ಉಪ್ಪಿನಂಗಡಿ: ಗಯಾಪದ ಕ್ಷೇತ್ರ, ದಕ್ಷಿಣ ಕಾಶಿಯೆಂದೆನಿಸಿಕೊಂಡಿರುವ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಅಷ್ಟಮಿ 3ನೇ ಮಖೆಕೂಟ ಮಾ.14ರಂದು ನಡೆಯಲಿದೆ.
ಮಾ.14ರಂದು ರಾತ್ರಿ 8:30 ರಿಂದ ಬಲಿ ಹೊರಟು ಉತ್ಸವ, ರಥೋತ್ಸವ, ಬಲಿ, ಮಹಾಪೂಜೆ ನಡೆಯಲಿದೆ. ಮಾ.15ರಂದು ಪ್ರಾತಃಕಾಲ ತೀರ್ಥಸ್ನಾನ, ಬೆಳಗ್ಗೆ 7:30ರಿಂದ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ಕೊಡುವುದು, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮಾ.14ರಂದು ರಾತ್ರಿ ಶ್ರೀ ಕ್ಷೇತ್ರ ಪಾವಂಜೆ ಮೇಳದವರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ‘ನಾಗ ಸಂಜೀವಿನಿ’ ಯಕ್ಷಗಾನ ಬಯಲಾಟ ನಡೆಯಲಿದ್ದು, ರಾತ್ರಿ 12ರಿಂದ ಗಯಾಪದ ಕಲಾವಿದೆರ್ ಉಬಾರ್ ಇವರಿಂದ ‘ನಮ ತೆರಿಯೊನುಗ’ ತುಳು ನಾಟಕ ನಡೆಯಲಿದೆ.
ಮಹಾಕಾಳಿ ಮೆಚ್ಚಿ: ಮಾ. 21ರಂದು ರಾತ್ರಿ ಮಹಾಕಾಳಿ ಮೆಚ್ಚಿ ನಡೆಯಲಿದ್ದು, ರಾತ್ರಿ 9ರಿಂದ ಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ 8ರಿಂದ ಇರಾ ಹಂದೆಯವರಿಂದ ‘ಭೂ ಕೈಲಾಸ’ ಹರಿಕಥೆ ನಡೆಯಲಿದೆ.
ಮಾ.24ರಂದು ಕದಿಕ್ಕಾರು ಬೀಡಿನಿಂದ ಭಂಡಾರ ಬಂದು ದೇವಾಲಯದ ಸಂತೆಮಜಲಿನಲ್ಲಿ ‘ದೊಂಪದ ಬಲಿ’ ನೇಮೋತ್ಸವ ನಡೆಯಲಿದೆ ಎಂದು ದೇವಾಲಯದ ಪ್ರಕಟನೆ ತಿಳಿಸಿದೆ.