ಕಾಣಿಯೂರು: ಠಾಣೆಗೆ ಬರುವ ಜನರೊಂದಿಗೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ನಡೆದುಕೊಂಡು ಅವರಿಗೆ ಬೇಕಾದ ಪೂರಕ ಮಾಹಿತಿ ನೀಡಿ, ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲು ನಾವೆಲ್ಲ ಉತ್ಸುಕವಾಗಿದ್ದೇವೆ ಅದರಂತೆ ಕ್ರಮಕ್ಕೆ ಸೂಚಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಮಟೆ ವಿಕ್ರಮ್ ಅವರು ಹೇಳಿದರು.
ಅವರು ಬೆಳ್ಳಾರೆಯಲ್ಲಿ ಪತ್ರಕರ್ತರೊಂದಿಗೆ ಮಾ.13ರಂದು ಮಾತನಾಡಿದರು. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲ. ಸರಕಾರದ ಮಂಜೂರಾದ ಹುದ್ದೆಗಳು ಇಲ್ಲಿ ಭರ್ತಿಯಾಗಿದೆ. ಮುಂದಕ್ಕೆ ಇಲ್ಲಿನ ಪರಿಸ್ಥಿತಿ, ಪ್ರಕರಣ ಸಂಖ್ಯೆ, ಇತರೆ ಕಾರ್ಯ ವೈಖರಿಗಳನ್ನು ನೋಡಿಕೊಂಡು ಹೆಚ್ಚುವರಿ ಸಿಬ್ಬಂದಿ ಬೇಕೆಂಬ ಬೇಡಿಕೆ ಬಗ್ಗೆ ಇಲಾಖೆಗೆ ಬರೆದು ಕೇಳಿಕೊಳ್ಳಲಾಗುವುದು ಎಂದರು.
ಮುಂಬರುವ ಚುನಾವಣೆ ಕುರಿತು ಜಿಲ್ಲಾಧಿಕಾರಿ ಅವರ ಜತೆ ಚರ್ಚಿಸಿ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇವೆ ಎಂದರು.
ಬೆಳ್ಳಾರೆ ಪೊಲೀಸ್ ಠಾಣೆಗೆ ಹೊಸ ಕಟ್ಟಡ ಬೇಡಿಕೆ ಇತ್ತು. ಅದೀಗ ಈಡೇರಿದೆ. ಹೊಸ ಕಟ್ಟಡ ಉದ್ಘಾಟನೆಗೊಂಡು ಸೇವೆಗೆ ಸಜ್ಜಾಗಿದೆ. ಹೊಸ ಕಟ್ಟಡ ವಿಶಾಲವಾಗಿ ಪೂರಕವಾಗಿದೆ ಎಂದು ಅವರು ತಿಳಿಸಿದರು.