ನೆಲ್ಯಾಡಿ: ಯೂನಿಯನ್ ಬ್ಯಾಂಕ್‌ನ ಸ್ಪೆಷಲ್ ಅಸಿಸ್ಟೆಂಟ್ ಕೆ.ವಾಮನರಿಗೆ ಬೀಳ್ಕೊಡುಗೆ

0

ನೆಲ್ಯಾಡಿ: ಯೂನಿಯನ್ ಬ್ಯಾಂಕ್‌ನ ನೆಲ್ಯಾಡಿ ಶಾಖೆಯಲ್ಲಿ ಕಳೆದ ಮೂರುವರೇ ವರ್ಷದಿಂದ ಸ್ಪೆಷಲ್ ಅಸಿಸ್ಟೆಂಟ್ ಆಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಕೆ.ವಾಮನ ಅವರಿಗೆ ಸಾರ್ವಜನಿಕರ ಪರವಾಗಿ ಬೀಳ್ಕೊಡುಗೆ ಸಮಾರಂಭ ಫೆ.28 ರಂದು ಸಂಜೆ ನೆಲ್ಯಾಡಿ ಯೂನಿಯನ್ ಬ್ಯಾಂಕ್‌ನ ಕಚೇರಿಯಲ್ಲಿ ನಡೆಯಿತು.


ಸ್ವಾಗತಿಸಿ ಮತನಾಡಿದ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌ರವರು, ಕೆ.ವಾಮನ ಅವರು ನೆಲ್ಯಾಡಿಯ ಜನರೊಂದಿಗೆ ಬೆರೆತು ಉತ್ತಮ ರೀತಿಯ ಸೇವೆ ನೀಡಿದ್ದಾರೆ. ಅವರ ಸೇವೆ ಈ ಊರಿನ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಲಿದೆ. ಇಂಡಿಯನ್ ಆರ್ಮಿಯಲ್ಲಿ 17 ವರ್ಷ ಹಾಗೂ ಯೂನಿಯನ್ (ಕಾರ್ಪೋರೇಷನ್) ಬ್ಯಾಂಕ್‌ನಲ್ಲಿ 23 ವರ್ಷ ಸೇರಿ ಒಟ್ಟು 40 ವರ್ಷದ ಸುದೀರ್ಘ ಸೇವೆಯಿಂದ ನಿವೃತ್ತಿಯಾಗುತ್ತಿರುವ ಕೆ.ವಾಮನ ಅವರ ವಿಶ್ರಾಂತ ಜೀವನವು ಸುಖಮಯವಾಗಿರಲಿ. ದೇವರು ಅವರಿಗೆ ಆರೋಗ್ಯ ಕರುಣಿಸಲಿ ಎಂದು ಹಾರೈಸಿದರು.

ನೆಲ್ಯಾಡಿ ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್‌ರವರು ಮಾತನಾಡಿ, ಕೆ.ವಾಮನ ಅವರು ಬ್ಯಾಂಕ್‌ನ ಗ್ರಾಹಕರೊಂದಿಗೆ ಬೆರೆತು ನಗುಮುಖದ ಸೇವೆ ನೀಡಿದ್ದಾರೆ. ಈ ಮೂಲಕ ಊರಿನ ಜನರ ಪ್ರೀತಿಗೂ ಪಾತ್ರರಾಗಿದ್ದಾರೆ. ಸೇವೆಯಿಂದ ನಿವೃತ್ತರಾಗುವ ಅವರ ಮುಂದಿನ ಜೀವನವು ಸುಖಮಯವಾಗಿರಲೆಂದು ಹಾರೈಸಿದರು.

ಯೂನಿಯನ್ ಬ್ಯಾಂಕ್‌ನ ನೆಲ್ಯಾಡಿ ಶಾಖಾ ವ್ಯವಸ್ಥಾಪಕ ಅಲೋಕ್, ಮಂಗಳೂರು ಶಾಖಾ ಪ್ರಬಂಧಕ ಸಂದೇಶ್‌ರವರು ಮಾತನಾಡಿ ಶುಭಹಾರೈಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ವಾಮನ ಅವರು ಮಾತನಾಡಿ, ಇಂಡಿಯನ್ ಆರ್ಮಿಯಲ್ಲಿ 19 ವರ್ಷ ಹಾಗೂ ಕಾರ್ಪೋರೇಷನ್ ಬ್ಯಾಂಕ್‌ನಲ್ಲಿ 23 ವರ್ಷ ಸೇವೆ ಸಲ್ಲಿಸಿದ್ದೇನೆ. ಸೇವಾ ಅವಧಿಯಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡಿದ್ದೇನೆ. ಈ ಊರಿನ ಜನರ ಪ್ರೀತಿ, ವಿಶ್ವಾಸಕ್ಕೆ ಅಭಾರಿಯಾಗಿದ್ದೇನೆ ಎಂದರು. ಡಾ.ಎ.ಪಿ.ಜೆ.ಅಬ್ದುಲ್ ಕಲಾಂರವರು ಹೈದ್ರಬಾದ್‌ನ ಡಿಆರ್‌ಡಿಎಲ್ ನಿರ್ದೇಶಕರಾಗಿದ್ದು, ಮಿಸೈಲ್ ಟೆಸ್ಟ್ ಸಂದರ್ಭದಲ್ಲಿ ಅವರ ಜೊತೆ 3 ತಿಂಗಳು ಕೆಲಸ ಮಾಡುವ ಸೌಭಾಗ್ಯ ಸಿಕ್ಕಿದೆ. ಅಬ್ದುಲ್ ಕಲಾಂರವರು ರಾಷ್ಟ್ರಪ್ರತಿಯಾಗಿ ಸೇವೆ ಸಲ್ಲಿಸಿದ ಬಳಿಕ ಬ್ಯಾಂಕ್‌ಗೆ ಭೇಟಿ ನೀಡಿದ ಸಂದರ್ಭದಲ್ಲೂ ಅವರ ಭೇಟಿ ಮಾಡುವ ಸೌಭಾಗ್ಯವೂ ಸಿಕ್ಕಿರುವುದು ಸೇವಾ ಅವಧಿಯಲ್ಲಿ ಅತೀವ ಸಂತಸ ತಂದಿದೆ ಎಂದು ಕೆ.ವಾಮನ ಹೇಳಿದರು.


ನೆಲ್ಯಾಡಿಯ ಹೋಟೆಲ್ ಗುರುಕೃಪಾದ ಮಾಲಕ ಕುಶಾಲಪ್ಪ ಕೋಟ್ಯಾನ್, ನೆಲ್ಯಾಡಿ ಜೈನ್ ಆಯಿಲ್‌ನ ಸಂತೋಷ್‌ಕುಮಾರ್, ವಾಣಿಶ್ರೀ ಜ್ಯುವೆಲರ್‍ಸ್‌ನ ದಯಾನಂದ ಆಚಾರ್ಯ, ಭಾರತ್ ಆಟೋ ಕಾರ್‍ಸ್‌ನ ಲಕ್ಷ್ಮೀಶ ಪೂಂಜ, ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯ ಬಾಲಕೃಷ್ಣ ಅಲೆಕ್ಕಿ, ಪ್ರಗತಿಪರ ಹೈನುಗಾರ ಜೀಬಿ ಜೋಯ್ ನೆಲ್ಯಾಡಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಕೌಕ್ರಾಡಿ ಗ್ರಾ.ಪಂ.ಸದಸ್ಯ ಲೋಕೇಶ್ ಬಾಣಜಾಲು ವಂದಿಸಿದರು.

ಸನ್ಮಾನ:

ಕೆ.ವಾಮನ ಅವರಿಗೆ ಶಾಲು, ಪೇಟ, ಹಾರಾರ್ಪಣೆ, ಫಲತಾಂಬೂಲ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು. ಯೂನಿಯನ್ ಬ್ಯಾಂಕ್ ಹಾಗೂ ನೆಲ್ಯಾಡಿಯ ವತ್ಕರು, ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಗ್ರಾಮಸ್ಥರು ಹೂವಿನ ಬೊಕ್ಕೆ ನೀಡಿ ಶುಭಹಾರೈಸಿದರು.

LEAVE A REPLY

Please enter your comment!
Please enter your name here