ವಿಟ್ಲ: ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅನಂತಾಡಿ ಹಾಗೂ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ನಲ್ಲಿ ತೆರವಾದ ತಲಾ ಒಂದು ಸದಸ್ಯ ಸ್ಥಾನಗಳಿಗೆ ಫೆ.25ರಂದು ಮರುಮತದಾನ ನಡೆಯಲಿದೆ.
ಅನಂತಾಡಿ ಗ್ರಾಮ ಪಂಚಾಯತ್ ಸದಸ್ಯೆ ನಮಿತಾರವರು ಸರಕಾರಿ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ತೆರಳಿದ ಕಾರಣಕ್ಕಾಗಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನೆಟ್ಲಮುಡ್ನೂರು ಗ್ರಾಮಪಂಚಾಯತ್ನಲ್ಲಿ ಸದಸ್ಯರಾಗಿದ್ದ ರೇಖಾರವರು ಅಕಾಲಿಕವಾಗಿ ಮರಣ ಹೊಂದಿದ ಕಾರಣಕ್ಕಾಗಿ ಇಲ್ಲಿ ಉಪಚುನಾವಣೆ ನಡೆಯಲಿದೆ. ಈ ಎರಡು ಗ್ರಾಮ ಪಂಚಾಯತ್ ಗಳ ತೆರವಾದ ಸ್ಥಾನಗಳನ್ನು ಹಿಂದುಳಿದ ವರ್ಗ ಎ.ಮಹಿಳೆಗೆ ಮೀಸಲಾತಿ ಮೀಸಲಿರಿಸಲಾಗಿದೆ.
ಜಿಲ್ಲಾಧಿಕಾರಿಗಳು ಫೆ. 8ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. ನಾಮಪತ್ರ ಸಲ್ಲಿಸಲು ಕೊನೆಯ ದಿನ ಫೆ.14 ಆಗಿರುತ್ತದೆ. ನಾಮಪತ್ರಗಳನ್ನು ಪರಿಶೀಲಿಸುವ ದಿನ ಫೆ.15 ಆಗಿರುತ್ತದೆ. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳುವ ಕೊನೆ ದಿನ ಫೆ.17ಆಗಿರುತ್ತದೆ. ಫೆ. 25ರಂದು ಎರಡೂ ಕಡೆಗಳಲ್ಲಿ ಬೆಳಿಗ್ಗೆ 7ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಫೆ. 27 ರಂದು ಮರು ಮತದಾನ ಅವಶ್ಯವಿದ್ದರೆ ಮತದಾನ ನಡೆಸಲಾಗುವುದು. ಫೆ.28ರಂದು ಮತ ಎಣಿಕೆ ನಡೆಯಲಿದೆ.