ಪುತ್ತೂರು:ಸುಗಮ ಸಂಗೀತ ಉಳಿಸಿ ಬೆಳೆಸಲು ಹುಟ್ಟಿಕೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಸುಗಮ ಸಂಗೀತ ಶಿಕ್ಷಣದ ಧಾರೆ ಎರೆದ ಪುತ್ತೂರಿನ ಡಾ| ಕಿರಣ್ ಕುಮಾರ್ ಗಾನಸಿರಿ ಸಾರಥ್ಯದ ‘ಗಾನಸಿರಿ ಕಲಾ ಕೇಂದ್ರ’ದ 21ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ನಡೆಯುವ ಸುಗಮ ಸಂಗೀತೋತ್ಸವದ ಅಂಗವಾಗಿ ವಿನೂತನ ಶೈಲಿಯ ಮ್ಯೂಸಿಕಲ್ ರಿಯಾಲಿಟಿ ಶೋ ಗಾನಸಿರಿ ಹಾಡು ಬಾ ಕೋಗಿಲೆ ಕಾರ್ಯಕ್ರಮವು ಫೆ.19ರಂದು ಪರ್ಲಡ್ಕ ಡಾ.ಕೆ ಶಿವರಾಮ ಕಾರಂತ ಬಾಲವನದ ಬಯಲು ರಂಗ ಮಂದಿರದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಯಮಿ ಅಶ್ವಿನಿ ಹೊಟೇಲ್‌ನ ಮ್ಹಾಲಕ ಕರುಣಾಕರ ರೈ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗಾನಸಿರಿ ಕಲಾ ಕೇಂದ್ರದಕ್ಕೆ ಬಹಳಷ್ಟು ಹೆಮ್ಮೆಯಿದೆ. ಸಂಸ್ಥೆಯಲ್ಲಿ ಸಂಗೀತದ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯಾಗಿದೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟಕ್ಕೆ ಬೆಳೆಯುವ ಅವಕಾಶವನ್ನು ಗಾನಸಿರಿ ನೀಡುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಗಿದ್ದ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಕಿರಣ್ ಕುಮಾರ್‌ರವರ ಗಾನಸಿರಿಯ 20 ವರ್ಷದ ಸಂಗೀತ ಕ್ಷೇತ್ರದ ಪಯಣದಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಮಿಂಚುತ್ತಿದ್ದು ಇನ್ನು ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಾಗಲಿ ಎಂದು ಹಾರೈಸಿದರು.
ಕೀಬೋರ್ಡ್ ವಾದಕ ಡಾ.ದಿನೇಶ್ ರಾವ್, ರಿದಂ ವಾದಕ ಸುಹಾಸ್ ಹೆಬ್ಬಾರ್, ತಬಲ ವಾದಕ ಸುದರ್ಶನ್ ಆಚಾರ್ಯ, ಸಂಸ್ಥೆಯ ಶಿಕ್ಷಕಿ ಶ್ರೀಲಕ್ಷ್ಮೀ ಉಪಸ್ಥಿತರಿದ್ದರು. ಗಾನಸಿರಿ ಕಲಾ ಕೇಂದ್ರದ ಅಧ್ಯಕ್ಷ ಡಾ.ಕಿರಣ್ ಕುಮಾರ್ ಸ್ವಾಗತಿಸಿ, ವಂದಿಸಿದರು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿವಿಧ ಶಾಖೆಗಳಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳ ಒಟ್ಟು 10 ತಂಡಗಳಲ್ಲಿ ವಿದ್ಯಾರ್ಥಿಗಳು ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು. ಪ್ರತಿ ತಂಡಕ್ಕೆ 55 ನಿಮಿಷಗಳ ಕಾಲಾವಕಾಶದ ಸ್ಪರ್ಧೆ ನಡೆಸಲಾಗಿತ್ತು. ಸ್ಪರ್ಧೆಯ ಮೂಲಕ ವಿದ್ಯಾರ್ಥಿಗಳನ್ನು ಸರ್ವ ರೀತಿಯಲ್ಲಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ನಿರೂಪನೆ, ಭಜನೆ, ದೇಶಭಕ್ತಿ ಗೀತೆ, ಸಮೂಹ ಗೀತೆ, ಜಾನಪದ ಗೀತೆ, ವೈಯಕ್ತಿಕ ಗೀತೆ, ಕಾಮಿಡಿ ಶೋ, ಆರ್ಕಸ್ಟ್ರಾ ಮಾದರಿ ಸಂಗಿತ ವೈವಿದ್ಯ ಪ್ರಸ್ತುತ ಪಡಿಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಬೆಳಿಗ್ಗೆ 5 ಹಾಗೂ ಅಪರಾಹ್ನ 5 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಫೈನಲ್‌ಗೆ ಆಯ್ಕೆಯಾದ ನಾಲ್ಕು ತಂಡಗಳಿಗೆ ಚುಟುಕು ಸ್ಪರ್ಧೆ ಏರ್ಪಡಿಸಿ ಪ್ರತಿ ತಂಡಕ್ಕೆ 10 ನಿಮಿಷದ ಐಚ್ಚಿಕ ಗೀತೆಗಳನ್ನು ಹಾಡುವ ಅವಕಾಶ ನೀಡಲಾಗಿತ್ತು. ವಿದ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.