ಮನೆ ನಿವೇಶನಕ್ಕೆ ಜಾಗ ಮಂಜೂರುಗೊಳಿಸುವಂತೆ ಆಗ್ರಹ
ನೆಲ್ಯಾಡಿ: ಕೊಣಾಲು ಗ್ರಾಮದ ಕೋಲ್ಪೆಯಲ್ಲಿರುವ ಸರಕಾರಿ ಜಾಗವನ್ನು ಮನೆ ನಿವೇಶನಕ್ಕೆ ಮಂಜೂರುಗೊಳಿಸುವಂತೆ ಗೋಳಿತ್ತೊಟ್ಟು ಗ್ರಾಮಸಭೆಯಲ್ಲಿ ಕೋಲ್ಪೆ ನಿವಾಸಿಗಳು ಆಗ್ರಹಿಸಿದ್ದಾರೆ.
ಸಭೆ ಫೆ.27 ರಂದು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಟೇರಿ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಕಡಬ ತಾ.ಪಂ.ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಣಾಲು ಗ್ರಾಮದ ಕೋಲ್ಪೆಯಲ್ಲಿರುವ ಸರ್ವೆ ನಂ.29/1ರಲ್ಲಿನ 85 ಸೆಂಟ್ಸ್ ಸರಕಾರಿ ಜಾಗ ಮನೆ ನಿವೇಶನಕ್ಕೆ ಕಾದಿರಿಸಲಾಗಿದೆ. ಈ ಜಾಗದ ಮಂಜೂರಾತಿಗೆ ಗ್ರಾಮ ಪಂಚಾಯತ್ನಿಂದ ಎನ್ಒಸಿ ನೀಡುತ್ತಿಲ್ಲ ಯಾಕೆ. ಸದ್ರಿ ಜಾಗವನ್ನು ಸ್ಥಳೀಯ ನಿವಾಸಿಯೋರ್ವರು ಅತಿಕ್ರಮಣ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥ ಯು.ಕೆ.ಅಬ್ದುಲ್ ಹಮೀದ್ರವರು ಆರೋಪಿಸಿದರು. ಇದಕ್ಕೆ ಕೋಲ್ಪೆ ನಿವಾಸಿಗಳಾದ ಮಹಮ್ಮದ್ ಶಮೀರ್, ಎಸ್.ಹಮೀದ್ ಹಾಗೂ ಇತರರು ಧ್ವನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಜನಾರ್ದನ ಪಟೇರಿಯವರು, ಸದ್ರಿ ಜಾಗ ಕುಮ್ಕಿ ಜಾಗ ಆಗಿರುವುದರಿಂದ ಪಂಚಾಯತ್ಗೆ ಎನ್ಒಸಿ ನೀಡಲು ಆಗುವುದಿಲ್ಲ ಎಂದರು.
ಈ ವೇಳೆ ಮಾತನಾಡಿದ ಕೆ.ಕೆ.ಇಸ್ಮಾಯಿಲ್ರವರು, ಸದ್ರಿ ಜಾಗದಲ್ಲಿ ೧೩ ಕುಟುಂಬಗಳು ಕೆಲ ವರ್ಷದ ಹಿಂದೆ ಟೆಂಟ್ ಹಾಕಿ ವಾಸ್ತವ್ಯ ಹೂಡಿದ್ದರು. ಅವರನ್ನು ಪಂಚಾಯತ್ ಹಾಗೂ ಕಂದಾಯ ಇಲಾಖೆಯಿಂದ ತೆರವುಗೊಳಿಸಲಾಗಿತ್ತು. ಸದ್ರಿ ಜಾಗವನ್ನು ಸರ್ವೆ ಮಾಡಿ ಪಂಚಾಯತ್ಗೆ ಹಸ್ತಾಂತರ ಮಾಡಿ ನಿವೇಶನ ಹಂಚಲು ಕ್ರಮ ಕೈಗೊಳ್ಳುವುದಾಗಿ ಆಗ ತಹಶೀಲ್ದಾರ್ ಭರವಸೆ ನೀಡಿದ್ದರು. ಈಗ ಜಾಗದ ಸರ್ವೆ ಆದರೂ ನಿವೇಶನ ಹಂಚಿಕೆ ಆಗಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಕರಣಿಕ ಸತೀಶ್ ಅವರು, ೨ ದಿನದ ಹಿಂದೆಯಷ್ಟೇ ಕೊಣಾಲು ಗ್ರಾಮಕರಣಿಕನಾಗಿ ಬಂದಿದ್ದೆನೆ. ಸದ್ರಿ ಜಾಗದ ನಕ್ಷೆ ಆಗಿದೆ, ಪಂಚಾಯತ್ನಿಂದ ಎನ್ಒಸಿ ಸಿಗದೇ ಇರುವುದರಿಂದ ಪೆಂಡಿಂಗ್ ಆಗಿದೆ ಎಂಬ ಮಾಹಿತಿ ಇದೆ. ಇದಕ್ಕೆ ಕಾರಣ ತಿಳಿದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸದ್ರಿ ಜಾಗ ಅತಿಕ್ರಮಣಕ್ಕೆ ಯಾರಿಗೂ ಅವಕಾಶ ನೀಡಬಾರದು. ಸ್ಥಳೀಯರಿಗೆ ಮನೆ ನಿವೇಶನಕ್ಕೆ ಹಂಚಿಕೆ ಮಾಡಬೇಕೆಂದು ಮಹಮ್ಮದ್ ಶಮೀರ್ರವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಜನಾರ್ದನ ಪಟೇರಿಯವರು, ಮನೆ ನಿವೇಶನಕ್ಕೆ ಗ್ರಾಮದಲ್ಲಿ ಈಗಾಗಲೇ ೩ ಎಕ್ರೆ ಜಾಗ ಕಾದಿರಿಸಲಾಗಿದೆ. ನೀರು ಸೇರಿದಂತೆ ಅಲ್ಲಿ ಎಲ್ಲಾ ವ್ಯವಸ್ಥೆಗಳೂ ಇವೆ. ಅಲ್ಲಿಗೆ ಯಾರೂ ಹೋಗುತ್ತಿಲ್ಲ ಎಂದರು. ಮನೆ ನಿವೇಶನ ಕೋರಿ ಅರ್ಜಿ ಸಲ್ಲಿಸಿದವರು ಪಂಚಾಯತ್ ಮಂಜೂರುಗೊಳಿಸಿದ ನಿವೇಶನ ಪಡೆದುಕೊಳ್ಳಬೇಕು. ನಮಗೆ ಅಲ್ಲಿಯೇ ಕೊಡಬೇಕೆಂಬ ಬೇಡಿಕೆ ಸಲ್ಲಿಸುವುದು ಸರಿಯಲ್ಲ ಎಂದು ಮಾರ್ಗದರ್ಶಿ ಅಧಿಕಾರಿ ಚೆನ್ನಪ್ಪ ಗೌಡರವರು ಹೇಳಿದರು. ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಕೋಲ್ಪೆಯಲ್ಲಿನ ಜಾಗದ ಕುರಿತು ದಾಖಲೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಗ್ರಾಮಕರಣಿಕರು ಭರವಸೆ ನೀಡಿದರು.
ರಸ್ತೆ ಸಂಚಾರಕ್ಕೆ ಅಡಚಣೆ:
ಕೋಲ್ಪೆಯಲ್ಲಿನ ಪಂಚಾಯತ್ ರಸ್ತೆಗೆ ಸೆಬಾಸ್ಟಿನ್ ಎಂಬವರು ಮಣ್ಣು ಹಾಕಿ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಯು.ಕೆ.ಅಬ್ದುಲ್ ಹಮೀದ್ರವರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ರಸ್ತೆ ಸಮಸ್ಯೆ ಆಗಿದ್ದಲ್ಲಿ ಪಂಚಾಯತ್ನಿಂದ ಬಗೆಹರಿಸಿಕೊಡಲಾಗುವುದು ಎಂದು ಹೇಳಿದರು.
ಅಧಿಕಾರಿಗಳ ಗೈರು, ಆಕ್ಷೇಪ:
ಸಭೆ ಆರಂಭವಾಗುತ್ತಿದ್ದಂತೆ ಮಾರ್ಗದರ್ಶಿ ಅಧಿಕಾರಿ, ಇಂಜಿನಿಯರ್ ಗೈರು ಹಾಜರಿ ಪ್ರಸ್ತಾಪಿಸಿದ ಗ್ರಾಮಸ್ಥ ಅಬ್ದುಲ್ ಕುಂಞಿ ಕೊಂಕೋಡಿಯವರು ಮಾರ್ಗದರ್ಶಿ ಅಧಿಕಾರಿಯವರೇ ಇಲ್ಲದೇ ಸಭೆ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯದರ್ಶಿ ಚಂದ್ರಾವತಿಯವರು, ಉಪ್ಪಿನಂಗಡಿ ಉಪವಲಯ ಅರಣ್ಯಾಧಿಕಾರಿಯವರು ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಬರಬೇಕಿತ್ತು. ಆದರೆ ಅವರಿಗೆ ಬರಲು ಅಸಾಧ್ಯವಾದುದರಿಂದ ಬೇರೊಬ್ಬರ ನೇಮಕ ಮಾಡಲಾಗಿದೆ. ಅವರು ಬರುತ್ತಾರೆ. ಸಭೆ ಆರಂಭಿಸುವ ಎಂದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ತಾ.ಪಂ.ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡರವರು ಸಭೆಗೆ ಆಗಮಿಸಿ, ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ಮುನ್ನಡೆಸಿದರು. ಬಳಿಕ ಇಂಜಿನಿಯರ್ ಗೈರು ಹಾಜರಿಯನ್ನು ಪ್ರಸ್ತಾಪಿಸಿದ ಅಬ್ದುಲ್ ಕುಂಞಿಯವರು, ಇಂಜಿನಿಯರ್ಗೆ ಸಂಬಂಧಿಸಿದ ಹಲವು ಪ್ರಶ್ನೆಗಳಿವೆ. ಅದಕ್ಕೆ ಯಾರು ಉತ್ತರಿಸುವುದು ಎಂದರು. ಇದಕ್ಕೆ ಉತ್ತರಿಸಿದ ಮಾರ್ಗದರ್ಶಿ ಅಧಿಕಾರಿ ಚೆನ್ನಪ್ಪ ಗೌಡರವರು, ಚುನಾವಣೆ ಕೆಲಸ ಹಾಗೂ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕಾಗಿರುವುದರಿಂದ ಅವರು ಕೆಲಸದ ಒತ್ತಡದಲ್ಲಿ ಇದ್ದಾರೆ. ಆದರೂ ಸಭೆಗೆ ಬರುವುದಾಗಿ ಮಾಹಿತಿ ನೀಡಿದ್ದಾರೆ ಎಂದರು. ಈ ವೇಳೆ ಮಾತನಾಡಿದ ಗ್ರಾಮಸ್ಥ ಕೊರಗಪ್ಪ ಗೌಡ ಕಲ್ಲಡ್ಕ ಅವರು, ಎಲ್ಲಾ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರುತ್ತಾರೆ. ಆದರೆ ಇಂಜಿನಿಯರ್ ಅವರು ಯಾವಾಗಲೂ ತಡವಾಗಿ ಬರುವುದು ಯಾಕೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಚರ್ಚೆ ನಡೆದು ಸಭೆ ಮುಂದುವರಿಸಲಾಯಿತು. ಇಂಜಿನಿಯರ್ ಸಭೆ ಮಧ್ಯದಲ್ಲಿ ಬಂದು ಇಲಾಖೆಯ ಮಾಹಿತಿ ನೀಡಿದರು.
ಕುಡಿಯುವ ನೀರಿನ ಸಮಸ್ಯೆ:
ಚಾಮೆತಮೂಲೆಯ ಕುಡಿಯುವ ನೀರಿನ ಸಮಸ್ಯೆಯನ್ನು ಆ ಭಾಗದ ಗ್ರಾಮಸ್ಥರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಜನಾರ್ದನ ಪಟೇರಿಯವರು, ೧ ವಾರದಿಂದ ಸಮಸ್ಯೆ ಇತ್ತು. ಅದನ್ನು ಸರಿಪಡಿಸಲಾಗಿದೆ ಎಂದರು. ಈ ಬಗ್ಗೆ ನೀರು ನಿರ್ವಾಹಕರನ್ನು ಸಭೆಗೆ ಕರೆಸಿ ಮಾಹಿತಿ ಪಡೆದುಕೊಳ್ಳಲಾಯಿತು. ಕುಡಿಯುವ ನೀರಿನ ಬಳಕೆದಾರರ ಪೈಕಿ ಒಬ್ಬರು ನೀರು ನಿರ್ವಾಹಕರಾಗಿ ಕೆಲಸ ನಿರ್ವಹಿಸುವಂತೆ ಗ್ರಾ.ಪಂ.ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರು ಸೂಚಿಸಿದರು. ಇದಕ್ಕೆ ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದರು.
ಪಶುಚಿಕಿತ್ಸಾಲಯದಲ್ಲಿ ಯಾರೂ ಇರುವುದಿಲ್ಲ:
ನೆಲ್ಯಾಡಿಯಲ್ಲಿರುವ ಪ್ರಾಥಮಿಕ ಪಶು ಚಿಕಿತ್ಸಾಲಯದಲ್ಲಿ ಯಾರೂ ಇರುವುದಿಲ್ಲ ಎಂದು ಗ್ರಾ.ಪಂ.ಸದಸ್ಯೆ ಹೇಮಲತಾ ಹಾಗೂ ಗ್ರಾಮಸ್ಥರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಹಿರಿಯ ಪಶುವೈದ್ಯ ಪರೀಕ್ಷಕ ರವೀಂದ್ರ ಅವರು, ನೆಲ್ಯಾಡಿ,ಕಲ್ಲುಗುಡ್ಡೆ, ಕಡಬ, ಕುಂತೂರುಪದವು, ಬೆಳಂದೂರುಗಳಿಗೆ ನಾನು ಒಬ್ಬನೇ ಇರುವುದು. ವಾರದಲ್ಲಿ ಒಂದು ದಿನ ನೆಲ್ಯಾಡಿ ಚಿಕಿತ್ಸಾಲಯದಲ್ಲಿ ಇರುತ್ತೇವೆ ಎಂದರು. ಇನ್ನು ಮುಂದೆ ಪ್ರತಿ ಮಂಗಳವಾರ ಕಚೇರಿಯಲ್ಲಿ ಇರುವಂತೆ ಗ್ರಾಮಸ್ಥರು ಮನವಿ ಮಾಡಿದರು.
ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ, ಗ್ರಾಮಕರಣಿಕರಾದ ಸತೀಶ್, ನಾಗಸುಂದರ, ಮೆಸ್ಕಾಂ ನೆಲ್ಯಾಡಿ ಶಾಖಾ ಜೆಇ ರಮೇಶ್ಕುಮಾರ್, ಉಪ್ಪಿನಂಗಡಿ ಶಾಖಾ ಜೆಇ ನಿತಿನ್ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಪುಷ್ಪಾವತಿ, ಕೃಷಿ ಅಧಿಕಾರಿ ಭರಮಣ್ಣವರ, ಜಲಜೀವನ್ ಯೋಜನೆಯ ಮಹಾಂತೇಶ್ ಹಿರೇಮಠ, ಇಂಜಿನಿಯರ್ ಎಸ್.ಎಸ್.ಹುಕ್ಕೇರಿ, ಸಿಆರ್ಪಿ ಮಂಜುನಾಥ್ ಕೆ.ವಿ., ಸಾಮಾಜಿಕ ಅರಣ್ಯ ಇಲಾಖೆ ಉಪವಲಯ ಅರಣ್ಯಾಧಿಕಾರಿ ಕೃಷ್ಣ ಜೋಗಿ, ಪಶುವೈದ್ಯ ಪರೀಕ್ಷಕ ರವೀಂದ್ರರವರು ಇಲಾಖಾವಾರು ಮಾಹಿತಿ ನೀಡಿದರು.
ಪಿಡಿಒ ಜಗದೀಶ್, ಗ್ರಾ.ಪಂ. ಉಪಾಧ್ಯಕ್ಷೆ ಶೋಭಾಲತಾ, ಸದಸ್ಯರಾದ ಕೆ.ಬಾಬು ಪೂಜಾರಿ, ಜೀವಿತಾ ಪೆರಣ, ಗುಲಾಬಿ ಕೆ., ಜಾನಕಿ, ನೋಣಯ್ಯ ಗೌಡ, ವಿ.ಸಿ.ಜೋಸೆಫ್, ಶೃತಿ ಪಿ., ವಾರಿಜಾಕ್ಷಿ, ಪ್ರಜಲ, ಎ.ಬಾಲಕೃಷ್ಣ ಗೌಡ, ಸವಿತಾ ಕೆ., ಹೇಮಲತ, ಪದ್ಮನಾಭ ಪೂಜಾರಿ, ಶಿವಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಚಂದ್ರಾವತಿ ಸ್ವಾಗತಿಸಿ, ವರದಿ ಮಂಡಿಸಿದರು. ಸಿಬ್ಬಂದಿಗಳು ಸಹಕರಿಸಿದರು.