ಬೊಳುವಾರಿನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಥಳದಲ್ಲಿ ಮಾ.24ಕ್ಕೆ ಆಶ್ಲೇಷ ಬಲಿ, ಧಾರ್ಮಿಕ ಸಭೆ, ಅರ್ಧ ಏಕಾಹ ಭಜನೆ

0

ಪುತ್ತೂರು: ಬೊಳುವಾರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಥಳದಲ್ಲಿ ಹಿಂದು ಜಾಗರಣ ವೇದಿಕೆ ವತಿಯಿಂದ ಆಶ್ಲೇಷ ಬಲಿ, ಧಾರ್ಮಿಕ ಸಭೆ, ಅರ್ಧ ಏಕಾಹ ಭಜನೆ ಕಾರ್ಯಕ್ರಮ ಮಾ.24ರಂದು ನಡೆಯಲಿದೆ ಎಂದು ಹಿಂದು ಜಾಗರಣ ವೇದಿಕೆ ಮಂಗಳೂರು ವಿಭಾಗ ಸಂಚಾಲಕ ಅಜಿತ್ ರೈ ಹೊಸಮನೆ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಬಳಿಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಥಳದಲ್ಲಿ ಹಲವು ದಶಕಗಳಿಂದ ಅಕ್ರಮವಾಗಿ ಗುಜುರಿ ಅಂಗಡಿ ಇದ್ದು, ಜಾಗವನ್ನು ಸ್ವಾಧೀನ ಪಡೆಯುವಂತೆ ಸೂಚನೆ ಇದ್ದರೂ ಅಧಿಕಾರಿಗಳ ನಿರ್ಲಕ್ಷದಿಂದ ತೆರವಾಗಲಿಲ್ಲ. ಈ ಕುರಿತು ಹಿಂದು ಜಾಗರಣ ವೇದಿಕೆ ಎಲ್ಲಾ ದಾಖಲೆಗಳನ್ನು ಸಮಗ್ರವಾಗಿ ತಿಳಿದುಕೊಂಡು ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿ ಜೊತೆ ಸೆರಿ ತೆರವು ಕಾರ್ಯ ನಡೆಸಲಾಗಿದೆ.

ಈಗಾಗಲೇ ಸಂಪೂರ್ಣ ಅತಿಕ್ರಮಣವನ್ನು ತೆರವುಗೊಳಿಸಲಾಗಿದೆ ಎಂದ ಅವರು ಮಾ.24ರಂದು ಪ್ರಥಮವಾಗಿ ಆಶ್ಲೇಷ ಬಲಿ, ಧಾರ್ಮಿಕ ಸಭೆ ಮತ್ತು ಅರ್ಧಏಕಾಹ ಭಜನೆ ನಡೆಯಲಿದೆ. ಅಂದು ಬೆಳಿಗ್ಗೆ ಗಣಪತಿ ಹೋಮ, ಅರ್ಧ ಏಕಾಹ ಭಜನೆ ಆರಂಭ, ಸಂಜೆ ಆಶ್ಲೇಷ ಬಲಿ ಬಳಿಕ ಜನಜಾಗೃತಿ ಸಭೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಜನಜಾಗೃತಿ ಸಭೆಯು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಎಂ.ಕೆ.ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಧಾರ್ಮಿಕ ಮುಖಂಡ ಬ್ರಹ್ಮಶ್ರೀ ವೇ ಮೂ ಕುಂಟಾರು ರವೀಶ ತಂತ್ರಿಯವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಹಿಂದು ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ ಕಡಬ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಮ್ ಸುಳ್ಳಿ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹಿಂದು ಜಾಗರಣ ವೇದಿಕೆ ತಾಲೂಕು ಸಂಚಾಲಕ ದಿನೇಶ್ ಪಂಜಿಗ, ಸದಸ್ಯ ಪುಷ್ಪರಾಜ್ ದರ್ಬೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here