ದೇಶದ ಭವಿಷ್ಯತ್ವದ ದೃಷ್ಟಿಯಲ್ಲಿ ಸರಕಾರದಿಂದ ಉತ್ತಮ ಜನಪರ ಯೋಜನೆ ಜಾರಿ – ಎಸ್ ಅಂಗಾರ
ಕಾಣಿಯೂರು: ತಮ್ಮ ಕಾರ್ಯ ಕ್ಷೇತ್ರಗಳಲ್ಲಿ ಇಲಾಖೆಗಳ ಅಧಿಕಾರಿಗಳು ಪ್ರೀತಿ ವಿಶ್ವಾಸದಿಂದ ಉತ್ತಮ ಕಾರ್ಯ ನಿರ್ವಹಿಸಿದಾಗ ದೇವರು ಮೆಚ್ಚುವ ಕೆಲಸವಾಗುತ್ತದೆ, ಆ ಮೂಲಕ ಜನರ ಪ್ರೀತಿ ವಿಶ್ವಾಸವನ್ನು ಅಧಿಕಾರಿಗಳು ಗಳಿಸಿಕೊಳ್ಳಬೇಕು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಹೇಳಿದರು. ಅವರು ಬೆಳಂದೂರು ಗ್ರಾಮ ಪಂಚಾಯತ್ ನ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಬೇರೆ ಬೇರೆ ರೀತಿಯಲ್ಲಿ ವೈಯುಕ್ತಿಕ ಸೌಲಭ್ಯವನ್ನು ಪಡೆಯುವುದಕ್ಕೆ ಬೇಕಾಗಿ ಸರಕಾರ ಗ್ರಾಮ ಒನ್ ಯೋಜನೆ ಜಾರಿಗೆ ತಂದಿದೆ. ದೇಶದ ಭವಿಷ್ಯತ್ವದ ದೃಷ್ಟಿಯಲ್ಲಿ ಉತ್ತಮ ಜನಪರ ಯೋಜನೆಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ಜಾರಿಗೆ ತರುತ್ತಿದೆ ಎಂದರು. ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಮಾತನಾಡಿ, ಸ್ಥಳೀಯ ಸರಕಾರ ಕಟ್ಟ ಕಡೆಯ ವ್ಯಕ್ತಿಗಳನ್ನು ಗುರುತಿಸುವಂತದ್ದು ಗ್ರಾಮ ಪಂಚಾಯತ್ ನ ಮುಖ್ಯವಾದ ಕೆಲಸ. ಗ್ರಾಮ ಪಂಚಾಯತ್ ಕಟ್ಟಡಗಳು, ಕಚೇರಿಗಳು ಸ್ವಂತ ಜಾಗದಲ್ಲಿರಬೇಕು ಎಂದು ಯೋಚಿಸಿಕೊಂಡು, ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿಯೇ ಶಾಶ್ವತ ಕಚೇರಿ, ಸಭಾಂಗಣವನ್ನು ನಿರ್ಮಿಸಲಾಗುತ್ತಿದೆ. ಉದ್ಯೋಗ ಖಾತರಿ ಯೋಜನೆಯ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ಮಾತನಾಡಿ, ಬೆಳಂದೂರು ಗ್ರಾಮ ಪಂಚಾಯತ್ ಗೆ ಸುಸಜ್ಜಿತ ಕಟ್ಟಡ ಆಗಬೇಕು ಎನ್ನುವುದು ಗ್ರಾಮಸ್ಥರ ಬಹು ದಿನದ ಬೇಡಿಕೆಯಾಗಿತ್ತು. ಇದೀಗ ಕಾಲ ಕೂಡಿ ಬಂದಿದ್ದು, ಶಿಲಾನ್ಯಾಸ ನೆರವೇರಿದೆ. ಈ ನಿಟ್ಟಿನಲ್ಲಿ ಸುಂದರ ಕಟ್ಟಡ ನಿರ್ಮಾಣವಾಗುವಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಸುಳ್ಯ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ತಿಮ್ಮಪ್ಪ ಗೌಡ ಮುಂಡಾಲ, ಬೆಳಂದೂರು ಗ್ರಾ.ಪಂ. ಸದಸ್ಯರಾದ ಮೋಹನ್ ಅಗಳಿ, ವಿಠಲ ಗೌಡ ಅಗಳಿ, ಪ್ರವೀಣ್ ಕೆರೆನಾರು, ಜಯಂತ ಅಬೀರ, ಜಯರಾಮ ಬೆಳಂದೂರು, ಗೌರಿ ಮಾದೋಡಿ, ಗೀತಾ ಕುವೆತ್ತೋಡಿ, ತಾರಾ ಅನ್ಯಾಡಿ ಹರಿಣಾಕ್ಷಿ ಬನಾರಿ, ಕುಸುಮಾ ಅಂಕಜಾಲು, ಉದ್ಯೋಗ ಖಾತರಿ ಯೋಜನೆಯ ಇಂಜಿನಿಯರ್ ಮೋಹಿತ್, ಕುದ್ಮಾರು ತಿರಂಗಾ ವಾರಿಯರ್ಸ್ ನ ಸಂಚಾಲಕ ಲೋಕೇಶ್ ಬಿ. ಎನ್ ಹಾಗೂ ಗ್ರಾಮಸ್ಥರು, ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಗ್ರಾ. ಪಂ. ಪ್ರಭಾರ ಅಭಿವೃದ್ಧಿ ಅಧಿಕಾರಿ ನಾರಾಯಣ್ ಸ್ವಾಗತಿಸಿದರು. ಲೆಕ್ಕಸಹಾಯಕಿ ಸುನಂದಾ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಕುದ್ಮಾರು ಕಾಯಿಮಣ, ಬೆಳಂದೂರು ಗ್ರಾಮಗಳಿಗೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ಕಟ್ಟಡ ಸುಮಾರು 50ವರ್ಷಗಳಷ್ಟು ಹಳೆಯದ್ದು. ಇಲ್ಲಿನ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಂತೆ ಗ್ರಾಮ ಪಂಚಾಯತ್ ಗೆ ಹೊಸ ಸುಸಜ್ಜಿತ ಕಟ್ಟಡಕ್ಕೆ ನರೇಗಾ, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಅನುದಾನದಿಂದ ಸುಮಾರು ರೂ 40ಲಕ್ಷ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಲಿದೆ.