`ಕರ್ನಾಟಕದ 7 ಅದ್ಭುತಗಳು’ ಅಭಿವೃದ್ಧಿಗೆ ನೀಲನಕ್ಷೆಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ
ಬೆಂಗಳೂರು: ಸಮಸ್ತ ಕನ್ನಡಿಗರು ಸಂಭ್ರಮಿಸಿ ಹೆಮ್ಮೆಪಡುವಂತಹ ಆ ದಿನ ಬಂದೇ ಬಿಟ್ಟಿದೆ. ಜಾಗತಿಕ ಹೆಗ್ಗುರುತುಗಳಾಗಿ ಪ್ರಪಂಚದ 7 ಅದ್ಭುತಗಳು' ಇರುವ ರೀತಿಯಲ್ಲೇ ಇದೀಗ ಕರುನಾಡಿನ ಹೆಗ್ಗುರುತುಗಳಾಗಿ
ಕರ್ನಾಟಕದ 7 ಅದ್ಭುತಗಳು’ ಘೋಷಣೆಯಾಗಿದೆ. ರಾಜ್ಯದ ನೆಲ-ಜಲ, ಕಾಡು-ಕಡಲು, ವಾಸ್ತು-ವಿಜ್ಙಾನ, ಶಿಲ್ಪಕಲೆ, ಇತಿಹಾಸ-ಪರಂಪರೆ ಸೇರಿದಂತೆ ಎಲ್ಲ ವೈವಿಧ್ಯಗಳನ್ನೂ ಪ್ರತಿನಿಧಿಸುವ ಏಳು ವಿಶಿಷ್ಟ ತಾಣಗಳನ್ನು ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದ ೭ ಅದ್ಭುತಗಳು' ಎಂದು ಘೋಷಿಸಿದ್ದಾರೆ. ಬೆಂಗಳೂರಿನ ಪಂಚತಾರಾ ಹೋಟೆಲ್ವೊಂದರಲ್ಲಿ ಶನಿವಾರ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ
ಕರ್ನಾಟಕದ 7 ಅದ್ಭುತ’ಗಳನ್ನು ಉದ್ಘೋಷಿಸಲಾಯಿತು. ಇದೇ ವೇಳೆ, ವಿಜೇತ ತಾಣಗಳಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪ್ರಮಾಣಪತ್ರ ಹಸ್ತಾಂತರಿಸಲಾಯಿತು. ನಾಡಿನ ಏಳು ಅದ್ಭುತ ತಾಣಗಳನ್ನು ಏಳು ವಿಭಾಗಗಳ ಅಡಿಯಲ್ಲಿ ಹೆಸರಿಸಲಾಗಿದ್ದು, ಅವು ಇಂತಿವೆ.
ಹಿರೇಬೆಣಕಲ್ ಶಿಲಾಸಮಾಧಿಗಳು:
ಕ್ರಿ.ಪೂ 800 ರಿಂದ 200ರವರೆಗಿನ ಕಾಲದ್ದು ಎನ್ನಲಾದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿರುವ ಪ್ರಾಗೈತಿಹಾಸಿಕ ತಾಣವನ್ನುಬೃಹತ್ ಶಿಲಾಯುಗದ ಅದ್ಭುತ' ಎಂದು ಘೋಷಿಸಲಾಗಿದೆ.
ಹಂಪಿ: ೧೪ರಿಂದ ೧೬ನೇ ಶತಮಾನದ ನಡುವೆ ನಿರ್ಮಾಣಗೊಂಡ ಭವ್ಯ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಸಾರುವ ಈಗಿನ ವಿಜಯನಗರ ಜಿಲ್ಲೆಯ
ಹಂಪಿ’ಯನ್ನು ಪುರಾತತ್ವ ಅದ್ಭುತ' ಎಂದು ಘೋಷಿಸಲಾಗಿದೆ.
ಗೊಮ್ಮಟೇಶ್ವರ: ಈಗಿನ ಹಾಸನ ಜಿಲ್ಲೆ ಶ್ರವಣಬೆಳಗೊಳದ ವಿಂಧ್ಯಾಗಿರಿಯ ನೆತ್ತಿಯಲ್ಲಿ ೧೦ನೇ ಶತಮಾನದಲ್ಲಿ ಸ್ಥಾಪನೆಯಾದ ೫೭ ಅಡಿಯ ಭವ್ಯ ಗೊಮ್ಮಟೇಶ್ವರ ಪ್ರತಿಮೆಯನ್ನು
ತಾತ್ವಿಕ ಅದ್ಭುತ’ವೆಂದು ಘೋಷಿಸಲಾಗಿದೆ.
ಗೋಲಗುಮ್ಮಟ: ೧೭ನೇ ಶತಮಾನದಲ್ಲಿ ಆಗಿನ ಬಿಜಾಪುರ (ಹಾಲಿ ವಿಜಯಪುರ) ಸುಲ್ತಾನ ಮೊಹಮ್ಮದ್ ಆದಿಲ್ ಶಾಹ್ ನಿರ್ಮಿಸಿದ ಬೃಹತ್ ಗೋಲಗುಮ್ಮಟವು ವಾಸ್ತು
ವಿಜ್ಙಾನಅದ್ಭುತ'ವೆಂಬ ಗೌರವಕ್ಕೆ ಪಾತ್ರವಾಗಿದೆ.
ಮೈಸೂರು ಅರಮನೆ: ೧೯-೨೦ನೇ ಶತಮಾನದಲ್ಲಿ ಒಡೆಯರ್ ರಾಜವಂಶಸ್ಥರಿಂದ ನಿರ್ಮಾಣಗೊಂಡ ಮೈಸೂರಿನ ಜಗದ್ವಿಖ್ಯಾತ ಅಂಬಾ ವಿಲಾಸ ಅರಮನೆಯನ್ನು
ರಾಜಪರಂಪರಾ ಅದ್ಭುತ’ ಎಂದು ಘೋಷಿಸಲಾಗಿದೆ.
ಜೋಗ ಜಲಪಾತ: ಭಾರತದಲ್ಲೇ ಅತಿ ಸುಂದರ ಎನಿಸಿರುವ, ೮೩೦ ಅಡಿ ಎತ್ತರದಿಂದ ಧುಮುಕುವ ಶಿವಮೊಗ್ಗ ಜಿಲ್ಲೆಯ ವಿಶ್ವಪ್ರಸಿದ್ಧ ಜೋಗ ಜಲಪಾತವನ್ನು ನೈಸರ್ಗಿಕ ಅದ್ಭುತ-ನೆಲ' ಎಂದು ಘೋಷಿಸಲಾಗಿದೆ.
ನೇತ್ರಾಣಿ ದ್ವೀಪ: ಉತ್ತರ ಕನ್ನಡ ಜಿಲ್ಲೆ ಮುರುಡೇಶ್ವರ ಬಳಿಯ ಅರಬ್ಬಿ ಸಮುದ್ರದ ನಡುವೆ ಪ್ರೀತಿಯ ಸಂಕೇತದಂತೆ ಹೃದಯಾಕಾರದಲ್ಲಿರುವ ನೇತ್ರಾಣಿ ದ್ವೀಪವನ್ನು
ನೈಸರ್ಗಿಕ ಅದ್ಭುತ-ಜಲ’ ಎಂದು ಘೋಷಿಸಲಾಗಿದೆ.
ಅಭಿವೃದ್ಧಿಗೆ ನೀಲ ನಕ್ಷೆಗೆ ಸಿಎಂ ಸೂಚನೆ:
ಉದ್ಘೋಷಣೆ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಈ ಏಳೂ ಅದ್ಭುತಗಳ ಸ್ಥಳದಲ್ಲಿ ಆಗಬೇಕಿರುವ ಅಭಿವೃದ್ಧಿಗಳ ಬಗ್ಗೆ ನೀಲನಕ್ಷೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದೆನೆ ಎಂದು ತಿಳಿಸಿದರು.
ಕರ್ನಾಟಕದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಕರ್ನಾಟಕದ ೭ ಅದ್ಭುತಗಳು' ಅಭಿಯಾನದ ರಾಯಭಾರಿ, ಖ್ಯಾತ ನಟ ರಮೇಶ್ ಅರವಿಂದ್ ಸಂದರ್ಭೋಚಿತವಾಗಿ ಮಾತನಾಡಿದರು. ಕೊಪ್ಪಳ ಜಿಲ್ಲಾಧಿಕಾರಿ ಸುಂದರೇಶ್ ಬಾಬು, ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಹಾಸನ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ವಿಜಯಪುರ ಜಿಲ್ಲಾಧಿಕಾರಿ ಮಹಾಂತೇಶ್ ದಾನಮ್ಮನವರ್, ಮೈಸೂರು ಜಿಲ್ಲಾಧಿಕಾರಿ ಡಾ|ಕೆ.ವಿ.ರಾಜೇಂದ್ರ, ಶಿವಮೊಗ್ಗ ಜಿಲ್ಲಾಧಿಕಾರಿಗಳ ಪರವಾಗಿ ಸಾಗರ ಉಪವಿಭಾಗಾಧಿಕಾರಿ ಪಲ್ಲವಿ, ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ವಿಜೇತ ತಾಣಗಳ ಪ್ರಮಾಣಪತ್ರ ಹಾಗೂ ಘೋಷಣಾ ಫಲಕ ಸ್ವೀಕರಿಸಿದರು. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಕನ್ನಡಪ್ರಭ ದಿನಪತ್ರಿಕೆ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿವಾಹಿನಿ
ಕರ್ನಾಟಕದ ೭ ಅದ್ಭುತಗಳ’ ಆಯ್ಕೆಗೆ ಮಹಾ ಅಭಿಯಾನ ಕೈಗೊಂಡಿದ್ದವು.