ಹಿಂದಿನ ಸಭೆಯ ನಿರ್ಣಯ ಅನುಷ್ಠಾನ ಮಾಡಿಲ್ಲ- ಸಭೆಯಲ್ಲಿ ಕೋರಂ ಇಲ್ಲ
ಗ್ರಾಮಸಭೆ ಮುಂದೂಡುವಂತೆ ಗ್ರಾಮಸ್ಥರ ಆಗ್ರಹ- ಪರ ವಿರೋಧ ಚರ್ಚೆ
ಪುತ್ತೂರು: ಕಳೆದ ಗ್ರಾಮಸಭೆಯಲ್ಲಿ ಮಾಡಿದ ನಿರ್ಣಯ ಏನಾಗಿದೆ? ಒಂದಾದರೂ ಅನುಷ್ಠಾನವಾಗಿದೆಯಾ? ಅನುಷ್ಠಾನವಾಗದೇ ಇದ್ದರೆ ನಿರ್ಣಯ ಮಾಡುವುದಾದರೂ ಯಾಕೆ? ಸಭೆಗೆ ವರದಿ ಮಂಡಿಸಿದ್ದೀರಿ, ವರದಿ ಅನುಮೋದನೆಯಾಗಬೇಕಾದರೆ ಕೋರಂ ಬೇಕು, ಸಭೆಯಲ್ಲಿ ಕೋರಂ ಇಲ್ಲದೆ ಯಾವ ಕಾಟಾಚಾರಕ್ಕೆ ನೀವು ವರದಿಯನ್ನು ಅನುಮೋದನೆ ಮಾಡುತ್ತೀರಿ ಎಂದು ಗ್ರಾಮಸ್ಥರು ಪಟ್ಟು ಹಿಡಿದು ಗ್ರಾಮಸಭೆ ಮುಂದೂಡುವಂತೆ ಅಗ್ರಹಿಸಿದ ಪರಿಣಾಮ ಸುಮಾರು ಮೂರೂವರೆ ಗಂಟೆಗಳ ಕಾಲ ಪರಸ್ಪರ ಪರ ವಿರೋಧ ಚರ್ಚೆಗಳಿಂದ ಗ್ರಾಮಸಭೆ ಅಲ್ಲೋಲಕಲ್ಲೋಲವಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಸಭೆಯು ಅಧ್ಯಕ್ಷೆ ಉಷಾ ಮುಳಿಯ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಂಗಣದಲ್ಲಿ ಫೆ. 28 ರಂದು ನಡೆಯಿತು. ಬೆಳಿಗ್ಗೆ 10.30 ಕ್ಕೆ ಸಭೆ ಆರಂಭಗೊಂಡಿದ್ದು 2 ಗಂಟೆಯ ತನಕ ನಿರ್ಣಯ ಅನುಷ್ಠಾನವಾಗದೇ ಇರುವುದು ಮತ್ತು ಕೋರಂ ಇಲ್ಲದೆ ಸಭೆ ನಡೆಸುವ ಬಗ್ಗೆ ಗ್ರಾಮಸ್ಥರಿಂದ ಪರ, ವಿರೋಧಗಳು ಬಂದ ಹಿನ್ನೆಲೆಯಲ್ಲಿ ಸಭೆ ಅಷ್ಟೂ ಹೊತ್ತು ಮುಂದುವರೆಯಿತು.
ಕಾರ್ಯದರ್ಶಿ ದಿನೇಶ್ ವರದಿ ಓದಿದ ಬಳಿಕ ವರದಿಯನ್ನು ಅನುಮೋದನೆಗಾಗಿ ಅಧ್ಯಕ್ಷರು ವಿನಂತಿಸಿದಾಗ ಸಭೆಯಲ್ಲಿ ಎದ್ದು ನಿಂತು ಮಾತನಾಡಿದ ಗ್ರಾಮಸ್ಥರು ವರದಿ ಅನುಮೋದನೆ ಮಾಡಬೇಕಾದರೆ ಕೋರಂ ಬೇಕಲ್ವ? ಕೋರಂ ಇಲ್ಲದೆ ಅದು ಹೇಗೆ ಅನುಮೋದನೆಯಾಗುತ್ತದೆ. ಬೆರಳೆನಿಕೆಯ ಗ್ರಾಮಸ್ಥರು ಮಾತ್ರ ಸಭೆಯಲ್ಲಿದ್ದಾರೆ, ಉಳಿದವರು ಆಶಾ ಕಾರ್ಯಕರ್ತೆಯವರು, ಅಂಗನವಾಡಿ ಸಹಾಯಕಿಯರು, ಅಧಿಕಾರಿವರ್ಗ, ಇಲಾಖೆಯ ಸಿಬಂದಿಗಳು . ಗ್ರಾಮಸ್ಥರಲ್ಲದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಗ್ರಾಮಸ್ಥರು ಗ್ರಾಮಸಭೆಗೆ ಬಾರದೇ ಇರಲು ಗ್ರಾಪಂ ಆಡಳಿತವೇ ಕಾರಣ ಗ್ರಾಮಸಭೆಯಲ್ಲಿ ನಿರ್ಣಯವಾಗಿದ್ದು ಯಾವುದೂ ಅನುಷ್ಟಾನಕ್ಕೆ ಬರುವುದಿಲ್ಲ ಇದರಿಂದ ಬೇಸತ್ತು ಗ್ರಾಮಸಭೆಗೆ ಬರುವುದೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಗ್ರಾಮಸಭೆಯ ನಿರ್ಣಯ ಯಾಕೆ ಅನುಷ್ಠಾನ ಮಾಡುತ್ತಿಲ್ಲ. ಕಾಟಾಚಾರಕ್ಕೆ ನಿರ್ಣಯ ಮಾಡುವುದ? ಗ್ರಾಮಸ್ಥರ ಬೇಡಿಕೆಗೆ ಯಾಕೆ ಗೌರವ ಕೊಡುತ್ತಿಲ್ಲ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಇದಕ್ಕೆ ವಿರೋಧ ವ್ಯಕ್ತಿಪಡಿಸಿದ ಕೆಲವರು ಗ್ರಾಮಸಭೆಗೆ ಯಾರೂ ಬರುವುದಿಲ್ಲ, ಇವತ್ತು ಮತ್ರ ಕೋರಂ ಇಲ್ಲದ್ದಲ್ಲ ಈ ಹಿಂದೆಯೂ ಇದೇ ಪರಿಸ್ಥಿತಿ ಇಲ್ಲಿತ್ತು ಆಗ ಯಾರೂ ಕೋರಂ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದರು.
ಗ್ರಾಮಸಭೆ ಹೇಗೆ ನಡೆಸುತ್ತೀರಿ?
ಒಂದೆಡೆ ಕೋರಂ ಇಲ್ಲ, ಇನ್ನೊಂದೆಡೆ ಹಳೆಯ ನಿರ್ಣಯಗಳು ಕಾರ್ಯರೂಪಕ್ಕೆ ಬಂದಿಲ್ಲ, ವರದಿ ಅನುಮೋದನೆಯಾಗದೆ ಹೇಗೆ ಸಭೆ ನಡೆಸುತ್ತೀರಿ ಎಂದು ಗ್ರಾಮಸ್ಥರಾದ ಮಹಮ್ಮದ್ ಕೆಂಪಿ ಪ್ರಶ್ನಿಸಿದರು. ಗ್ರಾಮಸಭೆಯನ್ನು ಮುಂದೂಡಿ ಅಥವಾ ರದ್ದು ಮಾಡಿ ನಿಮಗೆ ಬೇಕಾದ ಹಾಗೆ ನಿರ್ಣಯವನ್ನು ಬರೆದುಕೊಳ್ಳಿ ಅಥವಾ ಗ್ರಾಮಸಭೆಯನ್ನು ಮುಂದೂಡಿ ಹಿಂದಿನ ಸಭೆಯಲ್ಲಿ ಆದ ನಿರ್ಣಯವನ್ನು ಅನುಷ್ಠಾನ ಮಾಡಿ ಸಾಕು ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಈ ಹಿಂದೆ ಆಗಿರುವ ನಿರ್ಣಯ ಏನಾಗಿದೆ ಎಂದು ಪಿಡಿಒ ರವರು ಓದಿ ಹೇಳುತ್ತಾರೆ ಎಂದು ಸಭೆಗೆ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ಓದಿ ಹೇಳಿ ಏನು ಪ್ರಯೋಜನ ಅನುಷ್ಠಾನ ಆಗಿದೆಯೇ ಎಂದು ಮತ್ತೆ ಪ್ರಶ್ನಿಸಿದರು. ಈ ವೇಳೆ ಗ್ರಾಮಸ್ಥರು ಮತ್ತು ಅಧ್ಯಕ್ಷರ ನಡುವೆ ಮಾತಿನ ಸಮರ ನಡೆಯಿತು. ತುಂಬಾ ಹೊತ್ತು ಇದೇ ವಿಚಾರದಲ್ಲಿ ಚರ್ಚೆ ನಡೆಯಿತು.
ಪ್ರಚಾರ ಮಾಡಲಾಗಿದೆ
ಗ್ರಾಮಸಭೆಯ ಬಗ್ಗೆ ಮಾಧ್ಯಮಗಳಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಲಾಗಿದೆ. ವಾರ್ಡ್ ಸಭೆಗಳಲ್ಲಿ ತಿಳಿಸಲಾಗಿದೆ. ಗ್ರಾಮಸಭೆಗೆ ಬರುವಂತೆ ಗ್ರಾಮಸ್ಥರಲ್ಲಿ ವಿನಂತಿ ಮಾಡಲಾಗಿದೆ. ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಬೇಕಿತ್ತು ಆದರೆ ಕನಿಷ್ಟ ಸಂಖ್ಯೆಯಲ್ಲಿ ಬಂದಿದ್ದಾರೆ ನಾವಿನ್ನೇನು ಮಾಡಲು ಸಾಧ್ಯ ಎಂದು ಗ್ರಾ.ಪಂ. ಅಧ್ಯಕ್ಷೆ ಉಷಾ ಮುಳಿಯ ತಿಳಿಸಿದರು. ಸಭೆಗೆ ಗ್ರಾಪಂ ಸದಸ್ಯರುಗಳೆಲ್ಲರೂ ಕನಿಷ್ಟ 10 ಮಂದಿಯನ್ನು ಕರೆದುಕೊಂಡು ಬಂದರೆ 200 ಜನ ಸೇರಿಸಬಹುದು ಎಂದು ಗ್ರಾಮಸ್ಥರಾದ ಲಕ್ಷ್ಮಣ ಹೇಳಿದರು. ನಾವು ಯಾಕೆ ಕರೆದುಕೊಂಡು ಬರುವುದು. ಜನ ಎಲ್ಲರೂ ಬುದ್ದಿವಂತರೇ ಆಗಿದ್ದಾರೆ, ಎಲ್ಲರೂ ತಿಳುವಳಿಕೆ ಉಳ್ಳವರೇ ಆಗಿದ್ದಾರೆ ಎಂದು ಸದಸ್ಯ ಅಬ್ದುಲ್ ರಹಿಮಾನ್ ಹೇಳಿದರು.
ಗೇಟು ಗದ್ದಲ ಸಭೆಯಲ್ಲಿ ಕೋಲಾಹಲ
ಉಪ್ಪಿನಂಗಡಿಯ ಅನ್ನಪೂರ್ಣ ಹೊಟೇಲ್ ಬಳಿಯಿಂದ ಸಾಗುತ್ತಿದ್ದ ದಾರಿಗೆ ಗೇಟು ನಿರ್ಮಿಸಿ ಬೀಗ ಹಾಕಿದ್ದಾರೆ. ಶಾಲಾ ವಿದ್ಯಾರ್ಥಿಗಳು ಸಾರ್ವಜನಿಕರು ಆ ದಾರಿಯ ಮೂಲಕ ತೆರಳುತ್ತಿದ್ದರು. ಎಲ್ಲರಿಗೂ ಪ್ರಯೋಜನವಾಗುವ ದಾರಿ ಅದಾಗಿತ್ತು ಆ ದಾರಿ ಗೆ ಗೇಟ್ ಹಾಕಿ ಗ್ರಾಪಂ ಬೀಗ ಹಾಕಿದೆ ಅದನ್ನು ತೆರವು ಮಾಡುವುದಾಗಿ ಕಳೆದ ಗ್ರಾಮಸಭೆಯಲ್ಲಿ ನಿರ್ಣಯವಾಗಿತ್ತು ಸಭೆ ನಡೆದು 6 ತಿಂಗಳಾದರೂ ಬೀಗ ತೆರವು ಮಾಡಿಲ್ಲ. ಹೊಟೇಲ್‌ನವರಿಗೆ ಕಟ್ಟಿಗೆ ಸಾಗಿಸುವಾಗ ಗೇಟು ತೆರೆಯುತ್ತದೆ, ವಿದ್ಯಾರ್ಥಿಗಳು ಹೋಗುವಾಗ ಬೀಗ ಬೀಳ್ತದೆ . ಕಳೇದ ಸಭೆಯಲ್ಲಿ ಮಾಡಿದ ನಿರ್ಣಯ ಏನಾಯ್ತು? ನಿರ್ಣಯಕ್ಕೆ ಬೆಲೆ ಇಲ್ಲವೇ ಎಂದು ಶಬ್ಬೀರ್ ಕೆಂಪಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಅದರ ಬಗ್ಗೆ ಕಂದಾಯ ಇಲಾಖೆಗೆ ಬರೆಯಲಾಗಿದೆ, ಕಂದಾಯ ಇಲಾಖೆಯ ಪರವಾನಿಗೆ ಬೇಕಾಗುತ್ತದೆ, ಈ ಕಾರಣಕ್ಕೆ ತೆರವು ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದರು. ಇದಕ್ಕೆ ತೃಪ್ತರಾಗದ ಗ್ರಾಮಸ್ಥರು ಗೇಟಿಗೆ ಬೀಗ ಹಾಕಿದ್ದು ಕಂದಾಯ ಇಲಾಖೆಯಲ್ಲ, ಗ್ರಾಪಂ ಹಾಕಿದ್ದು, ಗೇಟಿನ ಬೀಗ ಹೊಟೇಲ್‌ನವರಲ್ಲಿದೆ, ಗ್ರಾಪಂ ಬೀಗ ಖಾಸಗಿ ವ್ಯಕ್ತಿಗಳ ಕೈಯ್ಯಲ್ಲಿದೆ, ಹೊಟೇಲ್‌ನವರು ಗ್ರಾಪಂ ಆಡಳಿತಾಧಿಕಾರಿಯೇ ಎಂದು ಪ್ರಶ್ನಿಸಿದರು. ಗೇಟ್ ತೆರವು ಮಾಡಿ ಅಥವಾ ಬಂದ್ ಮಾಡಿ ನಮಗೇನು ಅಭ್ಯಂತರವಿಲ್ಲ ಆದರೆ ಬೀಗ ತೆಗೆಯುವುದಾಗಿ ಗ್ರಾಪಂ ನಿರ್ಣಯ ಮಾಡಿತ್ತು ಅದು ಯಾಕೆ ಅನುಷ್ಟಾನ ಮಾಡಿಲ್ಲ ಎಂದು ಕೇಳುತ್ತಿದ್ದೇವೆ, ಗೇಟ್ ತೆಗೆದರೆ ನಮಗೇನು ಲಾಭವಿಲ್ಲ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಉಪಕಾರವಾಗುತ್ತದೆ ಅದಕ್ಕೆ ನಾವು ಹಿಂದಿನ ಗ್ರಾಮಸಭೆಯಲ್ಲಿ ಮನವಿ ಮಾಡಿದ್ದು ಎಂದು ಶಬ್ಬೀರ್ ಕೆಂಪಿ ಹೇಳಿದರು. ಇದೇ ವಿಚಾರ ಸುಮಾರು ಒಂದು ಗಂಟೆಗಳ ಕಾಲ ಚರ್ಚೆಯಾಯಿತು. ಕೊನೆಗೆ ಗೇಟ್ ಹಾಕಿರುವ ವಿಚಾರದ ಬಗ್ಗೆ ತಕ್ಷಣ ಕ್ರಮಕೈಗೊಳ್ಳುವ ಭರವಸೆಯ ಬಳಿಕ ಸಭೆ ಮುಂದುವರೆಯಿತು.
ಬೀದಿನಾಯಿಗಳ ವಿಚಾರ ಎನಾಯ್ತು
ಪೇಟೆಯಲ್ಲಿ ಬೀದಿನಾಯಿಗಳ ಉಪಟಳ ಜಾಸ್ತಿಯಾಗಿದೆ ಅವುಗಳನ್ನು ಹಿಡಿಯುವುದು ಅಥವಾ ಸಂತಾನಹರಣ ಚಿಕಿತ್ಸೆ ಕೊಡಿಸುವುದಾಗಿ ಹಿಂದಿನ ಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು ಆದರೆ ಆಕಾರ್ಯ ನಡೆದಿಲ್ಲ. ನಾಯಿ ಹಿಡಿಯಲು ಜನ ಸಿಗುತ್ತಿಲ್ಲ ಎಂದು ಅಧ್ಯಕ್ಷರು ಅಸಹಾಯಕತೆ ವ್ಯಕ್ತಪಡಿಸಿದರು.
85 ಶೇ. ತ್ಯಾಜ್ಯ ನದಿಗೆ
ಉಪ್ಪಿನಂಗಡಿ ಪೇಟೆಯ ಶೇ. 85 ತ್ಯಾಜ್ಯ ನದಿಗೆ ಬಿಡಲಾಗುತ್ತಿದೆ. ಪರ್ಯಾಯ ವ್ಯವಸ್ಥೆಯಿಲ್ಲದ ಕಾರಣ ನದಿಗೆ ಬಿಡಲಾಗುತ್ತದೆ. ವ್ಯವಸ್ಥೆ ಮಾಡಲು ತುಂಬಾ ಖರ್ಚು ತಗಲುತ್ತದೆ. ಮಲೀನ ನೀರಿಗೆ ಒಂದು ಸೂಕ್ತ ವ್ಯವಸ್ಥೆ ಆಗಬೇಕಿದೆ. ಇದು ಗ್ರಾಪಂ ಮಾತ್ರ ಚಿಂತನೆ ಮಾಡಿದರೆ ಸಾದ್ಯವಿಲ್ಲ. ಗ್ರಾಮಸ್ಥರೆಲ್ಲರೂ ಸೇರಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಿದೆ. ಇಂಗು ಗುಂಡಿ ತೆಗೆದರೆ ಅದರಲ್ಲಿ ನೀರು ಇಂಗುವುದಿಲ್ಲ ಇದೊಂದು ದೊಡ್ಡ ಸಮಸ್ಯೆಯಾಗಿದ್ದು ಸಮಸ್ಯೆಯಾಗಿಯೇ ಉಳಿದಿದೆ ಎಂದು ಪಿಡಿಒ ಸಭೆಗೆ ತಿಳಿಸಿದರು.ಈಗಾಗಲೇ ಅಂಡರ್‌ಗ್ರೌಂಡ್ ಗೆ ಟೆಂಡರ್ ಕರೆಯಲಾಗಿದೆ. ಸುಮಾರು 5 ಕೋಟಿ ರೂ ಯೋಜನೆ ಇದಾಗಿದ್ದು ಅನುಮೋದನೆ ಸಿಕ್ಕಿದ ಬಳಿಕ ಏನಾದರೂ ವ್ಯವಸ್ಥೆ ಮಾಡಬಹುದಾಗಿದೆ. ಅನುಮೋದನೆ ಪ್ರಗತಿಯಲ್ಲಿದೆ, ಸರ್ವೆ ಕಾರ್ಯ ನಡೆದಿದೆ ಎಂದು ತಿಳಿಸಿದ ಪಿಡಿಒರವರು ಮನೆ ಕಟ್ಟುವವರು ಕಡ್ಡಾಯವಾಗಿ ಇಂಗುಗುಂಡಿ ತೆಗೆಯಲೇಬೇಕು ಎಂದು ಕಡ್ಡಾಯವನ್ನು ಮಾಡಲಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಸ್ಥರು ತ್ಯಾಜ್ಯವನ್ನು ಬಿಡುವ ಮನೆಯವರ ಸಭೆಯನ್ನು ಕರೆದು ಎಲ್ಲರೂ ಒಟ್ಟಾಗಿ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದೆ ಇಲ್ಲವಾದಲ್ಲಿ ಪವಿತ್ರ ನದಿ ತ್ಯಾಜ್ಯದಿಂದ ಮಲಿನವಾಗುತ್ತದೆ ಎಂದು ಗ್ರಾಮಸ್ಥರು ಅಭಿಪ್ರಾಯಿಸಿದರು. ಪ್ಯಾಂಪರ್‍ಸ್‌ಗಳದ್ದೇ ದೊಡ್ಡ ಸಮಸ್ಯೆಯಾಗಿದ್ದು ಅದನ್ನು ಬರ್ನ್ ಮಾಡಲು ಸಾದ್ಯವಾಗುತ್ತಿಲ್ಲ ಎಂದು ಪಿಡಿಒ ಸಭೆಗೆ ತಿಳಿಸಿದರು.
ಪಶು ವೈದ್ಯಾಧಿಕಾರಿ ಇಲ್ಲ
ಉಪ್ಪಿನಂಗಡಿ ಪಶು ಆಸ್ಪತ್ರೆಗೆ ವೈದ್ಯಾಧಿಕಾರಿ ನೇಮಕವಾಗಿಲ್ಲ, ಕಳೆದ ಗ್ರಾಮಸಭೆಯಲ್ಲಿ ಅಗ್ರಹಿಸಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದು ಮಹಮ್ಮದ್ ಕೆಂಪಿ ಆರೋಪಿಸಿದರು. ಶಾಸಕರಲ್ಲಿ ಸಮಸ್ಯೆ ಹೇಳಿ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲವೇ ಎಂದು ಮಹಮ್ಮದ್ ಪ್ರಶ್ನಿಸಿದರು. ಈ ವಿಚಾರವನ್ನು ಶಾಸಕರ ಗಮನಕ್ಕೆ ತರಲಾಗಿದೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.
ಟ್ರಾಪಿಕ್ ಸಮಸ್ಯೆಗೆ ಮುಕ್ತಿ ನೀಡಿ
ಉಪ್ಪಿನಂಗಡಿಯಲ್ಲಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಿ ಎಂದು ಗ್ರಾಮಸ್ಥರಾದ ಇರ್ಷಾದ್ ಹೇಳಿದರು. ರಸ್ತೆ ಬದಿಯಲ್ಲಿರುವ ಅಕ್ರಮ ಅಂಗಡಿಗಳನ್ನು ತೆರವು ಮಾಡಲು ಕ್ರಮಕೈಗೊಳ್ಳಬೇಕಿದೆ ಆದರೆ ಜನ ಅದಕ್ಕೆ ಒಪ್ಪುತ್ತಿಲ್ಲ , ಒನ್‌ವೇ ರಸ್ತೆಯನ್ನಾಗಿ ಮಾಡಿದರೆ ಸಮಸ್ಯೆ ಪರಿಹಾರವಾಗಬಹುದು ಎಂದು ಗ್ರಾಮಸ್ಥರು ಅಭಿಪ್ರಾಯಿಸಿದರು. ಶಾಶ್ವತ ಯೋಜನೆಯನ್ನು ರೂಪಿಸಿದರೆ ಪರಿಹಾರ ಮಾಡಬಹುದು ಎಂದು ಗ್ರಾಮಸ್ಥರು ಹೇಳಿದರು. ರಸ್ತೆ ಅಗಲೀಕರಣಕ್ಕೆ ಕೆಲವರ ಆಕ್ಷೇಪ ಇದ್ದ ಕಾರಣ ಆ ಕೆಲಸವೂ ಸಾದ್ಯವಾಗುತ್ತಿಲ್ಲ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು. ಬಹುಮಹಡಿ ಕಟ್ಟಡಗಳು ನಿರ್ಮಾಣವಾಗುವಾಗ ಅದರಲ್ಲಿ ವಾಹನ ಪಾರ್ಕಿಂಗ್‌ಗೆ ಅಂತ ಜಾಗ ತೋರಿಸಿ, ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಪಡೆದವರು, ಕಟ್ಟಡ ನಿರ್ಮಾಣವಾದ ಬಳಿಕ ಆ ಜಾಗದಲ್ಲಿ ಅಂಗಡಿ ಕೋಣೆಗಳನ್ನು ನಿರ್ಮಾಣ ಮಾಡುತ್ತಾರೆ. ಇದು ಅಕ್ರಮವಾದರೂ, ಅದಕ್ಕೆ ಗ್ರಾ.ಪಂ.ನವರೇ ಡೋರ್‌ನಂಬರ್ ನೀಡುತ್ತಾರೆ ಎಂಬ ಆಕ್ರೋಶವೂ ಗ್ರಾಮಸ್ಥರಿಂದ ಈ ಸಂದರ್ಭ ಕೇಳಿ ಬಂತು.
70 ಶೇ. ಹೆಲ್ಮೆಟ್ ಹಾಕ್ತಾರೆ
ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಶೇ. 70 ಮಂದಿ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಓಡಿಸುತ್ತಾರೆ. ಉಳಿದ 30 ಶೇ. ಮಂದಿ ಹೆಲ್ಮೆಟ್ ಹಾಕುವುದಿಲ್ಲ. ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಬೇಡಿ ನಮಗೆ ತೊಂದರೆಯಾಗುತ್ತದೆ. ಅಪಘಾತವಾದರೆ ಯಾರು ಹೊಣೆ ಎಂದು ಉಪ್ಪಿನಂಗಡಿ ಠಾಣಾ ಎಸ್.ಐ. ರಾಜೇಶ್ ಹೇಳಿದರು. ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಹೋಗುವ ಮಂದಿ ಲಂಗುಲಗಾಮಿಲ್ಲದೆ ವಾಹನ ನಿಲ್ಲಿಸಬೇಡಿ ಇದರಿಂದ ಇತರರಿಗೆ ತೊಂದರೆಯಾಗುತ್ತದೆ ಎಂಬ ಪರಿಜ್ಞಾನವಿರಲಿ ಈ ವಿಷಯದಲ್ಲಿ ಸ್ವಯಂ ತಿಳುವಳಿಕೆ ಅಗತ್ಯವಾಗಿದೆ ಎಂದು ಹೇಳಿದರು. ಮೊಬೈಲ್ ಮೂಲಕ ಅಪರಾಧ ಪ್ರಕರಣಗಳು ಹೆಚ್ಚಗುತ್ತಿದೆ. ಸಮಾಜಕ್ಕೆ ಕಂಠಕವಾಗುವ ಮೆಸೆಜ್ ರವಾನೆ ಮಾಡುವುದು ಅಪರಾಧವಾಗಿದೆ. ಮೊಬೈಲ್‌ಗೆ ಬರುವ ಅನಾಮಿಕ ಕರೆಗಳು ಮತ್ತು ಮೆಸೆಜ್‌ಗಳ ಬಗ್ಗೆ ಎಚ್ಚರ ಇರಲಿ. ಪೋಕ್ಸೋ ಕಾಯ್ದೆಯ ಬಗ್ಗೆ ತಿಳುವಳಿಕೆ ಪಡೆದುಕೊಳ್ಳಿ ಎಂದು ಸಭೆಗೆ ಮನವಿ ಮಾಡಿದರು.
ಗ್ರಾಪಂ ಸದಸ್ಯರು ಡೀಲ್ ಮಾಡ್ತಾರೆ
ಅಕ್ರಮ ಅಂಗಡಿಗಳನ್ನು ತೆರವು ಮಾಡಿ ಎಂದು ನಾವು ಗ್ರಾಮಸಭೆಯಲ್ಲಿ ಹೇಳುತ್ತೇವೆ ಆದರೆ ಸದಸ್ಯರು ಅಕ್ರಮ ಅಂಗಡಿ ಮಾಲಿಕರ ಬಳಿ ಹೋಗಿ ಡೀಲ್ ಮಾಡಿ ಅಂಗಡಿ ತೆಗೆಯದಂತೆ ನೋಡಿಕೊಳ್ಳುತ್ತಾರೆ. ನಾವು ಗ್ರಾಮಸಭೆಯಲ್ಲಿ ಬೊಬ್ಬೆ ಹಾಕಿದ್ದೇ ಬಂತು ಬಳಿಕ ನಾವೇ ಅವರಲ್ಲಿ ವೈರತ್ವ ಕಟ್ಟಿಕೊಳ್ಳಬೇಕಾಗುತ್ತದೆ ಇದೆಲ್ಲಾ ಬೇಕಾ? ಎಂದು ಗ್ರಾಮಸ್ಥರಾದ ಮಹಮ್ಮದ್ ಕೆಂಪಿ ಹೇಳಿದರು.
ಉಪ್ಪಿನಂಗಡಿಯ ರೋಟರಿ ಭವನದ ಬಳಿ ಸರಕಾರಿ ಜಾಗ ಅತಿಕ್ರಮಣವಾಗಿರುವ ಬಗ್ಗೆ ಗ್ರಾಮಸ್ಥ ಚಂದಪ್ಪ ಮೂಲ್ಯ ಮಾತನಾಡಿದರು. ಉಳಿದಂತೆ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಚರ್ಚಾ ನಿಯಂತ್ರಣಾಧಿಕಾರಿಯಾಗಿ ಭಾಗವಹಿಸಿದರು. ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷರಾದ ಪಿ ವಿನಾಯಕ ಪೈ, ಸದಸ್ಯರುಗಳಾದ ಮಹಮ್ಮದ್ ತೌಸೀಫ್ ಯು ಟಿ, ಲಲಿತ, ವಿದ್ಯಾಲಕ್ಷ್ಮಿ ಪ್ರಭು, ಉಷಾ ನಾಯ್ಕ, ಲೋಕೇಶ್ ಪೂಜಾರಿ, ಸಣ್ಣಯಾನೆ ಸಂಜೀವ, ದನಂಜಯಕುಮಾರ್, ರುಕ್ಮಿಣಿ, ಶೋಭಾ, ಯು ಕೆ ಇಬ್ರಾಹಿಂ ಮೈಸಿದ್ ಇಬ್ರಾಹಿಂ, ಜಯಂತಿ, ಸುರೇಶ್‌ಅತ್ರಮಜಲು, ವನಿತಾ, ಕೆ ಅಬ್ದುಲ್‌ರಹಿಮಾನ್, ಅಬ್ದುಲ್ ರಶೀದ್, ನೆಬಿಸಾ, ಸೌಧ ಉಪಸ್ಥಿತರಿದ್ದರು. ಸಿಬಂದಿಗಳಾದ ಜ್ಯೋತಿ ಎಸ್, ಆಶಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.