ನೆಲ್ಯಾಡಿ: ಕಡಬ ತಾಲೂಕಿನ ಕೊಣಾಲು ಗ್ರಾಮದ ಕಡೆಂಬಿಲತ್ತಾಯ ಗುಡ್ಡೆಯಲ್ಲಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ನೇತೃತ್ವದಲ್ಲಿ ಚಕ್ರವರ್ತಿ ಕೊಡಮಣಿತ್ತಾಯಿ, ದೈವಂಕ್ಲು, ಮೈಸಂತಾಯ, ಕಡೆಂಬಿಲತ್ತಾಯ, ಪಂಜುರ್ಲಿ, ಶಿರಾಡಿ ದೈವ, ಕಲ್ಕುಡ, ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮತ್ತು ಭಂಡಾರ ಹಿಡಿದು ನೇಮೋತ್ಸವ ಮಾ.19ರಿಂದ 21ರ ತನಕ ನಡೆಯಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ರೈ ಕೊಣಾಲುಗುತ್ತು, ಕಾರ್ಯದರ್ಶಿ ಚಂದಪ್ಪ ಗೌಡ ಕಾಯರ್ತಡ್ಕ, ಕೋಶಾಧಿಕಾರಿ ಧರ್ಣಪ್ಪ ಗೌಡ ಕೋಲ್ಪೆ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.
ಮಾ.19ರಂದು ಸಂಜೆ 6ರಿಂದ ದೇವತಾ ಪ್ರಾರ್ಥನೆ, ಸ್ಥಳಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ದಿಕ್ಪಾಲ ಬಲಿ ರಕ್ಷೆ ನಡೆಯಲಿದೆ. ಮಾ.20ರಂದು ಬೆಳಿಗ್ಗೆ 6.30ಕ್ಕೆ ಕಡೆಂಬಿಲ ನಾಗಬನದಲ್ಲಿ ನಾಗತಂಬಿಲ, 7ರಿಂದ ಗಣಹೋಮ, ಕಲಶ ಪೂಜೆ, 10ಕ್ಕೆ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, 12ಕ್ಕೆ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ಕ್ಕೆ ತೋರಣಮುಹೂರ್ತ, ಗ್ರಾಮಸ್ಥರಿಂದ ದೈವಗಳಿಗೆ ಪ್ರಾರ್ಥನೆ, ಎಣ್ಣೆತ್ತೋಡಿಯಿಂದ ಶಿರಾಡಿ ದೈವದ ಭಂಡಾರ ತರುವುದು, ಕಾಯರ್ತಡ್ಕದಿಂದ ಕಲ್ಕುಡ, ಕಲ್ಲುರ್ಟಿ, ಗುಳಿಗ ದೈವಗಳ ಭಂಡಾರ ತರುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಬಳಿಕ ಚಕ್ರವರ್ತಿ ಕೊಡಮಣಿತ್ತಾಯಿ, ದೈವಂಕ್ಲು, ಮೈಸಂತಾಯ, ಕಡೆಂಬಿಲತ್ತಾಯ, ಪಂಜುರ್ಲಿ, ಶಿರಾಡಿ ದೈವ, ಕಲ್ಕುಡ, ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ನೇಮೋತ್ಸವ ಮಾ.21ರಂದು ಮಧ್ಯಾಹ್ನದ ತನಕ ನಡೆಯಲಿದೆ. ಮಾ.22ರಂದು ಮಧ್ಯಾಹ್ನ ಅಮ್ಮನವರ ಪೂಜೆ ಮತ್ತು ಭೈರವ ದೈವಕ್ಕೆ ಹರಕೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.