ಪುತ್ತೂರು: ಮಾದಕ ಪದಾರ್ಥ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ಬಳಿ ಇರಿಸಿಕೊಂಡಿದ್ದ ಆರೋಪಿಯೊಬ್ಬರನ್ನು ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮತ್ತು ಎಸ್.ಐ ಅವರ ನೇತೃತ್ವದ ಕಾರ್ಯಾಚರಣೆಯಲ್ಲಿ ಬಂಧಿಸಿ, ಆರೋಪಿಯಿಂದ ರೂ. 40ಸಾವಿರ ಮೌಲ್ಯದ 1.೦2೦ ಕೆ.ಜಿ ತೂಕದ ಗಾಂಜಾವನ್ನು ವಶಕ್ಕೆ ಪಡೆದು ಕೊಂಡ ಘಟನೆ ಪುತ್ತೂರು ಮುಕ್ರಂಪಾಡಿಯ ಬಸ್‌ತಂಗುದಾಣದಲ್ಲಿ ಮಾ.16ರಂದು ನಡೆದಿದೆ.
ಬಲ್ನಾಡು ಗ್ರಾಮದ ಬುಳ್ಳೇರಿಕಟ್ಟೆ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಇಕ್ಬಾಲ್ ಪಿ ಯಾನೆ ಇಕ್ಕು(35ವ) ಎಂಬವರು ಬಂಧಿತ ಆರೋಪಿ. ಆರೋಪಿಯು ಪುತ್ತೂರು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುಕ್ರಂಪಾಡಿ ಎಂಬಲ್ಲಿ ಬಸ್‌ತಂಗುದಾಣವೊಂದರಲ್ಲಿ ರೂ. 40ಸಾವಿರ ಮೌಲ್ಯದ 1.020 ಕೆ.ಜಿ ತೂಕದ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ತಮ್ಮ ಬಳಿ ಇಟ್ಟುಕೊಂಡಿದ್ದರು.
ಮಾ.16ರಂದು ದ.ಕ ಜಿಲ್ಲಾ ಎಸ್ಪಿ ಮತ್ತು ಎಡಿಷನಲ್ ಎಸ್ಪಿ ಹಾಗು ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಸುನಿಲ್ ಕುಮಾರ್ ಮತ್ತು ಎಸ್.ಐ ಶ್ರೀಕಾಂತ್ ರಾಥೋಡ್ ಅವರ ನೇತೃತ್ವದಲ್ಲಿ ಎ.ಎಸ್ ಐ ಲೋಕನಾಥ್, ಹೆಡ್ ಕಾನ್ ಸ್ಟೇಬಲ್ ಸ್ಕರಿಯ, ಉದಯ, ಪ್ರಶಾಂತ್ ರೈ, ಜಗದೀಶ್, ಸುಬ್ರಹ್ಮಣ್ಯ, ಸಿಬ್ಬಂದಿಗಳಾದ ರೇವತಿ, ಶ್ರೀಮಂತ್ ಅವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಮುಕ್ರಂಪಾಡಿಯ ಬಸ್‌ತಂಗುದಾಣದಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯನ್ನು ಮತ್ತು ಆತನ ಕೈ ಚೀಲವನ್ನು ಪರಿಶೀಲನೆ ನಡೆಸಿದಾಗ ಕೈ ಚೀಲದ ಒಳಗೆ ಒಂದು ಪ್ಲಾಸ್ಟಿಕ್ ಕವರಿನಲ್ಲಿ ಗಾಂಜಾದ ಒಣಗಿದ ಹೂ, ಎಲೆ, ಮೊಗ್ಗು ಮತ್ತು ಬೀಜಗಳು ಇರುವುದು ಕಂಡು ಬಂದಿದ್ದು ಇದರ ದಟ್ಟವಾದ ವಾಸನೆಯಿಂದ ಇದು ಮಾದಕ ವಸ್ತು ಗಾಂಜಾ ಎಂದು ಖಚಿತ ಪಡಿಸಿ ಆರೋಪಿಯನ್ನು ಬಂಧಿಸಿದ್ದರು. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.