ಪವಿತ್ರ ರೂಪೇಶ್ ಅಭಿನಯದ, ತುಳುನಾಡಿನ ವೈಶಿಷ್ಟ್ಯ ಸಂಸ್ಕೃತಿ ಆಧಾರಿತ ‘ಇಂಚಿತ್ತಿ ನಮ್ಮ ತುಳುನಾಡ್’ ಆಲ್ಬಂ ಸಾಂಗ್ ಬಿಡುಗಡೆ

0

ಸುದ್ದಿ ಯೂ ಟ್ಯೂಬ್ ಚಾನೆಲ್‌ನಲ್ಲಿ ಪ್ರೀಮಿಯರ್ ಶೋ

  • ತುಳುನಾಡಿನ ವಿಶಿಷ್ಟ ಸಂಭ್ರಮವನ್ನು ತೋರಿಸುವಲ್ಲಿ ಯಶಸ್ಸು ಸಿಕ್ಕಿದೆ-ಸವಣೂರು ಸೀತಾರಾಮ ರೈ
  • ಕಲೆ, ತಂತ್ರಜ್ಞಾನ ಸಮ್ಮಿಳಿತವಾದಾಗ ನೋಡುಗರಿಗೆ ಸಂತೋಷ-ಬಲರಾಮ ಆಚಾರ್ಯ
  • ವೀಡಿಯೋ ಆಲ್ಬಂ ಎವರ್‌ಗ್ರೀನ್ ಆಗಲಿ-ನವೀನ್ ಭಂಡಾರಿ ಕುಮಾರ್
  • ಸಿನೆಮಾ ಮಾಡುವ ಅವಕಾಶ ಮೂಡಿ ಬರಲಿ-ಬೂಡಿಯಾರ್ ರಾಧಾಕೃಷ್ಣ ರೈ
  • ತುಳುನಾಡನ್ನು ನೋಡಿ ಬಂದ ಹಾಗೆ ಆಯಿತು -ಝೇವಿಯರ್ ಡಿಸೋಜಾ

ಪುತ್ತೂರು:ತುಳುನಾಡಿನ ವೈಶಿಷ್ಟ್ಯ ಸಂಸ್ಕೃತಿ ಆಧಾರಿತವಾಗಿ ಪುತ್ತೂರು ಶೇಟ್ ಇಲೆಕ್ಟ್ರಾನಿಕ್ಸ್ ಅರ್ಪಿಸುವ ಪವಿತ್ರ ರೂಪೇಶ್ ಅಭಿನಯದ ‘ಇಂಚಿತ್ತಿ ನಮ್ಮ ತುಳುನಾಡ್’ ತುಳು ಆಲ್ಬಂ ಸಾಂಗ್ ಪುತ್ತೂರು ಜಿಎಲ್ ವನ್ ಮಾಲ್‌ನಲ್ಲಿರುವ ಭಾರತ್ ಸಿನೆಮಾಸ್‌ನಲ್ಲಿ ಮಾ.10ರಂದು ಸಂಜೆ ಬಿಡುಗಡೆಗೊಂಡಿತು.

ತುಳುನಾಡಿನ ವಿಶಿಷ್ಟ ಸಂಭ್ರಮವನ್ನು ತೋರಿಸುವಲ್ಲಿ ಯಶಸ್ಸು ಸಿಕ್ಕಿದೆ: ಆಲ್ಬಂ ಸಾಂಗ್ ಬಿಡುಗಡೆಗೊಳಿಸಿದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಅವರು ಮಾತನಾಡಿ ತುಳುನಾಡಿನ ವೈಭವ ಕುಣಿತ, ಹಾಡುಗಳನ್ನು ಯಾವುದೇ ವ್ಯವಸ್ಥೆಯಲ್ಲಿ ಕಾಣಲು ಸಾಧ್ಯವಿಲ್ಲ.ಅಂತಹ ತುಳುನಾಡಿನ ವಿಶಿಷ್ಟ ಸಂಭ್ರಮವನ್ನು ಪವಿತ್ರ ರೂಪೇಶ್ ಅವರು ಮಾಡಿ ತೋರಿಸಿದ್ದಾರೆ. ಮತ್ತೆಮತ್ತೆ ಕೇಳುವ, ನೋಡುವ ಎಂಬ ರೀತಿಯಲ್ಲಿ ಈ ಆಲ್ಬಂ ಉತ್ತಮವಾಗಿ ಮೂಡಿ ಬಂದಿದೆ. ಮುಂದಿನ ದಿನಗಳಲ್ಲಿ ಈ ರೀತಿ ಹಲವು ಆಲ್ಬಂ ವಿಡಿಯೋ ಮೂಡಿ ಬರಲಿ ಎಂದು ಹಾರೈಸಿದರು.

ಕಲೆ, ತಂತ್ರಜ್ಞಾನ ಸಮ್ಮಿಳಿತವಾದಾಗ ನೋಡುಗರಿಗೆ ಸಂತೋಷ: ಜಿ.ಎಲ್ ಆಚಾರ್ಯ ಜ್ಯುವಲ್ಲರ‍್ಸ್‌ನ ಮಾಲಕ ಬಲರಾಮ ಆಚಾರ್ಯ ಅವರು ಮಾತನಾಡಿ ಆಲ್ಬಂ ಸಾಂಗ್ ಅದ್ಭುತವಾಗಿ ಮೂಡಿ ಬಂದಿದೆ. ಸಂಗೀತದೊಂದಿಗೆ ಕಿವಿಗೂ ಕಣ್ಣಿಗೂ ರಸದೌತಣ ನೀಡಲಾಗಿದೆ. ಪವಿತ್ರ ರೂಪೇಶ್ ಅವರಲ್ಲಿ ಉತ್ತಮ ಪ್ರತಿಭೆ ಇದೆ. ಅವರ ಟೀಮ್ ಇಂತಹ ಇನ್ನೂ ಹೆಚ್ಚು ಹಾಡುಗಳನ್ನು ಸಂಯೋಜಿಸಿ ಬಿಡುಗಡೆ ಮಾಡಲಿ ಎಂದು ಶುಭಹಾರೈಸಿದರು.

ವೀಡಿಯೋ ಆಲ್ಬಂ ಎವರ್‌ಗ್ರೀನ್ ಆಗಲಿ: ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರು ಮಾತನಾಡಿ ಪವಿತ್ರ ರೂಪೇಶ್ ಅವರಿಂದ ಮೂಡಿ ಬಂದಿರುವ ಈ ಆಲ್ಬಂ ಸಾಂಗ್ ನಮ್ಮನ್ನು ತುಳುನಾಡಿನ ಪರಿಚಯ ಮಾಡಿಸಿದೆ. ತುಳುನಾಡಿನಲ್ಲಿ ಹುಟ್ಟಿದ ನಾವೆಲ್ಲ ಧನ್ಯರು. ಮುಂದೆ ಇನ್ನಷ್ಟು ಇಂತಹ ಹಾಡುಗಳು ಬರುವಂತೆ ಎವರ್‌ಗ್ರೀನ್ ಆಗಲಿ ಎಂದರು.

ಸಿನೆಮಾ ಮಾಡುವ ಅವಕಾಶ ಮೂಡಿ ಬರಲಿ: ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಅವರು ಮಾತನಾಡಿ ತುಳು ಸಿನಿಮಾದಲ್ಲಿ ನೋಡದ ನಮ್ಮ ಸಂಸ್ಕೃತಿಯ ದೃಶ್ಯ ಈ ಆಲ್ಬಂ ಸಾಂಗ್‌ನಲ್ಲಿ ನಮಗೆ ನೋಡಲು ಸಿಕ್ಕಿದೆ. ಇಂತಹ ಅದ್ಭುತ ಕಲಾ ನೈಪುಣ್ಯತೆ ಇರುವ ಪವಿತ್ರ ರೂಪೇಶ್ ಅವರಿಗೆ ಮುಂದೆ ಸಿನೆಮಾ ಮಾಡುವ ಅವಕಾಶವು ಸಿಗಲಿ ಎಂದರು.

ತುಳು ನಾಡನ್ನು ನೋಡಿ ಬಂದ ಹಾಗೆ ಆಯಿತು: ಮಹಿಳಾ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಝೇವಿಯರ್ ಡಿಸೋಜಾ ಅವರು ಮಾತನಾಡಿ ಪವಿತ್ರ ರೂಪೇಶ್ ಅವರಿಂದ ಮೂಡಿ ಬಂದಿರುವ ಆಲ್ಬಂ ನೋಡಿ ನಮಗೆ ತುಳು ನಾಡನ್ನು ನೋಡಿ ಬಂದ ಹಾಗೆ ಆಗಿದೆ. ಹಿಂದೆ ಒಬ್ಬ ದಾರ್ಶನಿಕ ಪ್ಲೆಟೋ ಹೇಳಿದಂತೆ ಪ್ರಾಥಮಿಕ ಶಾಲೆಯಲ್ಲಿ ಸಂಗೀತ ಕಲಿತರೆ ಮುಂದೆ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂಬ ಮಾತಿಗೆ ತಕ್ಕಂತೆ ಇವತ್ತು ಸಂಗೀತಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದರು.

ಪವಿತ್ರ ರೂಪೇಶ್ ಅವರಿಗೆ ದೊಡ್ಡ ವೇದಿಕೆ ಸಿಗಲಿ: ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರು ಮಾತನಾಡಿ ಪವಿತ್ರ ರೂಪೇಶ್ ಅವರ ಪ್ರತಿಭೆ ಅನುಭವಕ್ಕೆ ತಕ್ಕಂತೆ ಅವರಿಗೆ ದೊಡ್ಡ ವೇದಿಕೆ ಸಿಗುವಂತಾಗಲಿ ಎಂದು ಹೇಳಿದರು.

ತನ್ವಿ ಶೆಣೈ ಪ್ರಾರ್ಥಿಸಿದರು. ವಿದುಷಿ ಪವಿತ್ರ ರೂಪೇಶ್ ಸ್ವಾಗತಿಸಿದರು.ರೂಪೇಶ್ ಶೇಟ್ ಸಹಕರಿಸಿದರು. ವಿಶ್ವಾಸ್ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಆಲ್ಬಂ ಸಾಂಗ್ ನಿರ್ದೇಶಕ ಸುರೇಶ್ ಶೆಟ್ಟಿ, ಶಿವಾನಂದ ಶೇಟ್, ಶಶಿಕಲಾ ಶೇಟ್, ವಿಜಯಲಕ್ಷ್ಮೀ ಇಲೆಕ್ಟ್ರಿಕಲ್ಸ್‌ನ ಚಂದ್ರಶೇಖರ್ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ದೀಪ ಪ್ರಜ್ವಲನೆ ನಡೆಯಿತು. ಬಳಿಕ ಪ್ರೀಮಿಯಂ ಶೋ ನಡೆದ ಬಳಿಕ ಅತಿಥಿ ಗಣ್ಯರು ಮಾತನಾಡಿದರು.

ಸುದ್ದಿ ಯೂ ಟ್ಯೂಬ್ ಚಾನೆಲ್‌ನಲ್ಲಿ ಆಲ್ಬಂ ಸಾಂಗ್‌ಗೆ ಚಾಲನೆ
ಆಲ್ಬಂ ಸಾಂಗ್‌ನ ಮೀಡಿಯ ಪಾರ್ಟ್ನರ್ ಅಗಿರುವ ಸುದ್ದಿ ಮೀಡಿಯಾದ ಸುದ್ದಿ ಯೂ ಟ್ಯೂಬ್ ಚಾನೆಲ್‌ನಲ್ಲಿ ಆಲ್ಬಂನ್ನು ಪ್ರಶಂಶಾ ಕಾಪು ತಂಡದ ಶರತ್ ಉಚ್ಚಿಲ ಅವರು ಚಾಲನೆ ನೀಡಿದರು. ಯೂ ಟ್ಯೂಬ್ ಅಪ್‌ಲೋಡ್ ಆದ ಕೆಲ ಸಮಯದಲ್ಲೇ ಸಾವಿರಾರು ಮಂದಿ ಆಲ್ಬಂ ಸಾಂಗ್‌ಗೆ ಲೈಕ್ ಕೊಟ್ಟಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here