ಕೊಂಡಪ್ಪಾಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮಕಲಶ-ಧಾರ್ಮಿಕ ಸಭೆ

0

ದೇವರ ಬಿಂಬ ವೃದ್ದಿಯಾದರೆ ಭಕ್ತರೂ ಅಭಿವೃದ್ದಿಯಾಗುತ್ತಾರೆ; ಸುಬ್ರಹ್ಮಣ್ಯ ಸ್ವಾಮೀಜಿ

ಆಲಂಕಾರು: ಎಲ್ಲರು ಸೇರಿ ಮಾಡುವ ಪೂಜೆಗೆ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. ದೇವರ ಬಿಂಬ ವೃದ್ದಿಯಾದರೆ ಭಕ್ತರೂ ಅಭಿವೃದ್ದಿಯಾಗುತ್ತಾರೆ. ಭಗವಂತ ಜಗತ್ತಿನ ಲಕ್ಷಾಂತರ ಜೀವರಾಶಿಗಳಲ್ಲಿ ಮನುಷ್ಯನಿಗೆ ವಿಶೇಷ ಅನುಗ್ರಹ ಮಾಡಿದ್ದಾರೆ. ಮನುಷ್ಯ ತನ್ನ ಬುದ್ಧಿ ಶಕ್ತಿಯಿಂದ ಹಕ್ಕಿಯಂತೆ ಹಾರಲು ವಿಮಾನ ಕಂಡು ಹಿಡಿದ,ಮೀನಿನಂತೆ ಈಜಡಲು ಸಬ್‌ಮೆರಿನ್‌ನನ್ನು, ಲೆಕ್ಕಾಚಾರಕ್ಕೆ ಕಂಪ್ಯೂಟರ್‌ನ್ನು ಹಾಗೂ ಇನ್ನಿತರ ಸಾಧನವನ್ನು ಕಂಡು ಹಿಡಿದ. ಮನುಷ್ಯ ತನ್ನಲ್ಲಿರುವ ಬುದ್ದಿಶಕ್ತಿಯನ್ನು ಒಳ್ಳೆಯತನಕ್ಕೆ ಬಳಸಬೇಕು, ತನ್ನ ಕ್ರೀಯಾಶೀಲವಾದ ಕೈಗಳಿಂದ ಉತ್ತಮವಾದ ಕೆಲಸ ಕಾರ್ಯಗಳನ್ನು ಮಾಡಬೇಕು. ತನ್ನ ನಾಲಗೆಯ ವಾಕ್ ಚಾತುರ್ಯದಿಂದ ಇತರರ ಮನ ನೋಯಿಸದೇ ಭಜನೆ, ಭಗವಂತನ ಸಂಕೀರ್ತನೆಯನ್ನು ಮಾಡಿ ಭಗವಂತನ ಒಲುಮೆಗೆ ಪಾತ್ರರಾಗಬೇಕೆಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.


ಅವರು ಕಡಬ ತಾಲೂಕಿನ ರಾಮಕುಂಜ ಗ್ರಾಮದ ಕೊಂಡಪ್ಪಾಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಫೆ.೨೮ರಂದು ರಾತ್ರಿ ನಡೆದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಮನುಷ್ಯರು ಧರ್ಮ ಮಾರ್ಗದಲ್ಲಿ ನಡೆಯಬೇಕು. ನಮ್ಮ ಜೀವನದಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ರೂಡಿಸಿಕೊಳ್ಳಬೇಕು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಆಗುವ ಅವಂತಾರಗಳಿಗೆ ಮಾರು ಹೋಗದೇ ಈ ಬಗ್ಗೆ ಜಾಗೃತಿ ವಹಿಸಬೇಕು. ಕ್ಷಣಿಕ ಸುಖಕ್ಕೋಸ್ಕರ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬಾರದು ಎಂದು ಸ್ವಾಮೀಜಿ ಹೇಳಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಗೋಕುಲ್ ಪಿ.ಎಸ್.ರವರು ಕೊಂಡಪ್ಪಾಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಇತಿಹಾಸ ಹಾಗೂ ಕ್ಷೇತ್ರದ ಕಾರ್ಣಿಕವನ್ನು ತಿಳಿಸಿದರು. ಮೊದಲು ನಮ್ಮ ಹಿರಿಯರು ಬಹಳ ಕಷ್ಟಪಟ್ಟು ಪೂಜಾ ವಿಧಿ ವಿಧಾನವನ್ನು ನೆರವೇರಿಸುತ್ತಿದ್ದರು. ೨೬ ವರ್ಷಗಳ ಹಿಂದೆ ಅಷ್ಟಮಂಗಲ ಪ್ರಶ್ನಾಚಿಂತನೆ ನಡೆಸಲಾಯಿತು. ೨೦೦೨ರ ಫೆ.೨೭, ೨೮ ಹಾಗೂ ಮಾ.೧ ರಂದು ಬ್ರಹ್ಮಕಲಶೋತ್ಸವ ನಡೆದಿತ್ತು. ತದನಂತರ ಸುತ್ತುಪೌಳಿ, ಅರ್ಚಕರ ಕೊಠಡಿ ಹಾಗೂ ಇನ್ನಿತರ ಅಭಿವೃದ್ದಿ ಕೆಲಸ ಕಾರ್ಯಗಳು ನಡೆದಿದೆ. ಕಳೆದ ವರ್ಷ ಆ.೨೧ರಂದು ಕ್ಷೇತ್ರದಲ್ಲಿ ಪ್ರಶ್ನಾಚಿಂತನೆ ನಡೆಸಲಾಗಿತ್ತು. ಕಳೆದ ಒಂದೂವರೇ ವರ್ಷದಿಂದ ಪರಿಹಾರಾರ್ಥಕ ಕೆಲಸ ಕಾರ್ಯ ಮಾಡಿ ಇದೀಗ ಬ್ರಹ್ಮಕಲಶೋತ್ಸವ ಮಾಡುತ್ತಿದ್ದೆವೆ. ಸಹಕರಿಸಿದ ಎಲ್ಲಾ ಭಕ್ತ ಜನತೆಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.


ಪರ್ಲತ್ತಾಯ ಪ್ರತಿಷ್ಠಾನದ ಅಧ್ಯಕ್ಷ ವೆಂಕಟರಾಜ ನಗರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥರ ಮಾರ್ಗದರ್ಶನದಂತೆ ದೈವಜ್ಞರ ಸೂಚನೆಯಂತೆ ದೈವಗಳ ಹಾಗೂ ದೇವರ ಜೀರ್ಣೋದ್ದಾರ ಕೆಲಸ ಕಾರ್ಯಗಳು ನಡೆದಿದೆ. ಪೆರ್ಲತ್ತಾಯ ಪ್ರತಿಷ್ಠಾನ ಹಾಗೂ ಊರಿನ ಭಕ್ತರು ಸಹಕಾರ ನೀಡಿದ್ದಾರೆ ಎಂದರು. ದೇವಸ್ಥಾನದಲ್ಲಿ ಉತ್ತಮ ಸೇವೆ ನೀಡುತ್ತಿರುವ ದೇವಸ್ಥಾನದ ಅರ್ಚಕರಾದ ರಾಮಶಂಕರ ಮುಚ್ಚಿಂತಾಯ, ಬ್ರಹ್ಮಕಲಶೋತ್ಸವ ಕಾರ್ಯದರ್ಶಿಗಳಾದ ರವಿರಾಜ್ ನಗ್ರಿ, ಅನಂತಕುಮಾರ್ ಕೆದುಂಬಾಡಿ, ನೃತ್ಯಸಂಭ್ರಮ ನೃತ್ಯನಿನಾದ ಕಾರ್ಯಕ್ರಮ ನೀಡಿದ ವಿದುಷಿ ಪ್ರಮೀಳಾ ಲೋಕೇಶ್‌ರವರನ್ನು ಸ್ವಾಮೀಜಿ ಗೌರವಿಸಿದರು. ವೇದಮೂರ್ತಿ ಪ್ರಕಾಶ ಆಚಾರ್ಯ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಮುಖರಾದ ಟಿ. ನಾರಾಯಣ ಭಟ್ ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು. ಪದ್ಮಪ್ಪ ಗೌಡ ಕೆದಂಬಾಡಿ ವಂದಿಸಿದರು.


ನೃತ್ಯ ಸಂಭ್ರಮ:

ನೃತ್ಯ ನಿನಾದ, ಆಲಂಕಾರು ಕಡಬ ಇಲ್ಲಿನ ವಿದ್ಯಾರ್ಥಿಗಳಿಂದ ವಿದುಷಿ ಪ್ರಮೀಳಾ ಲೋಕೇಶ್‌ರವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಾ.೧ರಂದು ಬೆಳಿಗ್ಗೆ ಉಷ:ಪೂಜೆ, ಮಹಾಗಣಪತಿ ಯಾಗ, ಮಹಾವಿಷ್ಣು ಯಾಗ, ಬೆಳಿಗ್ಗೆ ೭-೫೦ರಿಂದ ೮.೩೦ರ ತನಕ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಿತು. ಬಳಿಕ ದೈವಗಳ ಪುನರ್ ಪ್ರತಿಷ್ಠೆ, ನಾಗದೇವರಿಗೆ ನೂತನ ಬಿಂಬ ಪ್ರತಿಷ್ಠೆ, ದೈವಗಳಿಗೆ ಸಾನಿಧ್ಯ ಕಲಶಾಭಿಷೇಕ, ತಂಬಿಲ ಸೇವೆ, ಆಹ್ವಾನಿತ ಭಜನಾ ತಂಡಗಳಿಂದ ಭಜನೆ ನಡೆಯಿತು. ಮಧ್ಯಾಹ್ನ ವಿಷ್ಣು ಯಾಗದ ಪೂರ್ಣಾಹುತಿ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಪರ್ಲತ್ತಾಯ ಪ್ರತಿಷ್ಠಾನದವರು, ಬ್ರಹ್ಮಕಲಶೋತ್ಸವ ಸಮಿತಿಯವರು ಹಾಗೂ ಊರ ಪರವೂರ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.

ಇಂದು ಪ್ರತಿಷ್ಠಾ ದಿನಾಚರಣೆ

ಮಾ.೨ರಂದು ಪ್ರತಿಷ್ಠಾ ದಿನಾಚರಣೆಯ ಅಂಗವಾಗಿ ಬೆಳಿಗ್ಗೆ ವೈದಿಕ ಮತ್ತು ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದುರ್ಗಾಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ.

LEAVE A REPLY

Please enter your comment!
Please enter your name here