ಪುತ್ತೂರು: ಉಪ್ಪಿನಂಗಡಿ ವೇದಶಂಕರ ಶ್ರೀರಾಮ ಶಾಲೆಯಲ್ಲಿ ಒಂದನೆಯ ತರಗತಿಯ ಮಾತೆಯಂದಿರ “ಮಾತೃಪಾದ ಪೂಜನಾ ಮತ್ತು ಕೈ ತುತ್ತು ನೀಡುವ ಕಾರ್ಯಕ್ರಮ” ನಡೆಯಿತು. ಶಾಲಾ ಸಂಚಾಲಕ ಯು.ಜಿ ರಾಧಾ ಅಧ್ಯಕ್ಷತೆ ವಹಿಸಿ ಮಾತನಾಡಿ ಅಮ್ಮನ ಮಹತ್ವ ಎಳವೆಯಿಂದಲೇ ಮಕ್ಕಳಿಗೆ ತಿಳಿಸುವ ಸಂಸ್ಕಾರವನ್ನು ಬೆಳೆಸಬೇಕು. ಆಕೆಯೇ ತನ್ನ ಮೊದಲ ಗುರು, ಆಕೆಯೇ ಕಣ್ಣೆಗೆ ಕಾಣುವ ಪ್ರತ್ಯಕ್ಷ ದೇವರು ಎಂಬ ಅರಿವನ್ನು ಮೂಡಿಸಬೇಕು. ಆ ಕೆಲಸವನ್ನು ನಮ್ಮ ಶ್ರೀರಾಮ ಶಾಲೆ ಮಾಡುತಿದೆ ಎಂದರು. ಆಡಳಿತ ಮಂಡಳಿಯ ಸದಸ್ಯೆ ಗೀತಾಲಕ್ಷ್ಮೀ ತಾಳ್ತಜೆ, ಜಯಂತ ಪೊರೋಳಿ, ಪೋಷಕ ಸಂಘದ ಅಧ್ಯಕ್ಷ ಮೋಹನ್ ಭಟ್ ಪಿ., ಪ್ರೌಢವಿಭಾಗದ ಮುಖ್ಯಗುರು ರಘುರಾಮ ಭಟ್ ಸಿ. ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲಿಗೆ ಮಕ್ಕಳು ತಮ್ಮ ತಾಯಂದಿರ ಪಾದವನ್ನು ಗುರುತಿಸುವ ಆಟ ನಡೆಯಿತು. ನಂತರ ಅಮ್ಮಂದಿರ ಪಾದವನ್ನು ತೊಳೆದು, ಅರಿಶಿಣ ಕುಂಕುಮ ಹಚ್ಚಿ, ಹೂವಿನ ಅರ್ಚನೆ ಮಾಡಿ, ಪುಟಾಣಿಗಳು ಅಮ್ಮಂದಿರ ಆಶೀರ್ವಾದವನ್ನು ಪಡೆದುಕೊಂಡರು. ಮಾತೆಯರು ಮಕ್ಕಳ ತಲೆಗೆ ಅಕ್ಷತೆ ಹಾಕಿ ಆಶೀರ್ವದಿಸಿದರು. ಮಗುವನ್ನು ಮಡಿಲಲ್ಲಿ ಕೂರಿಸಿಕೊಂಡು ಮಾತೆಯರು ಮಗುವಿಗೆ ಕೈತುತ್ತು ನೀಡಿದರು. ಪೂರ್ವಗುರುಕುಲದ ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲಿಷ್ ಪ್ರಹಸನಗಳನ್ನು ಪ್ರದರ್ಶಿಸಿದರು. ಪ್ರಾಥಮಿಕ ವಿಭಾಗದ ಮುಖ್ಯ ಮಾತಾಜಿ ವಿಮಲ ಸ್ವಾಗತಿಸಿ, ವಿದ್ಯಾ ಮಾತಾಜಿ ಕಾರ್ಯಕ್ರಮ ನಿರೂಪಿಸಿ, ಉಷಾ ಮಾತಾಜಿ ವಂದಿಸಿದರು.