ಪುತ್ತೂರು: ನಬಾರ್ಡ್ ದಕ್ಷಿಣ ಕನ್ನಡ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರ ಸಂಯೋಜನೆಯಲ್ಲಿ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪನಿ ವಿಟ್ಲ ಹಾಗೂ ಮಹಾಲಿಂಗೇಶ್ವರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಕೋಡಿಂಬಾಡಿ ಗ್ರಾಮ ಪಂಚಾಯತ್ ಇವರ ಆಶ್ರಯದಲ್ಲಿ ಫೆ.1ರಿಂದ ಕೋಡಿಂಬಾಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯುತ್ತಿದ್ದ ತೆಂಗಿನ ಗೆರಟೆಯಲ್ಲಿ ಕಲಾಕೃತಿ ಮಾಡುವ ತರಬೇತಿಯ ಸಮಾರೋಪ ಸಮಾರಂಭ ಫೆ.10ರಂದು ನಡೆಯಿತು.
ನಬಾರ್ಡ್ ಎ.ಜಿ.ಎಂ. ಸಂಗೀತ ಕರ್ತ ಅವರು ಮಾತನಾಡಿ, ಮಹಿಳೆಯರ ಪರಿಶ್ರಮ ಮತ್ತು ತಾಳ್ಮೆಗೆ ಮೆಚ್ಚುಗೆ ವ್ಯಕ್ತಪಡಿಸಿ ಗೆರಟೆಯಲ್ಲಿ ತಯಾರಿಸಿದ ವಸ್ತುಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ತರಬೇತಿ ಪಡೆದವರು ಮುಂದಿನ ಹಂತದಲ್ಲಿ ಸ್ವ ಉದ್ಯೋಗ ಮಾಡುವಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಅವರು ಸಲಹೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿಯ ಎನ್.ಆರ್.ಎಲ್.ಎಂ. ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್ ಮಾತನಾಡಿ, ತೆಂಗಿನ ಗೆರಟೆ ಕಲಾಕೃತಿಗಳಿಗೆ ಸರ್ಕಾರಿ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯ ಒದಗಿಸಲು ಪ್ರಯತ್ನ ಪಡುವುದಾಗಿ ಭರವಸೆ ನೀಡಿದರು.
ತೆಂಗು ರೈತ ಉತ್ಪಾದಕರ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚೇತನ್ ಮಾತನಾಡಿ, ಕಂಪನಿ ಮುಖಾಂತರ ತೆಂಗಿನ ಮೌಲ್ಯ ವರ್ಧಿತ ಉತ್ಪನ್ನಗಳಿಗೆ ಬೇಡಿಕೆ ಇದೆ. ಮಹಿಳೆಯರು ಸ್ವ ಉದ್ಯೋಗ ಮಾಡಲು ತಯಾರಾಗಿದ್ದಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
10 ದಿನ ತರಬೇತಿ ನೀಡಿದ ದಿನೇಶ್ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಿ ಕೃತಜ್ಞತೆ ಸಲ್ಲಿಸಲಾಯಿತು. ಬಳಿಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ರಾಮಚಂದ್ರ ಪೂಜಾರಿ ಮಾತನಾಡಿ ತೆಂಗಿನ ಗೆರಟೆಯ ಉತ್ಪನ್ನವು ಈಗಾಗಲೇ ಕೇರಳ ಮಾರುಕಟ್ಟೆಯಲ್ಲಿ ಬರುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಮೊದಲ ಬಾರಿ ನಮ್ಮ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಬಾರ್ಡ್ ಸಂಸ್ಥೆಯೊಂದಿಗೆ ಜಂಟಿಯಾಗಿ ತೆಂಗಿನ ಗೆರಟೆಯ ಉತ್ಪನ್ನದ ತರಬೇತಿಯನ್ನು ಮಾಡಬೇಕೆಂದು ನಿರ್ಧರಿಸಿ ನಮ್ಮ ಕೋಡಿಂಬಾಡಿ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಗ್ರಾಮ ಪಂಚಾಯತ್ ಸದಸ್ಯ ರಾಮಣ್ಣ ಗೌಡ ಗುಂಡೋಲೆ ಮಾತನಾಡಿ ಶಿಲ್ಪಿ ಕಲ್ಲಿಗೆ ಉಳಿಯ ಪೆಟ್ಟು ಕೊಟ್ಟಷ್ಟು ಅದು ಸುಂದರವಾದ ಮೂರ್ತಿಯಾಗಿ ಹೊರ ಹೊಮ್ಮುತ್ತದೆ. ಹಾಗೆಯೇ ನಮ್ಮ ಕೋಡಿಂಬಾಡಿ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದ ಮಹಿಳೆಯರು ತಿಂದ ಪೆಟ್ಟು ಸ್ವಲ್ಪವಲ್ಲ. ಅದಕ್ಕೆ ಫಲಿತಾಂಶವನ್ನು ಇವತ್ತು ಒಕ್ಕೂಟದ ಮಹಿಳೆಯರೇ ಸಾಧನೆ ಮಾಡಿ ತೋರಿಸಿದ್ದಾರೆ ಎಂದರು.
ಶಿಬಿರಾರ್ಥಿಗಳ ಪೈಕಿ ಶಾರದಾ ಸಿ. ರೈ, ಸುಲೋಚನಾ, ಪೂರ್ಣಿಮಾ, ವೀಣಾ ಮತ್ತು ದೇಜಮ್ಮ ಹೆಗಡೆ ಅನಿಸಿಕೆ ವ್ಯಕ್ತಪಡಿಸಿ ತರಬೇತಿಗೆ ನಮ್ಮ ಕೋಡಿಂಬಾಡಿ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಂಡ ಜಿಲ್ಲಾ ಪಂಚಾಯಿತಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಸಂಜೀವಿನಿ ಯೋಜನೆಯು ನಮ್ಮ ಬಡ ಮಹಿಳೆಯರ ಬಾಳಿಗೆ ಆಶಾಕಿರಣವಾಗಿದೆ. 2018ರಿಂದ 2020ರವರೆಗೆ ನಮಗೆ ಯಾವುದೇ ಪ್ರಯೋಜನ ಸಿಕ್ಕಿಲ್ಲ. ನಮ್ಮ ಒಕ್ಕೂಟಕ್ಕೆ ಉತ್ತಮವಾದ ಎಂ.ಬಿ.ಕೆ, ಆಡಳಿತ ಮಂಡಳಿ ಆಯ್ಕೆಯಾದ ಬಳಿಕ ನಮ್ಮ ಮಹಿಳೆಯರ ಅಭಿವೃದ್ಧಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎಷ್ಟೇ ಸಮಸ್ಯೆಗಳಾದರೂ ಮಹಿಳೆಯರು ಬೆಳೆಯುತ್ತಾ ಇದ್ದೇವೆ. ಗ್ರಾಮ ಪಂಚಾಯತ್ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಯವರು ನಮ್ಮ ತರಬೇತಿಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ಮುಂದಿನ ದಿನದಲ್ಲಿ ಗ್ರಾಮ ಪಂಚಾಯತ್ ನ ಎಲ್ಲಾ ಕಾರ್ಯ ಚಟುವಟಿಕೆ ಜೊತೆಗೆ ನಾವು ಕೈ ಜೋಡಿಸುತ್ತೇವೆ ಎಂದು ಶಿಬಿರಾರ್ಥಿಗಳು ಹೇಳಿದರು. ತರಬೇತಿಯಲ್ಲಿ ಭಾಗವಹಿಸಿದ್ದ 30 ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿತಾಶ್ವ, ಪಂಚಾಯತ್ ಒಕ್ಕೂಟದ ಕಾರ್ಯದರ್ಶಿ ಸುಂದರಿ ಪಿ, ಮುಖ್ಯ ಪುಸ್ತಕ ಬರಹಗಾರರಾದ ಸಂಧ್ಯಾ, ಎಲ್.ಸಿ.ಆರ್.ಪಿ. ಕಾವ್ಯ, ತಾಲೂಕು ಬಿ.ಆರ್.ಪಿ ಅಂಕಿತಾ, ಒಕ್ಕೂಟದ ಪಧಾದಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಗ್ರಂಥಪಾಲಕರು, ಫಿಲೋಮಿನಾ ಕಾಲೇಜಿನ ಎಂ.ಎಸ್.ಡಬ್ಲೂ ವಿದ್ಯಾರ್ಥಿಗಳು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು. ಭಾರತೀಯ ವಿಕಾಸ ಟ್ರಸ್ಟ್ ಅಧಿಕಾರಿ ಜೀವನ್ ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ನಮಿತ ಕಾರ್ಯಕ್ರಮ ನಿರೂಪಣೆ ಮಾಡಿದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ವಂದಿಸಿದರು.
Home ಚಿತ್ರ ವರದಿ ಕೋಡಿಂಬಾಡಿ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದವರಿಂದ ತೆಂಗಿನ ಗೆರಟೆಯಲ್ಲಿ ಅರಳಿದ ಕಲಾಕೃತಿಗಳು : ತೆಂಗಿನ ಗೆರಟೆಯಿಂದ ಕರಕುಶಲ...