕರು, ದಾನಿಗಳು , ಭಕ್ತರು, ಊರಿನವರ ಪೂರ್ಣ ಸಹಕಾರದಿಂದ ಇದೆಲ್ಲವೂ ಸಾಧ್ಯವಾಗಿದೆ. ಕೆದಂಬಾಡಿ ಗ್ರಾಮದಲ್ಲಿ ದೇವಸ್ಥಾನವಿಲ್ಲ ಎಂಬ ಅಪವಾದP ಈಗ ದೂರವಾಗಿದೆ. ದೇವಸ್ಥಾನ ಮುಂಡೂರು ಗ್ರಾಮ ವ್ಯಾಪ್ತಿಯಲ್ಲಿದ್ದರೂ ಕೆದಂಬಾಡಿ ಮತ್ತು ಮುಂಡೂರು ಗ್ರಾಮದವರ ಮನೆ ದೇವರಾಗಿ ಶ್ರೀ ಸದಾಶಿವ ದೇವರು ಆರಾಧಸಿಸುತ್ತಿದ್ದಾರೆ ಎಂದು ಹೇಳಿದರು. ದೇವಳದ ಅಭಿವೃದ್ದಿ ಕಾರ್ಯದಲ್ಲಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಒಡಿಯೂರು ಸ್ವಾಮೀಜಿಗೆ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬೋಳೋಡಿಗುತ್ತು ಅರುಣಕುಮಾರ ಆಳ್ವ ಮತ್ತು ದಂಪತಿಗಳು ಹಾರಹಾಕಿ ಫಲಪುಷ್ಪ ನೀಡಿ ಗೌರವಿಸಿದರು. ದೇವಳಕ್ಕೆ ಅನುದಾನ ಒದಗಿಡಿಸಿಕೊಡುವಲ್ಲಿ ಸಹಕರಿಸಿದ ಶಾಸಕ ಸಂಜೀವ ಮಠಂದೂರುರವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಅಭಿವೃದ್ದಿ ಕಾರ್ಯದಲ್ಲಿ ಕೈಜೋಡಿಸಿದ ದಾನಿಗಳನ್ನು ವೇದಿಕೆಯಲ್ಲಿ ಶಾಲು ಹಾಕಿ ಫಲಪುಷ್ಪ ನೀಡಿ ಗೌಋವಿಸಲಾಯಿತು. ವೇದಿಕೆಯಲ್ಲಿದ್ದ ಅತಿಥಿಗಳು ಗೌರವಿಸಿದರು.
ವೇದಿಕೆಯಲ್ಲಿ ಪುತ್ತೂರು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಬಾಷ್ ರೈ, ಪ್ರಗತಿಪರ ಕೃಷಿಕ ಅಜಲಾಡಿ ಬೀಡು ಸದಾಶಿವ ರೈ, ಮಂಗಳೂರಿನ ಉದ್ಯಮಿ ಬೆದ್ರುಮಾರು ಬಾಲಚಂದ್ರ ರೈ, ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಗೌರವಾದ್ಯಕ್ಷರಾದ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕುದ್ಕಾಡಿ ಶೀನಪ್ಪ ರೈ ಕೊಡೆಂಕಿರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬೋಳೋಡಿಗುತ್ತು ಅರುಣಕುಮಾರ ಆಳ್ವ, ಕಾರ್ಯಾಧ್ಯಕ್ಷ ಸುರೇಶ್‌ಕಣ್ಣಾರಾಯ, ಹಸಿರುವಾಣಿ ಮತ್ತು ಉಗ್ರಾಣ ಸಮಿತಿ ಸಂಚಾಲಕರಾದ ಭಾಸ್ಕರ ಬಲ್ಲಾಳ್ ಬೀಡು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಭಾಸ್ಕರ ರೈ ಕೆದಂಬಾಡಿಗುತ್ತು, ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಶಿವನಾಥ ರೈ ಮೇಗಿನ ಗುತ್ತು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಶ್ರೀಕೃಷ್ಣ ಕಲಾವಿದೆರ್ ತಿಂಗಳಾಡಿ ಅಭಿನಯದ ದಾರೆದ ಸೀರೆ ತುಳುನಾಟಕ ಪ್ರದರ್ಶನ ನಡೆಯಿತು.