ಕಯ್ಯಾರುಪಾದೆ ತರವಾಡು ಮನೆ ಒಂದು ಮಾದರಿ ಮನೆಯಾಗಿದೆ: ಒಡಿಯೂರು ಶ್ರೀ
ಪುತ್ತೂರು: ಕುಟುಂಬದಲ್ಲಿರುವ ಎಲ್ಲಾ ಸದಸ್ಯರುಗಳು ಪರಸ್ಪರ ಹೊಂದಾಣಿಕೆಯಿಂದ ಜೀವನ ಮಾಡಿದಾಗ ಒಂದು ಸುಂದರ ಕುಟುಂಬ ನಿರ್ಮಾಣವಾಗಲು ಸಾಧ್ಯವಿದೆ. ಇದಕ್ಕೆ ಕಯ್ಯಾರುಪಾದೆ ಕುಟುಂಬ ಸಾಕ್ಷಿಯಾಗಿದೆ ಎಂದು ಹೇಳಲು ಸಂತೋಷವಾಗುತ್ತಿದೆ. ಇಲ್ಲಿ ನಿರ್ಮಾಣವಾದ ತರವಾಡು ಮನೆ ಒಂದು ಮಾದರಿ ಮನೆಯಾಗಿದೆ. ಎಲ್ಲಿ ಪ್ರೀತಿ ಇರುತ್ತದೋ ಅಲ್ಲಿಗೆ ಎಲ್ಲವೂ ಬಂದು ಸೇರುತ್ತದೆ. ಇಂತಹ ಪ್ರೀತಿಯನ್ನು ಕಯ್ಯಾರುಪಾದೆ ತರವಾಡು ಮನೆಯಲ್ಲಿ ಕಂಡಿದ್ದೇನೆ, ಇಲ್ಲಿ ಪ್ರೀತಿಯೂ ಇದೆ, ಸಂಪತ್ತು, ಕೀರ್ತಿ ಎಲ್ಲವೂ ಬಂದು ಸೇರುತ್ತದೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಅವರು ಮಂಜೇಶ್ವರ ತಾಲೂಕಿನ ಉಪ್ಪಳ ಪೈವಳಿಕೆ ಕಯ್ಯಾರುಪಾದೆ ತರವಾಡು ಮನೆಯ ದೈವ-ದೇವರುಗಳ ಟ್ರಸ್ಟ್ ಇದರ ಆಶ್ರಯದಲ್ಲಿ ಕಯ್ಯಾರುಪಾದೆ ತರವಾಡು ಮನೆ ಗೃಹಪ್ರವೇಶ ಧರ್ಮದೈವ ಶ್ರೀ ಧೂಮಾವತಿ, ಕುಪ್ಪೆಪಂಜುರ್ಲಿ ಚಾವಡಿ, ಕಲ್ಲುರ್ಟಿ ಸ್ಥಳ ಗುಳಿಗ ದೈವಗಳ ಪ್ರತಿಷ್ಠಾ ಕಲಶೋತ್ಸವ, ಹರಿಸೇವೆ ಮತ್ತು ನೇಮೋತ್ಸವದ ಅಂಗವಾಗಿ ಮಾ.23 ರಂದು ನಡೆದ ತರವಾಡು ಮನೆಯ ಗೃಹಪ್ರವೇಶ, ದೈವಗಳ ಪ್ರತಿಷ್ಠಾ ಕಲಶೋತ್ಸವ, ಹರಿಸೇವೆ, ಧಾರ್ಮಿಕ ಆಶೀರ್ವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಎಲ್ಲಿ ತಾಳ್ಮೆ, ಸಹನೆ ಇರುತ್ತದೋ ಅಲ್ಲಿ ಒಂದು ಕುಟುಂಬವನ್ನು ಕಟ್ಟಲು ಸಾಧ್ಯವಿದೆ. ಕಯ್ಯಾರುಪಾದೆ ತರವಾಡು ಮನೆಯವರಿಗೆ ಯೋಗ ಮತ್ತು ಯೋಗ್ಯತೆ ಎರಡೂ ಕೂಡಿಬಂದಿದೆ ಎಂದ ಸ್ವಾಮೀಜಿಯವರು, ತರವಾಡು ಮನೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದ ಅಗತ್ಯತೆ ನಮ್ಮಲ್ಲಿದೆ ಎಂದು ಹೇಳಿ ಆಶೀರ್ವಚನ ನೀಡಿದರು.
ತರವಾಡು ಮನೆಯ ಗೃಹಪ್ರವೇಶ, ದೈವಗಳ ಪ್ರತಿಷ್ಠಾ ಕಲಶೋತ್ಸವದೊಂದಿಗೆ ವೈಧಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ವೇದಮೂರ್ತಿ ಬ್ರಹ್ಮಶ್ರೀ ತಂತ್ರಿ ಬಿ.ಎಸ್.ಎನ್ ಕಡಮಣ್ಣಾಯ ಬಂಬ್ರಾಣ ಕುಂಬ್ಳೆರವರು ಆಶೀರ್ವಚನ ನೀಡುತ್ತಾ, ನನ್ನ ಹಿರಿಯರ ಆಶೀರ್ವಾದದೊಂದಿಗೆ ನಾನು ಮಾಡಿದ ಕೆಲಸಗಳಲ್ಲಿ ಎಲ್ಲರಿಗೂ ಒಳ್ಳೆಯದೇ ಆಗಿದೆ. ಎಲ್ಲರೂ ಒಗ್ಗಟ್ಟಿನೊಂದಿಗೆ ದೈವ ದೇವರುಗಳ ಸೇವೆ ಮಾಡುತ್ತಾ ಎಲ್ಲರೂ ಒಳ್ಳೆಯದಾಗಬೇಕು ಎಂಬುದೇ ನನ್ನ ಆಶೀರ್ವಾದ ಆಗಿದೆ ಎಂದು ಹೇಳಿ ಶುಭ ಹಾರೈಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ಈ ತರವಾಡು ಮನೆ ನಿರ್ಮಾಣದ ಹಿಂದೆ ಬಹಳಷ್ಟು ಮಂದಿ ಶ್ರಮವಹಿಸಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಒಂದು ಸುಂದರವಾದ ತರವಾಡು ಮನೆ, ದೈವಸ್ಥಾನ ನಿರ್ಮಾಣ ಮಾಡುವ ಮೂಲಕ ದೈವದೇವರುಗಳ ಕೃಪೆಗೆ ಪಾತ್ರರಾಗಿದ್ದಾರೆ. ಇದೆಲ್ಲವೂ ಇಲ್ಲಿ ನೆಲೆಯಾಗಿರುವ ದೈವ ದೇವರುಗಳ ಅನುಗ್ರಹದಿಂದ ಮಾತ್ರ ಸಾಧ್ಯವಾಗಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ತಂತ್ರಿ ಬಿ.ಎಸ್.ಎನ್ ಕಡಮಣ್ಣಾಯ ಬಂಬ್ರಾಣ ಕುಂಬ್ಳೆರವರನ್ನು ತರವಾಡು ಮನೆಯ ವತಿಯಿಂದ ಶಾಲು, ಸ್ಮರಣಿಕೆ, ಫಲಪುಷ್ಪ ನೀಡಿ ಗೌರವಿಸಲಾಯಿತು. ಎರಡೂ ದಿನದ ಅನ್ನದಾನ ಸೇವೆಯ ಮಹಾಪೋಷಕರಾದ ಸುಮತಿ ವಿ.ಶೆಟ್ಟಿ ಬೊಳ್ಳಾವು, ಪೂರ್ಣಿಮಾ ಹರಿಪ್ರಸಾದ್ ಶೆಟ್ಟಿ, ಶೃತಿ ದೇವಿಪ್ರಸಾದ್ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ಬೊಳ್ಳಾವು, ಕಾವು ಹೇಮನಾಥ ಶೆಟ್ಟಿ, ಸೀತಾರಾಮ ರೈ ಕಲ್ಲಡ್ಕಗುತ್ತು, ಕುಸುಮಲತಾ ಕಿಟ್ಟಣ್ಣ ರೈ ಎಣ್ಮೂರುಗುತ್ತು, ಉಷಾ ಭಾಸ್ಕರ ರೈ ಕಲ್ಲಡ್ಕಗುತ್ತುರವರುಗಳಿಗೆ ಒಡಿಯೂರು ಶ್ರೀಗಳು ಸ್ಮರಣಿಕೆ ನೀಡಿ ಗೌರವಿಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೀತಾರಾಮ ರೈ ಕಲ್ಲಡ್ಕಗುತ್ತು ದೇಲಂಪಾಡಿರವರು ಸ್ವಾಗತಿಸಿದರು.ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸೀತಾರಾಮ ರೈ ಕೈಕಾರ ವಂದಿಸಿದರು. ಕಯ್ಯಾರುಪಾದೆ ತರವಾಡು ಮನೆಯ ಯಜಮಾನ ರಾಮಚಂದ್ರ ಅಡಪ ಕೈಕಾರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ದೇರಣ್ಣ ಶೆಟ್ಟಿ ನಡುಬೈಲು, ಕಯ್ಯಾರುಪಾದೆ ತರವಾಡು ಮನೆಯ ದೈವ-ದೇವರುಗಳ ಟ್ರಸ್ಟ್ನ ಅಧ್ಯಕ್ಷ ವಿನೋದ್ ಶೆಟ್ಟಿ ಮುಡಾಲ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ತಾರಾನಾಥ ಶೆಟ್ಟಿ ಕುಯ್ಯಾರು, ಜೀರ್ಣೋದ್ಧಾರ ಸಮಿತಿ ಮತ್ತು ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಟ್ರಸ್ಟ್ನ ಕೋಶಾಧಿಕಾರಿ ಚಂದ್ರಶೇಖರ ಶೆಟ್ಟಿ ಕಯ್ಯಾರುಪಾದೆ, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಶಿವಪ್ರಸಾದ್ ಶೆಟ್ಟಿ ಬೊಳ್ಳಾವು, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಸತೀಶ್ ರೈ ಪೊನೊನಿ, ಜತೆ ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ ಕಯ್ಯಾರುಪಾದೆ, ಉಪಾಧ್ಯಕ್ಷರುಗಳಾದ ಮಹಾಬಲ ರೈ ನಡುಗ್ರಾಮ, ಜಯರಾಮ ರೈ ವರ್ಕಾಡಿ ತಮ್ಮನಬೆಟ್ಟು,ನಾರಾಯಣ ಶೆಟ್ಟಿ ಅಡ್ಯಾರ್, ಸುರೇಂದ್ರ ರೈ ಪೊನೋನಿ, ವನಜ ಎಸ್.ಶೆಟ್ಟಿ ಮಡಂದೂರು, ಟ್ರಸ್ಟ್ನ ಉಪಾಧ್ಯಕ್ಷರುಗಳಾದ ದೇರಣ್ಣ ಶೆಟ್ಟಿ ನಡುಬೈಲು, ಸುಜೀಳ ಪಿ.ಶೆಟ್ಟಿ ಕಾವೂರು, ಜತೆ ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ ಕಯ್ಯಾರುಪಾದೆ, ಶೋಭ ಪಿಲಿತ್ತಡ್ಕ, ಸದಸ್ಯರುಗಳಾದ ಬಾಲಕೃಷ್ಣ ಆಳ್ವ ಕಯ್ಯಾರುಪಾದೆ, ಚಂದ್ರಶೇಖರ ರೈ ಬದಿಯಡ್ಕ, ಪ್ರಶಾಂತ್ ಭಂಡಾರಿ ಕಯ್ಯಾರುಪಾದೆ, ಸತ್ಯವತಿ ಎ ಒಡ್ಡಂಬೆಟ್ಟು, ಸುಜಾತ ಎಲ್ ಶೆಟ್ಟಿ, ವಸಂತಿ ಪೊನೋನಿ, ಜಯರಾಮ ರೈ ವರ್ಕಾಡಿ, ತಾರಾನಾಥ ಶೆಟ್ಟಿ ಕುಯ್ಯಾರು, ವಿಠಲ ರೈ ಯೆಯ್ಯಾಡಿ, ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ಬಾಲಕೃಷ್ಣ ಶೆಟ್ಟಿ ಕಯ್ಯಾರುಪಾದೆ, ಗೋಪಾಲ ಆಳ್ವ ಪೆರಿಯಡ್ಕ, ಸೀತಾರಾಮ ರೈ ಕೈಕಾರ, ಸಂಚಾಲಕ ರಾಮಚಂದ್ರ ಅಡಪ ಕೈಕಾರ, ನಾರಾಯಣ ರೈ ಅಡ್ಯಾರ್, ಅಧ್ಯಕ್ಷ ಸೀತಾರಾಮ ರೈ ಕಲ್ಲಡ್ಕ ದೇಲಂಪಾಡಿ, ಉಪಾಧ್ಯಕ್ಷರುಗಳಾದ ದೇರಣ್ಣ ಶೆಟ್ಟಿ ನಡುಬೈಲು, ವಿಠಲ್ ರೈ ಯೆಯ್ಯಾಡಿ, ಜಯರಾಮ ರೈ ವರ್ಕಾಡಿ, ಮಹಾಬಲ ರೈ ನಾಡಿಗ್ರಾಮ, ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಜತೆ ಕಾರ್ಯದರ್ಶಿ ಸತೀಶ್ ಶೆಟ್ಟಿ ಪೊನೋನಿ, ಪ್ರಶಾಂತ್ ಭಂಡಾರಿ, ಪದ್ಮರಾಜ ರೈ, ಇಂದಿರಾ ಕೊಡಂಗೆ, ಪ್ರಮೀಳಾ ಶೆಟ್ಟಿ, ತಾರಾನಾಥ ಶೆಟ್ಟಿ ಮುಡಾಲ, ಚಂದ್ರಶೇಖರ ಶೆಟ್ಟಿ, ಕೋಶಾಧಿಕಾರಿ ಶಿವಪ್ರಸಾದ್ ಶೆಟ್ಟಿ ಬೊಳ್ಳಾವು, ಜತೆ ಕೋಶಾಧಿಕಾರಿ ಚಂದ್ರಶೇಖರ ರೈ ಬದಿಯಡ್ಕ, ಸದಸ್ಯರುಗಳು, ಕಟುಂಬಸ್ಥರು ಉಪಸ್ಥಿತರಿದ್ದರು.
ವೈಧಿಕ ಕಾರ್ಯಕ್ರಮಗಳು
ಮಾ. 22 ರಂದು ಸಂಜೆ ಗಂಟೆ ಶ್ರೀ ಕ್ಷೇತ್ರದ ತಂತ್ರಿಗಳು ಹಾಗೂ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ ಬಳಿಕ ದೇವತಾ ಪ್ರಾರ್ಥನೆ, ಆಚಾರ್ಯವರಣ ಪ್ರಸಾದ ಪರಿಗ್ರಹ, ಸ್ವಸ್ತಿ ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಾಸಾದ ಶುದ್ದಿ, ರಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜಾ ಬಲಿ, ಪ್ರಾಕಾರಬಲಿ, ದುರ್ಗಾಪೂಜೆ, ಪ್ರಸಾದ ವಿತರಣೆ, ಗೌರವಾರ್ಪಣೆ ನಡೆದು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಇದೇ ಸಂದರ್ಭದಲ್ಲಿ ದೈವಜ್ಞ ಬಾಲಕೃಷ್ಣ ನಾಯರ್ ಪೊನಾಚಿ, ಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತ, ಹರೀಶ್ ಮೇಸ್ತ್ರಿ, ಕಾಷ್ಠಶಿಲ್ಪಿ ದಿವಾಕರ ಆಚಾರ್ಯ ಕೈಕಾರ, ಧನಂಜಯ ಆಚಾರ್ಯ ಬೆಂಜನಪದವುರವರುಗಳಿಗೆ ಗೌರವಾರ್ಪಣೆ ನಡೆಯಿತು. ಮಾ.23 ರಂದು ಬೆಳಿಗ್ಗೆ ಮಹಾಗಣಪತಿ ಹೋಮ ನಡೆದು 6.30 ರಿಂದ 7.50 ರ ರೇವತಿ ನಕ್ಷತ್ರ ಮೀನ ಲಗ್ನ ಸುಮುಹೂರ್ತದಲ್ಲಿ ಕಯ್ಯಾರುಪಾದೆ ತರವಾಡು ಮನೆಯ ಗೃಹಪ್ರವೇಶ, 10 ರಿಂದ 11.30 ರ ರೇವತಿ ನಕ್ಷತ್ರ, ವೃಷಭ ಲಗ್ನ ಸುಮುಹೂರ್ತದಲ್ಲಿ
ಧರ್ಮದೈವ ಶ್ರೀ ಧೂಮಾವತಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಸ್ಥಳ ಗುಳಿಗ ದೈವಗಳ ಪ್ರತಿಷ್ಠಾ ಮಹೋತ್ಸವ, ಕಲಶಾಭಿಷೇಕ ನಡೆಯಿತು ಬಳಿಕ ಶ್ರೀ ಸತ್ಯನಾರಾಯಣ ಪೂಜೆ, ಹರಿಸೇವೆ (ಕಯ್ಯಾರುಪಾದೆ ಕುಟುಂಬಸ್ಥರ ವೆಂಕಟ್ರಮಣ ದೇವರ ಮುಡಿಪು ಕಟ್ಟುವುದು) ನಂತರ ಮಹಾಪೂಜೆ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
100 ಕ್ಕೂ ಅಧಿಕ ಕುಟುಂಬಗಳಿವೆ
ಕಯ್ಯಾರುಪಾದೆ ತರವಾಡು ಮನೆಗೆ ತನ್ನದೆ ಆದ ವಿಶೇಷತೆ ಇದೆ. ಈ ತರವಾಡಿಗೆ ಸುಮಾರು 150 ಕ್ಕೂ ಹೆಚ್ಚು ಕುಟುಂಬಗಳು ಒಳಪಟ್ಟಿವೆ. ಮಡಿಕೇರಿ, ಕೇರಳ, ಕರ್ನಾಟಕ ಇತ್ಯಾದಿ ಭಾಗಗಳಲ್ಲಿ ಈ ತರವಾಡು ಮನೆಗೆ ಸೇರಿದ ಕುಟುಂಬಗಳಿವೆ. ತರವಾಡು ಮನೆ, ದೈವಗಳ ದೈವಸ್ಥಾನ, ಪಡ್ಪಿರೆ ಇತ್ಯಾದಿ ದೈವಜ್ಞರ ಆಜ್ಞೆಯಂತೆ, ತಂತ್ರಿಗಳ ಮಾರ್ಗದರ್ಶನದಂತೆ ಬಹಳ ಸುಂದರವಾಗಿ ನಿರ್ಮಾಣಗೊಂಡು ದೈವಗಳ ಪ್ರತಿಷ್ಠೆ, ಕಲಶೋತ್ಸವ ನಡೆದಿದೆ.