ಇಬ್ಬರು ಬಲಿಯಾದ ಪ್ರಕರಣ: ಕಾಡಾನೆ ಸೆರೆಗೆ ಕಾರ್ಯಾಚರಣೆ ಪ್ರಾರಂಭ-ದುಬಾರೆಯಿಂದ ಬಂದ ತಂಡ

0

ಕಡಬ: ಮರ್ದಾಳ ಸಮೀಪದ ನೈಲ ಎಂಬಲ್ಲಿ ಫೆ.20ರಂದು ಕಾಡಾನೆ ದಾಳಿಗೆ ಇಬ್ಬರು ಬಲಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಪ್ರಾರಂಭಿಸಿದೆ. ಸೋಮವಾರ ರಾತ್ರಿಯೇ ಬೃಹತ್ ಲಾರಿಗಳ ಮೂಲಕ ಮೈಸೂರು ಹಾಗೂ ದುಬಾರೆಯಿಂದ ಐದು ಆನೆಗಳು ಆಗಮಿಸಿದ್ದು ನುರಿತ ತಂಡದವರ ಉಪಸ್ಥಿತಿಯಲ್ಲಿ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಫೆ.21ರಂದು ಬೆಳಗ್ಗಿನಿಂದಲೇ ಕಾರ್ಯಾಚರಣೆ ಆರಂಭಗೊಂಡಿದೆ.

ಅರಣ್ಯ ಇಲಾಖೆಯು ಕಾಡಾನೆಯ ಚಲನವಲನ ಪತ್ತೆ ಹಚ್ಚಲು ಡ್ರೋನ್ ಬಳಸಿ ಮಾಹಿತಿ ಕಲೆ ಹಾಕಿತ್ತು. ಪೂರ್ವ ಸಿದ್ಧತೆಯೊಂದಿಗೆ ಕಾಡಾನೆಯನ್ನು ಪತ್ತೆ ಹಚ್ಚಿ ಹಿಡಿದು ಬೇರೆಡೆ ಸ್ಥಳಾಂತರ ಮಾಡಲು ಅರಣ್ಯ ಇಲಾಖಾಧಿಕಾರಿಗಳು ಯೋಜನೆ ರೂಪಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಕಡಬ ಸಮೀಪದ ಮರ್ಧಾಳ ನೈಲ ಎಂಬಲ್ಲಿ ಕಾಡಾನೆಯು ಇಬ್ಬರನ್ನು ತಿವಿದು ಕೊಂದು ಹಾಕಿತ್ತು. ಆಕ್ರೋಶಗೊಂಡ ಸ್ಥಳೀಯರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಡಾನೆಯನ್ನು ಸ್ಥಳಾಂತರಗೊಳಿಸದೆ ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಇದಕ್ಕೆ ಮಣಿದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಯನ್ನು ಸ್ಥಳಾಂತರಿಸುವ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಮೃತದೇಹವನ್ನು ವಾರಸುದಾರರಿಗೆ ನೀಡಲಾಗಿತ್ತು. ಸೋಮವಾರ ರಾತ್ರಿ ವೇಳೆಗೆ ಮೈಸೂರು ಹಾಗೂ ದುಬಾರೆಯಿಂದ ಆನೆಗಳು ಆಗಮಿಸಿದ್ದು ಮಂಗಳವಾರ ಬೆಳಗ್ಗಿನಿಂದ ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಗೊಂಡಿದೆ.

LEAVE A REPLY

Please enter your comment!
Please enter your name here