ಶೇ.30ರಷ್ಟು ವೇತನ ಹೆಚ್ಚಳಕ್ಕೆ ಸ.ನೌ ಸಂಘದ ಪಟ್ಟು – ಹಣಕಾಸು ಇಲಾಖಾಧಿಕಾರಿಗಳೊಂದಿಗೆ ಸಭೆ- ಕೆಲವೇ ಕ್ಷಣದಲ್ಲಿ ನಿರ್ಧಾರ ಪ್ರಕಟ ಸಾಧ್ಯತೆ

0

ಬೆಂಗಳೂರು:7 ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಸರಕಾರಿ ನೌಕರರ ಸಂಘ ನೀಡಿರುವ ಕರೆಯಂತೆ ರಾಜ್ಯಾದ್ಯಂತ ಸರಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದ್ದು ರಾಜ್ಯಾದ್ಯಂತ ಸರಕಾರಿ ಕಚೇರಿಯ ಸೇವೆಯಲ್ಲಿ ವ್ಯತ್ಯಯವಾಗಿದ್ದು ಸಾರ್ವಜನಿಕರು ಸರಕಾರಿ ಬಂದ್‌ನಿಂದ ಕಷ್ಟ ನಷ್ಟ ಅನುಭವಿಸುವಂತಾಗಿದೆ. 2022 ಜು.1ರಿಂದ ಜಾರಿಗೆ ಬರುವಂತೆ ಶೇ.40 ರಷ್ಟು ವೇತನ ಹೆಚ್ಚಳ ಮತ್ತು ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂಬುದು ಸರಕಾರಿ ನೌಕರರ ಬೇಡಿಕೆ ಆಗಿದೆ. ಕಳೆದ ರಾತ್ರಿ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸರಕಾರಿ ನೌಕರರ ಸಂಘದ ಪದಾದಿಕಾರಿಗಳೊಂದಿಗೆ ನಡೆಸಿದ ಸಂಧಾನ ಸಭೆ ವಿಫಲವಾಗಿದ್ದು ಇಂದು (ಮಾ.1) ಮುಷ್ಕರ ಆರಂಭಗೊಳ್ಳುತ್ತಿದ್ದಂತೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ 17ಶೇ ವೇತನ ಹೆಚ್ಚಿಸುವ ಬಗ್ಗೆ ತಕ್ಷಣ ಆದೇಶ ನೀಡುವುದಾಗಿ ತಿಳಿಸಿದ್ದಾರೆ. ನುಡಿದಂತೆ ನಡೆದ ಮುಖ್ಯಮಂತ್ರಿ ಎ.1ರಿಂದ ಜಾರಿಗೆ ಬರುವಂತೆ ಶೇ.17ರಷ್ಟು ವೇತನ ಪರಿಷ್ಕರಣೆ ಮಾಡಿ ಆದೇಶವನ್ನೂ ಹೊರಡಿಸಿದ್ದಾರೆ. ಇದಕ್ಕೆ ಒಪ್ಪದಿದ್ದಲ್ಲಿ ಸರಕಾರಿ ನೌಕರರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಮುಖ್ಯಮಂತ್ರಿಗಳ ವೇತನ ಹೆಚ್ಚಳದ ಹೇಳಿಕೆಯನ್ನು ನೌಕರರ ಸಂಘದ ಪದಾಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ ರಾಜ್ಯ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಸಭೆ ನಡೆಸಿ ಶೇ.30 ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಮುಂದಿಟ್ಟಿದ್ದಾರೆ. ಈ ಸಂಬಂಧ ಮತ್ತೆ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಮಹತ್ವದ ಸಭೆ ನಡೆಸುತ್ತಿದ್ದು ಕೆಲ ನಿಮಿಷಗಳಲ್ಲಿ ಮುಷ್ಕರ ಹಿಂಪಡೆಯುವ ಬಗ್ಗೆ / ಮುಂದುವರಿಸುವ ಬಗ್ಗೆ ನಿರ್ಣಯ ಹೊರಬೀಳಲಿದೆ.

LEAVE A REPLY

Please enter your comment!
Please enter your name here