ಪುತ್ತೂರು: ಮುಂಬರುವ ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ, ಇದಕ್ಕಾಗಿ ಈಗಾಗಲೇ ಸಿದ್ದತೆಗಳು ನಡೆಯುತ್ತಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅದಿಕಾರ ಗದ್ದುಗೆ ಏರಲಿದ್ದು , ಜನಪರ ಪ್ರಣಾಳಿಕೆಯನ್ನು, ಭರವಸೆಯನ್ನು ಕಾಂಗ್ರೆಸ್ ಜನತೆಗೆ ನೀಡಿದ್ದು ,ಇದು ಜನರ ದುಡ್ಡನ್ನು ಜನರಿಗೆ ಕೊಡುವುದಾಗಿದೆ ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಅಮಲ ರಾಮಚಂದ್ರ ಹೇಳಿದರು.
ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ರಾಜ್ಯದ ಎಲ್ಲಾ ಗೃಹಿಣಿಯರಿಗೆ ಮಾಸಿಕ 2000 , 200 ಯೂನಿಟ್ ಉಚಿತ ವಿದ್ಯುತ್, ಬಿಪಿಎಲ್ ಕಾರ್ಡುದಾರರಿಗೆ 10 ಕೇಜಿ ಅಕ್ಕಿ, ಮತ್ತು ನಿರುದ್ಯೋಗಿ ಯುವಕರಿಗೆ ಮಾಸಿಕ 3000 ಭತ್ಯೆ ಯನ್ನು ನೀಡುತ್ತೇವೆ. ನಮ್ಮ ಭರವಸೆಯನ್ನು ಬಿಜೆಪಿ ಲೇವಡಿ ಮಾಡುತ್ತಿದೆ, ಇಷ್ಟೆಲ್ಲಾ ಉಚಿತವಾಗಿ ಕೊಡಲು ದುಡ್ಡು ಎಲ್ಲಿಂದ ಎಂದು ಕೇಳುತ್ತಿದ್ದಾರೆ. ಜನರ ತೆರಿಗೆ ಹಣವನ್ನೇ ನಾವು ಜನತೆಗೆ ನೀಡುತ್ತಿದ್ದೇವೆ ಎಂದು ಹೇಳಿದರು. ಬಿಜೆಪಿ ಒಂದು ಸುಳ್ಳಿನ ಕಂತೆಯಾಗಿದೆ. ಭೃಷ್ಠಾಚಾರ ಎಂಬ ಚರಂಡಿಯಲ್ಲಿ ಬಿದ್ದು ಹೊರಳಾಡುತ್ತಿದೆ. 40% ಕಮಿಷನ್ ಇಲ್ಲದೆ ಯಾವುದೇ ವ್ಯವಹಾರ ನಡೆಯುತ್ತಿಲ್ಲ. ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ ಆದರೆ ರಾಜ್ಯದ ಬಿಜೆಪಿ ಮುಖಂಡರು ಕೋಮು ವಿಷ ಬಿತ್ತುವ ಕೆಲಸದಲ್ಲಿ ನಿರತರಾಗಿದ್ದಾರೆ. ಉರಿಗೌಡ , ನಂಜೇಗೌಡ ಎಂಬ ಹೆಸರನ್ನು ಸೃಷ್ಟಿಸಿ ಜನರನ್ನು ಕೋಮು ಆಧಾರಿತವಾಗಿ ವಿಭಜಿಸಿ ಅದರಿಂದ ಲಾಭ ಪಡೆಯಲು ಯತ್ನಿಸುತ್ತಿದೆ ಇದು ಅತ್ಯಂತ ಖಂಡನೀಯವಾಗಿದೆ ಎಂದು ಹೇಳಿದರು.
ಬಿಜೆಪಿಯವರು ತಾಕತ್ತಿದ್ದರೆ ಪೆಟ್ರೋಲ್ ಮತ್ತು ಅಡುಗೆ ಅನಿಲದ ಬೆಲೆ ಇಳಿಸಲಿ ಎಂದು ಸವಾಲು ಹಾಕಿದ ಅವರು ಬಿಜೆಪಿ ಕಳೆದ ಚುನಾವಣೆಯಲ್ಲಿ ಜನತೆಗೆ ಕೊಟ್ಟ ಭರವಸೆ ಈಡೇರಿಸಿದ್ದಾರೆಯೇ ಎಂಬುದನ್ನು ಜನ ಪ್ರಶ್ನಿಸಬೇಕು ಎಂದು ಹೇಳಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಕುಮ್ಮಿ ಹಕ್ಕು, ರೈತರ ಸಾಲ ಮನ್ನಾ, ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್, ಎಸಿಬಿ ರದ್ದು, ಮಾಂಗಲ್ಯ ಭಾಗ್ಯ, ಅನ್ನಪೂರ್ಣ ಕ್ಯಾಂಟೀನ್ ಕೊಡುವುದಾಗಿ ಹೇಳಿದ್ದರು ಅದಾವುದನ್ನು ಬಿಜೆಪಿ ಈಡೇರಿಸಿಲ್ಲ ಎಂದು ಹೇಳಿದರು. ಜನರ ಭಾವನೆ ಕೆರಳಿಸಿ ಅಧಿಕಾರಕ್ಕೇರಲು ಬಿಜೆಪಿ ನಡೆಸುವ ಯಾವುದೇ ಕುತಂತ್ರಗಳು ಈ ಬರಿ ಫಲಿಸುವುದಿಲ್ಲ ಎಂದು ಹೇಳಿದರು.
ಬಿಜೆಪಿ ಮುಖಂಡ ಈಶ್ವರಪ್ಪ ಅವರನ್ನು ಪುತ್ತೂರಿಗೆ ಕರೆಸಿದ ಇಲ್ಲಿನ ಬಿಜೆಪಿ ಮುಖಂಡರು ಪವಿತ್ರ ದೇವಸ್ಥಾನದ ಎದುರು ಕೆಟ್ಟ ಶಬ್ದಗಳನ್ನು ಬಳಸಿ ಭಾಷಣ ಮಾಡಿಸಿದ್ದಾರೆ. ಸಾವಿರಾರು ಮಂದಿ ಆರಾಧಿಸುವ ಒಂದು ದೇವಸ್ಥಾನದ ಮುಂದೆ ಹೇಳಲೂ ಸಾಧ್ಯವಿಲ್ಲದ ಕೆಟ್ಟ ಪದಗಳನ್ನು ಬಳಸಿ ಈಶ್ವರಪ್ಪ ಭಾಷಣ ಮಾಡಿದ್ದಾರೆ. ಈಶ್ವರಪ್ಪರ ಮೆದುಳಿಗೂ ನಾಲಗೆಗೂ ಸಂಪರ್ಕ ಕಡಿತವಾಗಿದೆ ಎಂದು ಹಿರಿಯರು ಹೇಳಿದ್ದನ್ನು ಕೇಳಿದ್ದೆವು ಅದನ್ನು ನಾವು ಪುತ್ತೂರಿನಲ್ಲಿ ಕಣ್ಣಾರೆ ಕಂಡೆವು ಎಂದು ಹೇಳಿದ ಅಮಲ ರಾಮಚಂದ್ರ ಅವರು ನಾಯಿ ಬೊಗಳಿದರೆ ಸ್ವರ್ಗ ಲೋಕ ಹಾಳಾಗುವುದಿಲ್ಲ. ದೇವರಿಗೆ ನಿಂದನೆ ಮಾಡಿದರೆ ಓಟು ಸಿಗಬಹುದು ಆದರೆ ಮನುಷ್ಯನಿಗೆ ನಿಂದನೆ ಮಾಡಿದರೆ ಏಟು ಬೀಳಬಹುದು ಎಂಬುದು ಯಡಿಯೂರಪ್ಪಗೆ ಚೆನ್ನಾಗಿಯೇ ಗೊತ್ತಿದೆ ಎಂದು ಲೇವಡಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಉಪಾಧ್ಯಕ್ಷರಾದ ಮೌರಿಶ್ ಮಸ್ಕರೇನಸ್, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶಕೂರ್ ಹಾಜಿ, ಬ್ಲಾಕ್ ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಹರೀಶ್ ಕೋಟ್ಯಾನ್ದ್, ಎಸ್ ಸಿ ಘಟಕದ ಅಧ್ಯಕ್ಷರಾದ ಕೇಶವ ಪಡಿಲ್ ಉಪಸ್ಥಿತರಿದ್ದರು.