ವಿಟ್ಲ: ಮನೆಮನೆಗೆ ತೆರಳಿ ಮತದಾನ ಸಮೀಕ್ಷೆ ನಡೆಸುತ್ತಿದ್ದ ತಂಡವೊಂದನ್ನು ಸ್ಥಳೀಯರು ವಿಟ್ಲ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಸಾಲೆತ್ತೂರಿನಲ್ಲಿ ನಡೆದಿದೆ.
ಸಾಲೆತ್ತೂರು ಭಾಗಕ್ಕೆ ಸುಮಾರು 11 ಮಂದಿಯ ತಂಡ ಆಗಮಿಸಿದ್ದು ಅದರಲ್ಲಿ 6 ಮಂದಿ ಯುವತಿಯರ ತಂಡ ಮನೆಮನೆಗೆ ತೆರಳಿ ನಿಮ್ಮ ಕ್ಷೇತ್ರ ಯಾವುದು? ಯಾವ ಪಕ್ಷಕ್ಕೆ ಮತದಾನ ಮಾಡುತ್ತೀರಿ? ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ಬಗ್ಗೆ ಸಂಶಯಗೊಂಡ ಸ್ಥಳೀಯರು ಅವರನ್ನು ವಿಚಾರಿಸಿದಾಗ ನಾವು ಧ್ರುವ ಕಂಪೆನಿ ವತಿಯಿಂದ ಬಂದಿದ್ದು, ಮತದಾನ ಸಮೀಕ್ಷೆ ಮಾಡುತ್ತಿದ್ದೇವೆ ಎಂದು ಹೇಳಿದ್ದರು. ಆದರೆ ಅವರು ಸಮರ್ಪಕ ದಾಖಲೆ ನೀಡುವಲ್ಲಿ ವಿಫಲರಾಗಿದ್ದರು. ಬಳಿಕ ಅವರನ್ನು ವಿಟ್ಲ ಪೊಲೀಸರ ವಶಕ್ಕೆ ನೀಡಿದ್ದು, ಪೊಲೀಸರು ವಿಚಾರಣೆ ನಡೆಸಿ, ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ ಎಂದು ಮಾಹಿತಿ ಲಭಿಸಿದೆ. ತಂಡದಲ್ಲಿದ್ದವರು ಬೆಳಗಾವಿ ಮೂಲದವರೆಂದು ಮಾಹಿತಿ ಲಭಿಸಿದೆ.