ನೆಲ್ಯಾಡಿ: ಗ್ರಾಮದೇವರಾದ ಬಜತ್ತೂರು ಗ್ರಾಮದ ಕಾಂಚನ-ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆದ ವರ್ಷಾವಧಿ ಜಾತ್ರೋತ್ಸವದ ವೇಳೆ ಫೆ.14ರಂದು ರಾತ್ರಿ ಸನ್ಮಾನ ಸಭೆ, ಪುಸ್ತಕ ಬಿಡುಗಡೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಕಟೀಲು ಇಲ್ಲಿನ ಅನುವಂಶೀಯ ಅರ್ಚಕರಾದ ಹರಿನಾರಾಯಣ ಅಸ್ರಣ್ಣರವರು ಮಾತನಾಡಿ, ವಿದ್ಯಾಸಂಕಲ್ಪ, ಹುಟ್ಟುಹಬ್ಬ ದಿನ ಸೇರಿದಂತೆ ವರ್ಷದಲ್ಲಿ ನಾಲ್ಕೈದು ಸಲವಾದರೂ ಊರಿನ ದೇವಾಲಯಕ್ಕೆ ಭೇಟಿ ನೀಡುವುದನ್ನು ಭಕ್ತರು ರೂಢಿಸಿಕೊಳ್ಳಬೇಕು. ಇದರಿಂದ ದೇವಸ್ಥಾನದೊಂದಿಗಿನ ಸಂಬಂಧವೂ ಗಟ್ಟಿಯಾಗಿ ದೇವರ ಅನುಗ್ರಹವೂ ಲಭಿಸಲಿದೆ ಎಂದರು. ಊರಿನ ದೇವಾಲಯವು ಪರಿಸರದ ಧರ್ಮಶಿಕ್ಷಣ ಕೇಂದ್ರವಾಗಿಯೂ ರೂಪುಗೊಳ್ಳಬೇಕು. ವೇದಮಂತ್ರ ಪಠಣ, ಉತ್ಸವ, ಅನ್ನದಾನದಿಂದ ಕ್ಷೇತ್ರದ ಅಭಿವೃದ್ಧಿಯೂ ಸಾಧ್ಯವಿದೆ. ದೇವಸ್ಥಾನದ ಚಟುವಟಿಕೆಗಳಲ್ಲಿ ಮಕ್ಕಳು, ಯುವಜನತೆ ಹೆಚ್ಚಾಗಿ ಭಾಗವಹಿಸಬೇಕು. ಯಕ್ಷಗಾನದಂತಹ ಚಟುವಟಿಕೆಗಳೂ ನಡೆಯುತ್ತಿರಬೇಕು. ಇವೆಲ್ಲವುದಕ್ಕೂ ದೇವಸ್ಥಾನವೇ ಕೇಂದ್ರವಾಗಿರಬೇಕೆಂದು ಹರಿನಾರಾಯಣ ಅಸ್ರಣ್ಣರವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ ಮುಳಿಯ ಅವರು ಮಾತನಾಡಿ, ಹಿಂದಿನ ಕಾಲದಲ್ಲಿ ಸ್ವಲ್ಪ ಮಟ್ಟಿನ ಧರ್ಮ ಶಿಕ್ಷಣವಾದರೂ ಮಕ್ಕಳಿಗೆ ಶಾಲೆಯ ಪಠ್ಯಗಳಲ್ಲಿ ಸಿಗುತಿತ್ತು. ಆದರೆ ಈಗಿನ ಪುಸ್ತಕಗಳಿಂದ ಪಾಠ ಮಾತ್ರ ಸಿಗುತ್ತಿದೆ. ಜ್ಞಾನ ಸಿಗುತ್ತಿಲ್ಲ. ಇದರಿಂದ ಇಂದಿನ ಮಕ್ಕಳು ಧರ್ಮದಿಂದ ವಿಮುಖರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಧಾರ್ಮಿಕ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧರ್ಮ ಶಿಕ್ಷಣ ಆರಂಭಿಸಿದ್ದು ಪಠ್ಯ ಪುಸ್ತಕವೂ ರಚಿಸಿದ್ದೇವೆ. ತಾಲೂಕಿನ ಸುಮಾರು 15 ದೇವಸ್ಥಾನಗಳಲ್ಲಿ 1500ಕ್ಕೂ ಹೆಚ್ಚು ಮಕ್ಕಳು ಧರ್ಮ ಶಿಕ್ಷಣ ಪಡೆಯುತ್ತಿದ್ದಾರೆ. ಇವರಿಗೆ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಪಠ್ಯ ಪುಸ್ತಕ ನೀಡಲಾಗಿದೆ ಎಂದರು. ಮಕ್ಕಳಲ್ಲೂ ಧಾರ್ಮಿಕ ಶ್ರದ್ಧೆ ಬರಬೇಕು. ಮಕ್ಕಳು ಶೈಕ್ಷಣಿಕ ವರ್ಷ ಆರಂಭದಲ್ಲಿ ದೇವಾಲಯಕ್ಕೆ ಬಂದು ವಿದ್ಯಾಸಂಕಲ್ಪ ಮಾಡುವುದನ್ನು ರೂಢಿಸಿಕೊಳ್ಳಬೇಕು. ಧರ್ಮವನ್ನು ಬೆಳೆಸುವುದರ ಜೊತೆಗೆ ಧಾರ್ಮಿಕ ಶ್ರದ್ಧೆಯನ್ನೂ ಹೆಚ್ಚಿಸಿಕೊಳ್ಳುವ ಎಂದು ಕೇಶವ ಪ್ರಸಾದ ಮುಳಿಯ ಹೇಳಿದರು. ಇನ್ನೋರ್ವ ಅತಿಥಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಪ್ಪಿನಂಗಡಿ ವಲಯ ಮೇಲ್ವಿಚಾರಕ ಚಂದ್ರಶೇಖರ ಅವರು ಮಾತನಾಡಿ, ಕಾಂಚನ ಒಕ್ಕೂಟದ ವತಿಯಿಂದ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ ನಡೆಸಲಾಗುತ್ತಿದೆ. ಯೋಜನೆಯಿಂದ ಆರ್ಥಿಕ ಸಹಕಾರ, ಧಾರ್ಮಿಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಧಾರ್ಮಿಕ ಕೇಂದ್ರಗಳ ಸ್ವಚ್ಛತೆಯೂ ಮಾಡಲಾಗುತ್ತಿದೆ ಎಂದರು.
ಸನ್ಮಾನ ಸ್ವೀಕರಿಸಿದ ಅರ್ಚಕ, ದೇವಸ್ಥಾನದ ಮೊಕ್ತೇಸರರೂ ಆದ ನಾರಾಯಣ ಬಡಿಕ್ಕಿಲ್ಲಾಯರವರು ಮಾತನಾಡಿ, ಕಾಂಚನ-ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕುಟುಂಬದ ಹಿರಿಯರು ಮಾಡಿಕೊಂಡಿದ್ದ ಪೂಜೆಯನ್ನು ಈ ತನಕ ಭಕ್ತಿ,ಶ್ರದ್ಧೆಯಿಂದ ಮಾಡಿಕೊಂಡು ಬಂದಿದ್ದೇನೆ. ಇಲ್ಲಿ ದೇವಸ್ಥಾನ ಜೀರ್ಣೋದ್ದಾರಗೊಂಡು ಉತ್ಸವಗಳು ವಿಜ್ರಂಭಣೆಯಿಂದ ನಡೆದಿದೆ. ಆದರೆ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಕ್ಷೀಣಿಸುತ್ತಿದೆ. ದೇವಸ್ಥಾನಕ್ಕೆ ಸಂಬಂಧಿಸಿ 500 ಮನೆಗಳಿದ್ದು ಪ್ರತಿ ಮನೆಯವರು ವರ್ಷದಲ್ಲಿ ಒಮ್ಮೆಯಾದರೂ ದೇವಸ್ಥಾನಕ್ಕೆ ಬಂದು ಸೇವೆ ಸಲ್ಲಿಸಬೇಕೆಂದು ಹೇಳಿದರು. ಹಿಂದೆ ಸಣ್ಣ ದೇವಸ್ಥಾನಗಳಲ್ಲಿ ಜಾತ್ರೆ ನಡೆಯುತ್ತಿರಲಿಲ್ಲ. 1954ರಲ್ಲಿ ಕಾಂಚನ ಮನೆತನದವರ ನೇತೃತ್ವದಲ್ಲಿ ಇಲ್ಲಿನ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಮಾಡಿದ ಬಳಿಕ ತಂತ್ರಿಗಳ ಸಲಹೆಯಂತೆ ಎರಡು ದಿನದ ಜಾತ್ರೆ ಆರಂಭಿಸಲಾಗಿತ್ತು. ಇದನ್ನು ನೋಡಿ ತಾಲೂಕಿನ ಇತರೇ ದೇವಸ್ಥಾನಗಳಲ್ಲೂ ಜಾತ್ರೆ ಆರಂಭಿಸಲಾಗಿದೆ ಎಂದು ನಾರಾಯಣ ಬಡಿಕ್ಕಿಲ್ಲಾಯರು ನೆನಪಿಸಿಕೊಂಡರು. ಮನೆಮದ್ದು ಪುಸ್ತಕದ ಲೇಖಕಿ ಸುಮನ ಬಡಿಕ್ಕಿಲ್ಲಾಯ ಅವರು ಮಾತನಾಡಿ, ಅಜ್ಜಿಯಿಂದ ಅಮ್ಮನಿಗೆ, ಅಮ್ಮನಿಂದ ನನಗೆ ಮನೆ ಮದ್ದು ಮಾಡುವ ಕಲೆ ಕರಗತಗೊಂಡು ಬಂದಿದೆ. ಇದರಿಂದ ಇನ್ನೊಬ್ಬರಿಗೆ ಅನುಕೂಲವಾಗಬೇಕೆಂಬ ನಿಟ್ಟಿನಲ್ಲಿ ಇವೆಲ್ಲವನ್ನೂ ಪುಸ್ತಕದ ರೂಪದಲ್ಲಿ ಹೊರ ತಂದಿದ್ದೇನೆ ಎಂದರು.
ದೇವಸ್ಥಾನದ ಟ್ರಸ್ಟ್ನ ಉಪಾಧ್ಯಕ್ಷ ಶಿವರಾಮ ಕಾರಂತ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಂಚನ-ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ 400 ವರ್ಷಗಳ ಇತಿಹಾಸವಿದ್ದು ಜೈನರು, ಬಳಿಕ ಕಾಂಚನ ಮನೆತನದವರ ಆಡಳಿತದಲ್ಲಿತ್ತು. ಕಾಂಚನ ಸುಬ್ಬರತ್ನಂ ಅವರು ಊರಿನವರನ್ನು ಸೇರಿಸಿಕೊಂಡು ಟ್ರಸ್ಟ್ ರಚನೆ ಮಾಡಿದ್ದರು. 2017ರಲ್ಲಿ ಸುಮಾರು 2 ಕೋಟಿ ರೂ.,ವೆಚ್ಚದಲ್ಲಿ ದೇವಸ್ಥಾನದ ಪುನರ್ನಿರ್ಮಾಣ ಕೆಲಸ ಕೇವಲ 10 ತಿಂಗಳ ಅವಧಿಯಲ್ಲಿ ನಡೆದಿದೆ. ಇದಕ್ಕೆ ಶೇ.95ರಷ್ಟು ಧನ ಸಂಗ್ರಹ ಗ್ರಾಮದಲ್ಲಿಯೇ ನಡೆದಿದೆ ಎಂದರು. ದೇವಸ್ಥಾನಕ್ಕೆ ಸಂಬಂಧಿಸಿ 500 ಮನೆಗಳಿದ್ದು ಪ್ರತಿ ಮನೆಯವರೂ ವರ್ಷಕ್ಕೆ 600 ರೂ.,ದೇಣಿಗೆ ನೀಡುವ ಮೂಲಕ ದೇವಸ್ಥಾನದ ನಿತ್ಯ ನಿರ್ವಹಣೆ ಮಾಡಲಾಗುತ್ತಿದೆ. ಅರ್ಚಕರು, ಮೊಕ್ತೇಸರರೂ ಆಗಿರುವ ನಾರಾಯಣ ಬಡಿಕ್ಕಿಲ್ಲಾಯ ಅವರು 2017 ರ ತನಕ ಯಾವುದೇ ಸಂಭಾವನೆ ಇಲ್ಲದೇ ಪೂಜೆ ಮಾಡಿಕೊಂಡು ಬಂದಿದ್ದಾರೆ. ದೇವಸ್ಥಾನದಲ್ಲಿ ಇನ್ನಷ್ಟೂ ಅಭಿವೃದ್ಧಿ ಕೆಲಸಗಳು ನಡೆದಿದೆ. ಈಗ ಸುಮಾರು ೨೫ ಲಕ್ಷ ರೂ.,ವೆಚ್ಚದಲ್ಲಿ ದೇವರಿಗೆ ಬಂಗಾರದ ಕಿರೀಟ ಸಮರ್ಪಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು ಇದಕ್ಕೆ ಈಗಾಗಲೇ ೭ ಲಕ್ಷ ರೂ.,ಧನ ಸಂಗ್ರಹ ಆಗಿದೆ. ಈ ಯೋಜನೆಗೆ ಭವಗದ್ಭಕ್ತರು ಸಹಕಾರ ನೀಡಬೇಕೆಂದು ಹೇಳಿದರು.
ಬ್ರಹ್ಮವಾಹಕರಾದ ಕೃಷ್ಣ ಹೊಳ್ಳ ಬಾರೆ ಕಾಸರಗೋಡು, ದೇವಸ್ಥಾನದ ಟ್ರಸ್ಟ್ನ ಅಧ್ಯಕ್ಷ ಶ್ರೀಧರ ಗೌಡ ‘ಶ್ರೀಹರಿ’ ನಡ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿವರಾಮ ಪ್ರಸಾದ್, ದಿನೇಶ್ ನಡ್ಪ, ಸುಧಾಕೃಷ್ಣ, ಪ್ರಸನ್ನಕಾರಂತ, ಯಾದವ ನೆಕ್ಕರೆ, ಜಗದೀಶ ರಾವ್, ನೋಣಯ್ಯ ಪದಕ, ಎಲ್ಯಣ್ಣ ಗೌಡ, ಮುಕುಂದ ಗೌಡ, ಸುನೀತಾಮುಕುಂದ, ದುಗ್ಗಪ್ಪ ಗೌಡ ಅಗರ್ತಿಮಾರ್ ಮತ್ತಿತರರು ಅತಿಥಿಗಳನ್ನು ಗೌರವಿಸಿದರು. ಯಾದವ ನೆಕ್ಕರೆ ವಂದಿಸಿದರು. ಮೋಹನಚಂದ್ರ ಪದಕ ಕಾರ್ಯಕ್ರಮ ನಿರೂಪಿಸಿದರು. ಅರ್ಪಿತ ನೆಕ್ಕರೆ, ಯಶ್ವಿತ ಗೌಡತ್ತಿಗೆ, ಸುಶ್ಮಿತ ಗೌಡತ್ತಿಗೆ ಪ್ರಾರ್ಥಿಸಿದರು. ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ಕಾಂಚನ ರೋಹಿಣಿ ಸುಬ್ಬರತ್ನಂ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ಕೆ.ಎಸ್.ರಾಧಾಕೃಷ್ಣ ಕುವೆಚ್ಚಾರು, ದೇವಸ್ಥಾನದ ಟ್ರಸ್ಟ್ನ ಪದಾಧಿಕಾರಿಗಳು, ಸದಸ್ಯರು, ಉಪಟ್ರಸ್ಟ್ನ ಸದಸ್ಯರು ಸೇರಿದಂತೆ ಭಗವದ್ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ದೇವಸ್ಥಾನದ ಅರ್ಚಕ, ಮೊಕ್ತೇಸರರೂ ಆದ ನಾರಾಯಣ ಬಡಿಕ್ಕಿಲ್ಲಾಯ ಹಾಗೂ ಅಮ್ಮನ ಮನೆ ಮದ್ದು ಪುಸ್ತಕದ ಲೇಖಕರೂ ಆದ ಸುಮನ ಬಡಿಕ್ಕಿಲ್ಲಾಯ ದಂಪತಿ ಮತ್ತು ಬ್ರಹ್ಮವಾಹಕರಾದ ಕೃಷ್ಣ ಹೊಳ್ಳ ಬಾರೆ ಕಾಸರಗೋಡು ಅವರಿಗೆ ಸ್ಮರಣಿಕೆ, ಶಾಲು ಹಾಕಿ, ಫಲತಾಂಬೂಲ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸುರೇಶ್ ಬಿದಿರಾಡಿ ಹಾಗೂ ಶಿವರಾಮ ಪ್ರಸಾದ್ ಅವರು ಸನ್ಮಾನಿತರನ್ನು ಪರಿಚಯಿಸಿದರು. ಕುಣಿತ ಭಜನಾ ತರಬೇತುದಾರರ ಗಂಗಾಧರ ಅವರಿಗೆ ಶಾಲು ಹಾಕಿ ಗೌರವಿಸಲಾಯಿತು.
ಪುಸ್ತಕ ಬಿಡುಗಡೆ:
ಸುಮನ ಬಡಿಕ್ಕಿಲ್ಲಾಯ ಕಾಂಚನ ಅವರು ಬರೆದಿರುವ ‘ಅಮ್ಮನ ಮನೆ ಮದ್ದು’ ಪುಸ್ತಕವನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.
ದೇಣಿಗೆ ಹಸ್ತಾಂತರ:
ವರಮಹಾಲಕ್ಷ್ಮೀ ಪೂಜಾ ಸಮಿತಿ ವತಿಯಿಂದ ವರಮಹಾಲಕ್ಷ್ಮೀ ಪೂಜೆಯಲ್ಲಿನ ಉಳಿಕೆ ಮೊತ್ತವನ್ನು ದೇವಸ್ಥಾನದ ದೇವರಿಗೆ ಬಂಗಾರ ಕಿರೀಟ ಸಮರ್ಪಣೆ ಮಾಡುವ ಯೋಜನೆಗೆ ದೇಣಿಗೆ ರೂಪದಲ್ಲಿ ಸಮಿತಿ ಸದಸ್ಯರು ಹಸ್ತಾಂತರ ಮಾಡಿದರು.