ಸಂಘದ ಬೆಳವಣಿಗೆಗೆ ಇವರ ಕೊಡುಗೆ ಅಪಾರ: ಪ್ರಕಾಶ್ಚಂದ್ರ ರೈ ಕೈಕಾರ
ಪುತ್ತೂರು: ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ನಿವೃತ್ತಿ ಹೊಂದಿದ ಎಂ.ಎಸ್.ಮುಕುಂದ ಶಾಂತಿವನರವರು ಮಾ.03 ರಂದು ನಿಧನ ಹೊಂದಿದ್ದು ಅವರಿಗೆ ಬ್ಯಾಂಕ್ ವತಿಯಿಂದ ಮಾ.14ರಂದು ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಂಘದ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ವಿನೋದ್ ಶೆಟ್ಟಿ ಅರಿಯಡ್ಕರವರು ನುಡಿನಮನ ಸಲ್ಲಿಸುತ್ತಾ, ಅವರು ಸಂಘಕ್ಕೆ ಸಲ್ಲಿಸಿದ ಸೇವೆ ಹಾಗೂ ಅವರ ನಾಟಿ ವೈದ್ಯಕೀಯದ ಬಗ್ಗೆ ಮಾತನಾಡಿ ನುಡಿನಮನ ಸಲ್ಲಿಸಿದರು.
ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರು ಮಾತನಾಡಿ, ಎಂ.ಎಸ್.ಮುಕುಂದರವರು ಕಾರ್ಯನಿರ್ವಹಣಾಧಿಕಾರಿಯಾಗಿ ಸಂಘದ ಬೆಳವಣಿಗೆಗೆ ಕಾರಣೀಭೂತರಾಗಿದ್ದರು. ನಾಟಿ ವೈದ್ಯರಾಗಿ ಸಾವಿರಾರು ರೋಗಿಗಳಿಗೆ ಮದ್ದು ಕೊಟ್ಟು ಗುಣಮುಖರಾಗಿಸಿದ್ದಾರೆ. ಅವರ ಕೊನೆಯ ದಿನಗಳಲ್ಲಿ ತನ್ನ ಸೊಸೆ ಮಲ್ಲಿಕಾರವರಿಗೆ ತನ್ನ ನಾಟಿ ವೈದ್ಯ ವಿದ್ಯೆಯನ್ನು ದೀಕ್ಷೆಯಾಗಿ ನೀಡಿದ್ದು ಪ್ರಸ್ತುತ ಅವರ ಸೊಸೆಯವರು ನಾಟಿ ವೈದ್ಯ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದರು. ನಾಟಿ ವೈದ್ಯರಾಗಿ ಹಾಗೂ ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿ ಅವರು ಸಲ್ಲಿಸಿದ ಸೇವೆಗೆ ನಾವುಗಳು ಸದಾ ಅವರ ಸ್ಮರಣೆ ಮಾಡುತ್ತಾ ಅವರಿಗೆ ಭಕ್ತಿಯ ನುಡಿನಮನ ಸಲ್ಲಿಸುತ್ತಿದ್ದೇವೆ ಎಂದು ಹೇಳಿ ನುಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಉಮೇಶ್ ಗೌಡ ಕನ್ನಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್, ನಿರ್ದೇಶಕರುಗಳಾದ ಸೂರ್ಯನಾರಾಯಣ ಭಟ್, ಸಂತೋಷ್ ಕುಮಾರ್ ರೈ, ವಾರಿಜ ಶೆಟ್ಟಿ, ಉಷಾ ನಾರಾಯಣ್, ರಘುರಾಮ ಪಾಟಾಳಿ, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಶರತ್, ಸಂಘದ ಸಿಬ್ಬಂದಿಗಳಾದ ವೀಣಾ, ರಾಜ್‌ಪ್ರಕಾಶ್, ಉದಯಶಂಕರ್, ರಾಜ್‌ಕಿರಣ್, ಭರತ್ ಎಸ್.ಎನ್, ಶಾಂತಕುಮಾರ, ಹರೀಶ್, ವೆಂಕಪ್ಪ ಹಾಗೂ ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಗಣೇಶ್ ರೈ, ಶಿವರಾಮ ಶೆಟ್ಟಿ, ತ್ಯಾಂಪಣ್ಣ ಆಳ್ವ ಮತ್ತಿತರರು ಉಪಸ್ಥಿತರಿದ್ದರು.