ಆಚಾರ- ವಿಚಾರದ ಉಳಿವಿಗೆ ಒಗ್ಗೂಡೋಣ: ನಟೇಶ್ ಪೂಜಾರಿ
ಉಪ್ಪಿನಂಗಡಿ: ಕಂಬಳವೆನ್ನುವುದು ತುಳುನಾಡಿನ ಕೃಷಿ ಸಂಸ್ಕೃತಿಯಾಗಿದ್ದು, ಯುವ ಜನತೆಯು ಇದರತ್ತ ಆಕರ್ಷಿತರಾಗಬೇಕಿದೆ. ನಮ್ಮ ನೆಲದ ಪೂರ್ವ ಸಂಸ್ಕೃತಿಗೆ ಯಾವುದೇ ಧಕ್ಕೆ ಬಾರದಂತೆ ಹಿರಿಯರ ಮಾರ್ಗದರ್ಶನದೊಂದಿಗೆ ನಮ್ಮ ಆಚಾರ- ವಿಚಾರಗಳನ್ನು ಉಳಿಸಿ ಬೆಳೆಸಲು ನಾವೆಲ್ಲಾ ಮುಂದಾಗಬೇಕೆಂದು ಯುವ ಉದ್ಯಮಿ, ಉಪ್ಪಿನಂಗಡಿ ವಿಜಯ- ವಿಕ್ರಮ ಕಂಬಳ ಸಮಿತಿಯ ಉಪಾಧ್ಯಕ್ಷ ನಟೇಶ್ ಪೂಜಾರಿ ತಿಳಿಸಿದರು.
37ನೇ ವರ್ಷದ ಹೊನಲು ಬೆಳಕಿನ ವಿಜಯ- ವಿಕ್ರಮ ಜೋಡುಕರೆ ಕಂಬಳವನ್ನು ಉಪ್ಪಿನಂಗಡಿಯ ಹಳೆಗೇಟುವಿನ ಬಳಿಯ ನೇತ್ರಾವತಿ ನದಿ ಕಿನಾರೆಯಲ್ಲಿರುವ ಕಂಬಳ ಕರೆಯಲ್ಲಿ ದೀಪ ಪ್ರಜ್ವಲನೆಗೈಯುವ ಮೂಲಕ ಶನಿವಾರ ಉದ್ಘಾಟಿಸಿ, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕೃಷಿಯು ನಾಶವಾಗುವುದರೊಂದಿಗೆ ಅದರೊಳಗೆ ಬೆಸೆದುಕೊಂಡಿದ್ದ ತುಳುವರ ಸಂಸ್ಕೃತಿಯು ಇಂದು ನಾಶವಾಗತೊಡಗಿದೆ. ನಮ್ಮ ಆಚಾರ- ವಿಚಾರಗಳನ್ನು ಮುಂದಿನ ಪೀಳಿಗೆಗೂ ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಆದ್ದರಿಂದ ನಮ್ಮ ನೆಲದ ಆರಾಧನಾ ಸಂಸ್ಕೃತಿ ಹಾಗೂ ಜನಪದ ಸಂಸ್ಕೃತಿಯ ಉಳಿವಿಗೆ ನಾವೆಲ್ಲರೂ ಪರಸ್ಪರ ಕೈಜೋಡಿಸಿ ಮುನ್ನಡೆಯುವುದು ಅಗತ್ಯವಾಗಿದೆ ಎಂದರು.
ಉಪ್ಪಿನಂಗಡಿ ದೀನರ ಕನ್ಯಾ ಮಾತೆ ದೇವಾಲಯದ ಧರ್ಮಗುರು ರೆ.ಫಾ. ಏಬೆಲ್ ಲೋಬೋ ಆಶೀರ್ವಚನ ನೀಡಿ, ಕಂಬಳ ಕ್ರೀಡೆಯೆನ್ನುವುದು ಇನ್ನಷ್ಟು ಬೆಳಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಸಮಾಜ ಕಲ್ಯಾಣ ಇಲಾಖೆಯ ಮಾಜಿ ಅಧ್ಯಕ್ಷೆ ದಿವ್ಯ ಪ್ರಭಾ ಚಿಲ್ತಡ್ಕ ಮಾತನಾಡಿ, ದೇಶ ಭಕ್ತಿಯೆನ್ನುವುದು ಬಾಯಿಯಿಂದ ಮಾತನಾಡಿದಾಗ ಆಗುವುದಿಲ್ಲ. ಸಂಸ್ಕೃತಿ ಉಳಿಸುವಂತಹ ಇಂತಹ ಕೆಲಸ ಕಾರ್ಯಗಳನ್ನು ಮಾಡಿ ತೋರಿಸುವುದೇ ನಿಜವಾದ ದೇಶ ಸೇವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಜಯ- ವಿಕ್ರಮ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಕಂಬಳವೆನ್ನುವುದು ತುಳುವರ ನೊಗ- ನೇಗಿಲ ಸಂಸ್ಕೃತಿಯಾಗಿದ್ದು, ಇದಕ್ಕೆ ಅಳಿವಿಲ್ಲ. ಹಲವು ಅಡೆ- ತಡೆಗಳು ಎದುರಾದರೂ ಎಲ್ಲವನ್ನೂ ಎದುರಿಸಿ ಮತ್ತೆ ರಾಜ ವೈಭವದಿಂದ ಕಂಬಳಗಳು ನಡೆಯುತ್ತಿರುವುದೇ ಇದಕ್ಕೆ ಸಾಕ್ಷಿ ಎಂದರು.
ಮುಖ್ಯ ಅತಿಥಿಗಳಾಗಿದ್ದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಉದ್ಯಮಿ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಕದಿಕ್ಕಾರು ಬೀಡಿನ ಪ್ರವೀಣ್ ಕುಮಾರ್ ರೈ, ಭಾರತೀಯ ಭೂ ಸೇನೆಯ ನಿವೃತ್ತ ಹವಾಲ್ದಾರ್ ವಿಶ್ವನಾಥ ಶೆಣೈ, ಉದ್ಯಮಿ ರಾಜೇಶ್ ರೈ, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಸಂಕಪ್ಪ ಶೆಟ್ಟಿ, ಆಸ್ಮಾ ಉಮ್ಮರ್, ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ಮಹಾಲಿಂಗ ಕಜೆಕ್ಕಾರು, ಉದ್ಯಮಿ ಸುರೇಶ್, ಕಂಬಳ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.
ಕಂಬಳ ಸಮಿತಿಯ ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ವಂದಿಸಿದರು. ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ವೈಭವದ ಮೆರವಣಿಗೆ
ಇದಕ್ಕೂ ಮೊದಲು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ ಹಾಗೂ ವಿಟ್ಲ- ಉಲ್ಲಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ತೆಂಗಿನಕಾಯಿ ಒಡೆಯುವ ಮೂಲಕ ಕಂಬಳದ ಮೆರವಣಿಗೆಗೆ ಚಾಲನೆ ನೀಡಿದರು. ಉಪ್ಪಿನಂಗಡಿ ಪೇಟೆಯಿಂದ ಕಂಬಳ ಕೋಣಗಳು, ಕಂಬಳಾಭಿಮಾನಿಗಳ ಮೆರವಣಿಗೆ ಕಂಬಳದ ಕರೆಯ ಬಳಿ ಆಗಮಿಸಿತು. ಬ್ಯಾಂಡ್, ವಾದ್ಯ, ಕೊಂಬು, ತಟ್ಟಿರಾಯ, ಕೀಲುಕುದುರೆ, ನಾಸಿಕ್ ಬ್ಯಾಂಡ್ಗಳ ತಂಡಗಳು ಮೆರವಣಿಗೆಗೆ ಇನ್ನಷ್ಟು ರಂಗು ತುಂಬಿದವು.
ಈ ಸಂದರ್ಭ ದ.ಕ. ಜಿಲ್ಲಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಪೆರ್ನೆ, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಕೈಪ, ಉಪಾಧ್ಯಕ್ಷರಾದ ರಾಮಚಂದ್ರ ಮಣಿಯಾಣಿ, ವಿದ್ಯಾಧರ ಜೈನ್, ಶಿವಪ್ರಸಾದ್ ರೈ ಮಠಂತಬೆಟ್ಟು, ಜಯಂತ ಪೊರೋಳಿ, ದಾಸಪ್ಪ ಗೌಡ, ಜಯಂತ ಪೊರೋಳಿ, ವಿಠಲ ಶೆಟ್ಟಿ ಕೊಲ್ಲೊಟ್ಟು, ಕಾರ್ಯದರ್ಶಿ ಚಂದ್ರಶೇಖರ ಮಡಿವಾಳ, ಜೊತೆ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಕಂಗ್ವೆ, ಗೌರವ ಸಲಹೆಗಾರ ಯು. ರಾಮ, ಸಂಘಟನಾ ಕಾರ್ಯದರ್ಶಿಗಳಾದ ಯೊಗೀಶ್ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಕೃಷ್ಣಪ್ರಸಾದ್ ಬೊಳ್ಳಾವು, ವಿಜಯ ಪೂಜಾರಿ ಚೀಮುಳ್ಳು, ದಿಲೀಪ್ ಶೆಟ್ಟಿ ಕರಾಯ, ಸಹ ಸಂಚಾಲಕರಾದ ಜಯಪ್ರಕಾಶ್ ಬದಿನಾರು, ಶಿವರಾಮ ಶೆಟ್ಟಿ ಗೋಳ್ತಮಜಲು, ಸಮಿತಿಯ ನಿಹಾಲ್ ಪಿ. ಶೆಟ್ಟಿ, ಸತೀಶ್ ಶೆಟ್ಟಿ ಹೆನ್ನಾಳ, ರಾಕೇಶ್ ಶೆಟ್ಟಿ ಕೆಮ್ಮಾರ, ಜಗದೀಶ್ ಪರಕಜೆ, ಜಯಾನಂದ ಗೌಡ, ಕೃಷ್ಣಪ್ಪ ಪೂಜಾರಿ, ಕಬೀರ್ ಕರುವೇಲು, ನವಾಝ್ ಕರ್ವೇಲು, ಜಗನ್ನಾಥ ರೈ ನಡುಮನೆ ಮತ್ತಿತರರು ಉಪಸ್ಥಿತರಿದ್ದರು.