ಬೊಳುವಾರುನಲ್ಲಿ ಸರಕಾರಿ ಪ್ರ.ದ.ಮಹಿಳಾ ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ

0

ನಗರಸಭೆ ಅಮೃತ ನಗರೋತ್ಥಾನದ ಕಾಮಗಾರಿಗಳಿಗೆ ಚಾಲನೆ

ಬರುವ ಶೈಕ್ಷಣಿಕ ವರ್ಷ ಹೊಸ ಕಟ್ಟಡದಲ್ಲಿ -ಸಂಜೀವ ಮಠಂದೂರು
ಶೈಕ್ಷಣಿಕ ಕ್ಷೇತ್ರಕ್ಕೆ ರೂ.104 ಕೋಟಿ ಅನುದಾನ ತರಿಸಿದ ಏಕೈಕ ಶಾಸಕ ಮಠಂದೂರು-ಜೀವಂಧರ್ ಜೈನ್
ಮಹಿಳಾ ಪ್ರಥಮ ದರ್ಜೆ ಕಾಲೇಜು ಮೂಲಕ ಅಚ್ಛೇ ದಿನ್- ಸಂತೋಷ್
ಪುತ್ತೂರುನಲ್ಲಿ ಇತಿಹಾಸ ಬರೆದಿಡುವ ದಿನ ಡಾ| ಶ್ರೀಧರ್ ಗೌಡ ಪಿ
ಸುಶಿಕ್ಷಿತ ಮಹಿಳೆ ನಮ್ಮ ಸಮಾಜದ ಆಸ್ತಿ, ಶಕ್ತಿ -ಡಾ. ಗಿರಿಧರ್ ರಾವ್

ಪುತ್ತೂರು:ಬೊಳುವಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 1.5 ಎಕ್ರೆ ಜಾಗದಲ್ಲಿ ಶಾಲೆಯನ್ನು ಉಳಿಸಿಕೊಂಡು ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಮಾ.6 ರಂದು ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.ಇದೇ ಸಂದರ್ಭದಲ್ಲಿ ಅಮೃತ ನಗರೋತ್ಥಾನ ಯೋಜನೆಯಡಿ ಬೊಳುವಾರು ವಾರ್ಡ್ ಮಟ್ಟದ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು.ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅಮೃತ ನಗರೋತ್ಥಾನದ ಕಾಮಗಾರಿಗಳಿಗೆ ಚಾಲನೆ ನೀಡಿದರು.


ಬರುವ ಶೈಕ್ಷಣಿಕ ವರ್ಷ ಹೊಸ ಕಟ್ಟಡದಲ್ಲಿ:


ನೂತನ ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ ಶಾಸಕ ಸಂಜೀವ ಮಠಂದೂರು ಅವರು ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಅತೀ ಹೆಚ್ಚು ಸರಕಾರಿ ಕಾಲೇಜು ಇರುವ ಏಕೈಕ ವಿಧಾನಸಭಾ ಕ್ಷೇತ್ರ ಪುತ್ತೂರು, ಹಾಗಾಗಿ ಇವತ್ತು ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಿಯುವವರು ಸರಸ್ವತಿಯಂತೆ, ದುರ್ಗೆಯಂತೆ, ಕಿತ್ತೂರು ಚೆನ್ನಮ್ಮನಂತೆ, ರಾಣಿ ಅಬ್ಬಕ್ಕನ ತರ ಆಗಬೇಕೆಂಬುದು ನಮ್ಮೆಲ್ಲರ ಕಲ್ಪನೆ.ಹಾಗಾಗಿ ಇವತ್ತು ಸರಸ್ವತಿ ವಿದ್ಯಾಲಯಕ್ಕೆ ಅಡಿಗಲ್ಲು ಹಾಕುವ ಕಾರ್ಯಕ್ರಮ ಮಾಡಿದ್ದೇವೆ.ಮುಂದಿನ ಶೈಕ್ಷಣಿಕ ವರ್ಷ ಇದೇ ಹೊಸ ಕಟ್ಟಡದಲ್ಲಿ ಆಗಲಿದೆ ಎಂದು ಹೇಳಿದರು.


ನಾನು ಶಾಸಕನಾಗಿ 5 ವರ್ಷದಿಂದ ಈ ಕಟ್ಟಡಕ್ಕೆ ಹಲವು ಪ್ರಯತ್ನ ಮಾಡಿದ್ದೆ.ನಾನು ವಿರೋಧ ಪಕ್ಷದಲ್ಲಿದ್ದಾಗ ಈ ಕಟ್ಟಡಕ್ಕೆ ನನ್ನ ಆತ್ಮೀಯರಾಗಿದ್ದ ಸಚಿವ ಜಿ.ಟಿ.ದೇವೆಗೌಡ ಅವರಲ್ಲಿ ಮನವಿ ಮಾಡಿದ್ದು ರೂ.4.30 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು.ಆ ಬಳಿಕ ಕಾಲೇಜಿಗಾಗಿ ಬನ್ನೂರು ಆನೆಮಜಲಿನಲ್ಲಿ ಮಂಜೂರುಗೊಂಡಿದ್ದ ಜಾಗದ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕೆಂದು ಪ್ರಯತ್ನ ನಡೆಯಿತು.ಹಿರಿಯರಾದ ಡಾ.ಎಂ.ಕೆಪ್ರಸಾದ್ ಭಂಡಾರಿ, ನಾವು ಜಾಗಕ್ಕೆ ಸಂಬಂಧಿಸಿದವರ ಮನೆಯಲ್ಲಿ ಸುಮಾರು 2 ಗಂಟೆ ಕೂತು ಮಾತನಾಡಿದ್ದೆವು.ಮಾತುಕತೆ ವಿಫಲವಾದಾಗ ಕೆಎಟಿಗೆ ಆಯಿತು.ಬಳಿಕ ಕೋವಿಡ್ ಬಂತು.2 ವರ್ಷ ಕೋರ್ಟ್ ಮುಂದೆ ಹೋಗಿಯೂ ಆರ್ಗ್ಯೂಮೆಂಟ್ ಆಗಿಲ್ಲ.ಈ ನಡುವೆ ದಿಶಾ ಸದಸ್ಯ ರಾಮ್‌ದಾಸ್ ಮತ್ತು ನಗರಸಭಾ ಸದಸ್ಯರಾದ ಸಂತೋಷ್ ಬೊಳುವಾರಿನ ಉತ್ತಮ ಜಾಗ ಹುಡುಕಿದ್ದಾರೆ.ಮಹಿಳೆಯರಿಗೆ ಶೈಕ್ಷಣಿಕ ವ್ಯವಸ್ಥೆಗೆ ಸಮಸ್ಯೆ ಆಗಬಾರದು.ರಸ್ತೆ ಬದಿಯಲ್ಲೇ ಕಾಲೇಜು ಇರಬೇಕು ಎಂದು ನಗರದ ಹೃದಯ ಭಾಗದಲ್ಲಿ, ಇತಿಹಾಸವಿರುವ ಬೊಳುವಾರು ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಟ್ಟಡ ಆಗುತ್ತಿದೆ.ಈ ಜಾಗ ಆಗಬೇಕಾದರೆ ಭರ್ತಿ ಒಂದು ವರ್ಷ ಆಗಿದೆ.ಯಾಕೆಂದರೆ ಎಲ್ಲವೂ ಲೀಗಲಿ ಪ್ರೊಸೆಸ್ ಆಗಬೇಕಾಗಿತ್ತು.ಈಗ ಯಾವುದೇ ಅಡೆತಡೆ ಇಲ್ಲ. ಅನುದಾನವೂ ಇದೆ. ಈಗಾಗಲೇ ಇರುವ ರೂ.೫.೩ ಕೋಟಿ ಅನುದಾನದಲ್ಲಿ ಪೂರ್ಣ ಕಟ್ಟಡ ಆಗುವುದಿಲ್ಲ.ಇನ್ನಷ್ಟು ಅನುದಾನ ಬೇಕು.ಈ ಕಾಲೇಜು ಮಹಿಳಾ ಕಾಲೇಜು ನೂರಕ್ಕೆ ನೂರು ವ್ಯವಸ್ಥೆ ಹೊಂದಿರಬೇಕು.ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಇಲ್ಲಿನ ಮೂಲಭೂತ ಸೌಲಭ್ಯ ಇರಬೇಕು.ಈಗಾಗಲೇ ಸುಮಾರು ೬೦೦ ಮಂದಿ ವಿದ್ಯಾರ್ಥಿನಿಯರು ಇಲ್ಲಿ ಶಿಕ್ಷಣ ಕಲಿಯುತ್ತಿದ್ದಾರೆ.ಯಾವುದೇ ಖಾಸಗಿ ಕಾಲೇಜಿಗೂ ಕಡಿಮೆ ಇಲ್ಲ ಎಂಬಂತೆ ಮಾದರಿಯಾಗಿ ಕಾಲೇಜು ನಡೆಯಲಿ ಎಂದ ಶಾಸಕರು, ಇದೀಗ ನನ್ನ ಶಾಸಕತ್ವದ ಕೊನೆಯ ಅವಧಿಯಲ್ಲಿ ನಾನಿzನೆ.ನೀವೆಲ್ಲ ಆಶೀರ್ವಾದ ಮಾಡಿದರೆ ನಾನು ಪ್ರಥಮ ಆದ್ಯತೆಯಲ್ಲಿ ಬರುವ ಸಲವೂ ನೂರಕ್ಕೆ ನೂರು ಈ ಕಾಲೇಜಿಗೆ ಇನ್ನಷ್ಟು ಅನುದಾನ ನೀಡಲಿದ್ದೇನೆ ಎಂದರು.


ಶೈಕ್ಷಣಿಕ ಕ್ಷೇತ್ರಕ್ಕೆ ರೂ.೧೦೪ ಕೋಟಿ ಅನುದಾನ ತರಿಸಿದ ಏಕೈಕ ಶಾಸಕರು:

ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ಕಳೆದ ೫ ವರ್ಷಗಳ ಅವಧಿಯಲ್ಲಿ ಅಂಗನವಾಡಿಯಿಂದ ಹಿಡಿದು ಕಾಲೇಜು ತನಕ ಶೈಕ್ಷಣಿಕ ಕ್ಷೇತ್ರಕ್ಕಾಗಿ ಸುಮಾರು ರೂ.೧೦೪ ಕೋಟಿ ಅನುದಾನ ತರಿಸಿದ ಏಕೈಕ ಶಾಸಕರಾಗಿರುವ ಸಂಜೀವ ಮಠಂದೂರು ಅವರಿಂದ ಇವತ್ತು ನೂತನ ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿದೆ.ಮಹಿಳಾ ಕಾಲೇಜಿನ ಕಟ್ಟಡಕ್ಕೆ ಹಲವಾರು ಹೋರಾಟವೇ ನಡೆದಿದೆ.ನಗರಸಭೆಯಲ್ಲೂ ವಿವಿಧ ಅಭಿವೃದ್ಧಿ ನಡೆಯುತ್ತಿದ್ದಂತೆ ಮಹಿಳಾ ಕಾಲೇಜು ಕಟ್ಟಡವೂ ಅದಕ್ಕೆ ಪೂರಕವಾಗಿದೆ.ನಗರಸಭೆ ದಿನದಿಂದ ದಿನ ಬೆಳೆಯುತ್ತಿದೆ. ಶಾಸಕರ ಮುತುವರ್ಜಿಯಿಂದ ಕಳೆದ ೫ ವರ್ಷದಿಂದ ನಗರಸಭೆಯಲ್ಲಿ ಒಳ್ಕೆಯ ರಸ್ತೆ, ದಾರಿ ದೀಪ, ೧೧ ಬಸ್ ಪ್ರಯಾಣಿಕರ ತಂಗುದಾಣ, ೭ ಪಾರ್ಕ್‌ಗಳು ನಿರ್ಮಾಣ ಆಗಿದೆ ಎಂದರು.


ಮಹಿಳಾ ಪ್ರಥಮ ದರ್ಜೆ ಕಾಲೇಜು ಮೂಲಕ ಅಚ್ಛೇ ದಿನ್:

ನಗರಸಭಾ ಸ್ಥಳೀಯ ಸದಸ್ಯ ಸಂತೋಷ್ ಬೊಳುವಾರು ಅವರು ಮಾತನಾಡಿ ಈ ಭಾಗದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಯೊಂದಿಗೆ ಇದೀಗ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣ ಆಗುವ ಮೂಲಕ ಈ ಭಾಗಕ್ಕೆ ಅಚ್ಚೇದಿನ್ ಬಂದಿದೆ.ಬೊಳುವಾರು ಶಾಲೆಯು ಮುಂದಿನ ೪ ವರ್ಷದಲ್ಲಿ ಶತಮಾನ ಪೂರೈಸಲಿದೆ.ಈ ನಿಟ್ಟಿನಲ್ಲಿ ಶತಮಾನೋತ್ಸವ ಕಾರ್ಯಕ್ರಮಕ್ಕೆ ನೂತನ ಕಟ್ಟಡ, ಹಲವು ಕಾಮಗಾರಿಗಳಿಗೂ ಶಾಸಕರ ಮೂಲಕ ಅನುದಾನ ಸಿಗುವಂತಾಗಲಿ ಎಂದರು.


ಸುಶಿಕ್ಷಿತ ಮಹಿಳೆ ನಮ್ಮ ಸಮಾಜದ ಆಸ್ತಿ, ಶಕ್ತಿ:

ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ|ಗಿರಿಧರ್ ರಾವ್ ಅವರು ಮಾತನಾಡಿ ಕಟ್ಟಡದ ಕಾಮಗಾರಿಯು ನಮ್ಮ ಇಲಾಖೆಯ ಗೃಹ ಮಂಡಳಿಯ ವಲಯದ ಮೂಲಕ ಈ ಕೇಂದ್ರದಿಂದ ಪ್ರಾರಂಭವಾಗಲಿದೆ.ಇವತ್ತು ಸುಶಿಕ್ಷಿತ ಮಹಿಳೆ ನಮ್ಮ ಸಮಾಜದ ಆಸ್ತಿ, ಶಕ್ತಿ, ಈ ನಿಟ್ಟಿನಲ್ಲಿ ಪುತ್ತೂರಿನ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ಮಾದರಿಯಾಗಲಿ ಎಂದರು.


ಪುತ್ತೂರಿನಲ್ಲಿ ಇತಿಹಾಸ ಬರೆದಿಡುವ ದಿನ:

ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ಶ್ರೀಧರ್ ಗೌಡ ಪಿ ಅವರು ಸ್ವಾಗತಿಸಿ ಮಾತನಾಡಿ, ಒಂದು ರಾಷ್ಟ್ರ ಹಾಳುಗೆಡವಲು ಯುದ್ದ ಬೇಕಾಗಿಲ್ಲ ಅಲ್ಲಿನ ಶಿಕ್ಷಣ ವ್ಯವಸ್ಥೆ ಹಾಳಾದರೆ ಸಾಕು ಎಂಬಂತೆ ಶಿಕ್ಷಣ ಸದೃಢವಾದರೆ ರಾಷ್ಟ್ರವು ಗಟ್ಟಿಯಾಗುತ್ತದೆ.ಈ ನಿಟ್ಟಿನಲ್ಲಿ ಹಲವು ವರ್ಷಗಳ ಬೇಡಿಕೆಯಂತೆ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಪುತ್ತೂರಿನ ಇತಿಹಾಸದಲ್ಲಿ ಬರೆದಿಡುವ ದಿನವಾಗಿದೆ.೨೦೧೪ರಲ್ಲಿ ನೆಲ್ಲಿಕಟ್ಟೆಯಲ್ಲಿ ಕೇವಲ ೧೨೦ ವಿದ್ಯಾರ್ಥಿಗಳಿಂದ ಆರಂಭಗೊಂಡ ನಮ್ಮ ಕಾಲೇಜಿನಲ್ಲಿ ಇವತ್ತು ೬೦೦ಕ್ಕೂ ಅಧಿಕ ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ.ಕಾಲೇಜಿನ ಜಾಗಕ್ಕೆ ಹಲವು ಸಮಸ್ಯೆಗಳನ್ನು ಇತ್ಯರ್ಥ ಮಾಡಲು ಹಲವು ಸಮಯ ಹೋಯಿತು.ಅದು ಅಸಾಧ್ಯವಾದಾಗ ಬೊಳುವಾರಿನಲ್ಲಿ ಜಾಗ ಲಭಿಸಿದೆ.ಈ ಹಿಂದೆ ಕಟ್ಟಡ ನಿರ್ಮಾಣಕ್ಕೆ ರೂ. ೧೦ ಕೋಟಿ ಇಡಲಾಗಿತ್ತು.ಇವತ್ತು ಅದು ರೂ. ೧೫ ಕೋಟಿಗೆ ಏರಿರಬಹುದು. ಎಂದರು.


ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ದಿಶಾ ನಾಮನಿರ್ದೇಶಿತ ಸದಸ್ಯ ರಾಮದಾಸ್ ಹಾರಾಡಿ, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನಾರಾಯಣ ಭಟ್, ಕರ್ನಾಟಕ ಗೃಹ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಎ.ವಿಜಯ ಕುಮಾರ್ ಭಂಡಾರಿ, ಬೊಳುವಾರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ನಿವೇದಿತ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ| ನರೇಂದ್ರ ರೈ ದೇರ್ಲ, ಪ್ರೊ|ಶಾಂತಾರಾಮ್, ಡಾ|ಗೋಪಾಲಕೃಷ್ಣ , ಅಬ್ದುಲ್ ಕುಂಞಿ, ಪ್ರವೀಣ್, ಪೂರ್ಣಿಮಾ ರೈ, ಪದ್ಮಜ ಅತಿಥಿಗಳನ್ನು ಗೌರವಿಸಿದರು.ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಪ್ರೊ| ಐವನ್ ಲೋಬೊ ವಂದಿಸಿದರು.ಉಪನ್ಯಾಸಕ ವಸಂತ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರಾದ ಶರಾವತಿ, ವತ್ಸಲಾ ರಾಜ್ಞಿ, ಸಂಪತ್ ಕುಮಾರ್, ಜ್ಯೋತಿ ಆರ್ ನಾಯಕ್, ಜಯಶ್ರೀ ಎಸ್ ಶೆಟ್ಟಿ, ಪ್ರಭಾ ಅಚಾರ್ಯ, ಬೊಳುವಾರು ಹಿರಿಯ ಪ್ರಾಥಮಿಕ ಶಾಲಾ ಎಸ್‌ಡಿಎಮ್‌ಸಿ ಸದಸ್ಯರಾದ ನಿಶ್ಮಿತಾ, ಬಾಲಾಕ್ಷಿ, ವಾರಿಜಾ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಮಾಜಿ ಪುರಸಭಾ ಅಧ್ಯಕ್ಷರಾದ ರಾಜೇಶ್ ಬನ್ನೂರು, ಗಣೇಶ್ ರಾವ್, ಲತಾ ಗಣೇಶ್ ರಾವ್, ಪ್ರೇಮಲತಾ ರಾವ್, ನಗರಸಭೆ ಸದಸ್ಯರಾದ ಗೌರಿ ಬನ್ನೂರು, ಪ್ರೇಮಲತಾ ನಂದಿಲ, ಪದ್ಮನಾಭ ಪಡೀಲು, ದೀಕ್ಷಾ ಪೈ, ಶಿವರಾಮ್, ಮೋಹಿನಿ ವಿಶ್ವನಾಥ ಗೌಡ, ನವೀನ್, ವಸಂತ ಕಾರೆಕಾಡು, ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ಸ್ಥಳೀಯರಾದ ಆಸ್ಕರ್ ಆನಂದ್, ಸತೀಶ್ ಪಡಿವಾಳ್, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಾನ್ ಕುಟಿನ್ಹಾ, ಉಸ್ಮಾನ್ ಹೆಚ್, ಕೃಷ್ಣಾನಂದ ಸೂರ್ಯ, ನೀಲಂತ್ ಕುಮಾರ್, ಸದಾನಂದ ಮತ್ತು ದಯಾನಂದ, ಬಿಜೆಪಿ ಬೂತ್ ಅಧ್ಯಕ್ಷರಾದ ದಯಾಕರ್, ಪ್ರದೀಪ್, ಬೆಟ್ಟಂಪಾಡಿ ಕಾಲೇಜಿನ ಪ್ರಾಂಶುಪಾಲ ಡಾ| ವರದರಾಜ್ ಚಂದ್ರಗಿರಿ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ, ಜಕಾರಿಯಾ, ಸುಧೀರ್ ಕೆ.ವೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ವೇ ಮೂ ಆಶ್ಲೇಷ ಭಟ್ ಮತ್ತು ವೇ ಮೂ ಮುಕುಂದ ಭಟ್ ಶಿಲಾನ್ಯಾಸ ವೈದಿಕ ಕಾರ್ಯಕ್ರಮ ನೆರವೇರಿಸಿದರು.

ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ:
ಬೊಳುವಾರು ಮುಖ್ಯರಸ್ತೆಯಿಂದ ತಿರುಮಲ ಶೋರೂಮ್ ತನಕ ರಸ್ತೆ ಅಗಲೀಕರಣ ಮತ್ತು ಮರು ಡಾಮರೀಕರಣ, ಕರ್ಮಲ ಮಹಾಲಕ್ಷ್ಮೀ ಮಂದಿರ ರಸ್ತೆ ಅಭಿವೃದ್ಧಿ ಡಾ.ನಿತ್ಯಾನಂದ ಪೈ ಮನೆ ಬಳಿಯ ರಸ್ತೆ ಅಭಿವೃದ್ಧಿ ಸಹಿತ ವಿವಿಧ ಕಾಮಗಾರಿಗಳಿಗೆ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಚಾಲನೆ ನೀಡಿದರು.ಗುತ್ತಿಗೆದಾರ ವೇದ ಕುಮಾರ್ ಅವರನ್ನು ಗೌರವಿಸಲಾಯಿತು.

ಕಾಲೇಜು ಕಟ್ಟಡ ಯು ಆಕಾರದಲ್ಲಿರಲಿದೆ :
ರೂ.೫.೩ ಕೋಟಿಯಲ್ಲಿ ನಿರ್ಮಾಣವಾಗಲಿರುವ ನೂತನ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ `ಯು’ ಆಕಾರದಲ್ಲಿ ಬರಲಿದ್ದು, ಸದ್ಯ ಪ್ರಥಮ ಹಂತದ ಕಟ್ಟಡದಲ್ಲಿ ೯ ತರಗತಿ ಕೊಠಡಿಗಳು, ಪ್ರಾಂಶುಪಾಲರ ಕಚೇರಿ, ಆಡಳಿತ ಕಚೇರಿ, ಎರಡು ಸಿಬ್ಬಂದಿಗಳ ಕೊಠಡಿ, ಎರಡು ವಿಶ್ರಾಂತಿ ಕೊಠಡಿ, ಎರಡು ದೊಡ್ಡ ಶೌಚಾಲಯಗಳ ವ್ಯವಸ್ಥೆ ಇರಲಿದೆ.

LEAVE A REPLY

Please enter your comment!
Please enter your name here