ಹನುಮಗಿರಿ:ಭಾರತ ಮಾತೆ, ವೀರ ಯೋಧರು, ಅನ್ನದಾತರನ್ನು ನೆನಪಿಸುವ ಜೊತೆಗೆ ರಾಷ್ಟ್ರಪ್ರೇಮ ಉದ್ದೀಪನಗೊಳಿಸುವ ನಿಟ್ಟಿನಲ್ಲಿ ಹನುಮಗಿರಿಯಲ್ಲಿ ನಿರ್ಮಿಸಿರುವ ಅಮರಗಿರಿ' ಭಾರತ ಮಾತಾ ಮಂದಿರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಫೆ.೧೧ರಂದು ಲೋಕಾರ್ಪಣೆ ಮಾಡಿದರು.
ಆರಂಭದಲ್ಲಿ ಶ್ರೀ ಕ್ಷೇತ್ರ ಹನುಮಗಿರಿಗೆ ತೆರಳಿ ದೇವರ ಆಶೀರ್ವಾದ ಪಡೆದ ಅಮಿತ್ ಶಾ ಅವರು ನಂತರ ಅಮರ ಗಿರಿಯೊಳಗೆ ಪ್ರವೇಶಿಸಿ ಉದ್ಘಾಟನೆ ನೆರವೇರಿಸಿ ಭಾರತಾಂಬೆಗೆ ಪ್ರಣಾಮ ಸಲ್ಲಿಸಿದರು. ಬಿಗಿ ಬಂದೋಬಸ್ತ್‌ನೊಂದಿಗೆ ಆಗಮಿಸಿದ ಅಮಿತ್ ಶಾ: ಕೇರಳದ ಕಣ್ಣೂರುನಿಂದ ಬಿಎಸ್‌ಎಫ್ ಹೆಲಿಕಾಪ್ಟರ್‌ನಲ್ಲಿ ಹೊರಟು ಹನುಮಗಿರಿ ಗಜಾನನ ಶಾಲಾ ಮೈದಾನದಲ್ಲಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್‌ನಲ್ಲಿ ಬಂದಿಳಿದ ಅಮಿತ್ ಶಾ ನೇರವಾಗಿ ಹನುಮಗಿರಿಗೆ ಆಗಮಿಸಿದರು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರುಗಳೊಂದಿಗೆ ಪಂಚಮುಖಿ ಆಂಜನೇಯನ ದರುಶನ ಪಡೆದರು.ಆಂಜನೇಯನ ಸನ್ನಿಧಾನದಲ್ಲಿ ದೀಪ ಬೆಳಗಿದ ಅಮಿತ್ ಶಾ ದೇವರ ದರುಶನ ಮಾಡಿದರು.
ಪಂಚಮುಖಿ ಆಂಜನೇಯನಿಗೆ ನವರತ್ನಸಹಿತ ರಜತ ಗದೆ ಅರ್ಪಣೆ: ಪಂಚಮುಖಿ ಆಂಜನೇಯ ಸನ್ನಿಧಿಯಲ್ಲಿ ಪ್ರಾರ್ಥಿಸಿದ ಅಮಿತ್ ಷಾ ನವರತ್ನ ಸಹಿತವಾದ, ಸುಮಾರು ಐದು ಕೆಜಿಗೂ ಅಧಿಕ ತೂಕದ ರಜತ ಗದೆಯನ್ನು ಪಂಚಮುಖಿ ಆಂಜನೇಯನಿಗೆ ಅರ್ಪಿಸಿದರು.ಈ ವೇಳೆ ದೇವಳದಲ್ಲಿ ವಿಶೇಷ ಪೂಜೆ ನೆರವೇರಿಸಿ ಆರತಿ ಸ್ವೀಕರಿಸಿ, ತೀರ್ಥ ಪ್ರಸಾದವನ್ನು ಪಡೆದರು. ದೇವರ ಪಟ್ಟದ ಗದೆಯಿಂದ ವಿಶೇಷ ಆಶೀರ್ವಾದ ಅಮಿತ್ ಶಾ ಜೊತೆಗೆ ಮುಖಂಡರುಗಳಿಗೂ ಆಶೀರ್ವಾದ ದೇವರ ತೀರ್ಥ ಪ್ರಸಾದ ಸ್ವೀಕರಿಸಿದ ನಂತರ ಪಂಚಮುಖಿ ಆಂಜನೇಯ ಸನ್ನಿಧಿಯಲ್ಲಿರುವ ಪಟ್ಟದ ಗದೆಯನ್ನು ಅರ್ಚಕರು ಅಮಿತ್ ಶಾ ಅವರ ತಲೆಗೆ ಮುಟ್ಟಿಸುವ ಮೂಲಕ ಆಶೀರ್ವದಿಸಲಾಯಿತು.ಇವರ ಜೊತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೂ ವಿಶೇಷವಾಗಿ ಗೌರವಿಸಿ ಆಶೀರ್ವದಿಸಲಾಯಿತು. ಪಂಚಮುಖಿ ಆಂಜನೇಯನಿಗೆ ಪ್ರಾರ್ಥಿಸಿ ಶಾ ಕೈಗೆ ರಕ್ಷೆ: ಪಂಚಮುಖಿ ಆಂಜನೇಯನ ಸನ್ನಿಧಿಯಲ್ಲಿ ವಿಶೇಷವಾಗಿ ಕೊಡಲ್ಪಡುವ ಪಂಚಮುಖಿ ಆಂಜನೇಯನ ರಕ್ಷೆಯಾದ ದಾರವನ್ನು ಅಮಿತ್ ಶಾ ಅವರ ಕೈಗೆ ಅರ್ಚಕ ರಾಜೇಶ್ ಗಾಂವ್ಕರ್ ಕಟ್ಟಿದರು. ಇದಾದ ನಂತರ ದೇವಸ್ಥಾನದ ವತಿಯಿಂದ ಶಾಲು ತೊಡಿಸಿ, ಮಲ್ಲಿಗೆ ಹಾರ ಹಾಕಿ, ಪ್ರಸಾದವನ್ನು ನೀಡಿ ಗೌರವಿಸಲಾಯಿತು.ಅಲ್ಲಿಂದ ಪಂಚಮುಖಿ ಆಂಜನೇಯನಿಗೆ ಪ್ರದಕ್ಷಿಣೆ ಹಾಕಿ ಅಮಿತ್ ಶಾ ಅಮರಗಿರಿಯತ್ತ ತೆರಳಿದರು. ದೇಶ ಭಕ್ತರ ಗಡಣ ಅಮರಗಿರಿಯನ್ನು ಉದ್ಘಾಟಿಸಿದರು: ಹಚ್ಚ ಹಸಿರ ನಡುವೆ ನಿರ್ಮಾಣವಾಗಿರುವ ದೇಶ ಭಕ್ತರ ಗಡಣ, ಅಮರ ಯೋಧರ ನೆನಪಿನ
ಅಮರಗಿರಿ’ಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದರು.ದೇಶದಲ್ಲೇ ಪ್ರಥಮ ಎಂದೆನಿಸಿಕೊಂಡಿರುವ ಅಷ್ಟ ಭುಜಾಕೃತಿಯ ಮಂದಿರ ಅಮರ ಜ್ಯೋತಿ ಮಂದಿರವನ್ನು ಶಾ ಅವರು ಲೋಕಾರ್ಪಣೆಗೊಳಿಸಿದರು.
ವೀರಾಗ್ರಣಿಯ ಕೈ, ಕೈಯಲ್ಲಿರುವ ತ್ರಿವರ್ಣ ಧ್ವಜಕ್ಕೆ ಪುಷ್ಪಾರ್ಚನೆ:
ಅಮರ ಗಿರಿಯ ಅಮರ ಯೋಧರ ಸಾನಿಧ್ಯಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ವಿಶೇಷ ಚೆಂಡೆ ವಾದನ ಮತ್ತು ಯಕ್ಷಗಾನದ ವೇಷಧಾರಿಗಳು ಸ್ವಾಗತಿಸಿದರು.ಒಳ ಪ್ರವೇಶಿಸಿದಾಗ ಮೊದಲಿಗೆ ಸಿಗುವ ಅಮರಗಿರಿಯ ಶಿಲಾಫಲಕಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಒಳ ಪ್ರವೇಶಿಸಿ,ಮುಂದಕ್ಕೆ ಸಾಗಿದಾಗ ಸಿಗುವ ಏಕಶಿಲೆಯಲ್ಲಿ ನಿರ್ಮಾಣವಾಗಿರುವ ವೀರಾಗ್ರಣಿ ಕೈಯ ಆಕೃತಿ ಮತ್ತು ಕೈಯಲ್ಲಿದ್ದ ತ್ರಿವರ್ಣ ಧ್ವಜಕ್ಕೆ ಅಮಿತ್ ಷಾ ಪುಷ್ಪಾರ್ಚನೆ ಮಾಡುವ ಮೂಲಕ ಅಮರಗಿರಿಯನ್ನು ಪ್ರವೇಶಿಸಿದರು.
ಸಿಂಹವಾಹಿನಿಯಾಗಿ ನಿಂತಿರುವ ತಾಯಿ ಭಾರತಿಗೆ ಪುಷ್ಪಾರ್ಚನೆ:
ಶ್ರೀ ಭಾರತೀ ಅಮರ ಜ್ಯೋತಿ ಮಂದಿರವನ್ನು ಪ್ರವೇಶಿಸಿದ ಅಮಿತ್ ಶಾ ದೀಪ ಪ್ರಜ್ವಲಿಸಿ ಮಂದಿರವನ್ನು ಲೋಕಾರ್ಪಣೆಗೈದರು.ಬಳಿಕ ಸಿಂಹವಾಹಿನಿ ತಾಯಿ ಭಾರತಿಗೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಅಮರ ಯೋಧರ ನೆನಪಿಗಾಗಿ ನಿರ್ಮಿಸಲಾಗಿರುವ ಅಮರ ಶಿಲೆಗೆ ಪುಷ್ಪಾರ್ಚನೆಗೈದರು.
ಸಂವಿಧಾನ ಪ್ರತಿಗೆ ಸಹಿ ಹಾಕಿ ಅವಿಸ್ಮರಣೀಯಗೊಳಿಸಿದ ಶಾ:
ಅಮರಗಿರಿಗೆ ಆಗಮಿಸಿದ ಸವಿ ನೆನಪಿಗಾಗಿ ಅಮಿತ್ ಶಾ ಅವರು ಸಂವಿಧಾನದ ಮೂಲ ಪ್ರತಿಯಲ್ಲಿ ತಮ್ಮ ಹಸ್ತಾಕ್ಷರವನ್ನು ನಮೂದಿಸಿ ಕ್ಷೇತ್ರಕ್ಕೆ ನೀಡಿದರು.ಇದಾದ ನಂತರ ಅಮರಗಿರಿ ಭೇಟಿಯ ಸವಿ ನೆನಪಿಗಾಗಿ ಧರ್ಮಶ್ರೀ ಪ್ರತಿಷ್ಠಾನದ ಧರ್ಮದರ್ಶಿ ಶಿವರಾಮ್ ಪಿ.ಅವರು ಅಮಿತ್ ಶಾ ಅವರಿಗೆ ರಾಮನ ಪ್ರತಿಮೆಯನ್ನು ನೀಡಿ ಗೌರವಿಸಿದರು.
ಹೆಲಿಪ್ಯಾಡ್‌ನಲ್ಲಿ ಸ್ವಾಗತ: ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಅಮಿತ್ ಶಾರವರನ್ನು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್.,ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ಸುಳ್ಯ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಎಸ್.ಅಂಗಾರ,ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ಧರ್ಮ ಶ್ರೀ ಪ್ರತಿಷ್ಠಾನದ ಟ್ರಸ್ಟಿ ರಘುರಾಜ್ ಭಟ್, ವಕೀಲರಾದ ವಿಘ್ನೇಶ್,ರಾಜಶೇಖರ್, ಪವನ್‌ಚಂದ್ರ,ಶಾಂತಿಭೂಷಣ್ ಹೂಗುಚ್ಛ ನೀಡಿ ಸ್ವಾಗತಿಸಿದರು.ಹನುಮಗಿರಿ ದ್ವಾರದ ಬಳಿ ಧರ್ಮಶ್ರೀ ಪ್ರತಿಷ್ಠಾನದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಧರ್ಮದರ್ಶಿ ಶಿವರಾಮ ಶರ್ಮ ಹಾರ ಹಾಕಿ ಸ್ವಾಗತಿಸಿದರು.ಅಮರಗಿರಿ ಪ್ರವೇಶ ದ್ವಾರದ ಬಳಿ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ|ಟಿ.ಶ್ಯಾಮ್ ಭಟ್ ಹೂ ಗುಚ್ಛ ನೀಡಿ ಸ್ವಾಗತಿಸಿದರು.ಈ ವೇಳೆ ಸಹಜ್ ರೈ ಬಳಜ್ಜ,ನಾಗರಾಜ್ ನಡುವಡ್ಕ ಉಪಸ್ಥಿತರಿದ್ದರು.ಖ್ಯಾತ ವಕೀಲ ಮಹೇಶ್ ಕಜೆ ಮತ್ತು ಶಿಕ್ಷಕ ದೇವಿಪ್ರಕಾಶ್ ವೀಕ್ಷಕ ವಿವರಣೆಯೊಂದಿಗೆ ಕಾರ್ಯಕ್ರಮವನ್ನುನಿರೂಪಿಸಿದರು.
ಗಾನ ವೈಭವ:
ಕಾರ್ಯಕ್ರಮಕ್ಕೂ ಮುನ್ನ ಯಕ್ಷಗಾನದ ಮೇರು ಭಾಗವತರುಗಳಾದ ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ರೈ ಕಕ್ಕೆಪದವು ಇವರಿಂದ ಗಾನ ವೈಭವ ಕಾರ್ಯಕ್ರಮ ನಡೆಯಿತು. ಹಿಮ್ಮೇಳದಲ್ಲಿ ಚೈತನ್ಯ ಪದ್ಯಾಣ, ಶ್ರೀಧರ ವಿಟ್ಲ, ನಿಶಾಂತ ಜೋಗಿ ಸಹಕರಿಸಿದರು.
ಸುದ್ದಿಯಲ್ಲಿ ನೇರಪ್ರಸಾರ: ಕಾರ್ಯಕ್ರಮ ಸುದ್ದಿ ನ್ಯೂಸ್ ಪುತ್ತೂರು ಯೂ ಟ್ಯೂಬ್ ಚಾನೆಲ್ ಮತ್ತು ಫೇಸ್ ಬುಕ್ ಪೇಜ್‌ನಲ್ಲಿ ನೇರಪ್ರಸಾರವಾಗಿದ್ದು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ.
ನನಗೆ ಈ ದಿನ ಹುತಾತ್ಮ ಯೋಧರ ಸ್ಮಾರಕ ನೋಡುವ ಸೌಭಾಗ್ಯ ದೊರೆಯಿತು.ಜೀವನದಲ್ಲಿ….ತುಂಬ ತುಂಬ ಖುಷಿಯಾಯಿತು..ಎಂದು ಬರೆದು ಕೊನೆಯಲ್ಲಿ ವಂದೇಮಾತರಂ, ಎಂದು ಸಂದರ್ಶಕರ ಪುಸ್ತಕದಲ್ಲಿ ಅಮಿತ್ ಶಾ ಅವರು ಹಿಂದಿಯಲ್ಲಿ ಬರೆದಿರುವ ಬರಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.