ಶ್ರದ್ಧಾ ಕೇಂದ್ರಗಳು ಅಭಿವೃದ್ಧಿಗೊಂಡಾಗ ಊರು ಬೆಳಗುತ್ತದೆ- ಒಡಿಯೂರು ಶ್ರೀ
ಯೋಜನೆ ಹಾಕಿ ಕ್ಷೇತ್ರ ನಿರ್ಮಾಣ ಮಾಡಬೇಕು- ಮಾಣಿಲ ಶ್ರೀ
ಕಾಣಿಯೂರು: ಶ್ರದ್ಧಾ ಕೇಂದ್ರಗಳು ಅಭಿವೃದ್ಧಿಗೊಂಡಾಗ ಊರು ಬೆಳಗುತ್ತದೆ. ಬಾಲಾಲಯದಲ್ಲಿ ದೇವರನ್ನು ಕೂರಿಸಿದರೆ ನಮ್ಮ ಜವಾಬ್ದಾರಿ ಸಾಕಾಗುವುದಿಲ್ಲ, ಬಾಲಾಲಯದಲ್ಲಿದ್ದ ದೇವರನ್ನು ದೇವಾಲಯದಲ್ಲಿ ಪ್ರತಿಷ್ಠೆ ಮಾಡುವ ಜವಾಬ್ದಾರಿ ಕೂಡ ಅಷ್ಟೇ ಇದೆ. ದೇವಸ್ಥಾನದ ಕೆಲಸ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ಸುಖ ಸಂತೋಷದ ಜೀವನ ನಮ್ಮದಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಫೆ .3 ರಂದು ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ಕೇಪುಳೇಶ್ವರ ದೇವಸ್ಥಾನದಲ್ಲಿ ನಡೆದ ಅನುಜ್ಞಾ ಕಲಶ ಮತ್ತು ಬಾಲಾಲಯ ಪ್ರತಿಷ್ಠೆ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಅನಗತ್ಯ ಹಣ ಖರ್ಚು ಮಾಡಿ ದೇವಸ್ಥಾನ ನಿರ್ಮಾಣ ಮಾಡುವ ಮೊದಲು ಸೀಮಿತ ಆರ್ಥಿಕ ಚೌಕಟ್ಟಿನೊಳಗೆ ವ್ಯವಸ್ಥಿತವಾಗಿ ಯೋಚಿಸಿಕೊಂಡು ಯೋಜನೆ ಹಾಕಿ ಕ್ಷೇತ್ರ ನಿರ್ಮಾಣ ಮಾಡಬೇಕು. ದೇವಸ್ಥಾನ ನಿರ್ಮಾಣದ ಬಳಿಕ ಕ್ಷೇತ್ರದಲ್ಲಿ ಸ್ವಚ್ಛತೆ, ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದೂ ಅಷ್ಟೇ ಮುಖ್ಯ. ಕ್ಷೇತ್ರದಲ್ಲಿ ಭಜನಾ ಸತ್ಸಂಗ, ಶಿವ ಪಂಚಾಕ್ಷರಿ ಜಪ ಮುಂತಾದ ದೇವರ ಸ್ಮರಣೆ ಕ್ಷೇತ್ರದಲ್ಲಿ ನಿತ್ಯ ಜರಗಬೇಕು ಎಂದರು. ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿ, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಉಪಸ್ಥಿತರಿದ್ದರು.
ರಾಶಿ ಬರೆಪ್ಪಾಡಿ ಪ್ರಾರ್ಥಿಸಿದರು. ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಮೋಹನ ಗೌಡ ಇಡ್ಯಡ್ಕ ಸ್ವಾಗತಿಸಿ, ಸುನಿಲ್ ಕೂಂಕ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಜನೇಶ್ ಭಟ್ ಬರೆಪ್ಪಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.
ಕ್ಷೇತ್ರದಲ್ಲಿ ಬೆಳಿಗ್ಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು, ಬಾಲಾಲಯ ಪ್ರತಿಷ್ಠೆ, ಕಲಶಾಭಿಷೇಕ ನಡೆಯಿತು.