ಬಲ್ನಾಡು ಮೊರಾರ್ಜಿ ದೇಸಾಯಿ ಶಾಲೆಯ ಪ್ರಭಾರ ಪ್ರಾಂಶುಪಾಲರಿಂದ ತಾರತಮ್ಯ ನೀತಿ ಆರೋಪ: ದೂರು

0

ಪುತ್ತೂರು: ಬಲ್ನಾಡು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಭಾರ ಪ್ರಾಂಶುಪಾಲರು ಪೋಷಕರೊಂದಿಗೆ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ, ಪೋಷಕರೊಂದಿಗೆ ಸೌಜನ್ಯದಿಂದ ವರ್ತಿಸದೇ, ಮಕ್ಕಳಿಗೆ ಮತ್ತು ಪೋಷಕರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಪೋಷಕರೊಬ್ಬರು ಸಚಿವರು, ಜಿಲ್ಲಾಧಿಕಾರಿಗಳಿಗೆ, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರು ಮತ್ತು ಜಂಟಿ ನಿರ್ದೇಶಕರಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ, ಪುತ್ತೂರು ಶಿಕ್ಷಣಾಽಕಾರಿಗಳಿಗೆ ದೂರು ನೀಡಿದ ಘಟನೆ ವರದಿಯಾಗಿದೆ.

ಆಲೆಟ್ಟಿ ಗ್ರಾಮದ ಮಾಣಿಮರ್ಧು ಶ್ರೀಧರ ಎಂಬವರು ದೂರು ನೀಡಿದವರು. ಅವರು ತಮ್ಮ ಮಗಳನ್ನು ಪುತ್ತೂರಿನ ಬಲ್ನಾಡಿನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸೇರ್ಪಡೆಗೊಳಿಸಿದ್ದರು. ಅಲ್ಲಿಯ ಪ್ರಭಾರ ಪ್ರಾಂಶುಪಾಲರಾದ ಸುಬ್ರಹ್ಮಣ್ಯ ನಾಯಕ್ ಎಂಬವರು ಪೋಷಕರೊಂದಿಗೆ ಸೌಜನ್ಯದಿಂದ ವರ್ತಿಸದೇ ಉಡಾಫೆಯಿಂದ ವರ್ತಿಸುತ್ತಿದ್ದಾರೆಂದು ಶ್ರೀಧರ ಮಾಣಿಮರ್ಧುರವರು ದೂರಿನಲ್ಲಿ ಆರೋಪಿಸಿದ್ದಾರೆ.

‘ನಮ್ಮ ಮನೆ ತೀರಾ ಹಿಂದುಳಿದ ಪ್ರದೇಶದಲ್ಲಿರುವುದರಿಂದ ಮತ್ತು ಕಾಡಾನೆ ಸೇರಿದಂತೆ ಕಾಡುಪ್ರಾಣಿಗಳ ಹಾವಳಿ ಇರುವುದರಿಂದ ನಮ್ಮ ಮಕ್ಕಳನ್ನು ಅನಿವಾರ್ಯವಾಗಿ ವಸತಿ ಶಾಲೆಗೆ ಸೇರಿಸಿದ್ದೇವೆ. ನಮ್ಮಲ್ಲಿಗೆ ದೂರವಾಣಿ ಸಂಪರ್ಕವೂ ಸಿಗುವುದಿಲ್ಲ. ಮೊನ್ನೆ ಪ್ರಭಾರ ಪ್ರಾಂಶುಪಾಲರು, ನಾಳೆಯಿಂದ ಯಾರೂ ಮಕ್ಕಳನ್ನು ನೋಡಲು ಬರಲು ಅವಕಾಶವಿಲ್ಲವೆಂದು ಮೇಸೇಜ್ ಹಾಕಿದ್ದಾರೆ. ಆದರೆ ಒಮ್ಮೆ ಅವಕಾಶ ನೀಡಿ ಎಂದು ಕೇಳಿಕೊಂಡರೂ ಅವಕಾಶ ನಿರಾಕರಿಸಿದ್ದಾರೆ. ಆ ಬಳಿಕ ಬೇರೆ ಪೋಷಕರಿಗೆ ಮಕ್ಕಳ ಭೇಟಿಗೆ ಅವಕಾಶ ನೀಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಸೌಜನ್ಯದಿಂದ ಮಾತನಾಡದೇ ಮಕ್ಕಳ ಎದುರೇ ಪೋಷಕರನ್ನು ದಬಾಯಿಸಿದ್ದಾರೆ. ಇದರಿಂದ ಬೇಸರಗೊಂಡು ಮೇಲಽಕಾರಿಗಳಿಗೆ ದೂರು ನೀಡಿದ್ದೇನೆ’ ಎಂದು ದೂರುದಾರ ಶ್ರೀಧರರವರು ಹೇಳಿದ್ದಾರೆ.

ಪ್ರಭಾರ ಪ್ರಾಂಶುಪಾಲರ ಸ್ಪಷ್ಟನೆ

ದೂರಿನ ಬಗ್ಗೆ ಪ್ರಭಾರ ಪ್ರಾಂಶುಪಾಲರಾದ ಸುಬ್ರಹ್ಮಣ್ಯರವರನ್ನು ಸಂಪರ್ಕಿಸಿ ವಿಚಾರಿಸಿದಾಗ ಬೇರೆ ಕಡೆಗಳಲ್ಲಿ ನಮ್ಮಲ್ಲಿಂದಲೂ ಹೆಚ್ಚು ಸ್ಟ್ರಿಕ್ಟ್ ಇದೆ. ನಮ್ಮಲ್ಲಿ ಅಷ್ಟು ಇಲ್ಲ. ಪರೀಕ್ಷೆ ಹತ್ತಿರ ಬಂದ ಕಾರಣ ಪೋಷಕರಿಗೆ ಮಕ್ಕಳನ್ನು ಭೇಟಿಯಾಗಲು ಅವಕಾಶವಿಲ್ಲವೆಂದು ಹೇಳಿದ್ದೆ. ಬೇರೇನೂ ನಡೆದಿಲ್ಲ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here