ವಿಟ್ಲ : ವಿಟ್ಲಪಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೊಡಂಗಾಯಿಯಲ್ಲಿರುವ ಪ್ರಧಾನ ಕಚೇರಿಯನ್ನು ಸುಮಾರು 1.15 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳಿಸಲಾಗಿದ್ದು, ಮಾ.12ರಂದು ಬೆಳಗ್ಗೆ ಗಂಟೆ 10.30ಕ್ಕೆ ಉದ್ಘಾಟನ ಸಮಾರಂಭ ನಡೆಯಲಿದೆ ಎಂದು ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ತಿಳಿಸಿದರು.
ಅವರು ವಿಟ್ಲ ಪ್ರೆಸ್ ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಲಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್, ವಿಟ್ಲಪಡ್ನೂರು ಗ್ರಾ.ಪಂ.ಅಧ್ಯಕ್ಷೆ ರೇಶ್ಮಾಶಂಕರಿ ಬಲಿಪಗುಳಿ, ಕೊಳ್ನಾಡು ಗ್ರಾ.ಪಂ.ಅಧ್ಯಕ್ಷೆ ನೆಬಿಸಾ, ಸಾಲೆತ್ತೂರು ಗ್ರಾ.ಪಂ.ಅಧ್ಯಕ್ಷ ಹಸೈನಾರ್, ಸಹಕಾರ ಸಂಘಗಳ ಉಪನಿಬಂಭಕ ಎಚ್.ಎನ್.ರಮೇಶ್, ಸಹಾಯಕ ನಿಬಂದಕ ಸುಧೀರ್ ಕುಮಾರ್ ಜೆ., ಸಹಕಾರ ಅಭಿವೃದ್ಧಿ ಅಧಿಕಾರಿ ಗೋಪಾಲ್ ಎನ್.ಜೆ. ಭಾಗವಹಿಸಲಿದ್ದಾರೆ. ಮತ್ತು ಇದೇ ಸಂದರ್ಭ ಮಾಜಿ ಅಧ್ಯಕ್ಷ ಎಂ.ಬಾಲಕೃಷ್ಣ ರೈ ಮೂರ್ಜೆಬೆಟ್ಟು, ಕೆ.ಲಕ್ಷ್ಮೀನಾರಾಯಣ ಅಡ್ಯಂತಾಯ ಕುದ್ರಿಯ, ಮಾಜಿ ಉಪಾಧ್ಯಕ್ಷ ಎಂ.ಗೋಪಾಲಕೃಷ್ಣ ಭಟ್ ಮಾದಕಟ್ಟೆ, ಮಮತಾ ಜಿ.ರೈ ಕುಳಾಲು, ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಶ್ರೀಪತಿ ಭಟ್ ಕುಂಟುಕುಡೇಲು ಅವರನ್ನು ಸಮ್ಮಾನಿಸಲಾಗುವುದು ಎಂದು ತಿಳಿಸಿದರು.
ವಿಟ್ಲಪಡ್ನೂರು, ಕೊಳ್ನಾಡು, ಸಾಲೆತ್ತೂರು ಗ್ರಾಮಗಳ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಈ ಸಂಘವು ಕಟ್ಟಡ ನಿಧಿ ಮತ್ತು ಕ್ಷೇಮನಿಧಿಯಲ್ಲಿ ಈ ಕಟ್ಟಡ ನಿರ್ಮಿಸಿದೆ. ವಿಸ್ತೃತ ಕಟ್ಟಡದ ಪ್ರಥಮ ಮಹಡಿಯಲ್ಲಿ ಕೇಂದ್ರ ಕಚೇರಿ, ಅಧ್ಯಕ್ಷರ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೊಠಡಿ, ಸಭಾಂಗಣ, ಭದ್ರತಾಕೋಶ ಇತ್ಯಾದಿ ನಿರ್ಮಿಸಲಾಗಿದೆ. ಪ್ರಸ್ತುತ ಕಾರ್ಯಾಚರಿಸುತ್ತಿರುವ ಕಚೇರಿ ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುವುದು. ಕೊಳ್ನಾಡು, ಕುಡ್ತಮುಗೇರು ಮತ್ತು ಕೋಡಪದವು ಎಂಬಲ್ಲಿ ಸಂಘದ ಶಾಖೆಗಳಿವೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಕಳೆದ ಮೂರು ವರ್ಷಗಳಿಂದ ಸತತವಾಗಿ ಅತ್ಯುತ್ತಮ ಸಂಘ ಎಂಬ ಪ್ರೋತ್ಸಾಹಕ ಪ್ರಶಸ್ತಿಗೆ ಪಾತ್ರವಾಗಿದೆ. ಗೊಬ್ಬರ ಮಾರಾಟದಲ್ಲಿ ಪ್ರಥಮ ಎಂಬ ಪ್ರಶಸ್ತಿಯೂ ಲಭಿಸಿದೆ. ಸಂಘವು 21-22ನೇ ಸಾಲಿನಲ್ಲಿ 271.22 ಕೋಟಿ ರೂ. ವ್ಯವಹಾರ ನಡೆಸಿದ್ದು, ಸದಸ್ಯರಿಗೆ 50.08 ಕೋಟಿ ರೂ ಸಾಲ ನೀಡಿದೆ. 38.57 ಲಕ್ಷ ರೂ. ಠೇವಣಾತಿ ಇದೆ. ಸಂಘ ಸತತವಾಗಿ ಲಾಭ ಗಳಿಸಿದ್ದು, ಕಳೆದ ಹನ್ನೆರಡು ವರ್ಷಗಳಿಂದ ಸದಸ್ಯರಿಗೆ ಲಾಭಾಂಶ ವಿತರಿಸುತ್ತ ಬಂದಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ಬಾಲಕೃಷ್ಣ ರೈ ಮೂರ್ಜೆಬೆಟ್ಟು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಶ ರೈ, ನಿರ್ದೇಶಕರಾದ ರಮೇಶ್ಚಂದ್ರ ಪಿ., ಸಂದೇಶ್ ಶೆಟ್ಟಿ ಬಿಕ್ನಾಜೆ ಉಪಸ್ಥಿತರಿದ್ದರು.