ಪುತ್ತೂರು:ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಚುನಾವಣಾ ಆಯೋಗವು ಸಿದ್ಧತಾ ಕಾರ್ಯಗಳನ್ನು ನಡೆಸುತ್ತಿದ್ದು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಈ ಬಾರಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್‌ಡಿಪಿಐ ಜೊತೆಗೆ ಹೊಸದಾಗಿ ಆಮ್ ಅದ್ಮಿ ಪಕ್ಷವೂ ಸ್ಪರ್ಧಿಸುತ್ತಿದ್ದು ಸುಳ್ಯ ಕ್ಷೇತ್ರಕ್ಕೆ ಸಂಬಂಧಿಸಿ ಆಮ್ ಅದ್ಮಿ ಅಭ್ಯರ್ಥಿಯ ಹೆಸರು ಘೋಷಣೆಯಾಗಿದೆ.
ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು ಮಾ.20ರಂದು ಬೆಂಗಳೂರುನಲ್ಲಿ ಬಿಡುಗಡೆಗೊಳಿಸಿದ್ದಾರೆ.ದ.ಕ.ಜಿಲ್ಲೆಯ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರೂ ಮೊದಲ ಪಟ್ಟಿಯಲ್ಲಿದೆ. ಕಡಬ ತಾಲೂಕಿನ ಹಲವು ಗ್ರಾಮಗಳ ವ್ಯಾಪ್ತಿಯನ್ನೂ ಹೊಂದಿರುವ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಆಮ್ ಆದ್ಮಿ ಅಭ್ಯರ್ಥಿಯಾಗಿ ಸುಳ್ಯದ ಮಾಜಿ ಶಾಸಕ ಕೆ.ಕುಶಲ ಅವರ ಪುತ್ರಿ ಸುಮನಾ ಬೆಳ್ಳಾರ್ಕರ್ ಆಯ್ಕೆಯಾಗಿದ್ದಾರೆ.
ಮಂಗಳೂರು ದಕ್ಷಿಣ ಕ್ಷೇತ್ರದಿಂದ ಸಂತೋಷ್ ಕಾಮತ್, ಮೂಲ್ಕಿ-ಮೂಡಬಿದ್ರೆ ಕ್ಷೇತ್ರದಿಂದ ವಿಜಯನಾಥ ವಿಠಲ ಶೆಟ್ಟಿ ಅವರನ್ನು ಅಭ್ಯರ್ಥಿಗಳಾಗಿ ಆಯ್ಕೆ ಮಾಡಲಾಗಿದೆ. ಎಂಬಿಎ ಪದವೀಧರೆಯಾಗಿರುವ ಸುಮನಾ ಬೆಳ್ಳಾರ್ಕರ್ ಅವರು ಸುಳ್ಯದಲ್ಲಿ ಆಶ್ರಯ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.