ಕಡಿಮೆ ಮೊತ್ತ ಪಾವತಿ-ರೈತರ ಗಾಯದ ಮೇಲೆ ಬರೆ
ಡಿ.12ರಂದು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರು, ಸಿಇಒಗಳು, ತೋಟಗಾರಿಕೆ, ಇನ್ಸೂರೆನ್ಸ್ ಕಂಪೆನಿ ಅಧಿಕಾರಿಗಳ ಜೊತೆ ಸಭೆ-ಬಾಲ್ಯೊಟ್ಟು
ಅಧಿವೇಶನದಲ್ಲಿ ಪ್ರಸ್ತಾಪಿಸುವೆ- ಅಶೋಕ್ ಕುಮಾರ್ ರೈ
ಪುತ್ತೂರು: ದ.ಕ.ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಳುಮೆಣಸಿಗೆ ಸಂಬಂಧಿಸಿ ಹವಾಮಾನ ಆಧಾರಿತ ಬೆಳೆ ವಿಮೆ ಮೊತ್ತ ಕೃಷಿಕರ ಖಾತೆಗೆ ಡಿ.8ರಿಂದ ಜಮೆಯಾಗುತ್ತಿದ್ದು ಈ ಬಾರಿ ಬೆಳೆ ವಿಮಾ ಪರಿಹಾರ ಮೊತ್ತ ಬಹಳಷ್ಟು ಕಡಿಮೆ ದೊರೆತಿರುವುದರಿಂದ ಕೃಷಿಕರು ನಿರಾಶೆಗೊಳಗಾಗಿದ್ದಾರೆ.
ವಿಪರೀತ ಮಳೆಯಿಂದಾಗಿ ವ್ಯಾಪಕ ಕೊಳೆರೋಗ ಜೊತೆಗೆ ಅಡಿಕೆಗೆ ಹಳದಿ,ಎಲೆ ಚುಕ್ಕಿ ರೋಗದಿಂದಾಗಿ ಬಹಳಷ್ಟು ನಷ್ಟ ಅನುಭವಿಸಿ, ಬೆಳೆ ವಿಮಾ ಪರಿಹಾರ ಹಣವನ್ನು ನಂಬಿ ವಿವಿಧ ಯೋಜನೆಗಳನ್ನು ಹಾಕಿಕೊಂಡು ಕಾಯುತ್ತಿದ್ದ ಕೃಷಿಕರು, ಈ ಬಾರಿ ಬೆಳೆ ವಿಮಾ ಮೊತ್ತ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದರಿಂದ ಮತ್ತೆ ಚಿಂತೆಗೀಡಾಗಿದ್ದಾರೆ.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯು ಮಳೆ, ತಾಪಮಾನ, ಹಿಮ, ಇತ್ಯಾದಿ ಹವಾಮಾನದ ಪ್ರತಿಕೂಲ ಪರಿಸ್ಥಿತಿಯಿಂದ ಉಂಟಾಗುವ ಬೆಳೆ ನಷ್ಟಕ್ಕೆ ದೊರೆಯುವ ವಿಮಾ ಪರಿಹಾರವಾಗಿದೆ. ಇದರಲ್ಲಿ ವಿಮಾ ಪ್ರೀಮಿಯಂ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ರೈತರು ಸೇರಿ ಪಾವತಿಸುತ್ತಾರೆ.ಬಳಿಕ ನಷ್ಟದ ಅಂದಾಜಿನ ಮೇಲೆ ವಿಮಾ ಕಂಪೆನಿಯು ರೈತರ ಖಾತೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಮೊತ್ತವನ್ನು ಜಮೆ ಮಾಡುವುದು ನಿಯಮ.ಈ ಯೋಜನೆಯಡಿ ರೈತರು ಪ್ರತೀ ಹೆಕ್ಟೇರ್‌ಗೆ ಅನುಗುಣವಾಗಿ ವಿಮಾ ಕಂತು ಪಾವತಿ ಮಾಡಬೇಕಾಗಿದೆ. ಅಡಿಕೆ ಬೆಳೆಗೆ ಪ್ರತೀ ಹೆಕ್ಟೇರ್‌ಗೆ ಪ್ರೀಮಿಯಂ ಮೊತ್ತ ರೂ.6400 ಹಾಗೂ ಕಾಳುಮೆಣಸು ಬೆಳೆಗೆ ಪ್ರತೀ ಹೆಕ್ಟೇರ್‌ಗೆ ರೂ.2350 ಪ್ರೀಮಿಯಂ ಮೊತ್ತವನ್ನು ಈಗಾಗಲೇ ರೈತರು ಪಾವತಿ ಮಾಡಿದ್ದರು. ಅಡಿಕೆಗೆ ಒಂದು ಹೆಕ್ಟೇರ್‌ಗೆ ಗರಿಷ್ಟ ರೂ.1.28 ಲಕ್ಷ ಹಾಗೂ ಕಾಳುಮೆಣಸಿಗೆ ಗರಿಷ್ಟ ರೂ.46 ಸಾವಿರ ವಿಮಾ ಪರಿಹಾರವಾಗಿ ಪಡೆಯಲು ಅವಕಾಶವಿದೆ.ಇದನ್ನು ಆಧರಿಸಿ ವಿಮಾ ಕಂಪೆನಿ ಕಂತಿನ ಮೊತ್ತವನ್ನು ನಿಗದಿ ಪಡಿಸುತ್ತದೆ. ರೈತರ ಪಾಲಿನ ವಿಮಾ ಕಂತಿನ ಮೊತ್ತವು ಬೆಳೆ ವಿಮಾ ಮೊತ್ತದ ಶೇ.5ರಷ್ಟು ಆಗಿರುತ್ತದೆ.
ಈ ಬಾರಿ ಕಡಿಮೆ ಮೊತ್ತ
ವಿಪರೀತ ಮಳೆ ಹಾಗೂ ವಿವಿಧ ಕಾರಣಗಳಿಂದಾಗಿ ಬೆಳೆ ನಷ್ಟವಾಗಿ ಸಂಕಷ್ಟದಲ್ಲಿರುವ ಕೃಷಿಕರಿಗೆ ಈ ಬಾರಿ ದೊರೆತಿರುವ ಬೆಳೆ ವಿಮೆ ಪರಿಹಾರದ ಮೊತ್ತ ಸಮಾಧಾನ ಉಂಟು ಮಾಡಿಲ್ಲ.ಕೆಲವೊಂದು ಗ್ರಾಮಗಳಲ್ಲಿ ಪರಿಹಾರದ ಮೊತ್ತ ತೀರಾ ಕಡಿಮೆಯಾಗಿದೆ. ಪ್ರೀಮಿಯಂ ಮೊತ್ತಕ್ಕೆ ಅಲ್ಪ ಮೊತ್ತ ಸೇರಿಸಿ ಕೆಲವರಿಗೆ ಪರಿಹಾರ ಮೊತ್ತ ದೊರಕಿದ್ದರೆ ಕೆಲವರಿಗೆ ಪ್ರೀಮಿಯಂ ಮೊತ್ತದಷ್ಟೂ ಪರಿಹಾರ ದೊರೆತಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಈ ಸಾಲಿನ ಮಳೆಗಾಲದಲ್ಲಿ ಸುರಿದ ಭಾರೀ ಮಳೆಯ ಕಾರಣ ಅಡಿಕೆ ಫಸಲು ಕೊಳೆರೋಗಕ್ಕೆ ತುತ್ತಾಗಿ ಶೇ.80ರಷ್ಟು ನಷ್ಟವಾಗಿದೆ. ಅಲ್ಲದೆ ಮಳೆ ಗಾಳಿಗೆ ಅಡಿಕೆ ಮರಗಳು ಧರೆಗುರುಳಿದ್ದು ರೈತರು ಸಂಕಷ್ಟ ಅನುಭವಿಸಿದ್ದಾರೆ. ಜೊತೆಗೆ ಅಡಿಕೆಗೆ ಹಳದಿ, ಎಲೆ ಚುಕ್ಕಿ ರೋಗ ಕಾಣಿಸಿಕೊಂಡ ಪರಿಣಾಮ ವ್ಯಾಪಕ ಹಾನಿಯುಂಟಾಗಿದೆ. ಈ ಎಲ್ಲ ಕಾರಣಗಳಿಂದ ಬಹಳಷ್ಟು ನಷ್ಟ ಅನುಭವಿಸಿ, ಕೃಷಿ ಮಾಡೋದೇ ಬೇಡವೆನ್ನುವ ಸಂಕಷ್ಟದ ಸ್ಥಿತಿಯಲ್ಲಿದ್ದ ರೈತರು ಬೆಳೆ ವಿಮಾ ಪರಿಹಾರದ ಮೊತ್ತಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಕೃಷಿ ಕೆಲಸ ಸಹಿತ ವಿವಿಧ ಕೆಲಸಗಳಿಗಾಗಿ ವಿಮಾ ಮೊತ್ತವನ್ನೇ ನಂಬಿದ್ದ ಹಲವು ರೈತರು, ಈ ಬಾರಿ ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಮೊತ್ತ ಬೆಳೆ ವಿಮಾ ಪರಿಹಾರವಾಗಿ ದೊರೆಯಲಿದೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ದೊರೆತಿರುವ ಬೆಳೆ ವಿಮಾ ಪರಿಹಾರ ಕೃಷಿಕರಲ್ಲಿ ನಿರಾಶೆ ಜೊತೆ ಮತ್ತೆ ಚಿಂತೆಗೆ ಕಾರಣವಾಗಿದೆ.
ಮಳೆ ಮಾಪನದ ಅಸಮರ್ಪಕ ವರದಿ
ನಿರ್ಧಿಷ್ಟ ಅವಧಿಯೊಳಗೆ ಗ್ರಾಮವಾರು ಸುರಿದ ಮಳೆಯ ಪ್ರಮಾಣದ ಕುರಿತು ಮಳೆ ಮಾಪನದ ವರದಿಯ ಆಧಾರದಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಪಾವತಿಸಲಾಗುತ್ತದೆ. ಈ ಬಾರಿ ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದರೂ ತಾಲೂಕಿನ ಹೆಚ್ಚಿನ ಗ್ರಾಮಗಳಲ್ಲಿರುವ ಮಳೆ ಮಾಪಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದ ಪರಿಣಾಮ ಮಳೆಯ ಪ್ರಮಾಣದ ನಿಖರ ಮಾಹಿತಿ ದೊರೆಯದೇ ಇರುವುದರಿಂದಾಗಿ ವಿಮಾ ಮೊತ್ತ ಕಡಿಮೆ ದೊರೆಯಲು ಕಾರಣವಾಗಿದೆ. ಮಳೆ ಮಾಪನಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿ ಮಳೆಯ ನಿಖರ ಮಾಹಿತಿಯನ್ನು ಒದಗಿಸುತ್ತಿದ್ದಲ್ಲಿ ಈ ಬಾರಿ ಹಿಂದಿನ ವರ್ಷಗಳಿಗಿಂತಲೂ ಹೆಚ್ಚುವರಿ ಮೊತ್ತ ವಿಮಾ ಪರಿಹಾರವಾಗಿ ದೊರೆಯುವ ಸಾಧ್ಯತೆ ಇತ್ತು ಎನ್ನಲಾಗುತ್ತಿದೆ.
ಪ್ರತೀ ಬಾರಿ ನವೆಂಬರ್ ತಿಂಗಳಲ್ಲಿ ಬೆಳೆ ವಿಮಾ ಪರಿಹಾರ ಮೊತ್ತ ಜಮೆಯಾಗುತ್ತಿತ್ತು. ಈ ಬಾರಿ ತಾಂತ್ರಿಕ ಕಾರಣಗಳಿಂದ ಡಿಸೆಂಬರ್ ತಿಂಗಳಿನಲ್ಲಿ ರೈತರ ಖಾತೆಗಳಿಗೆ ಜಮೆಯಾಗುತ್ತಿದೆ. ಅದೂ ಕಡಿಮೆ ಮೊತ್ತ ಜಮೆಯಾಗುತ್ತಿರುವ ಬಗ್ಗೆ ರೈತರು ಪರಸ್ಪರ ಚರ್ಚಿಸತೊಡಗಿದ್ದು ಮುಂದೇನು ಮಾಡುವುದು ಎನ್ನುವ ಚಿಂತೆಯಲ್ಲಿದ್ದಾರೆ. ಸಮಸ್ಯೆ ಬಗ್ಗೆ ತೋಟಗಾರಿಕಾ ಇಲಾಖಾಧಿಕಾರಿಗಳಿಗೂ ದೂರು ಸಲ್ಲಿಸಿದ್ದಾರೆ. ಮುಂದಿನ ಒಂದು ವಾರದೊಳಗೆ ಸಂಪೂರ್ಣ ಮೊತ್ತ ಪರಿಹಾರ ಪಾವತಿಯಾಗುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಒಂದು ಬಾರಿ ವಿಮಾ ಮೊತ್ತ ಪಾವತಿಯಾದ ಬಳಿಕ ಇದು ಅಸಾಧ್ಯ ಎಂದು ಹೇಳಲಾಗುತ್ತಿದೆ.
ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ
ಈ ಬಾರಿ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಮೊತ್ತ ದೊರೆತಿರುವುದು ಬಹಳಷ್ಟು ಕಡಿಮೆಯಾಗಿದೆ ಎಂದು ಕೆಲವರು ನನ್ನ ಗಮನಕ್ಕೆ ತಂದಿದ್ದಾರೆ. ಪ್ರೀಮಿಯಂ ಮೊತ್ತದಷ್ಟೂ ವಿಮೆ ಪರಿಹಾರ ದೊರೆತಿಲ್ಲ ಎಂದೂ ಹೇಳಿದವರಿದ್ದಾರೆ. ಆದರೆ ಅಷ್ಟೊಂದು ಕಡಿಮೆಯಾಗಿಲ್ಲ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ತುಸು ಕಡಿಮೆಯಾಗಿರುವ ಮಾಹಿತಿ ಇದೆ. ಈ ಕುರಿತು ಅಧಿಕಾರಿಗಳಲ್ಲಿ ವಿಚಾರಿಸಿದಾಗ ಸುಳ್ಯ,ಬೆಳ್ತಂಗಡಿಯಲ್ಲಿ ಜಾಸ್ತಿ ಮಳೆಯಾಗಿತ್ತು. ಪುತ್ತೂರಲ್ಲಿ ಕಡಿಮೆ ಎಂದು ಮಾಹಿತಿ ನೀಡಿದ್ದಾರೆ. ಏನಿದ್ದರೂ ಕೃಷಿಕರಿಗಾಗಿರುವ ಸಮಸ್ಯೆ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ
ಅಶೋಕ್ ಕುಮಾರ್ ರೈ, ಶಾಸಕರು,ಪುತ್ತೂರು

ಮಳೆ ಮಾಪನ ಪರಿಶೀಲಿಸಲು ತೋಟಗಾರಿಕಾ ಇಲಾಖೆಗೆ ಮನವಿ
ಬೆಳೆ ವಿಮೆಯು ಗ್ರಾಮವಾರು ಮಳೆ ಮಾಪನ ವರದಿಯ ಆಧಾರದಲ್ಲಿ ಬಿಡುಗಡೆಗೊಳ್ಳುತ್ತಿರುವುದರಿಂದ ಕೆದಂಬಾಡಿ ಮತ್ತು ಕೆಯ್ಯೂರು ಗ್ರಾಮದ ಮಳೆ ಮಾಪನವನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುವಂತೆ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು ರವರು ಪುತ್ತೂರು ತೋಟಗಾರಿಕಾ ಇಲಾಖೆಗೆ ಮನವಿ ಮಾಡಿದ್ದಾರೆ. ರೈತರ ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ಮಳೆಹಾನಿಯಿಂದ ಉಂಟಾದ ನಷ್ಟವನ್ನು ಪರಿಶೀಲನೆ ಮಾಡಿ ಸಂಬಂಧಪಟ್ಟ ಇಲಾಖೆಗೆ ವರದಿ ನೀಡಿ ರೈತರಿಗೆ ಉತ್ತಮ ರೀತಿಯಲ್ಲಿ ಬೆಳೆ ವಿಮೆ ದೊರೆಯಲು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಿದ್ದಾರೆ. ಕೆದಂಬಾಡಿ ಮತ್ತು ಕೆಯ್ಯೂರು ಗ್ರಾಮಕ್ಕೆ ಅತೀ ಕಡಿಮೆ ಮೊತ್ತದ ಬೆಳೆ ವಿಮೆ ಬಿಡುಗಡೆಗೊಂಡಿದ್ದು, ತಾಲೂಕಿನ ಗ್ರಾಮವಾರು ಮಳೆ ಮಾಪನ ದೃಢೀಕೃತ ವರದಿ ನೀಡುವಂತೆ ಅವರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.
ಡಿ.12ರಂದು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರು, ಸಿಇಒ, ತೋಟಗಾರಿಕೆ, ಇನ್ಸೂರೆನ್ಸ್ ಕಂಪೆನಿ ಅಧಿಕಾರಿಗಳ ಜತೆ ಸಭೆ
ಪುತ್ತೂರು ತಾಲೂಕಿನಲ್ಲಿ ವಿಪರೀತ ಮಳೆ ಬಂದಿದೆ.ಕುಂಬ್ರ ಹಾಗೂ ಉಪ್ಪಿನಂಗಡಿಯಲ್ಲಿ ಮಳೆ ಮಾಪಕಗಳು ಇದೆ.ಆದರೆ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ರೈತರು ತಿಳಿಸಿದ್ದಾರೆ. ಪುತ್ತೂರು ತಾಲೂಕಿನಲ್ಲಿ ಹಿರಿಯ ರೈತರೋರ್ವರು 43 ಸಾವಿರ ರೂ.ವಿಮಾ ಪ್ರೀಮಿಯಂ ಕಟ್ಟಿದ್ದು ಅವರಿಗೆ ಅತ್ಯಲ್ಪ ಮೊತ್ತದ ವಿಮಾ ಮೊತ್ತ ಪಾವತಿಯಾಗಿರುವುದು ತಿಳಿದಿದೆ. ಎಲ್ಲಾ ರೈತರನ್ನು ಈಗಾಗಲೇ ಸಂಪರ್ಕಿಸುವ ಕೆಲಸ ಮಾಡಿದ್ದೇವೆ. ರೂ.10 ಸಾವಿರಕ್ಕಿಂತ ಹೆಚ್ಚಿನ ಮೊತ್ತ ಯಾವ ರೈತರಿಗೂ ಬಂದಿಲ್ಲ. ಬೆಳೆ ಹಾನಿಯಿಂದಾಗಿ ರಸಗೊಬ್ಬರ ಹಾಕಲು ಬೆಳೆವಿಮೆಯನ್ನು ನಂಬುವ ಸ್ಥಿತಿ ಬಂದಿದೆ. ಈ ಬಾರಿ ವಿಮಾ ಕಂಪೆನಿ ಬೇಜವಾಬ್ದಾರಿ ವರ್ತನೆ ಮಾಡಿದೆ. ಇದರ ಬಗ್ಗೆ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ|ರಾಜೇಂದ್ರ ಕುಮಾರ್‌ರವರಿಗೆ ತಿಳಿಸಿದ್ದೇವೆ. ಡಿ.12ರಂದು ಅಪರಾಹ್ನ 3 ಗಂಟೆಗೆ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಸಿಇಒಗಳು, ತೋಟಗಾರಿಕಾ ಇಲಾಖೆ ಹಾಗೂ ಇನ್ಸೂರೆನ್ಸ್ ಕಂಪೆನಿಯ ಅಧಿಕಾರಿಗಳ ಜತೆ ಸಭೆ ಕರೆಯಲಾಗಿದೆ. ಇದರಲ್ಲಿ ಸಹಕಾರ ಸಂಘಗಳ ಅಧ್ಯಕ್ಷರು, ಸಿಇಒಗಳು ಭಾಗವಹಿಸಬೇಕು. ಸಭೆಯಲ್ಲಿ ರೈತರ ಪರವಾಗಿ ಚರ್ಚೆ ಮಾಡಿ, ಮುಂದಿನ ಹಂತವಾಗಿ ಕೋರ್ಟಿಗೆ ಹೋಗುವ ಬಗ್ಗೆ ಅಥವಾ ಸರಕಾರಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ ನಿರ್ಧಾರ ಮಾಡಲಿದ್ದೇವೆ
ಶಶಿಕುಮಾರ್ ರೈ ಬಾಲ್ಯೊಟ್ಟು, ನಿರ್ದೇಶಕರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು
ಈ ಬಾರಿ ರೈತರು ಬೆಳೆವಿಮೆಯನ್ನೇ ಕಾದು ತೋಟಕ್ಕೆ ಗೊಬ್ಬರ ಹಾಕದೆ ಕುಳಿತಿದ್ದಾರೆ. ಇದೀಗ ಬೆಳೆ ವಿಮೆ ಪರಿಹಾರ ದೊರೆತರೂ ಬಹಳಷ್ಟು ಕಡಿಮೆಯಾಗಿದೆ. ಇದಕ್ಕಾಗಿ ನಮ್ಮ ಆಡಳಿತ ಮಂಡಳಿಯಲ್ಲಿ ಚರ್ಚೆ ಮಾಡಿ, ಸಂಘದ ವ್ಯಾಪ್ತಿಯ ರೈತರಿಗೆ ಒಂದು ತಿಂಗಳಿನ ಅವಧಿಗೆ ಗೊಬ್ಬರ ಖರೀದಿಗೆ ಬಡ್ಡಿ ರಹಿತ ಸಾಲ ನೀಡಲಾಗುವುದು. ಒಂದು ತಿಂಗಳ ಬಳಿಕ ಬಡ್ಡಿ ವಿಧಿಸಲಾಗುವುದು. ಇದನ್ನು ನಮ್ಮ ಸಂಘದಿಂದ ಒಂದು ವಾರದೊಳಗೆ ಜಾರಿ ಮಾಡುತ್ತೇವೆ.
ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಅಧ್ಯಕ್ಷರು, ಕೆದಂಬಾಡಿ ಕೆಯ್ಯೂರು ಪ್ರಾ.ಕೃ.ಪ.ಸ.ಸಂಘ