ಉಪ್ಪಿನಂಗಡಿ: `ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಎಂಬ ಪರಿಕಲ್ಪನೆಯಡಿ ಸರಕಾರವು ಗ್ರಾಮ ವಾಸ್ತವ್ಯವೆಂಬ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇಲ್ಲಿ ಜನರ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವುದರೊಂದಿಗೆ ಕಂದಾಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಸಮಸ್ಯೆಯನ್ನು ಬಗೆಹರಿಸಲಾಗುವುದು. ಗ್ರಾಮಸ್ಥರ ಸಮಸ್ಯೆಗಳನ್ನು ಬಗೆಹರಿಸಲು ಇಲ್ಲಿ ಅಧಿಕಾರಿಗಳೇ ಗ್ರಾಮಕ್ಕೆ ಬರುತ್ತಿದ್ದು, ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಸುರೇಶ್ ಕುಮಾರ್ ಟಿ. ತಿಳಿಸಿದರು.
ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಅಂಡೆತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಮಾ.17ರಂದು ನಡೆದ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕು ಮಟ್ಟದ ಸಮಸ್ಯೆಗಳಾದರೆ ಅದನ್ನು ಇಲ್ಲೇ ಬಗೆಹರಿಸಲಾಗುವುದು. ಜಿಲ್ಲಾ, ರಾಜ್ಯ ಮಟ್ಟದಲ್ಲಿ ಬಗೆಹರಿಯುವ ಸಮಸ್ಯೆಗಳಾದರೆ ನಿಮ್ಮ ಅರ್ಜಿಗಳನ್ನು ಅಲ್ಲಿಗೆ ಕಳುಹಿಸಿಕೊಟ್ಟು ಹಿಂಬರಹ ನೀಡಲಾಗುವುದು ಎಂದು ತಿಳಿಸಿದರು.
ಇಳಂತಿಲ ಗ್ರಾಮದಲ್ಲಿ ನಿವೇಶನ ರಹಿತರು ಹಲವರಿದ್ದು, ಈಗಾಗಲೇ ಸಾಕಷ್ಟು ಮಂದಿ ಅರ್ಜಿಯನ್ನು ಕೊಟ್ಟಿದ್ದಾರೆ. 2017ರಲ್ಲಿ ಇಳಂತಿಲ ಗ್ರಾಮದಲ್ಲಿ ನಿವೇಶನಕ್ಕೆಂದು 2.12 ಸೆಂಟ್ಸ್ ಮಂಜೂರಾಗಿದೆ. ಆದರೆ ನಿವೇಶನಕ್ಕೆಂದು ಗ್ರಾ.ಪಂ.ಗೆ ಜಾಗ ಮಂಜೂರಾಗುವ ಮೊದಲೇ ನಿವೇಶನಕ್ಕೆಂದು ಅರ್ಜಿ ಕೊಟ್ಟವರಿದ್ದಾರೆ. ಅದರಲ್ಲಿ ಕೆಲವು ಈಗ ನಿಧನರಾಗಿದ್ದಾರೆ. ಆದರೆ 2017ರಲ್ಲಿ ಮಂಜೂರಾದ ಜಾಗವನ್ನು ನಿವೇಶನಕ್ಕಾಗಿ ಅರ್ಜಿ ಕೊಟ್ಟವರಿಗೆ ಈಗಲೂ ಗ್ರಾ.ಪಂ. ನೀಡಿಲ್ಲ. ಇಲ್ಲಿ ವರ್ಷಗಳ ಹಿಂದೆ ಈ ಗ್ರಾಮದ್ದಲ್ಲದ ಮೂರು ಕುಟುಂಬಗಳು ಅಕ್ರಮವಾಗಿ ಬಂದು ಕೂತಿದ್ದಾರೆ. ರಾಜಕೀಯ ಕಾರಣದಿಂದ ಅವರನ್ನು ಅಲ್ಲಿಂದ ತೆರವುಗೊಳಿಸಲು ಆಗಿಲ್ಲ. ಆದ್ದರಿಂದ ಇನ್ನಾದರೂ ಅರ್ಜಿ ನೀಡಿದವರನ್ನು ಪರಿಗಣಿಸಿ ಅವರಿಗೆ ನಿವೇಶನ ಮಂಜೂರು ಮಾಡಬೇಕೆಂದು ಗ್ರಾ.ಪಂ. ಸದಸ್ಯ ಈಸುಬು ಆಗ್ರಹಿಸಿದರಲ್ಲದೆ, ಈ ಗ್ರಾಮದಲ್ಲಿ 25 ವರ್ಷಗಳಿಂದ ನಿವೇಶನ ಹಂಚಿಕೆ ಮಾಡಿಲ್ಲ ಎಂದು ತಿಳಿಸಿದರು.
ನರೇಗಾ ಯೋಜನೆಯಡಿ ಅಡಿಕೆ ತೋಟ ನಿರ್ಮಾಣದಂತಹ ಕಾಮಗಾರಿ ನಡೆಸಿದರೆ ಇಳಂತಿಲ ಗ್ರಾಮದ ಜನರಿಗೆ ಕರಾಯ ಗ್ರಾಮದವರಿಗೆ ಸಿಗುವ ಹಣಕ್ಕಿಂತ ಕಡಿಮೆ ಹಣ ಸಿಗುತ್ತದೆ ಎಂದು ಆರೋಪಿಸಿದ ಈಸುಬು ಅವರು, ಇಳಂತಿಲ ಗ್ರಾಮದಲ್ಲಿ ನರೇಗಾದ ಎಸ್ಆರ್ ರೇಟ್ ಮಾಡುವುದು ತೋಟಗಾರಿಕೆ ಇಲಾಖೆಯ ಎಂಜಿನಿಯರ್. ಆದ್ದರಿಂದ ಅವರು ಕಡಿಮೆ ಮಾಡುತ್ತಾರೆ. ನರೇಗಾ ಎಂಜಿನಿಯರ್ನ ಎಸ್ಆರ್ ರೇಟ್ ಜಾಸ್ತಿ ಇರುತ್ತದೆ. ಆದ್ದರಿಂದ ಇಳಂತಿಲ ಗ್ರಾಮಕ್ಕೆ ಕೂಡಾ ನರೇಗಾ ಕೆಲಸಗಳಿಗೆ ತಾ.ಪಂ.ಗೆ ಅನುಷ್ಠಾನ ಇಲಾಖೆ ಕೊಡಬೇಕು. ಅನುಷ್ಠಾನಾಧಿಕಾರಿ ಹಾಗೂ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಆಗ್ರಹಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಇಳಂತಿಲ ಗ್ರಾ.ಪಂ. ಅಧ್ಯಕ್ಷೆ ಚಂದ್ರಿಕಾ ಭಟ್ ಕೂಡಾ ಇದಕ್ಕೆ ಧ್ವನಿಗೂಡಿಸಿದರು.
ಇಳಂತಿಲದಲ್ಲಿ ಪಡಿತರ ವಿತರಣೆಯ ವ್ಯವಸ್ಥೆಯಿಂದಾಗಿ ಕೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ಈ ಮೊದಲು ಇಲ್ಲಿ ಬೆಳಗ್ಗೆ 10ರಿಂದ 12.30ರವರೆಗೆ ಮಾತ್ರ ಪಡಿತರ ವಿತರಣೆಯಾಗುತ್ತಿತ್ತು. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸಿದಾಗ ಸಂಜೆ 4ರಿಂದ 6ರವರೆಗೆ ಹೆಚ್ಚುವರಿ ಸಮಯ ನೀಡಿದ್ದಾರೆ. ಆದರೂ ಸಮಸ್ಯೆ ತಪ್ಪಿಲ್ಲ. ಭಾನುವಾರವೂ ಪಡಿತರ ಸೇವೆ ಸಿಗುವಂತಾಗಬೇಕು ಎಂದರು. ಆಗ ಮಧ್ಯಪ್ರವೇಶಿಸಿದ ಚಂದ್ರಿಕಾ ಭಟ್, ಸರ್ವರ್ನ ಪ್ರಾಬ್ಲಂನಿಂದಾಗಿ ಇಲ್ಲಿ ಸಮಸ್ಯೆಯಾಗುತ್ತಿರುವುದು. ಸಮಯದಿಂದ ಸಮಸ್ಯೆ ಇಲ್ಲ ಎಂದರು.
ಈ ಸಂದರ್ಭ ತಹಶೀಲ್ದಾರ್ ಆಹಾರ ನಿರೀಕ್ಷಕರಲ್ಲಿ ಸರ್ವರ್ ಸಮಸ್ಯೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದರು.
ಕಡವಿನ ಬಾಗಿಲಿನ ನೀರಿನ ಸಮಸ್ಯೆ, ತ್ಯಾಜ್ಯ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು.
ಇಳಂತಿಲ ಗ್ರಾ.ಪಂ. ಅಧ್ಯಕ್ಷೆ ಚಂದ್ರಿಕಾ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಸುಪ್ರೀತ್, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಕಣಿಯೂರು ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸುನೀಲ್ ಕುಮಾರ್, ಕೃಷಿ ಅಧಿಕಾರಿ ಚಿದಾನಂದ ಎಸ್. ಹೂಗಾರ, ಮೆಸ್ಕಾಂನ ಎ. ಪ್ರಸನ್ನ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಲೊಕೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ನಂದನ, ಕೊಕ್ಕಡ ಹೋಬಳಿಯ ಉಪತಹಶೀಲ್ದಾರ್ ನವ್ಯ ಪಿ., ವಿಎ ಲಿಂಗರಾಜು ಪೂಜಾರ, ಸರ್ವೇ ಇಲಾಖೆಯ ಸೂಪರ್ವೈಸರ್ ದೇವರಾಜು ಉಪಸ್ಥಿತರಿದ್ದರು.
ಕೊಕ್ಕಡ ಹೋಬಳಿಯ ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಡಮಣಿ ಸ್ವಾಗತಿಸಿದರು. ಗ್ರಾ.ಪಂ. ಸದಸ್ಯ ವಸಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮಾ. 21ರಂದು ಇಳಂತಿಲ ಗ್ರಾಮದಲ್ಲಿ ಅಕ್ರಮ – ಸಕ್ರಮ ಸಿಟ್ಟಿಂಗ್ ಕರೆಯಲಾಗಿದ್ದು, ಇಲ್ಲಿ ತಾರತಮ್ಯ ನಡೆಸಲಾಗಿದೆ. ಒಂದು ಪಕ್ಷಕ್ಕೆ ಸೀಮಿತವಾದವರ ಅರ್ಜಿಗಳನ್ನು ಪರಿಗಣಿಸಿ, ಆ ಜಾಗಗಳನ್ನು ಖಾಸಗಿ ಸರ್ವೆ ನಡೆಸಿ, ಆ ಫೈಲ್ಗಳನ್ನು ಮಾತ್ರ ಇಲ್ಲಿ ಇಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ ಈಸುಬು, ಇದಕ್ಕೆ ತನ್ನ ವಿರೋಧವಿರುವುದಾಗಿ ತಿಳಿಸಿದರಲ್ಲದೆ, ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅಗತ್ಯವಾಗಿ ಇರಬೇಕಾಗಿದ್ದ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಇಲ್ಲಿ ಗೈರು ಹಾಜರಿಯಾಗಿದ್ದಾರೆ. ಇದು ಸರಿಯಲ್ಲ ಎಂದರು.