ಅಡಿಷನಲ್‌ ಅಡ್ವೋಕೇಟ್ ಜನರಲ್ ಡಾ.‌ ಅರುಣ್ ಶ್ಯಾಮ್ ಅವರಿಗೆ ‘ಪ್ರವೀರಮಾನ್ಯ’ ಪ್ರಶಸ್ತಿ

0

ಪುತ್ತೂರು: ಕರ್ನಾಟಕ ಸರಕಾರದ ಅಡಿಷನಲ್ ಅಡ್ವೋಕೇಟ್ ಜನರಲ್ ಡಾ. ಅರುಣ್ ಶ್ಯಾಮ್ ಅವರಿಗೆ ತೀರ್ಥಹಳ್ಳಿಯ ಶ್ರೀ ಭೀಮನಕಟ್ಟೆ ಮಠದ ವತಿಯಿಂದ ‘ಪ್ರವೀರಮಾನ್ಯ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ಹೊಂದಿರುವ ಉನ್ನತ ಸ್ಥಾನದೊಂದಿಗೆ ಹಿಂದೂ ಧರ್ಮದ ರಕ್ಷಣೆಗೆ ವಿಶೇಷ ಶ್ರಮ ವಹಿಸುತ್ತಿರುವ ಡಾ.‌ಅರುಣ್ ಶ್ಯಾಮ್ ಅವರಿಗೆ ಶ್ರೀ ಭೀಮನಕಟ್ಟೆಯ ಶ್ರೀರಘುವರೇಂದ್ರ ತೀರ್ಥಶ್ರೀಪಾದರು ಮತ್ತು ಮಂತ್ರಾಲಯ ರಾಯರ ಮಠದ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದಂಗಳರವರ ಉಪಸ್ಥಿತಿಯಲ್ಲಿ ‘ಪ್ರವೀರಮಾನ್ಯ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಇತ್ತೀಚೆಗೆ ಬೆಂಗಳೂರಿನ ಅಲಯನ್ಸ್ ಯೂನಿವರ್ಸಿಟಿಯ ವಾರ್ಷಿಕ ಘಟಿಕೋತ್ಸವದಲ್ಲಿ ಹಿರಿಯ ವಕೀಲರಾದ ಕರ್ನಾಟಕ ಸರಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅರುಣ್ ಶ್ಯಾಮ್ ಎಂ.ರವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿತ್ತು.

ಕಾನೂನಿನ ವಿಷಯದಲ್ಲಿ ಅಧ್ಯಯನ ಮಾಡಿ ಸಲ್ಲಿಸಿದ್ದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿ ಅರುಣ್‌ಶ್ಯಾಮ್‌ರವರನ್ನು ಪುರಸ್ಕರಿಸಲಾಗಿತ್ತು.

ಮೂಲತ: ಕೊಳ್ನಾಡು ಗ್ರಾಮದ ಪಂಜಿಗದ್ದೆ ನಿವಾಸಿ ಆಗಿರುವ ಅರುಣ್ ಶ್ಯಾಮ್ ಅವರು 2006ರಲ್ಲಿ ಪುತ್ತೂರಿನ ಈಶ್ವರಮಂಗಲ ನಿವಾಸಿಯಾಗಿದ್ದು ಪ್ರಸ್ತುತ ಕೇಂದ್ರ ಸರಕಾರದ ಸಾಲಿಸಿಟರ್ ಜನರಲ್ ಆಗಿರುವ ಹಿರಿಯ ವಕೀಲ ಕೆ.ಎಂ. ನಟರಾಜ್ ಅವರ ಜೊತೆ ಬೆಂಗಳೂರು ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಆರಂಭಿಸಿದ್ದರು. ಮುಂದೆ ಸ್ವಂತ ಕಚೇರಿ ಆರಂಭಿಸಿ ವಕೀಲಿ ವೃತ್ತಿ ಮುಂದುವರಿಸಿದ್ದರು. ವಿಟ್ಲ ಮಾದಕಟ್ಟೆ ಹಿ.ಪ್ರಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ, ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡ ಅರುಣ್‌ಶ್ಯಾಮ್ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಬಳಿಕ ಶಿವಮೊಗ್ಗದ ನ್ಯಾಷನಲ್ ಲಾ ಕಾಲೇಜಿನಲ್ಲಿ ಎಲ್‌ಎಲ್‌ಎಂ ಪದವಿ ಪಡೆದರು. ಇದರ ಜೊತೆಗೆ ಶಿವಮೊಗ್ಗದಲ್ಲಿ ಎಂ.ಆರ್. ಸತ್ಯನಾರಾಯಣ ಅವರ ಜೊತೆ ವಕೀಲಿ ವೃತ್ತಿ ಮಾಡಿದ್ದರು.

ಬಳಿಕ 2006ರಲ್ಲಿ ಬೆಂಗಳೂರಿನತ್ತ ಚಿತ್ತ ಹರಿಸಿದರು. ಬೆಂಗಳೂರಿನ ಅಲಯನ್ಸ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಅರುಣ್‌ಶ್ಯಾಮ್ ಅವರು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಎಂ. ಈಶ್ವರ ಭಟ್ ಮತ್ತು ಕುಸುಮ ಈಶ್ವರ ಭಟ್‌ರವರ ಪುತ್ರರಾದ ಅರುಣ್‌ಶ್ಯಾಮ್ ಪ್ರಸ್ತುತ ಪತ್ನಿ ಸುಷ್ಮಾ ಅರುಣ್ ಶ್ಯಾಮ್, ಮಕ್ಕಳಾದ ಆದ್ಯಶ್ರೀ, ಅಮೃತಶ್ರೀ ಹಾಗೂ ಅದ್ವಿತಾಶ್ರೀ ಯವರೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದಾರೆ.

LEAVE A REPLY

Please enter your comment!
Please enter your name here