ನೆಲ್ಯಾಡಿ ರಾಮನಗರದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ವಾರ್ಷಿಕ ಭಜನಾ ಮಹೋತ್ಸವ

0

ನೆಲ್ಯಾಡಿ: ಶ್ರೀ ವಿನಾಯಕ ಭಜನಾ ಮಂಡಳಿ, ಶ್ರೀ ರಾಮಮಂದಿರ ರಾಮನಗರ ಬಲ್ಯ-ನೆಲ್ಯಾಡಿ ಇದರ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಾರ್ಷಿಕ ಭಜನಾ ಮಹೋತ್ಸವ, ದುರ್ಗಾಪೂಜೆ ರಾಮನಗರ ಶ್ರೀ ರಾಮ ಮಂದಿರದಲ್ಲಿ ನಡೆಯಿತು.


ಬೆಳಿಗ್ಗೆ ಸೂರ್ಯೋದಯಕ್ಕೆ ಭಜನಾ ಕಾರ್ಯಕ್ರಮ ಪ್ರಾರಂಭಗೊಂಡು ರಾತ್ರಿ 8.30 ರ ತನಕ ನಡೆಯಿತು. ಅಸುಪಾಸಿನ ವಿವಿಧ ಭಜನಾ ಮಂಡಳಿಗಳಿಂದ ಕುಣಿತ ಭಜನೆ ನಡೆಯಿತು. ಸಂಜೆ ಸತ್ಯನಾರಾಯಣ ಪೂಜೆ, ದುರ್ಗಾ ಪೂಜೆ, ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ದೋಂತಿಲ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅರ್ಚಕ ಅನಂತ ಪದ್ಮನಾಭ ನೂಜಿನ್ನಾಯ ಮತ್ತು ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ನೂಜಿನ್ನಾಯರವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು.


ಯಕ್ಷ ಸನ್ಮಾನ:


ಯಕ್ಷಗಾನದ ಅಪ್ರತಿಮ ಚೆಂಡವಾದಕ ದಿ.ಸುಪ್ರಸನ್ನ ಶಗ್ರಿತ್ತಾಯರವರ ಸ್ಮರಣಾರ್ಥ ಯಕ್ಷ ಸನ್ಮಾನ ಕಾರ್ಯಕ್ರಮ ಈ ಸಂದರ್ಭದಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆಯವರಿಗೆ ಸಾಹಿತ್ಯ ರತ್ನ ಗೋಪಾಲಕೃಷ್ಣ ಶಗ್ರಿತ್ತಾಯರವರು ‘ಯಕ್ಷ ಸನ್ಮಾನ’ ಮಾಡಿದರು. ಇದೇ ವೇಳೆ ಗೋಪಾಲಕೃಷ್ಣ ಶಗ್ರಿತ್ತಾಯರವರು 10 ಸಾವಿರ ರೂ. ದೇಣಿಗೆಯನ್ನು ಶ್ರೀ ವಿನಾಯಕ ಯಕ್ಷಗಾನ ಮಂಡಳಿಯ ಅಧ್ಯಕ್ಷ ಜಯರಾಮ ಗೌಡ ಮತ್ತು ಕಾರ್ಯದರ್ಶಿ ಕಿರಣ್‌ರವರಿಗೆ ಹಸ್ತಾಂತರಿಸಿದರು. ಪ್ರತಿ ವರ್ಷ ದಿ.ಸುಪ್ರಸನ್ನ ಶಗ್ರಿತ್ತಾಯರ ಸ್ಮರಣಾರ್ಥ ಒಬ್ಬ ಕಲಾವಿದನನ್ನು ಗುರುತಿಸಿ ಯಕ್ಷ ಸನ್ಮಾನ ಮಾಡಬೇಕೆಂದು ವಿನಂತಿಸಿ, ಅದರ ಸಂಪೂರ್ಣ ಖರ್ಚನ್ನು ನೀಡುವುದಾಗಿ ಹೇಳಿದರು. ಖ್ಯಾತ ಯಕ್ಷಗಾನ ಕಲಾವಿದ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗುಡ್ಡಪ್ಪ ಬಲ್ಯರವರು ಸನ್ಮಾನಿತ ಗಂಗಾಧರ ಶೆಟ್ಟಿ ಹೊಸಮನೆ ಅವರನ್ನು ಅಭಿನಂದಿಸಿ ಮಾತನಾಡಿದರು.


ಶ್ರೀ ವಿನಾಯಕ ಭಜನಾ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ರಾಮನಗರ ಅಧ್ಯಕ್ಷತೆ ವಹಿಸಿದ್ದರು. ಕದಂಬ ಕೌಶಿಕೆ ಯಕ್ಷಗಾನದ ಪ್ರಾಯೋಜಕರಾಗಿರುವ ಪಾದೆಮನೆ ದಿ.ಕಾವೇರಿ ಶೀನಪ್ಪಗೌಡ ಅವರ ಪುತ್ರಿ, ಮಂಗಳೂರಿನಲ್ಲಿ ನೆಲೆಸಿರುವ ಯಶೋಧರ, ಉಚಿತ ಭಜನಾ ತರಬೇತಿ ನೀಡುತ್ತಿರುವ ಹರೀಶ್ ಮತ್ತು ಯಕ್ಷ ಕಲಾವಿದ ಶ್ರೀಕುಮಾರ್ ಮಾಲೆಮಾರ್‌ರವರನ್ನು ಶಾಲು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ವಾಸಪ್ಪ ಗೌಡ ನಾಲ್ಗುತ್ತು, ಯಕ್ಷಗಾನ ಚೆಂಡವಾದಕ ಸುಬ್ರಹ್ಮಣ್ಯ ಶಗ್ರಿತ್ತಾಯ, ರಾಮನಗರ ಶ್ರೀ ವಿನಾಯಕ ಭಜನಾ ಮಂಡಳಿ ಕಾರ್ಯದರ್ಶಿ ರಾಧಾಕೃಷ್ಣ ಗೌಡ, ವಿನಾಯಕ ಭಜನಾ ಮಂಡಳಿ ಪದಾಧಿಕಾರಿಗಳು, ಯಕ್ಷಗಾನ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಶ್ರೀ ವಿನಾಯಕ ಯಕ್ಷಗಾನ ಮಂಡಳಿ ಕಾರ್ಯದರ್ಶಿ ಕಿರಣ್ ಸ್ವಾಗತಿಸಿದರು. ಅಧ್ಯಕ್ಷ ಜಯರಾಮ ಗೌಡ ನಾಲ್ಗುತ್ತು ವಂದಿಸಿದರು. ಶ್ರೀ ವಿನಾಯಕ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಅಮ್ಮಿ ಗೌಡ ನಾಲ್ಗುತ್ತು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ‘ಕದಂಬ ಕೌಶಿಕೆ’ ಯಕ್ಷಗಾನ ಬಯಲಾಟ ನಡೆಯಿತು.

LEAVE A REPLY

Please enter your comment!
Please enter your name here