ಉಪ್ಪಿನಂಗಡಿ: ಮೂಲಭೂತ ಸೌಕರ್ಯಗಳಲ್ಲೊಂದಾದ ರಸ್ತೆಗಳ ಅಭಿವೃದ್ಧಿಗೆ ರಾಜ್ಯ ಬಿಜೆಪಿ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಿ, ಜಿ.ಪಂ. ರಸ್ತೆಗಳನ್ನು ಲೋಕೋಪಯೋಗಿ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಿ ಈ ರಸ್ತೆಗಳನ್ನು ಸರ್ವ ಋತು ರಸ್ತೆಗಳನ್ನಾಗಿಸಿ ಅಭಿವೃದ್ಧಿ ಪಡಿಸುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಉಪ್ಪಿನಂಗಡಿ- ಹಿರೇಬಂಡಾಡಿ- ಕೊಲ- ಅಲಂತಾಯ- ನೆಲ್ಯಾಡಿ ಜಿಲ್ಲಾ ಮುಖ್ಯ ರಸ್ತೆಯ ಆಯ್ದ ಭಾಗಗಳಲ್ಲಿ 5 ಕೋ.ರೂ. ಅನುದಾನದಲ್ಲಿ ನಡೆಯಲಿರುವ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ಗಾಂಧಿಪಾರ್ಕ್ ಬಳಿಯ ಹಿರೇಬಂಡಾಡಿ ಕ್ರಾಸ್ ಬಳಿ ಗುದ್ದಲಿ ಪೂಜೆ ನಡೆಸಿ ಮಾತನಾಡಿದ ಅವರು, 5 ಕೋಟಿ ರೂ. ಅನುದಾನದಲ್ಲಿ ಈ ರಸ್ತೆ ಐದೂವರೆ ಮೀಟರ್ ಅಗಲೀಕರಣಗೊಂಡು, ಡಾಮರು ಕಾಮಗಾರಿಯಲ್ಲದೆ, ಮಳೆ ನೀರಿನ ಚರಂಡಿ ದುರಸ್ತಿಯೂ ನಡೆಯಲಿದೆ. ಆದ್ದರಿಂದ ಸ್ಥಳೀಯರ ಸಹಕಾರ ಇದಕ್ಕೆ ಬಹು ಮುಖ್ಯ. ನನ್ನ ವ್ಯಾಪ್ತಿಗೊಳಪಟ್ಟು ಕಳೆದ ಬಾರಿ ಇದೇ ರಸ್ತೆಗೆ 5 ಕೋ.ರೂ. ಅನುದಾನದಲ್ಲಿ ನಿನ್ನಿಕಲ್ಲಿನಿಂದ ಮುರದಮೇಲುವರೆಗೆ ಅಗಲೀಕರಣ ಮಾಡಲಾಗಿದೆ. ಅಲ್ಲದೇ, ಕೊಯಿಲ ತನಕ ರಸ್ತೆಯನ್ನು ಮರು ಡಾಮರೀಕರಣ ಮಾಡಲಾಗಿದೆ ಎಂದರು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಉಷಾಚಂದ್ರ ಮುಳಿಯ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಹಿರಿಯ ನಾಗರಿಕರ ಪ್ರಕೋಷ್ಟದ ಸಂಚಾಲಕರಾದ ಎನ್. ಉಮೇಶ್ ಶೆಣೈ, ಗ್ರಾ.ಪಂ. ಸದಸ್ಯರಾದ ಧನಂಜಯ ನಟ್ಟಿಬೈಲು, ತೌಸೀಫ್ ಯು.ಟಿ., ಸಂಜೀವ ಮಡಿವಾಳ, ಉಪ್ಪಿನಂಗಡಿ ಸಿಎ ಬ್ಯಾಂಕ್‌ನ ಮಾಜಿ ನಿರ್ದೇಶಕ ರಾಮಚಂದ್ರ ಮಣಿಯಾಣಿ, ಬಿಎಸ್ಸೆಫ್‌ನ ನಿವೃತ ಡೆಪ್ಯೂಟಿ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ, ಭಾರತೀಯ ಭೂ ಸೇನೆಯ ನಿವೃತ ಹವಾಲ್ದಾರ್ ವಿಶ್ವನಾಥ ಶೆಣೈ, ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ, ಸದಸ್ಯರಾದ ಹಮ್ಮಬ್ಬ ಶೌಕತ್ ಅಲಿ, ಸದಾನಂದ ಶೆಟ್ಟಿ, ನಿತಿನ್ ತಾರಿತ್ತಡಿ, ಬಜತ್ತೂರು ಗ್ರಾ.ಪಂ. ಸದಸ್ಯ ಸಂತೋಷ್ ಕುಮಾರ್ ಪಂರ್ದಾಜೆ, ಗಂಗಾಧರ ಗೌಡ, ಪ್ರಮುಖರಾದ ಹರೀಶ್ ನಾಯಕ್ ನಟ್ಟಿಬೈಲ್, ಕೈಲಾರು ರಾಜಗೋಪಾಲ ಭಟ್, ವಿಶ್ವನಾಥ ಶೆಟ್ಟಿ ಕಂಗ್ವೆ, ಜಗದೀಶ್ ಕುಮಾರ್ ಪರಕಜೆ, ದೀಪಕ್ ಪೈ ಮತ್ತಿತರರು ಇದ್ದರು.
ಬಿಜೆಪಿಯ ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸುರೇಶ್ ಅತ್ರೆಮಜಲು ಸ್ವಾಗತಿಸಿದರು. ಸದಸ್ಯ ಲೊಕೇಶ್ ಬೆತ್ತೋಡಿ ವಂದಿಸಿದರು.