ವೃತ್ತಿಜೀವನದಲ್ಲಿ ಪ್ರೀತಿ ಸಂಪಾದಿಸಿದವರು ನಿವೃತ್ತರಾದರೂ ಸಮಾಜ ಗುರುತಿಸುತ್ತದೆ-ಮಠಂದೂರು
ಪುತ್ತೂರು: ಹಲವಾರು ಶಿಕ್ಷಕರು ವೃತ್ತಿಯಲ್ಲಿ ನಿವೃತ್ತಿ ಹೊಂದಿದ ಬಳಿಕ ಪ್ರವೃತ್ತಿಗೆ ಮುಂದಡಿಯಿಡುತ್ತಾರೆ. ಯಾರು ತಮ್ಮ ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆಯಿಂದ ಸೇವೆಯನ್ನು ನಿರ್ವಹಿಸಿ ಪ್ರೀತಿಯನ್ನು ಸಂಪಾದಿಸುತ್ತಾರೋ ಅವರು ನಿವೃತ್ತರಾದರೂ ಸಮಾಜ ತುಂಬಾ ಗೌರವದಿಂದ ಗುರುತಿಸಿಕೊಳ್ಳುತ್ತದೆ ಎಂದು ಶಾಸಕ ಸಂಜೀವ ಮಠಂದೂರುರವರು ಹೇಳಿದರು.
ಮಾ.18 ರಂದು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಬೆಂಗಳೂರು ಇದರ ಪುತ್ತೂರು ಹಾಗೂ ಕಡಬ ತಾಲೂಕು ಸಮಿತಿಯ ಸಹಯೋಗದೊಂದಿಗೆ ನಡೆದ ಶೈಕ್ಷಣಿಕ ಕಾರ್ಯಾಗಾರ ಮತ್ತು ರಾಜ್ಯ ಮಟ್ಟದ ಕ್ರೀಡಾ ಸಾಧಕರಿಗೆ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸನ್ಮಾನಿಸಿ ಮಾತನಾಡಿದರು. ಭಾರತ ದೇಶವನ್ನು ಕ್ರೀಡಾ ಚಟುವಟಿಕೆಯ ಆಧಾರದಲ್ಲಿ ಯಂಗ್ ಇಂಡಿಯಾ ಎಂದು ಕರೆಯಲ್ಪಟ್ಟಿದೆ. ಹೇಗೆ ಜನಸಂಖ್ಯೆಯಲ್ಲಿ ಭಾರತ ನಂಬರ್ ಎನಿಸಿಕೊಂಡಿದ್ದೇಯೋ ಹಾಗೆಯೇ ಕ್ರೀಡೆಯಲ್ಲೂ ಪ್ರಥಮ ಸ್ಥಾನಿ ಎಂದೆನಿಸಿಕೊಳ್ಳಬೇಕಿದೆ. ಮುಂಬರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಾಕಷ್ಟು ಸವಾಲುಗಳಿದ್ದು, ಈ ಸವಾಲುಗಳನ್ನು ಸ್ವೀಕಾರ ಮಾಡಿಕೊಂಡು ಹೆಚ್ಚೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದರು.
ನೆಹರುನಗರ ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ|ವಿಜಯ ಹಾರ್ವಿನ್‌ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮಕ್ಕಳು ದೈಹಿಕ ಸಾಮರ್ಥ್ಯದ ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ ಹೇಗೆ ಕಲಿಕೆಯಲ್ಲಿ ಮುಂದುವರಿಯುವುದು. ಮಕ್ಕಳು ಸದೃಢ ಆರೋಗ್ಯವನ್ನು ಕಾಯ್ದುಕೊಳ್ಳಬೇಕಾದರೆ ಶಾಲೆಗಳಲ್ಲಿ ದೈಹಿಕ ಶಿಕ್ಷಣಕ್ಕೆ ಮೊದಲ ಆದ್ಯತೆಯಿರಬೇಕಾಗುತ್ತದೆ. ಪೋಷಕರು, ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕೇವಲ ಅಂಕಗಳನ್ನು ಗಳಿಸುವಲ್ಲಿ ದುಂಬಾಲು ಬೀಳುವ ಬದಲು ವಿದ್ಯಾರ್ಥಿಗಳಿಗೆ ಅಂಕಗಳೊಂದಿಗೆ ದೈಹಿಕ ಆರೋಗ್ಯದ ಬಗ್ಗೆಯೂ ತಿಳುವಳಿಕೆ ಮೂಡಿಸಿದಾಗ ಆರೋಗ್ಯವೂ ಸದೃಢಗೊಳ್ಳುತ್ತದೆ, ಶಿಸ್ತನ್ನು ಮೈಗೂಡಿಸಿಕೊಳ್ಳುವವರಾಗುತ್ತಾರೆ ಮತ್ತು ಸೋತಾಗ ಆತ್ಮಹತ್ಯೆಯಂತಹ ಅಲೋಚನೆಗಳಿಂದ ಮುಕ್ತರಾಗುತ್ತಾರೆ ಎಂದರು.
ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಲಿಲ್ಲಿ ಪಾಯಿಸ್ ಮಾತನಾಡಿ, ದೈಹಿಕ ಶಿಕ್ಷಣ ಶಿಕ್ಷಕರು ಏಕಾಗ್ರತೆ, ಶಿಸ್ತನ್ನು ಅಳವಡಿಸಿಕೊಂಡು ಕೇವಲ ಕ್ರೀಡಾಂಗಣದಲ್ಲಿ ಮಾತ್ರವಲ್ಲ, ಸರ್ವಾಂಗೀಣವಾಗಿ ಮಕ್ಕಳಿಗೆ ಕಲಿಸಿಕೊಡುವವರಾಗಬೇಕು. ಸಂಘಟನೆಗಳಲ್ಲಿ ಸಂಘರ್ಷ ಮೂಡದೆ ಒಗ್ಗಟ್ಟಿನಿಂದ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಸಂಘಟನೆಯನ್ನು ಮುಂದುವರೆಸಿಕೊಂಡು ಹೋಗುವಂತಾಗಬೇಕು ಎಂದರು.
ವಿಶೇಷ ಚೇತನ ಕ್ರೀಡಾಪಟುಗಳಿಗೆ ಅಭಿನಂದನೆ:
೨೦೨೨-೨೩ನೇ ಸಾಲಿನ ರಾಜ್ಯ ಮಟ್ಟದ ವಿಶೇಷ ಚೇತನ ಮಕ್ಕಳ ಅಥ್ಲೆಟಿಕ್ಸ್ ಕ್ರೀಡಾಕೂಟ ಮತ್ತು ಪಂದ್ಯಾವಳಿಗಳಲ್ಲಿ ಭಾಗವಹಿಸಿ ಬಹುಮಾನ ವಿಜೇತರಾದ 34-ನೆಕ್ಕಿಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚೈತನ್ಯ, ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಜಿತೇಶ್, ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಶಾಲೆಯ ಚರಣ್ ಹಾಗೂ ಶಮೀಮ ಬಾನು, ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ(ಪ್ರೌಢಶಾಲಾ ವಿಭಾಗ) ಕಾಲೇಜಿನ ರಿತಾಶ್ರೀ, ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಯ ಮಾನ್ಯರವರುಗಳನ್ನು ಗುರುತಿಸಿ ಅಭಿನಂದಿಸಲಾಯಿತು.
ರಾಜ್ಯ ಮಟ್ಟದ ಕ್ರೀಡಾಪಟುಗಳಿಗೆ ಅಭಿನಂದನೆ:
೨೦೨೨-೨೩ನೇ ಸಾಲಿನ ರಾಜ್ಯ ಮಟ್ಟದ ಕ್ರೀಡಾಕೂಟ ಹಾಗೂ ಪಂದ್ಯಾವಳಿಗಳಲ್ಲಿ ಭಾಗವಹಿಸಿ, ವಿಜೇತರಾಗಿ ಶಿಕ್ಷಕರ ಕಲ್ಯಾಣ ನಿಧಿಯ ಪ್ರೋತ್ಸಾಹಧನಕ್ಕೆ ಅರ್ಹರಾಗಿರುವ ಕ್ರೀಡಾಪಟು ವಿದ್ಯಾರ್ಥಿಗಳಾದ ಪಾಪೆಮಜಲು ಸರಕಾರಿ ಪ್ರೌಢಶಾಲೆಯ ದೀಕ್ಷಿತಾ, ಕಡಬ ಸರಕಾರಿ ಪ್ರೌಢಶಾಲೆಯ ಚರಿಶ್ಮಾ, ಕಡಬ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ನವ್ಯ, ತೀಕ್ಷಾ ಎಸ್, ಪಟ್ಟೆ ಪ್ರತಿಭಾ ಪ್ರೌಢಶಾಲೆಯ ತನುಶ್ರೀ ರೈ, ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕೃತಿ ಕೆ, ಧನ್ವಿತ್, ಡಿಂಪಲ್ ಶೆಟ್ಟಿ, ಧನುಷ್ ರಾಮ್, ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತ್ರಿಶಾ, ಪ್ರಣ್ವಿಕ ಬಿ, ಕೃತಿಕಾ ಜಿ, ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಲಯದ ಮನೀಷ್ ಶೆಟ್ಟಿ, ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಫಾತಿಮತ್ ಹಫೀದ, ಸೊಹಾನಿ ಕುಟಿನ್ಹಾ, ರಿಯಾ ಜೆ.ರೈ, ಅವನಿ ರೈ, ಡಿಯೋರಾ ವೆನಿಷಾ ರೆಬೆಲ್ಲೋ, ಪ್ರತೀಕ್ಷಾ ಎಸ್.ಶೆಣೈ, ವೈಶಾಲಿ, ವೈಷ್ಣವಿ, ಪ್ರಾಧಿ ಕ್ಲಾರಾ ಪಿಂಟೋ, ನೆಹರುನಗರ ಸುದಾನ ವಸತಿಯುತ ಶಾಲೆಯ ನಿಕೋಲಸ್ ರೋನಿನ್ ಮಥಾಯಸ್, ಅನಿಖ ಯು, ನಂದನ್ ನಾಯ್ಕ, ಅನಿಕೇತ್ ಎನ್.ರವರುಗಳನ್ನು ಗುರುತಿಸಿ ಅಭಿನಂದಿಸಿ, ಪ್ರೋತ್ಸಾಹಧನ ವಿತರಿಸಲಾಯಿತು.
ನಿವೃತ್ತ ಶಿಕ್ಷಕರಿಗೆ ಸನ್ಮಾನ:
ಹಲವಾರು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತರಾದ ದೈಹಿಕ ಶಿಕ್ಷಣ ಶಿಕ್ಷಕರಾದ ಶಿವರಾಮ್ ಏನೇಕಲ್, ಜಯರಾಮ್ ಗೌಡ ಕುಂಬ್ರ, ವಂದನಾ ಉಪ್ಪಿನಂಗಡಿ, ಪುರಂದರ ರೈ ಸುಳ್ಯಪದವು, ಬಾಲಚಂದ್ರ ಕೆ.ಸಿ ಫಾರ್ಮ್ ಕೊಲ, ಬಾಲಕೃಷ್ಣ ರೈ ಓಂತ್ರಡ್ಕ, ದಯಾನಂದ ರೈ ಕೋರ್ಮಂಡ, ಜನಾರ್ದನ ಗೌಡ ನೆಲ್ಯಾಡಿ, ಗೀತಾಮಣಿ ಕೊಂಬೆಟ್ಟುರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಸನ್ಮಾನಿತರ ಪೈಕಿ ಶಿವರಾಮ ಏನೇಕಲ್‌ರವರು ಅನಿಸಿಕೆ ವ್ಯಕ್ತಪಡಿಸಿದರು.
ಸನ್ಮಾನ:
ಸಂಘಕ್ಕೆ ನಿರಂತರ ಪ್ರೋತ್ಸಾಹ ನೀಡಿದ ಶಾಸಕ ಸಂಜೀವ ಮಠಂದೂರು, ಶಿಕ್ಷಣ ಇಲಾಖೆಯು ನಡೆಸಿದ ಪ್ರತಿಯೊಂದು ಕ್ರೀಡಾ ಚಟುವಟಿಕೆಗಳಲ್ಲಿ ಸದಾ ಪ್ರೋತ್ಸಾಹ ನೀಡುತ್ತಾ ಬಂದಿರುವ ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ|ವಿಜಯ ಹಾರ್ವಿನ್, ಸಾಂದೀಪನಿ ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರ್, ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಫುಲ್ಲ ರೈ, ಚಂದ್ರಶೇಖರ್ ಬಿಳಿನೆಲೆರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮೌನ ಪ್ರಾರ್ಥನೆ:
ಡಿಸೆಂಬರ್ ತಿಂಗಳಿನಲ್ಲಿ ಅಗಲಿದ ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸದಸ್ಯೆ, ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕಿ ಸುಂದರಿಯವರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮೋನಪ್ಪ ಪಟ್ಟೆ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವಿಭಾಗೀಯ ಅಧ್ಯಕ್ಷ ತ್ಯಾಗಂ ಹರೇಕಳ, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ಕುಮಾರ್ ರೈ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎ, ಗ್ರೇಡ್-೨ ಅಧ್ಯಕ್ಷ ಬೇಬಿ ಯು, ಗ್ರೇಡ್-೨ ದೈಹಿಕ ಶಿಕ್ಷಕ ಶಿಕ್ಷಣರ ಸಂಘದ ಅಧ್ಯಕ್ಷ ಸೀತಾರಾಮ ಗೌಡ, ಗ್ರೇಡ್-೨ ಜಿಲ್ಲಾಧ್ಯಕ್ಷ ಸುರೇಶ್ ಕುಮಾರ್, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೋಸ್ಲಿನ್ ಲೋಬೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಕ್ರೀಡಾಕೂಟದಲ್ಲಿ ವಿಜೇತರಾದ ಪುತ್ತೂರು ಹಾಗೂ ಕಡಬ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರಿಗೆ ಹೂ ನೀಡಿ ಅಭಿನಂದಿಸಲಾಯಿತು. ಕೋಡಿಂಬಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ವಿಜಯಪ್ರಭು ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಮಾಮಚ್ಚನ್ ಎಂ. ಸ್ವಾಗತಿಸಿ, ಕೋಶಾಧಿಕಾರಿ ಮೋಹನ್ ಪೆರಿಯಡ್ಕ ವಂದಿಸಿದರು. ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ರೀಲತಾ ವರದಿ ಮಂಡಿಸಿದರು. ಪಾಪೆಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಪ್ರವೀಣ ರೈ ಹಾಗೂ ಮುಂಡೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ವನಿತಾ ಮುಂಡೂರು ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಮತಿ ವಾಣಿ, ಶ್ರೀಮತಿ ಪ್ರವಿತಾ, ಶ್ರೀಮತಿ ಚಂದ್ರಕಲಾ, ಶ್ರೀಮತಿ ವಿಮಲಾ, ಶ್ರೀಮತಿ ಎಲಿಜಬೆತ್, ಶ್ರೀಮತಿ ವಸಂತಿ, ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್ ಸಹಕರಿಸಿದರು.
ಮಕ್ಕಳ ಡ್ರೆಸ್‌ಕೋಡ್ ಇಲಾಖೆ ಗಮನ ಹರಿಸಲಿ…
ಶಾಲೆಯು ಹೆಸರು ಗಳಿಸಬೇಕಾದರೆ ಅಲ್ಲಿ ಮುಖ್ಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಶಿಸ್ತು ಎನ್ನುವುದು ಕ್ರೀಡೆಯಲ್ಲಿ ಭಾಗವಹಿಸಿದಾಗ ಮೈಗೂಡಿಸಿಕೊಳ್ಳುವಂತಹುದು. ಆದ್ದರಿಂದ ಮನಸ್ಸಿಗೆ ನಾಟುವಂತಹ ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲದಿದ್ದರೆ ಕಷ್ಟ. ಶಾಲೆಗಳಲ್ಲಿ ಮಕ್ಕಳಲ್ಲಿ ಡ್ರೆಸ್‌ಕೋಡ್, ಕೇಶ ವಿನ್ಯಾಸತೆಯಲ್ಲಿ ಶಿಕ್ಷಣ ಇಲಾಖೆಯು ಹೆಚ್ಚಿನ ಗಮನಹರಿಸುವಂತಾಗಬೇಕು. ಮಕ್ಕಳು ಸಂಪ್ರದಾಯವಾಗಿ ಬೆಳೆಯಬೇಕು, ಅವರ ಕಾಲ ಮೇಲೆ ನಿಂತು ಜೀವನ ಕಂಡುಕೊಳ್ಳುವಲ್ಲಿ ಹೆಚ್ಚಿನ ಶ್ರಮ ವಹಿಸಿಕೊಳ್ಳುವಂತಾಗಬೇಕು. ಮಗುವಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಅಂಕಗಳ ಜೊತೆಗೆ ಸಂಸ್ಕಾರ, ಶಿಸ್ತು, ಸಂಸ್ಕೃತಿಯನ್ನು ಹೊಂದುವಂತಾಗಬೇಕು.
-ಭಾಸ್ಕರ ಆಚಾರ್ ಹಿಂದಾರು, ಸಂಚಾಲಕರು, ಸಾಂದೀಪನಿ ವಿದ್ಯಾಸಂಸ್ಥೆ
ಶೈಕ್ಷಣಿಕ ಕಾರ್ಯಾಗಾರ..
ಸನ್ಮಾನ ಸಮಾರಂಭದ ಮುನ್ನ ಪುತ್ತೂರು ಹಾಗೂ ಕಡಬ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರಿಗೆ `ಕ್ರೀಡಾಂಗಣದಲ್ಲಿ ವಿವಿಧ ಕ್ರೀಡೆಯ ತರಬೇತಿ, ಬದಲಾದ ವಿವಿಧ ನಿಯಮಗಳ ಬಗ್ಗೆ ತಿಳುವಳಿಕೆ’ ಕುರಿತು ಬೆಳ್ಳಾರೆ ಸರಕಾರಿ ಪ್ರಥಮ ದರ್ಜೆ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಡಾ|ರಾಮಚಂದ್ರರವರು ಪವರ್ ಪಾಯಿಂಟ್ ಮುಖೇನ ಶೈಕ್ಷಣಿಕ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಶೈಕ್ಷಣಿಮ ಕಾರ್ಯಾಗಾರವನ್ನು ನಡೆಸಿಕೊಟ್ಟ ಡಾ|ರಾಮಚಂದ್ರರವರನ್ನು ನಿವೃತ್ತ ದೈಹಿಕ ಶಿಕ್ಷಣರಾದ ಜೆರೋಮಿಯಸ್ ಪಾಯಿಸ್‌ರವರು ಶಾಲು ಹೊದಿಸಿ ಗೌರವಿಸಿದರು.