ಪುತ್ತೂರು:ಉಪ್ಪಳಿಗೆಯಲ್ಲಿ ಅ.20ರಂದು ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ದ್ವೇಷ,ಅವಮಾನಕಾರಿಯಾಗಿ ಭಾಷಣ ಮಾಡಿರುವ ಆರೋಪದಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಮುಂದಿನ ಆದೇಶದ ತನಕ ಆರ್‌ಎಸ್‌ಎಸ್ ಮುಖಂಡ ಡಾ.ಪ್ರಭಾಕರ ಭಟ್ ಅವರ ವಿರುದ್ಧ ಯಾವುದೇ ಬಲವಂತದ ಕಾನೂನು ಕ್ರಮಕೈಗೊಳ್ಳದಂತೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಪೊಲೀಸರಿಗೆ ಮಧ್ಯಂತರ ಆದೇಶ ಮಾಡಿದೆ.
ಈ ಪ್ರಕರಣದಲ್ಲಿ ಡಾ.ಪ್ರಭಾಕರ ಭಟ್ ಅವರು ನಿರೀಕ್ಷಣಾ ಜಾಮೀನು ಕೋರಿ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು ಅರ್ಜಿಯನ್ನು ವಿಚಾರಣೆಗೆತ್ತಿಕೊಂಡಿರುವ ನ್ಯಾಯಾಲಯ,ಮುಂದಿನ ಆದೇಶದ ತನಕ ದೂರುದಾರ ಡಾ.ಪ್ರಭಾಕರ ಭಟ್ ಅವರ ವಿರುದ್ಧ ಯಾವುದೇ ಬಲವಂತದ ಕಾನೂನು ಕ್ರಮಕೈಗೊಳ್ಳಬಾರದು ಎಂದು ಮಧ್ಯಂತರ ಆದೇಶ ಮಾಡಿ, ಸರಕಾರಿ ಅಭಿಯೋಜಕರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಿ ವಿಚಾರಣೆಯನ್ನು ಅ.29ಕ್ಕೆ ಮುಂದೂಡಿದೆ.
ಡಾ.ಪ್ರಭಕಾರ ಭಟ್ ಕಲ್ಲಡ್ಕ ಅವರ ಭಾಷಣ ಧಾರ್ಮಿಕ ದ್ವೇಷ ಪ್ರಚೋದಿಸುವ, ಮಹಿಳೆಯರ ಘನತೆಗೆ ಧಕ್ಕೆ ಉಂಟುಮಾಡುವ ಹಾಗೂ ಸಾರ್ವಜನಿಕ ಶಾಂತಿಗೆ ಅಪಾಯ ಉಂಟು ಮಾಡುವಂತಿದೆ.ಅವರು ಹಿಂದೂ-ಮುಸ್ಲಿಂ ಸಮುದಾಯಗಳ ಬಗ್ಗೆ ಅವಮಾನಕಾರಿ ಹೇಳಿಕೆಗಳನ್ನು ನೀಡಿ, ಮತದಾರರ ಸಂಖ್ಯೆಯ ಉಲ್ಲೇಖ ಮಾಡಿ ಧಾರ್ಮಿಕ ವೈಮನಸ್ಸು ಉಂಟುಮಾಡಿದ್ದಾರೆ.
ಅವರ ಭಾಷಣ ಖಾಸಗಿ ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಪ್ರಸಾರಗೊಂಡಿದೆ ಎಂದು ಮಹಿಳಾ ಹೋರಾಟಗಾರ್ತಿ ಈಶ್ವರಿ ಪದ್ಮುಂಜ ಅವರು ನೀಡಿದ್ದ ದೂರಿನ ಮೇರೆಗೆ ಡಾ.ಪ್ರಭಾಕರ ಭಟ್ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಬಿಎನ್‌ಎಸ್ 79, 196, 299, 302 ಹಾಗೂ 3(5) ಕಲಂಗಳ ಅಡಿಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.30ರಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಡಾ.ಪ್ರಭಾಕರ ಭಟ್ ಅವರಿಗೆ ನೋಟಿಸ್ ಜಾರಿ ಮಾಡಿದ್ದರು.ಈ ನಡುವೆ ಡಾ.ಪ್ರಭಾಕರ ಭಟ್ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ಜಿಲ್ಲಾ ನ್ಯಾಯಾಲಯ ಮುಂದಿನ ಆದೇಶದ ತನಕ ಯಾವುದೇ ಬಲವಂತದ ಕಾನೂನು ಕ್ರಮಕೈಗೊಳ್ಳದಂತೆ ಪೊಲೀಸರಿಗೆ ಮಧ್ಯಂತರ ಆದೇಶ ಮಾಡಿದೆ.ಡಾ.ಪ್ರಭಾಕರ ಭಟ್ ಅವರ ಪರವಾಗಿ ನ್ಯಾಯವಾದಿ ಮಹೇಶ್ ಕಜೆ ವಾದಿಸುತ್ತಿದ್ದಾರೆ.
