ಬಿಹಾರದಲ್ಲಿ ಪಿಎಂ ಕಾರ್ಯಕ್ರಮದಲ್ಲಿ ಗಲಭೆ ಸೃಷ್ಟಿಸಲು ಯತ್ನ, ಬಂಧಿತ ಆರೋಪಿಗಳಿಗೆ ಹಣಕಾಸಿನ ನೆರವು ವಿಚಾರದ ತನಿಖೆ – ಇರ್ದೆ ಮಣ್ಣಾಪು ನಿವಾಸಿ ಸಹಿತ ಐವರು ಎನ್‌ಐಎ ವಶಕ್ಕೆ

0

ಮಂಗಳೂರು: ಬಿಹಾರದ ಪಾಟ್ಣಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ವೇಳೆ ಬಾಂಬ್ ಸ್ಪೋಟಿಸಿ ವಿಧ್ವಂಸಕ ಕೃತ್ಯ ನಡೆಸಲು ಯತ್ನಿಸಿದ್ದ ಆರೋಪಿಗಳಿಗೆ ಹಣಕಾಸಿನ ನೆರವು ಒದಗಿಸಿದ ವಿಚಾರಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದವರು ಕಾರ್ಯಾಚರಣೆ ನಡೆಸಿ ಇರ್ದೆ ನಿವಾಸಿಯೋರ್ವನ ಸಹಿತ ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇರ್ದೆ ಗ್ರಾಮದ ಮಣ್ಣಾಪು ನಿವಾಸಿ ಹಾಜಿ ಮಹಮ್ಮದ್ ಎಂಬವರ ಪುತ್ರ ರಫೀಕ್, ಬಂಟ್ವಾಳದ ನಂದಾವರ ನಿವಾಸಿಗಳಾದ ಮಹಮ್ಮದ್ ಸಿನಾನ್, ಇಕ್ಬಾಲ್, ಸರ್ಪಾಝ್ ನವಾಝ್, ನೌಫಲ್ ಎಂಬವರನ್ನು ಎನ್‌ಐಎ ತಂಡ ವಶಕ್ಕೆ ಪಡೆದುಕೊಂಡಿದೆ. ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಯತ್ನಿಸಿದ್ದ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಇವರಿಗೆ ಆರ್ಥಿಕ ನೆರವು ನೀಡಲಾದ ವಿಚಾರದಲ್ಲಿ ತನಿಖೆ ನಡೆಸುತ್ತಿರುವ ಎನ್‌ಐಎ ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ. ಕಳೆದ ಹಲವು ತಿಂಗಳಿನಿಂದ ಇವರ ವ್ಯವಹಾರದ ಮೇಲೆ ಎನ್‌ಐಎ ನಿಗಾವಿರಿಸಿತ್ತು. ಹಲವು ಬ್ಯಾಂಕ್ ಖಾತೆಗಳಿಗೆ ಇವರ ಖಾತೆಯಿಂದ ನಿರಂತರವಾಗಿ, ಸಂಶಯಾಸ್ಪದ ರೀತಿಯಲ್ಲಿ ಹಣ ವರ್ಗಾವಣೆಯಾಗಿದ್ದ ಮಾಹಿತಿ ಹಿನ್ನೆಲೆಯಲ್ಲಿ ಎನ್‌ಐಎ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಇವರಿಗೆ ಹಣ ಎಲ್ಲಿಂದ ಬಂತು ಎನ್ನುವುದರ ಬಗ್ಗೆ ತನಿಖೆ ಮುಂದುವರಿದಿದೆ. ಪಾಣೆಮಂಗಳೂರು ಹಾಗೂ ಮೆಲ್ಕಾರಿನ ಎರಡು ಆನ್‌ಲೈನ್ ಸೇವೆ ನೀಡುವ ಸೈಬರ್ ಸೆಂಟರ್‌ಗಳಿಗೆ ಮಾ.5ರಂದು ಮಧ್ಯಾಹ್ನ ಕೆಲವು ಅಧಿಕಾರಿಗಳು ದಾಳಿ ಮಾಡಿ ತಪಾಸಣೆ ನಡೆಸಿದ್ದರು.ಎಲ್ಲಾ ದಾಳಿ ವೇಳೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಬಂದೋಬಸ್ತ್ ನಡೆಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಮಣ್ಣಾಪು ರಫೀಕ್‌ರವರು ಬಳಿಕ ಊರಿಗೆ ಆಗಮಿಸಿ ಮದುವೆಯಾಗಿದ್ದರು.ಕೆಲವು ವರ್ಷಗಳ ಕಾಲ ಕೊಬ್ಬರಿ ವ್ಯಾಪಾರ ನಡೆಸುತ್ತಿದ್ದ ಅವರು ವ್ಯಾಪಾರದಲ್ಲಿ ನಷ್ಟ ಉಂಟಾದ ಕಾರಣಕ್ಕಾಗಿ ವ್ಯಾಪಾರ ಸ್ಥಗಿತಗೊಳಿಸಿದ್ದರು ಎಂದು ತಿಳಿದು ಬಂದಿದೆ.ಈ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here