ಪುತ್ತೂರು: ಸಿಟಿ ಫ್ರೆಂಡ್ಸ್ ಆರ್ಟ್ಸ್&ಸ್ಪೋರ್ಟ್ಸ್ ಕ್ಲಬ್, ನಗರ ಪೊಲೀಸ್/ಸಂಚಾರಿ ಪೊಲೀಸ್ ಠಾಣೆ ಸಹಯೋಗದಲ್ಲಿ ದ್ವಿತೀಯ ಬಾರಿಗೆ ಆ.15ರಂದು ಸ್ವಾತಂತ್ರ್ಯ ದಿನಾಚರಣೆಯಂದು ‘ನನ್ನ ಜೀವ ನನ್ನ ರಕ್ಷಣೆ’ ಎಂಬ ಧ್ಯೇಯವಾಕ್ಯದಡಿಯಲ್ಲಿ ಮುಖ್ಯರಸ್ತೆಯ ಗಾಂಧಿಕಟ್ಟೆ ಬಳಿ ಮಾದಕ ದ್ರವ್ಯ ಪುತ್ತೂರು ಹಾಗೂ ಸಂಚಾರಿ ನಿಯಮಗಳ ಜನ ಜಾಗೃತಿ ಕಾರ್ಯಕ್ರಮ ಜರಗಿತು.
ನನ್ನ ಜೀವ ನನ್ನ ರಕ್ಷಣೆ ಹೊಣೆಯಿರಲಿ-ವಂ|ಲಾರೆನ್ಸ್ ಮಸ್ಕರೇನ್ಹಸ್:
ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ನಮ್ಮ ದೇಶ ಪ್ರೀತಿಸುವ, ವೈವಿಧ್ಯತೆಯಿಂದ ಕೂಡಿದ ದೇಶವಾಗಿದ್ದು ಸಮಾಜದಲ್ಲಿ ಜೀವಿಸುವಾಗ ನನ್ನ ಜೀವ, ನನ್ನ ರಕ್ಷಣೆ ಎಂಬ ಹೊಣೆಯರಿತು ಜೀವಿಸಬೇಕು. ಮಾದಕ ದ್ರವ್ಯದಿಂದ ದೂರವಿದ್ದು ಜೊತೆಗೆ ಸಂಚಾರಿ ನಿಯಮಗಳನ್ನು ಪಾಲನೆ ಮಾಡುತ್ತಾ ಜೀವವನ್ನು ಕಾಪಾಡಿಕೊಳ್ಳೋಣ ಎಂದರು.
ದುಶ್ಚಟಗಳಿಂದ ಎಚ್ಚೆತ್ತು ಸುಂದರ ಜೀವನ ನಮ್ಮದಾಗಿಸೋಣ-ಎಲ್.ಟಿ ಅಬ್ದುಲ್ ರಝಾಕ್:
ಕೇಂದ್ರ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಮಾತನಾಡಿ, ಕಳೆದ ವರ್ಷವೂ ಆಯೋಜಕರು ಮಾದಕ ದ್ರವ್ಯ ಮುಕ್ತ ಹಾಗೂ ಸಂಚಾರಿ ನಿಯಮಗಳ ಬಗ್ಗೆ ಯಶಸ್ವಿಯಾಗಿ ಜನ ಜಾಗೃತಿಯನ್ನು ಮೂಡಿಸಿದ್ದರು. ಈ ಮಾದಕ ದ್ರವ್ಯ ಸೇವನೆಯಿಂದ ಹಾಗೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಅದೆಷ್ಟೋ ಜೀವವನ್ನು ಕಳೆದುಕೊಂಡಿರುವುದು ಪತ್ರಿಕೆಯಲ್ಲಿ ನಮಗೆ ಕಾಣ ಸಿಗುತ್ತಿದ್ದು ನಾವು ಇಂತಹ ದುಶ್ಚಟಗಳಿಂದ ಎಚ್ಚೆತ್ತು ಸುಂದರ ಜೀವನವನ್ನು ನಮ್ಮದಾಗಿಸಿಕೊಳ್ಳೋಣ ಎಂದರು.
ಕಾನೂನು ರಕ್ಷಣೆ, ಗೌರವಿಸಿದಾಗ ಸ್ವಸ್ಥ ಸಮಾಜ-ಆಂಜನೇಯ ರೆಡ್ಡಿ:
ಪುತ್ತೂರು ನಗರ ಠಾಣೆಯ ಎಸ್.ಐ ಆಂಜನೇಯ ರೆಡ್ಡಿ ಮಾತನಾಡಿ, ಕಾರ್ಯಕ್ರಮದ ಆಯೋಜಕರಾದ ರಝಾಕ್ ಬಿ.ಎಚ್ರವರ ಕನಸಿನ ಕೂಸಾದ ಈ ಕಾರ್ಯಕ್ರಮವನ್ನು ಅವರ ಗೆಳೆಯರ ಸಂಪೂರ್ಣ ತಂಡವನ್ನು ಕಟ್ಟಿಕೊಂಡು ಮಾಡಿರುವುದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಕಾರ್ಯಕ್ರಮವಾಗಿದೆ. ನಾವೆಲ್ಲಾ ಕಾನೂನನ್ನು ರಕ್ಷಣೆ ಮಾಡಿಕೊಂಡು ಕಾನೂನಿಗೆ ಗೌರವ ಕೊಡೋದನ್ನು ಮಾಡಿದಾಗ ಸಮಾಜವು ಸ್ವಸ್ಥ ಸಮಾಜ ಎನಿಸಬಲ್ಲುದು ಎಂದರು.
ಮಾದಕ ದ್ರವ್ಯ ಕಿತ್ತೊಗೆಯುವಲ್ಲಿ, ಸಂಚಾರಿ ನಿಯಮ ಪಾಲಿಸುವಲ್ಲಿ ಕೈಜೋಡಿಸಿ-ಉದಯರವಿ:
ನಗರ ಸಂಚಾರಿ ಪೊಲೀಸ್ ಠಾಣಾ ಎಸ್.ಐ ಉದಯರವಿ ಮಾತನಾಡಿ, ಎಲ್ಲಿ ಮಾದಕ ವಸ್ತುಗಳ ಜಾಲ ಇದೆಯೋ ಅವುಗಳ ಬಗ್ಗೆ ಪೊಲೀಸ್ ಠಾಣೆಗೆ ತಿಳಿಸಿ ಅಥವಾ ಸರಕಾರದ ಆಪ್ ಮುಖೇನ ನಮೂದಿಸಿ ಸಮಾಜದಲ್ಲಿ ಮಾದಕ ವಸ್ತುವನ್ನು ಕಿತ್ತೊಗೆಯುವಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಕೈಜೋಡಿಸಿ. ತಿಳುವಳಿಕೆ ಕೊರತೆಯಿಂದಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಜೀವವನ್ನು ಕಳೆದುಕೊಂಡವರು ಹೆಚ್ಚು. ಆದ್ದರಿಂದ ರಸ್ತೆ ಸುರಕ್ಷತಾ ನಿಯಮವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿ ಜೀವ ಉಳಿಸಿಕೊಳ್ಳಿ ಎಂದರು.
ಸುಂದರ ಬದುಕಿನ ಜೀವನಶೈಲಿಗೆ ಪ್ರತಿಜ್ಞೆ ಮಾಡೋಣ-ಡಾ.ಶ್ರೀಪ್ರಕಾಶ್:
ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ ಮಾತನಾಡಿ, ಮನುಷ್ಯನ ಜೀವನ ಸುಂದರ ಎನಿಸಿಕೊಳ್ಳಬೇಕಾದರೆ ಬದುಕಿನ ಜೀವನಶೈಲಿಯಲ್ಲಿ ಬದಲಾವಣೆಯಾಗಬೇಕು. ಮಾದಕ ದ್ರವ್ಯದಿಂದ ದೂರವಿರಬೇಕು, ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವಂತಿರಬೇಕು. ಅದು ಇಂದಿನಿಂದಲೇ ಕಾರ್ಯಪ್ರವೃತ್ತರಾಗುವಂತಿರಬೇಕು ಎನ್ನುವ ಪ್ರತಿಜ್ಞೆ ನಮ್ಮದಾಗಲಿ ಎಂದರು.
ಶಾಲಾ-ಕಾಲೇಜುಗಳ ಬಳಿಯ ಅಂಗಡಿಗಳ ನಿಗಾ ವಹಿಸಿ-ಚಂದ್ರಪ್ರಭಾ ಗೌಡ:
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಪ್ರಭಾ ಗೌಡ ಮಾತನಾಡಿ, ಪ್ರಸ್ತುತ ವಿದ್ಯಾಮಾನದಲ್ಲಿ ಶಾಲಾ-ಕಾಲೇಜುಗಳ ಬಳಿ ಇರುವ ಅಂಗಡಿಗಳಲ್ಲಿ ಮಾದಕ ದ್ರವ್ಯದಿಂದ ಕೂಡಿದ ಚಾಕಲೇಟ್ಗಳು ಇರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಮಕ್ಕಳು ಸಣ್ಣ ಹರೆಯದಲ್ಲಿಯೇ ಇಂತಹ ಮಾದಕ ದ್ರವ್ಯಗಳಿಗೆ ದಾಸನಾದರೆ ಅದು ಆ ವ್ಯಕ್ತಿಯ ಬೆಳವಣಿಗೆಯಲ್ಲಿ ಮಾರಕವೆನಿಸಬಲ್ಲುದು. ಪೊಲೀಸರು ಶಾಲಾ-ಕಾಲೇಜುಗಳ ಬಳಿ ಇರುವ ಅಂಗಡಿಗಳಲ್ಲಿ ಮಾದಕ ದ್ರವ್ಯಗಳ ಬಳಕೆಯಾಗುತ್ತಿದೆಯೇ ಎಂದು ಪರಿಶೀಲಿಸಿ, ಕಂಡು ಹುಡುಕಿದರೆ ಅದು ವ್ಯಕ್ತಿ ಉತ್ತಮ ಪ್ರಜೆಗಳಾಗಿ ಬದುಕುವುದಕ್ಕೆ ಕಾರಣವಾದೀತು ಎಂದರು.
ಜೀವನ ಫಲಪ್ರದವಾಗಲಿ ಎಂಬುದೇ ಹಾರೈಕೆಯಾಗಿದೆ-ಕೃಷ್ಣಪ್ರಸಾದ್ ಆಳ್ವ:
ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಹಾಗೂ ಗಾಂಧಿಕಟ್ಟೆ ಸಮಿತಿ ಸಂಚಾಲಕ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಇಂದಿನ ಯುವ ಜನಾಂಗ ಮಾದಕ ದ್ರವ್ಯದಿಂದ ಮುಕ್ತರಾಗಿ ಮಾದಕ ದ್ರವ್ಯ ಪುತ್ತೂರು ಆಗಬೇಕು, ಜೊತೆಗೆ ಸಂಚಾರಿ ನಿಯಮಗಳನ್ನು ಪಾಲಿಸಿ ಪೊಲೀಸರೊಂದಿಗೆ ಕೈಜೋಡಿಸಿದಾಗ ಜೀವನ ಫಲಪ್ರದವಾಗುತ್ತದೆ ಎಂದರು.
ಹೆತ್ತ ತಾಯಿ, ತನ್ನ ಕುಟುಂಬ ಬಗ್ಗೆ ಅರಿತುಕೊಳ್ಳಿ-ಜುನೈದ್ ಪಿ.ಕೆ:
ಸಿಟಿ ಫ್ರೆಂಡ್ಸ್ ಆರ್ಟ್ಸ್&ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ಜುನೈದ್ ಪಿ.ಕೆ ಮಾತನಾಡಿ, ಓರ್ವ ತಾಯಿಯು ತನ್ನ ಮಗುವನ್ನು ಒಂಭತ್ತು ತಿಂಗಳು ತನ್ನ ಗರ್ಭದಲ್ಲಿ ಪೋಷಿಸಿ ಬಳಿಕ ಜನ್ಮವಿತ್ತು ಮಗುವನ್ನು ದೊಡ್ಡವನಾಗಿ ಮಾಡುವುದು ತುಂಬಾ ಕಷ್ಟಕರ. ಆದರೆ ಈ ಮಗು ಮುಂದೆ ಮಾದಕ ದ್ರವ್ಯಕ್ಕೆ ಬಲಿಯಾದಾಗ ಅಥವಾ ರಸ್ತೆ ಸಂಚಾರಿ ನಿಯಮ ಪಾಲಿಸದೆ ರಸ್ತೆ ದುರಂತದಲ್ಲಿ ಬಲಿಯಾದಾಗ ಆ ತಾಯಿ ಹಾಗೂ ಆ ಕುಟುಂಬ ಎಷ್ಟು ಪಶ್ಚತ್ತಾಪ ಪಡುತ್ತಾರೆ ಎಂಬುದನ್ನು ಯುವಸಮುದಾಯ ಅರಿತುಕೊಳ್ಳಬೇಕು ಎಂದರು.
ಸಂಚಾರಿ ನಿಯಮಗಳನ್ನು ಪಾಲಿಸುತ್ತೇನೆ ಪ್ರತಿಜ್ಞೆ-ರಫೀಕ್ ಎಂ.ಜಿ:
ದರ್ಬೆ ನಯಾ ಚಪ್ಪಲ್ ಬಜಾರ್ ಮಾಲಕ ರಫೀಕ್ ಎಂ.ಜಿ ಮಾತನಾಡಿ, ಪ್ರತಿಯೊಬ್ಬ ವಾಹನ ಚಾಲಕ ಸೀಟ್ ಬೆಲ್ಟ್ ಹಾಕಿಕೊಳ್ಳೋದು, ಒನ್ವೇನಲ್ಲಿ ವಾಹನ ಚಲಾಯಿಸದಂತೆ ನೋಡಿಕೊಳ್ಳೋದು, ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡ್ ಮಾಡದಿರುವುದು, ಹೆಲ್ಮೆಟ್ ಧರಿಸುವುದು ಎಂಬ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತೇನೆ ಎಂಬುದು ಈ ಕ್ಷಣ ನಾವು ಪ್ರತಿಜ್ಞೆ ಮಾಡೋಣ ಎಂದರು.
ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಝಾದ್, ಮಾಯಿದೆ ದೇವುಸ್ ಚರ್ಚ್ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ಸಿಟಿ ಫ್ರೆಂಡ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಮೋಹನ್ದಾಸ್ ರೈ, ಪ್ರಧಾನ ಕಾರ್ಯದರ್ಶಿ ಅಶೋಕ್ ರಾವ್ ಬಪ್ಪಳಿಗೆ, ಸದಸ್ಯ ಮೋನು ಬಪ್ಪಳಿಗೆ, ಸಲೀಂ ಬರೆಪ್ಪಾಡಿ, ನಗರಸಭೆ ನಾಮನಿರ್ದೇಶಿತ ಸದಸ್ಯ ಷೆರೀಪ್ ಬಲ್ನಾಡು, ಯುಇಎ ಗೌರವಾಧ್ಯಕ್ಷ ಅಮ್ಜದ್ ಖಾನ್ ಪೋಳ್ಯ, ಅಬ್ದುಲ್ ರಹಮಾನ್ ಹಾಜಿ ಅರಮನೆ ಕೆಮ್ಮಾಯಿ, ಯುಇಎ ರಾಜ್ಯ ಸಮಿತಿಯ ಸಿರಾಜ್ ಪರ್ಲಡ್ಕ, ಅಮರ್ ಅಕ್ಬರ್ ಅಂತೋನಿ ಕ್ರಿಕೆಟ್ ಸಂಘಟಕ ಹಾಗೂ ತಾಲೂಕು ರಾಜ್ಯ ಪ್ರಶಸ್ತಿ ಪುರಸ್ಕೃತ ರಝಾಕ್ ಬಿ.ಎಚ್, ಎಎಸ್ಐ ಚಿದಂಬರ ಪುತ್ತೂರು ಸಹಿತ ಹಲವರು ಉಪಸ್ಥಿತರಿದ್ದರು. ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.
ಗಾಂಧಿ ಪ್ರತಿಮೆಗೆ ಹಾರಾರ್ಪಣೆ/ಸನ್ಮಾನ..
ಕಾರ್ಯಕ್ರಮದ ಮೊದಲಿಗೆ ನಿವೃತ್ತ ಸೈನಿಕ ಪ್ರಸ್ತುತ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹರೀಶ್ ಯು.ರವರು ಗಾಂಧಿಕಟ್ಟೆಯಲ್ಲಿನ ಗಾಂಧಿ ಪ್ರತಿಮೆಗೆ ಹಾರಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ಬಳಿಕ ಅತಿಥಿಗಳು ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಹರೀಶ್ ಯು.ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಧ್ವಜ ನಡಿಗೆ/ಪಾರಿವಾಳ ಹಾರಿಸುವಿಕೆ..
ಕಾರ್ಯಕ್ರಮದ ಆರಂಭದಲ್ಲಿ ಅತಿಥಿ ಗಣ್ಯರು ಹಾಗೂ ಸಾರ್ವಜನಿಕರು ಮಾಯಿದೆ ದೇವುಸ್ ಚರ್ಚ್ ವಠಾರದಿಂದ ಗಾಂಧಿ ಕಟ್ಟೆಯ ತನಕ ಬ್ಯಾಂಡ್ ವಾದ್ಯದೊಂದಿಗೆ ಧ್ವಜ ಹಿಡಿದು ಧ್ವಜ ನಡಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿನ ಅತಿಥಿ ಗಣ್ಯರು ಶಾಂತಿಯ ಧ್ಯೋತಕವಾಗಿರುವ ಪಾರಿವಾಳಗಳನ್ನು ಆಗಸಕ್ಕೆ ಹಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಲಾಯಿತು.
ಹೆಲ್ಮೆಟ್ ತೊಡಿಸುವಿಕೆ/ಖಾಕಿ ಡ್ರೆಸ್ ವಿತರಣೆ..
ಕಾರ್ಯಕ್ರಮದಲ್ಲಿ ಐಎಸ್ಐ ಮಾರ್ಕಿನ ಸುಮಾರು 30 ಹೆಲ್ಮೆಟ್ಗಳನ್ನು ದ್ವಿಚಕ್ರ ವಾಹನ ಸವಾರರಿಗೆ ತೊಡಿಸಲಾಯಿತು ಅಲ್ಲದೆ ಸುಮಾರು 30 ಮಂದಿ ರಿಕ್ಷಾ ಚಾಲಕರಿಗೆ ಖಾಕಿ ಸಮವಸ್ತ್ರವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಜೊತೆಗೆ ಎಸ್ಐ ಗಳಾದ ಆಂಜನೇಯ ರೆಡ್ಡಿ ಹಾಗೂ ಉದಯರವಿರವರು ವಾಹನ ಸವಾರರಿಗೆ, ರಿಕ್ಷಾ ಚಾಲಕರಿಗೆ ರಸ್ತೆ ನಿಯಮಗಳ ಬಗ್ಗೆ ಸವಿವರವಾಗಿ ತಿಳಿಸಿದರು.