ಅಮಿತ್ ಶಾ ಭೇಟಿ ಹಿನ್ನೆಲೆ: ಹನುಮಗಿರಿಯಲ್ಲಿ ಡಿಸಿ, ಎಸ್ಪಿ ಸಹಿತ ಅಧಿಕಾರಿಗಳಿಂದ ಪರಿಶೀಲನೆ

0

ಹನುಮಗಿರಿ: ಫೆ.11ರಂದು ಮಧ್ಯಾಹ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶ್ರೀಕ್ಷೇತ್ರ ಹನುಮಗಿರಿಗೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಮಾಟೆ ವಿಕ್ರಮ್, ಪುತ್ತೂರು ಉಪವಿಭಾಗದ ಡಿವೈಎಸ್‌ಪಿ ಡಾ.ವೀರಯ್ಯ ಹಿರೇಮಠ್ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಅಮಿತ್ ಶಾ ಅವರ ಹೆಲಿಕಾಪ್ಟರ್ ಲ್ಯಾಂಡ್ ಆಗಲು ಹೆಲಿಪ್ಯಾಡ್ ನಿರ್ಮಾಣಗೊಳ್ಳಲಿರುವ ಮೈದಾನ, ಭೇಟಿ ನೀಡಿ ದರ್ಶನ ಪಡೆಯಲಿರುವ ಪಂಚಮುಖಿ ಆಂಜನೇಯ ಸನ್ನಿಧಿ, ಅಮರಗಿರಿಯ ಭಾರತಮಾತಾ ಮಂದಿರಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭದ್ರತೆ ಹಾಗೂ ಸುಗಮ ವ್ಯವಸ್ಥೆಯ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು. ಯಾವುದೇ ರೀತಿಯಲ್ಲಿ ಲೋಪಗಳಾಗದಂತೆ, ಗೊಂದಲರಹಿತವಾಗಿ ವ್ಯವಸ್ಥೆಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಶ್ರೀಕ್ಷೇತ್ರ ಹನುಮಗಿರಿಯ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಸುದ್ದಿಯ ಜೊತೆಗೆ ಮಾತನಾಡಿದ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಅವರು, ಫೆ.11ರಂದು ಕೇಂದ್ರದ ಗೃಹಸಚಿವರಾದ ಅಮಿತ್ ಶಾ ಅವರು ಮಧ್ಯಾಹ್ನ ಗಂಟೆ 1.10ಕ್ಕೆ ಕೇರಳದ ಕಣ್ಣೂರಿನಿಂದ ಹೊರಟು ಹನುಮಗಿರಿಗೆ ಬಂದು ಪಂಚಮುಖಿ ಆಂಜನೇಯ ದೇವರ ದರ್ಶನ ಪಡೆದು ಬಳಿಕ ನೂತನವಾಗಿ ನಿರ್ಮಾಣಗೊಂಡಿರುವ ಅಮರಗಿರಿಯ ಭಾರತಮಾತೆಯ ಮಂದಿರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಬಳಿಕ ಕ್ಯಾಂಪ್ಕೋ ಸಂಸ್ಥೆಯ ಸುವರ್ಣಮಹೋತ್ಸವ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ತೆಂಕಿಲದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಂಗಳೂರಿಗೆ ತೆರಳಲಿದ್ದಾರೆ. ಕಣ್ಣೂರಿನಿಂದ ಈಶ್ವರಮಂಗಲಕ್ಕೆ ಹೆಲಿಕಾಪ್ಟರ್‌ನಲ್ಲಿ ಬರುವ ಹಿನ್ನೆಲೆಯಲ್ಲಿ ಈಶ್ವರಮಂಗಲದಲ್ಲಿ ಹೆಲಿಪ್ಯಾಡ್ ನಿರ್ಮಾಣ, ಹೆಲಿಪ್ಯಾಡ್‌ನಿಂದ ಹನುಮಗಿರಿ ದೇವರ ದರ್ಶನಕ್ಕೆ ಬರುವ ಹಾದಿ, ಭಾರತಮಾತೆಯ ಮಂದಿರಕ್ಕೆ ಬರುವ ಹಾದಿಗಳ ಭದ್ರತೆ, ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಜೊತೆಗೆ ಪುತ್ತೂರಿನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಸ್ಥಳಗಳಿಗೆ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಬೇಕಾದ ವ್ಯವಸ್ಥೆಗಳ ಬಗ್ಗೆ ಸಂಸ್ಥೆಗಳ ಮುಖ್ಯಸ್ಥರಿಗೆ ಮಾರ್ಗದರ್ಶನ ನೀಡಲಾಗಿದೆ.

ಪುತ್ತೂರಿನಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅಮಿತ್ ಶಾ ಅವರು ಮಂಗಳೂರಿಗೆ ತೆರಳಲಿದ್ದು, ಅಲ್ಲಿ ಕೂಡ ಬೇಕಾದ ವ್ಯವಸ್ಥೆಯನ್ನು ಪೊಲೀಸ್ ಆಯುಕ್ತರು ಮಾಡಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಸಹಕಾರ ಸಚಿವರು, ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು ಸಹಿತ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು. ಸಹಕಾರ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ 66 ಸಾವಿರ ಫಲಾನುಭವಿಗಳಿಗೆ 1,248 ಕೋಟಿ ರೂ.ಗಳನ್ನು ಸಹಾಯಧನವಾಗಿ ನೀಡಿದ್ದು, ಆ ಫಲಾನುಭವಿಗಳು ಕೂಡ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುತ್ತಿದ್ದಾರೆ. ಜೊತೆಗೆ ರಾಷ್ಟ್ರದ ಪ್ರಧಾನಿಗಳ ಹೆಸರಿನಲ್ಲಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ 1,35,151 ಫಲಾನುಭವಿಗಳಿಗೆ ಪ್ರತೀ ತಿಂಗಳು ಪ್ರತೀ ಕಂತಿನಲ್ಲಿ 28ರಿಂದ 35 ಕೋಟಿ ಹಣ ನೀಡಲಾಗುತ್ತಿದ್ದು, ಆ ಫಲಾನುಭವಿಗಳು ಕೂಡ ಆಗಮಿಸುತ್ತಿದ್ದಾರೆ. ಪುತ್ತೂರು ತೆಂಕಿಲ ವಿವೇಕಾನಂದ ಶಾಲೆಯ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಸಹಕಾರ ಇಲಾಖೆ ಮತ್ತು ಕೃಷಿ ಇಲಾಖೆಯ ಫಲಾನುಭವಿಗಳು ಪಾಲ್ಗೊಳ್ಳಲಿದ್ದಾರೆ. ಇದು ಕೃಷಿ, ತೋಟಗಾರಿಕೆ ಮತ್ತು ಸಹಕಾರ ಇಲಾಖೆಯ ಫಲಾನುಭವಿಗಳ ಸಮಾವೇಶ ಎಂದರೂ ತಪ್ಪಾಗಲಾರದು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಯಾವುದೇ ರೀತಿಯಲ್ಲಿ ಚ್ಯುತಿ ಬಾರದಂತೆ, ದೇಶದ ಗೃಹ ಸಚಿವರ ರಕ್ಷಣೆಗೆ ಬೇಕಾದಂತೆ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದೇವೆ. ಸಚಿವರು ಸಾಗುವ ಹಾದಿಯಲ್ಲಿ ಇಕ್ಕೆಲಗಳಲ್ಲಿ ಜಂಗಲ್ ಕ್ಲೀನಿಂಗ್, ರಸ್ತೆ, ಹೆಲಿಪ್ಯಾಡ್‌ಗೆ ಸಂಬಂಧಪಟ್ಟಂತೆ ಪರಿಶೀಲನೆ ನಡೆಸಲಾಗಿದೆ. ಈ ಕಾರ್ಯಕ್ರಮ ಸರಕಾರಿ ಕಾರ್ಯಕ್ರಮವಾಗಿರುವರಿಂದ ಯಶಸ್ವಿಯಾಗಿ ನಡೆಸಲು ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ. ಜಿಲ್ಲಾಡಳಿತ ಮತ್ತು ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ಕೂಡ ಕಾರ್ಯೋನ್ಮುಖರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಧರ್ಮದರ್ಶಿ ಶಿವರಾಮ ಪಿ., ನಾಗರಾಜ್ ನಡುವಡ್ಕ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜರಾಮ್, ನೆಟ್ಟಣಿಗೆ ಮುಡ್ನೂರು ಪಿಡಿಒ ಸಂದೇಶ ಕೆ.ಎನ್., ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ, ಈಶ್ವರಮಂಗಲ ಹೊರಠಾಣೆ, ಕಂದಾಯ ಇಲಾಖೆ, ಮೆಸ್ಕಾಂ, ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here