ಮಾ.12ಕ್ಕೆ ಬಂಟರ ಸಂಘದಿಂದ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ

0

ಪುತ್ತೂರು: ಬಂಟರ ಸಂಘ ಮತ್ತು ಮಹಿಳಾ ಬಂಟರ ಸಂಘದ ಜಂಟಿ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಾ.12ರಂದು ಕೊಂಬೆಟ್ಟು ಎಂ. ಸುಂದರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರುಗಲಿದೆ. ಬೆಳಿಗ್ಗೆ ಮಹಿಳಾ ದಿನಾಚರಣೆಯಲ್ಲಿ ಮೂವರನ್ನು ಮತ್ತು ಬಳಿಕ ನಡೆಯುವ ಸಾಧಕರ ಸನ್ಮಾನದಲ್ಲಿ ನಾಲ್ವರನ್ನು ಸನ್ಮಾನಿಸಲಾಗುವುದು ಎಂದು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಮಹಿಳಾ ದಿನಾಚರಣೆಯ ಮಹಿಳಾ ಬಂಟರ ಸಂಭ್ರಮವನ್ನು ಪದ್ಮ ಸೋಲಾರ್ ಸಿಸ್ಟಮ್ಸ್‌ನ ಲತಾ ಪಿ ಶೆಟ್ಟಿಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆಕಾಶವಾಣಿ ಉದ್ಘೋಷಕಿ ಮಲ್ಲಿಕಾ ಅಜಿತ್ ಶೆಟ್ಟಿ ಆಶಯ ಮಾತನ್ನಾಡಲಿದ್ದಾರೆ. ಮಹಿಳಾ ಬಂಟರ ಸಂಘದ ಗೌರವಾಧ್ಯಕ್ಷೆ ಮಲ್ಲಿಕಾ ಪ್ರಸಾದ್, ಮಾಜಿ ಉಪಾಧ್ಯಕ್ಷೆ ರಮಾಕಾಂತಿ ಎ ರೈ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪುರಸ್ಕೃತ ಕ್ರೀಡಾಪಟು ಡಾ. ಆಶಾ ಶಂಕರ್ ಭಂಡಾರಿ ಡಿಂಬ್ರಿ, ಬಿ.ವೆಲ್ ಫಾರ್ಮ್ ಇದರ ಸಿಇಒ ಡಾ. ಅನಿಲ ದೀಪಕ್ ಶೆಟ್ಟಿ, ಬನ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಇಒ ರಾಧಾ ಬಿ ರೈ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಸಾಧಕರಿಗೆ ಸನ್ಮಾನ:
ಮಹಿಳಾ ದಿನಾಚರಣೆ ಕಾರ್ಯಕ್ರಮದ ಬಳಿಕ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿಯವರು ಉದ್ಘಾಟಿಸಲಿದ್ದಾರೆ. ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಸಾಧಕರನ್ನು ಸನ್ಮಾನಿಸಲಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಉದ್ಯಮಿ ಚಿಕ್ಕಪ್ ನಾಯ್ಕ್, ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.‌

ಸನ್ಮಾನ:
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಇದೀಗ ರಾಜ್ಯ ಸಚಿವ ಸಂಪುಟ ಸ್ಥಾನಮಾನ ದೊರೆತ ಚನಿಲ ತಿಮ್ಮಪ್ಪ ಶೆಟ್ಟಿ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ದಂಬೆಕಾನ ಸದಾಶಿವ ರೈ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವಿ ಶೆಟ್ಟಿ ಮೂಡಂಬೈಲು ನೇಸರ ಕಂಪ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯರಾಮ ರೈ ಮಿತ್ರಂಪಾಡಿ, ಹೊಸಮನೆ ಗಂಗಾಧರ ಶೆಟ್ಟಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಬಿ ರೈ ಡಿಂಬ್ರಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ, ಉಪಾಧ್ಯಕ್ಷ ರೋಶನ್ ರೈ ಬನ್ನೂರು, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ ಉಪಸ್ಥಿತರಿದ್ದರು.

ನಿಗಮ ಬೇಕೆಂಬ ಒತ್ತಾಯ ಇದೆ ಚುನಾವಣೆಗೆ ಸ್ಪರ್ಧೆಯಿಲ್ಲ:
ಬಂಟರ ಸಮುದಾಯಕ್ಕೂ ನಿಗಮ ಬೇಕೆನ್ನುವ ಒತ್ತಾಯ ಇದೆ. ಈ ನಿಟ್ಟಿನಲ್ಲಿ ಜಾಗತಿಕ ಬಂಟರ ಸಂಘದ 130 ಸಮಿತಿಯ ಅಧ್ಯಕ್ಷರುಗಳ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದಾರೆ. ಹಾಗೆಂದು ಎಲ್ಲಿಯೂ ಚುನಾವಣೆಗೆ ಸ್ಪರ್ಧೆಯಿಲ್ಲ. ಸಮಾಜದ ಮೂಲಕ ಅನೇಕ ತಳಮಟ್ಟದ ಕುಟುಂಬಕ್ಕೆ ಆರ್ಥಿಕ ನೆರವು, ಮನೆ ಕಟ್ಟಿ ಕೊಡುವ ಕಾರ್ಯಕ್ರಮ, ಮದುವೆಗೆ ಕರಿಮಣಿ ಕೊಡುವ ಕಾರ್ಯಕ್ರಮ ಪ್ರತಿ ತಿಂಗಳು ನಮ್ಮ ಮಾಸಿಕ ಸಭೆಯಲ್ಲಿ ನಿರ್ಣಯಿಸಿ ಮಾಡಲಾಗುತ್ತಿದೆ. ಈ ಕುರಿತು ಫಲಾನುಭವಿಗಳನ್ನು ಸಮಾಜಕ್ಕೆ ತೋರಿಸಿ ಪತ್ರಿಕೆ ಮೂಲಕ ಪ್ರಚಾರ ಪಡಿಸುತ್ತಿಲ್ಲ ಎಂದು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

LEAVE A REPLY

Please enter your comment!
Please enter your name here