ಪಡುಮಲೆಯಲ್ಲಿ ಕಂಗೊಳಿಸುತ್ತಿದೆ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇಗುಲ
ಅಂತಿಮ ಹಂತದಲ್ಲಿ ದೇವಾಲಯದ ಜೀರ್ಣೋದ್ಧಾರ ಕಾರ್ಯ
6 ಕೋಟಿ ರೂ.ವೆಚ್ಚದಲ್ಲಿ ಭವ್ಯ ದೇಗುಲ ನಿರ್ಮಾಣ
ಫೆ.25 ರಿಂದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಭ್ರಮ

0

ಶಬರಿಮಲೆ, ತಿರುಮಲೆಯಂತೆ ಪವಿತ್ರತೆಯನ್ನು ಹೊಂದಿರುವ ಮತ್ತೊಂದು ಕ್ಷೇತ್ರವೆಂದರೆ ಅದು ಪಡುಮಲೆ. ದೈವಿಸಂಭೂತ, ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಜನ್ಮಸ್ಥಳವಾಗಿರುವ ಪಡುಮಲೆ ಹತ್ತು ಹಲವು ಕಾರಣಿಕತೆ, ವಿಶೇಷತೆಗಳು ಮೂಲಕ ಹತ್ತೂರ ಭಕ್ತರ ಗಮನ ಸೆಳೆದ ಊರಾಗಿದೆ. ಕೋಟಿ ಚೆನ್ನಯರ ಜನ್ಮ ಭೂಮಿಯ ಅಭಿವೃದ್ಧಿಯೊಂದಿಗೆ ಪಡುಮಲೆಯ ಅತ್ಯಂತ ಕಾರಣಿಕತೆಯ ದೇವಸ್ಥಾನವಾಗಿರುವ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವರ ದೇಗುಲವು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗುತ್ತಿದೆ. ಹೌದು…ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಡುಮಲೆಯಲ್ಲಿರುವ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಸಾಂಸ್ಕೃತಿಕ, ಪಾರಂಪರಿಕ ಮತ್ತು ಧಾರ್ಮಿಕ ನೆಲೆಕಟ್ಟಿನಲ್ಲಿ ನಡೆದಿದ್ದು, ಕ್ಷೇತ್ರ ವಿಶೇಷ ಆಕರ್ಷಣೀಯ ರೂಪ ಪಡೆದುಕೊಂಡಿದೆ. ಜೀರ್ಣೋದ್ಧಾರ ಕಾರ್ಯಗಳು ಅಂತಿಮ ಹಂತದಲ್ಲಿದ್ದು, ಫೆ.25ರಿಂದ ಆರಂಭಗೊಳ್ಳುವ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಸುಮಾರು ರೂ.6ಕೋಟಿ ವೆಚ್ಚದಲ್ಲಿ ಭವ್ಯವಾದ ದೇಗುಲ ನಿರ್ಮಾಣಗೊಂಡಿದ್ದು, ವಿಷ್ಣುಮೂರ್ತಿ ದೇವರ ಕ್ಷೇತ್ರ ಭವ್ಯವಾಗಿ ರೂಪುಗೊಂಡಿದೆ. ಈ ಹಿಂದೆ ಇದ್ದ ಹಳೆಯ ದೇವಸ್ಥಾನವನ್ನು ಸಂಪೂರ್ಣವಾಗಿ ಕೆಡವಿ, ನೆಲ ಸಮತಟ್ಟುಗೊಳಿಸಿ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯ ಮಾಡಲಾಗಿದೆ. ಶ್ರೀ ದೇವರ ಗರ್ಭಗುಡಿ, ನಮಸ್ಕಾರ (ತೀರ್ಥ) ಮಂಟಪ,ಒಳಾಂಗಣದ ಸುತ್ತುಗೋಪುರಗಳು,ಗಣಪತಿ ಗುಡಿ,ರಾಜಗೋಪುರ,ಶಾಸ್ತಾರ ಗುಡಿ,ಬೆಡಿಕಟ್ಟೆ,ಗುಳಿಗನ ಕಟ್ಟೆ, ನಾಗನಕಟ್ಟೆ ನಿರ್ಮಾಣ ಕಾರ್ಯಗಳು ಸೇರಿದಂತೆ ಶ್ರೀ ದೇವರ ಸನ್ನಿಧಿ ಸಂಪೂರ್ಣ ಬದಲಾಗಿದೆ.

ಕಗ್ಗಲ್ಲು, ಕೆಂಪು ಪಾಲಿಶು ಕಲ್ಲುಗಳಿಂದ ಕಾಷ್ಠಶಿಲ್ಪ ಕೆತ್ತನೆಗಳಿರುವ, ದಳಿ ಮತ್ತು ಸಾಗುವಾನಿ ಮರದ ಮಾಡಿಗೆ ತಾಮ್ರದ ಹೊದಿಕೆಯಿರುವ ಆಕರ್ಷಣೀಯ ಶೈಲಿಯ ಗರ್ಭಗುಡಿ, ಸಾಗುವಾನಿ ಮರದ ಸುಂದರ ಕಾಷ್ಠ ಕೆತ್ತನೆಗಳುಳ್ಳ ಹಾಗೂ ತಾಮ್ರ ಹೊದಿಕೆಯ ತೀರ್ಥ ಮಂಟಪ, ಸುತ್ತು ಪೌಳಿಯಲ್ಲಿ ಮಹಾಗಣಪತಿ ಗುಡಿ ನಿರ್ಮಾಣಗೊಂಡಿದೆ. ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಕೆತ್ತನೆ ಕೆಲಸಗಳು ನಡೆದಿದೆ. ವಿಶೇಷವಾಗಿ ನವಗ್ರಹ, ವಿಷ್ಣುವಿನ ದಶಾವತಾರ ಹಾಗೂ ರಾಶಿಗಳನ್ನು ಸುಂದರವಾಗಿ ಕೆತ್ತಲಾಗಿದೆ. ರಾಜಾಂಗಣದಲ್ಲಿ ಶಾಸ್ತಾರ ಗುಡಿಯನ್ನು ಭವ್ಯವಾಗಿ ನಿರ್ಮಿಸಲಾಗಿದೆ. ಆಕರ್ಷಣೀಯವಾದ ರಾಜಗೋಪುರ ನಿರ್ಮಾಣ ಕಾರ್ಯ ನಡೆದಿದೆ.
ಸುಮಾರು ರೂ.2.5 ಕೋಟಿಗೂ ಅಧಿಕ ಮೌಲ್ಯದ ಮರಗಳನ್ನು ಬಳಸಿಕೊಂಡು, ಸುಂದರ ಕೆತ್ತನೆಯೊಂದಿಗೆ ಕ್ಷೇತ್ರಕ್ಕೆ ಭವ್ಯತೆಯ ಸ್ಪರ್ಶ ನೀಡಲಾಗಿದೆ. ನಾಗದೇವರು ಮತ್ತು ನಾಗ ಯಕ್ಷಿಯ ನಾಗನ ಕಟ್ಟೆ ನಿರ್ಮಾಣವೂ ಆಗಿದೆ.ಎದುರು ಭಾಗದಲ್ಲಿರುವ ಎರಡು ಹಂತಸ್ತಿನ ರಾಜಗೋಪುರ, ಸುತ್ತುಪೌಳಿಗೆ ಪಾರಂಪರಿಕ ರೂಪು ನೀಡಲಾಗಿದ್ದು, ಸುಂದರವಾಗಿ ಕಂಗೊಳಿಸುತ್ತಿದೆ.

ಒಳಾಂಗಣ ಮತ್ತು ಗೋಪುರದ ನೆಲಕ್ಕೆ ಗ್ರಾನೈಟ್ ಹಾಸಲಾಗಿದೆ. ದೇವಸ್ಥಾನದ ಈಶಾನ್ಯ ದಿಕ್ಕಿನಲ್ಲಿರುವ ತೀರ್ಥ ಬಾವಿಗೆ ಗ್ರಾನೈಟ್ ಅಳವಡಿಸಿ ಹೊಸ ರೂಪ ನೀಡಲಾಗಿದೆ. ಹೊರಾಂಗಣದ ನೈರುತ್ಯ ದಿಕ್ಕಿನಲ್ಲಿ ವಸಂತ ಮಂಟಪ ನಿರ್ಮಿಸಲಾಗಿದೆ. ದಕ್ಷಿಣ ಭಾಗದಲ್ಲಿ ಕಚೇರಿ ಕೊಠಡಿ, ಉತ್ತರದಲ್ಲಿ ಉಗ್ರಾಣ ಕೊಠಡಿ ಅಲ್ಲದೆ ನೈವೇದ್ಯ ಕೊಠಡಿ,ತಂತ್ರಿಗಳ ಕೊಠಡಿ, ಲಾಕರ್ ವ್ಯವಸ್ಥೆಯನ್ನೊಳಗೊಂಡ ಭದ್ರತಾ ಕೊಠಡಿ ನಿರ್ಮಾಣ ಕಾರ್ಯ ನಡೆದಿದೆ. ಶೀಟ್ ಅಳವಡಿಸಿದ ಸಭಾಂಗಣ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ.

ಮೂಲಸ್ಥಾನದ ಅಭಿವೃದ್ಧಿ
ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪಶ್ಚಿಮ ಭಾಗದಲ್ಲಿ 1ಕಿಮೀ ದೂರದಲ್ಲಿರುವ ಕೋಟಿ-ಚೆನ್ನಯರ ತಾಯಿ ಸುವರ್ಣ ಕೇದಗೆ, ಮಾತೆ ರಾಜರಾಜೇಶ್ವರಿಯು ಮೊಟ್ಟೆಯ ರೂಪತಾಳಿ ವಿಪ್ರರಿಗೆ ಸಿಕ್ಕಿದ ಪವಿತ್ರ ಸ್ಥಳವೆಂಬ ಐತಿಹಾಸಿಕ ಹಿನ್ನಲೆಯಿರುವ ಒಂದು ಎಕ್ರೆಯಷ್ಟು ವಿಶಾಲದ ಪವಿತ್ರ ಮದಕವೇ (ಜಲಾಶಯ) ಈ ಕ್ಷೇತ್ರದ ಮೂಲಸ್ಥಾನವಾಗಿದ್ದು, ಮದಕದ ದಡದಲ್ಲಿ ಶಿಲಾಮಯವಾದ ರಾಜರಾಜೇಶ್ವರಿಯ ಗುಡಿ ಭವ್ಯವಾಗಿ ನಿರ್ಮಾಣಗೊಂಡಿದೆ. ಅಲ್ಲಿ ಸುಂದರವಾದ ಬಾವಿ ನಿರ್ಮಾಣ ಮತ್ತು ಜ್ಞಾನ ಮಂದಿರ ನಿರ್ಮಾಣ ಕಾರ್ಯ ನಡೆದಿದೆ.

ಪುನರ್‌ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ
ಶ್ರೀ ಮಹಾವಿಷ್ಣು ದೇವರು ಕೂರ್ಮಾವತಾರ ಎತ್ತಿದ ಪುಣ್ಯಭೂಮಿ, ಅಂಬರಗಾಮಿಗಳಾಗಿದ್ದ ಕಾರಣಿಕ ಶಕ್ತಿಗಳಾದ ಪೂಮಾಣಿ-ಕಿನ್ನಿಮಾಣಿ ದೈವಗಳು ಭೂಸ್ಪರ್ಶ ಮಾಡಿ ಮೊದಲ ಆರಾಧನೆ ಪಡೆದ ಪುಣ್ಯ ನೆಲ ಮತ್ತು ಕಾರಣಿಕ ಪುರುಷರಾದ ಕೋಟಿ-ಚೆನ್ನಯರ ಜನ್ಮಭೂಮಿ ಎಂಬ ಮೂರು ಕಾರಣಗಳಿಂದ ವಿಶೇಷತೆ ಮತ್ತು ಪ್ರಸಿದ್ಧಿ ಪಡೆದಿರುವ ಈ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯವನ್ನು ಕಳೆದ ವರ್ಷದ ಜನವರಿ ತಿಂಗಳಲ್ಲಿ ಆರಂಭಿಸಲಾಗಿತ್ತು. ಇದೀಗ ಜೀರ್ಣೋದ್ಧಾರ ಕಾರ್ಯ ಅಂತಿಮ ಹಂತದಲ್ಲಿದ್ದು, ಫೆ.25ರಿಂದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯುವುದು ಎಂದು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು ಅವರು ತಿಳಿಸಿದ್ದಾರೆ.

ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳ ಕುರಿತು ಗುರುವಾರ ಕ್ಷೇತ್ರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅವರು, ಕ್ಷೇತ್ರ ನಿರ್ಮಾಣಕ್ಕೆ ಬೇಕಾದ ಸುಮಾರು 2.5೦ ಕೋಟಿ ಮೌಲ್ಯದ ಬೆಳೆಬಾಳುವ ಮರಗಳನ್ನು ಊರಿನ ಮಂದಿಯೇ ದಾನವಾಗಿ ನೀಡಿದ್ದಾರೆ. ಎಲ್ಲಾ ಗುಡಿಗಳ ಮತ್ತು ನಿರ್ಮಾಣಗಳ ಕಾರ್ಯಕ್ಕೆ ದೇಣಿಗೆ ನೀಡಿದ್ದಾರೆ. ಕರಸೇವೆಯ ಮೂಲಕ ಸಹಕರಿಸಿದ್ದಾರೆ. ಊರ ಮಂದಿಯ ಸಂಪೂರ್ಣ ಸಹಕಾರದಿಂದ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆದಿದೆ. ದೇವಸ್ಥಾನದ ಒಳಾಂಗಣ ಮತ್ತು ಹೊರಾಂಗಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದರು.

ಶಾಸ್ತಾರ ದೇವರ ಹೊಸಬಿಂಬ,ನಾಗ ಬಿಂಬಗಳು, ರಾಜರಾಜೇಶ್ವರಿಯ ದರ್ಪನ ಬಿಂಬಗಳನ್ನು ಜಲಾಧಿವಾಸದಲ್ಲಿಡಲಾಗಿದ್ದು, ಮಾ.2ರಂದು ಪ್ರತಿಷ್ಠಾ ಕಾರ್ಯಗಳು ನಡೆಯಲಿದೆ. ಸುಮಾರು ರೂ.6 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆದಿದೆ. ಬ್ರಹ್ಮಕಲಶೋತ್ಸವಕ್ಕೆ ರೂ.1 ಕೋಟಿಯಷ್ಟು ಖರ್ಚಾಗಲಿದೆ. ಬ್ರಹ್ಮಕಲಶೋತ್ಸವಕ್ಕೆ ಸಭಾಂಗಣ, ಸಭಾ ವೇದಿಕೆ, ಅನ್ನಸಂತರ್ಪಣೆ ವ್ಯವಸ್ಥೆ, ವಾಹನ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಮಾಡುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ. ಬ್ರಹ್ಮಕಲಶೋತ್ಸವದಲ್ಲಿ 1ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here