ಕುಕ್ಕಾಜೆ ಕ್ಷೇತ್ರದಲ್ಲಿ ನವೀಕರಣ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಪನ್ನ

0

ಪ್ರಥಮ ರಥೋತ್ಸವಕ್ಕೆ ನೂರಾರು ಮಂದಿ ಸಾಕ್ಷಿ

ಶ್ರೀ ಕ್ಷೇತ್ರದಲ್ಲಿ ಸಂಕಲ್ಪ ಶಕ್ತಿ ಸಾಕಾರವಾಗಿದೆ: ಒಡಿಯೂರು ಶ್ರೀ
ಧರ್ಮ ಪ್ರಜ್ಞೆ ನಮ್ಮಲ್ಲಿರಬೇಕು: ಮಾಣಿಲ ಶ್ರೀ
ಪ್ರೀತಿ ವಿಶ್ವಾಸವಿದ್ದೆಡೆ ಯಾವುದೇ ಕಾರ್ಯ ಯಶಸ್ಸಾಗಲು ಸಾಧ್ಯ: ಕಣಿಯೂರು ಶ್ರೀ
ಸರ್ವರ ಸಹಕಾರದಿಂದ ಕಾರ್ಯಕ್ರಮ ಯಶಸ್ಸಾಗಿದೆ: ಶ್ರೀಕೃಷ್ಣ ಗುರೂಜಿ
ಯೋಗಭಾಗ್ಯ ಒಂದಾದರೆ ಎಲ್ಲವೂ ಒಳಿತಾಗುವುದು:ಶ್ರೀ ಪದ್ಮನಾಭ ಸ್ವಾಮೀಜಿ
ನಮ್ಮ ಹಿರಿಯರು ಹಾಕಿ ಕೊಟ್ಟ ಹಾದಿಯಲ್ಲಿ ಮುಂದುವರಿಯೋಣ: ಕೇಮಾರು ಶ್ರೀ
ಕಾರ್ಯಕರ್ತರ ನಿಸ್ವಾರ್ಥ ಸೇವೆ ಕಾರ್ಯಕ್ರಮವ ಯಶಸ್ವಿಗೆ ಸಹಕಾರಿಯಾಗಿದೆ: ಡಾ|ಗೀತಪ್ರಕಾಶ್

ವಿಟ್ಲ: ಸಂಭ್ರಮದ ಬ್ರಹ್ಮಕಲಶೋತ್ಸವ ಕುಕ್ಕಾಜೆಯಲ್ಲಿ ಸಂಪನ್ನಗೊಂಡಿದೆ. ತನಿಯಪ್ಪ ಗುರೂಜಿಯವರ ಆಶಯ ಶ್ರೀಕೃಷ್ಣ ಗುರೂಜಿಯವರಿಂದ ಕುಕ್ಕಾಜೆ ಕ್ಷೇತ್ರದಲ್ಲಿ ಈಡೇರಿದೆ. ಕುಕ್ಕಾಜೆಯಲ್ಲಿ ಸಂಕಲ್ಪ ಶಕ್ತಿ ಸಾಕಾರವಾಗಿದೆ. ಶ್ರೀಕೃಷ್ಣ ಗುರೂಜಿಯ ಮನಸ್ಸು ಜೇನಿನಂತೆ. ಎಲ್ಲರನ್ನು ಒಟ್ಟುಗೂಡಿಸುವ ಶಕ್ತಿ ಅವರಿಗಿದೆ. ಪ್ರೀತಿ ವಿಶ್ವಾಸವಿದ್ದ ಮನಸ್ಸು ದೇವಾಲಯವಿದ್ದಂತೆ. ಯಜ್ಞ, ದಾನ, ತಪಸ್ಸು ಜೀವನದಲ್ಲಿ ಶ್ರೇಷ್ಟವಾದುದು. ಸಾತ್ವಿಕವಾದ ಯಜ್ಞ, ದಾನ, ತಪಸ್ಸು ಶ್ರೀಕ್ಷೇತ್ರ ಕುಕ್ಕಾಜೆಯಲ್ಲಿ ಸಾಕಾರವಾಗಿದೆ. ಎಲ್ಲರೂ ಒಂದಾದಲ್ಲಿ ಬದಲಾವಣೆ ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.


ಶ್ರೀಕ್ಷೇತ್ರ ಕುಕ್ಕಾಜೆಯಲ್ಲಿ ನಡೆದ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಐದನೇ ದಿನವಾದ ಮಾ.9 ರಂದು ನಡೆದ ಧಾರ್ಮಿಕ ಸಭೆಯ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಗುರುವಿನ ಅನುಗ್ರಹವಿದ್ದರೆ ಯಾವುದೇ ಕೆಲಸ ಸಾಕಾರವಾಗಲು ಸಾಧ್ಯ. ಧಾರ್ಮಿಕ ಕೇಂದ್ರಗಳು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕುಕ್ಕಾಜೆ ಕ್ಷೇತ್ರ ಭಕ್ತಿಯ ಹೆಜ್ಜೆಗಳು ಕಾಣಸಿಗುವ ಪ್ರದೇಶವಾಗಿದೆ. ಸ್ವಚ್ಚತೆಗೆ ಕುಕ್ಕಾಜೆ ಕ್ಷೇತ್ರದ ಬ್ರಹ್ಮಕಲಶದಲ್ಲಿ ಪ್ರಾಧಾನ್ಯತೆ ನೀಡಲಾಗಿದೆ. ಸಾಧು ಸಂತರ ಒಗ್ಗಟ್ಟಿನಿಂದ ದೇಶಕ್ಕೆ ಸುಭಿಕ್ಷೆ. ಎಂದ ಶ್ರೀಗಳು ಹತ್ತು ಜನರ ಮನಸ್ಸು ಒಂದಾದರೆ ಯಾವುದೇ ಕಾರ್ಯಕ್ರಮಗಳು ಯಶಸ್ಸಾಗಲು ಸಾಧ್ಯ ಎಂದರು.


ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿರವರು ಆಶೀರ್ವಚನ ನೀಡಿ ಗುಣಕ್ಕೆ ಮಾತ್ಸರ್ಯವಿಲ್ಲ. ಇಡೀ ಗ್ರಾಮದ ಜನರ ಸಹಕಾರ ಕ್ಷೇತ್ರಕ್ಕೆ ಸಿಕ್ಕಿದೆ. ಕುಕ್ಕಾಜೆ ಕ್ಷೇತ್ರ ಹಿಂದಿನಿಂದಲೂ ಬಡವರ ಪಾಲಿನ ಆಶಾಕಿರಣವಾಗಿದೆ. ಜೀವನದಲ್ಲಿ ಎಲ್ಲರನ್ನು ಪ್ರೀತಿಸುವ ಮನಸ್ಸು ನಮ್ಮದಾಗಬೇಕು. ನಮ್ಮ ಜವಾಬ್ದಾರಿಯನ್ನು ನಾವೆಂದೂ ಮರೆಯಬಾರದು. ಗ್ರಾಮದ ಜನರ ಸ್ಥಿತಿಗತಿಯನ್ನು ಅರಿತು ಬಾಳುವ ಮನಸ್ಸು ನಮ್ಮದಾಗಬೇಕು. ಧರ್ಮ ಪ್ರಜ್ಞೆ ನಮ್ಮಲ್ಲಿರಬೇಕು. ಉತ್ತಮ ಕೆಲಸಗಳಿಗೆ ನಮ್ಮಸಹಕಾರ ಸದಾ ಇದೆ. ಸಮರ್ಪಣಾ ಭಾವದ ಸೇವೆ ನಮ್ಮದಾಗಬೇಕು ಎಂದರು.

ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿರವರು ಆಶೀರ್ವಚನ ನೀಡಿ ಕರ್ತವ್ಯವನ್ನು ನಾವು ಶ್ರದ್ಧಾ ಪೂರ್ವಕವಾಗಿ ಮಾಡಿದಾಗ ಯಶಸ್ಸು ಸಾಧ್ಯ. ಬೆಳವಣಿಗೆಗೆ ಕ್ಷೇತ್ರದ ಪ್ರಮುಖರ ಪಾತ್ರ ಬಹಳಷ್ಟಿದೆ. ಪ್ರೀತಿ ವಿಶ್ವಾಸವಿದ್ದೆಡೆ ಯಾವುದೇ ಕಾರ್ಯ ಯಶಸ್ಸಾಗಲು ಸಾಧ್ಯ. ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸುವ ಕೆಲಸ ಈ ವೇದಿಕೆಯಿಂದಾಗಿದೆ. ಎಲ್ಲರಿಗೂ ಒಳಿತಾಗಲಿ ಎಂದರು.

ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಶ್ರೀಕೃಷ್ಣ ಗುರೂಜಿರವರು ಆಶೀರ್ವಚನ ನೀಡಿ ಸರ್ವಧರ್ಮೀಯರನ್ನು ಪ್ರೀತಿಸಿ ಬಾಳಿದರೆ ಜೀವನ ಪಾವನವಾಗುವುದು. ಆರಂಭದ ದಿನಗಳಲ್ಲಿ ಕ್ಷೇತ್ರದ ಬೆಳವಣಿಗೆಯಲ್ಲಿ ಸರ್ವಧರ್ಮೀಯರ ಪಾತ್ರ ಬಹಳಷ್ಟಿದೆ. ನಿಮ್ಮೆಲ್ಲರ ಪ್ರೀತಿ ಕ್ಷೇತ್ರದ ಮೇಲಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಯಶಸ್ಸಾಗಿದೆ. ಇದು ನನ್ನಿಂದ ಆದ ಕೆಲಸವಲ್ಲ ಇಡೀ ಸಮಾಜದವರ ಸಹಕಾರದಿಂದ ಆದ ಕೆಲಸ. ಉತ್ತಮ ಸಮಾಜದ ನಿರ್ಮಾಣಕ್ಕೆ ಪ್ರಯತ್ನಿಸೋಣ ಎಂದರು.

ಕೇಮಾರು ಮಠದ ಶ್ರೀ ಈಶವಿಠಲದಾಸ ಸ್ವಾಮೀಜಿರವರು ಆಶೀರ್ವಚನ ನೀಡಿ ಸಮಯದ ಅರಿವು ನಮಗಿರಬೇಕು. ಹಿಂದೂ ಸಂಸ್ಕೃತಿಯ ಉಳಿವಿಗೆ ಸಣ್ಣ ಪುಟ್ಟ ಮಠ ಮಂದಿರಗಳ ಪಾತ್ರ ಅಪಾರವಾದುದು. ಜೀವನದಲ್ಲಿ ಹಣಕ್ಕಿಂತ ಗುಣಮುಖ್ಯ. ನಮ್ಮ ಶ್ರದ್ದೆ ನಂಬಿಕೆಯನ್ನು ಉಳಿಸುವ ಕೆಲಸವಾಗಬೇಕು. ದೇಶದ ಮಹತ್ಮರ ಆದರ್ಶವನ್ನು ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು. ನಮ್ಮ ಹಿರಿಯರು ಹಾಕಿ ಕೊಟ್ಟ ಹಾದಿಯಲ್ಲಿ ಮುಂದುವರಿಯೋಣ. ಸ್ವದೇಶ, ಸ್ವಧರ್ಮದ ಬಗ್ಗೆ ಪ್ರೀತಿ ಇರಲಿ. ಜೀವನಕ್ಕೆ ಗುರಿ ಅಗತ್ಯ ಎಂದರು.

ಮೆನಾಲ ಶ್ರೀ ಕಾಳಿಕಾ ದರ್ಗಾಪರಮೇಶ್ವರಿ ದೇವಿ ಕ್ಷೇತ್ರದ ಧರ್ಮದರ್ಶಿ ಶ್ರೀ ಪದ್ಮನಾಭ ಸ್ವಾಮೀಜಿರವರು ಆಶೀರ್ವಚನ ನೀಡಿ ನಮ್ಮಲ್ಲಿರುವ ಅಹಂಕಾರ ಅಹಂಭಾವ ದೂರವಾಗಬೇಕು. ಭೇದ ಭಾವ ದೂರವಾಗಿ ಎಲ್ಲರೂ ಒಂದಾಗಬೇಕು. ಯೋಗಭಾಗ್ಯ ಒಂದಾದರೆ ಎಲ್ಲವೂ ಒಳಿತಾಗುವುದು ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಡಾ|ಗೀತಪ್ರಕಾಶ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಾನು ಕೇವಲ ನಿಮಿತ್ತ ಮಾತ್ರ ನೀವೆಲ್ಲರು ಸೇರಿ ಉತ್ತಮ ಕೆಲಸ ಮಾಡಿದ್ದೀರಿ. ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆದಿದೆ ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕದ ಭಕ್ತಾಧಿಗಳು ಬಂದಲ್ಲಿ ಅದಕ್ಕೊಂದು ಅರ್ಥ ಬರುತ್ತದೆ. ಕಾರ್ಯಕರ್ತರ ನಿಸ್ವಾರ್ಥ ಸೇವೆಯಿಂದ ಕಾರ್ಯಕ್ರಮವ ಯಶಸ್ವಿಗೆ ಸಹಕಾರಿಯಾಗಿದೆ. ಮಾಣಿಲದ ಎರಡು ಶ್ರದ್ಧಾಕೇಂದ್ರಗಳು ಜೊತೆಯಾಗಿ ಸಾಗುವಂತಾಗಲಿ. ಶ್ರೀ ಕೃಷ್ಣ ಗುರೂಜಿಯವರ ಸಾಮಾಜಿಕ ಕಾರ್ಯ ಅಭಿನಂದನಾರ್ಹವಾಗಿದೆ ಎಂದರು.


ಕ್ಷೇತ್ರದ ಮೊಕ್ತೇಸರರಾದ ಎಂ.ಕೆ.ಕುಕ್ಕಾಜೆ, ಬೆಂಗಳೂರಿನ ಉದ್ಯಮಿ ನಟೇಶ್, ಶಿವಪ್ಪ ಮಾಸ್ಟರ್ ಎಣ್ಮಕಜೆ, ಮೆಲ್ಕಾರ್ ಬಿರ್ವ ಸೆಂಟರ್ ನ ಮಾಲಕ ಸಂಜೀವ ಪೂಜಾರಿ, ಮಾಣಿಲ ಗ್ರಾಮ ಪಂಚಾಯತ್ ಸದಸ್ಯರಾದ ವಿಷ್ಣು ಭಟ್ ಕೊಮ್ಮುಂಜೆ, ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಿ. ಬಾಲಕೃಷ್ಣ ಪೂಜಾರಿ, ಅಳಿಕೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಕಾನ ಈಶ್ವರ ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಕಾರಾಜೆ, ಕುಕ್ಕಾಜೆ ಆಡಳಿತ ಮಂಡಳಿಯ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಎಂ. ಕುಕ್ಕಾಜೆ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಧರ ಬಾಳೆಕಲ್ಲು, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಕೃಷ್ಣಪ್ಪ ತಾರಿದಳ, ಜಗನ್ನಾಥ ರೈ ಕೆಳಗಿನ ಮನೆ, ಸರಿತಾರೂಪರಾಜ್, ಕಾಸರಗೋಡು ಕಾಳ್ಯಂಗಾಡು ಶ್ರೀ ಮೂಕಾಂಬಿಕ ದೇವಸ್ಥಾನದ ಧರ್ಮದರ್ಶಿ ನಾರಾಯಣ ಪೂಜಾರಿ,ಲೊಕೇಶ್ ಪೂಜಾರಿ ಮಂಗಳೂರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ:

ವೇದಿಕೆಯಲ್ಲಿ ಕ್ಷೇತ್ರದ ವಾಸ್ತುಶಿಲ್ಪಿ ಸುಬ್ಬಯ್ಯ ಭಟ್, ಕಪ್ಪುಕಲ್ಲಿನ ಶಿಲ್ಪಿ ಉದಯ ಪೂಜಾರಿ ಅನಂತಾಡಿ, ಮರದಕೆಲಸದ ಶಿಲ್ಪಿ ಉಮೇಶ್ ಪೂಜಾರಿ ಬಲ್ಪರವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಸುಶ್ಮಿತಾ, ರಕ್ಷಿತಾ, ಸೌಜನ್ಯ ಸನ್ಮಾನ ಪತ್ರ ವಾಚಿಸಿದರು.


ರಕ್ಷಿತಾ ಹಾಗೂ ಸುಶ್ಮಿತಾ ಪ್ರಾರ್ಥಿಸಿದರು. ಬ್ರಹ್ಮಕಲಶೊತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಸಣ್ಣಗುತ್ತು ಅಳಿಕೆ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಧರ ಬಾಳೆಕಲ್ಲು ವಂದಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here